ಕಷ್ಟಗಳನ್ನೇ ಕಂಡಿರುವ ಮನೆಯೊಂದರಲ್ಲಿ - ನಗುವು ಇನ್ನೂ ಉಳಿದಿದೆ.
ನೀರಿನ ತೀವ್ರ ಕೊರತೆಯನ್ನು ಅನುಭವಿಸುತ್ತಿರುವ ತಮಿಳುನಾಡಿನಲ್ಲಿ - ಹೂವನ್ನು ಅರಳಿಸುತ್ತಿರುವ ಕೃಷಿಭೂಮಿಯೊಂದಿದೆ.
ಕ್ಷಿಪ್ರಗತಿಯಲ್ಲಿ ಕ್ಷೀಣಿಸುತ್ತಿರುವ ಮಣ್ಣಿನ ಫಲವತ್ತತೆಯಿಂದ ರಾಜ್ಯವು ಬಸವಳಿದಿದ್ದರೆ - ಇಲ್ಲೊಂದು ಚಿಕ್ಕ ತುಂಡುಭೂಮಿಯಲ್ಲಿ ಸಾವಯವ ಗೊಬ್ಬರಗಳನ್ನೇ ಬಳಸಲಾಗುತ್ತಿದೆ.
ಭೀಕರ ಕೃಷಿ ವಿಕೋಪದ ಮಧ್ಯದಲ್ಲೂ - ಇಬ್ಬರು ಮಕ್ಕಳನ್ನು ಹೊಂದಿರುವ ಈ ಏಕಾಂಗಿ ತಾಯಿ ಲೆಕ್ಕಾಚಾರದ ಹೆಜ್ಜೆಗಳನ್ನಿಟ್ಟು ಸೆಣಸಾಡುತ್ತಿದ್ದಾಳೆ. ಅಲ್ಲದೆ ಈವರೆಗಿನ ಪಯಣದಲ್ಲಿ ಕೃಷಿಕಳಾಗಿ ಏಳಿಗೆಯನ್ನೂ ಕಂಡಿದ್ದಾಳೆ.
`ಪರಿ' ತಂಡದಿಂದ ಮೊಟ್ಟಮೊದಲ ಬಾರಿಗೆ ವರದಿಯಾಗಿದ್ದ ಚಂದ್ರಾಳ ಕಥೆಯು ಮುಂದೆ ಚೆನ್ನೈಯಲ್ಲೂ ಗುರುತಿಸಲ್ಪಟ್ಟು, 'ಗೃಹೋದ್ಯಮಿ' ಪ್ರಶಸ್ತಿಗೆ ಪಾತ್ರಳಾದ ಚಂದ್ರಾ ಪುರಸ್ಕಾರವನ್ನು ಸ್ವೀಕರಿಸಲು ಈ ವಾರ ಚೆನ್ನೈಗೆ ತೆರಳಿದ್ದಳು. 'ಮನೆಯಲ್ಲಿದ್ದುಕೊಂಡೇ ಉದ್ಯಮಗಳನ್ನು ನಡೆಸುವ ಮಹಿಳೆಯರಿಗೆ' ಈ ಪುರಸ್ಕಾರವನ್ನು ನೀಡಲಾಗುತ್ತದೆ.
ಶಿವಗಂಗೈ ಜಿಲ್ಲೆಯ ಮುತ್ತೂರು ಹಳ್ಳಿಯಲ್ಲಿರುವ ಮೇಲಕಾಡು ಎಂಬ ಬಸ್ತಿಯೊಂದರಲ್ಲಿ ನೆಲೆಸಿರುವ ಚಂದ್ರಾ ಸುಬ್ರಮಣ್ಯನ್ ಯಾವ ಪುರುಷ ಕೃಷಿಕನಿಗೂ ಕಮ್ಮಿಯಿಲ್ಲವೆಂಬಂತೆ ಅವರಿಗಿಂತ ಹೆಚ್ಚು ಶ್ರಮಪಟ್ಟು ದುಡಿಯುವ ಛಾತಿಯುಳ್ಳವರು. ಕೆಲಸದ ಅವಧಿಯಲ್ಲಿ ಬಾಲಕರು ಧರಿಸುವ ದಿರಿಸನ್ನು ಹಾಕಿಕೊಂಡಿರುವ ಚಂದ್ರಾ ''ಇದು ನನ್ನ ಮಗನ ಅಂಗಿ'' ಎನ್ನುತ್ತಾ ಮುಸಿಮುಸಿ ನಗುತ್ತಿದ್ದಾಳೆ. 29 ರ ಪ್ರಾಯದ ಚಂದ್ರಾಳ ಮಗನಿಗೀಗ 10 ರ ಪ್ರಾಯ. ತನ್ನ ನೈಟಿಯ ಮೇಲೆ ಈ ಅಂಗಿಯನ್ನು ಧರಿಸಿರುವ ಈಕೆ, ಮೈಮೇಲೆ ಹೀಗೆ ಪದರಗಳಲ್ಲಿ ಬಟ್ಟೆಗಳನ್ನು ಧರಿಸಿದ್ದರೂ ಮುಂಚೆಗಿಂತ ಮತ್ತಷ್ಟು ತೆಳ್ಳಗಾದವಳಂತೆ ಕಾಣುತ್ತಿದ್ದಾಳೆ. ಯಾಕಿಷ್ಟು ತೆಳ್ಳಗಾಗುತ್ತಾ ಹೋಗುತ್ತಿರುವೆ ಎಂದು ಕೇಳಿದರೆ ತನ್ನ ಜಮೀನಿನ ಸುತ್ತ ತಾನೇ ಕೈಯಾರೆ ನಿರ್ಮಿಸಿರುವ ವರಪ್ಪು (ಪಾಗಾರ) ವನ್ನು ತೋರಿಸಿ ''ಸಿಕ್ಕಾಪಟ್ಟೆ ಕೆಲಸ'' ಅನ್ನುತ್ತಾಳೆ ಈಕೆ. ''ಈ ಭಾಗದಲ್ಲಿ ತೀರಾ ಸಪೂರವಾಗಿತ್ತು. ಹೀಗಾಗಿ ಮರಳನ್ನು ಹಾಕಿ ಇದನ್ನು ಸದೃಢಗೊಳಿಸಿದೆ'', ಎನ್ನುತ್ತಿದ್ದಾಳೆ ಚಂದ್ರಾ. ಅಂದಹಾಗೆ ಈ ಕೆಲಸದ ಬಗ್ಗೆ ಯೋಚಿಸಿಯೇ ಬಹಳಷ್ಟು ಗಂಡಸರು ಇದರ ಸಹವಾಸವೇ ಬೇಡವೆಂದು ದೈನ್ಯದಿಂದ ಕೇಳಿಕೊಳ್ಳುವುದನ್ನು ನಾನು ನೋಡಿದ್ದೇನೆ.
ಚಂದ್ರಾಳ ಕೃಷಿಭೂಮಿಯಲ್ಲಿ ಬೆಳೆಯಲಾಗುತ್ತಿರುವ ಸಂಪಂಗಿ ಹೂವು; ಬಲ: ಚಂದ್ರಾಳ ಪುತ್ರಿ ಇನಾಯಾ ಹೂವುಗಳನ್ನೇ ತುಂಬಿರುವ ಒಂದು ದೊಡ್ಡ ಚೀಲದೊಂದಿಗೆ ನಗೆಯಾಡುತ್ತಿದ್ದಾಳೆ
ಚಂದ್ರಾ ದಿನರಾತ್ರಿಗಳ ಪರಿವೆಯಿಲ್ಲದೆ ಕೆಲಸ ಮಾಡುವವಳು. ಜುಲೈ ತಿಂಗಳ ಮೊದಲ ಭಾಗದಲ್ಲಿ ಚಂದ್ರಾಳ ಮನೆಬಾಗಿಲಿಗೆ ಬಂದಿದ್ದ ನಾನು, ಮನೆಯ ಹುಂಜವು ಕೂಗುವ ಬಹಳಷ್ಟು ಮುನ್ನವೇ ಆಕೆ ಏಳುವುದನ್ನು ನೋಡಿದ್ದೆ. ಅದೂ ಕೂಡ ನಡುರಾತ್ರಿಯ 1 ರ ಜಾವಕ್ಕೆ. ಸಂಪಂಗಿ ಹೂವನ್ನು ಕೀಳುವ ಅತ್ಯುತ್ತಮ ಸಮಯವೇ ತಡರಾತ್ರಿಯಂತೆ. ತಮಿಳುನಾಡಿನಾದ್ಯಂತ ಯಥೇಚ್ಛವಾಗಿ ಬೆಳೆಯಲಾಗುವ ಈ ಹೂವನ್ನು ಸಾಮಾನ್ಯವಾಗಿ ಮದುವೆಗಳಿಗಾಗಿ ಬಳಸುವ ಹೂಮಾಲೆಗಳಲ್ಲಿ, ಪೂಜಾಸಂಬಂಧಿ ಕಾರ್ಯಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಹೂವಿನ ದರವು ಹೂವನ್ನು ಯಾವ ಸಮಯದಲ್ಲಿ ಕೀಳಲಾಗಿದೆ ಎಂಬುದನ್ನು ಅವಲಂಬಿಸಿದೆ ಎನ್ನುವ ಚಂದ್ರಾ ಬಿಸಿಹಾಲನ್ನು ತಣ್ಣಗಾಗಿಸಲು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಸುರಿಯುತ್ತಿದ್ದಾಳೆ. ''ಸಂಜೆಯ ಹೊತ್ತಿಗೆ ನೀವು ಹೂವನ್ನು ತೆಗೆದರೆ ಅದಕ್ಕೆ ಸಿಗುವ ದರಗಳು ಕಡಿಮೆ. ಮರುದಿನದ ಮುಂಜಾನೆಯವರೆಗೆ ಕಾದರೆ ಅವುಗಳು ಸಂಪೂರ್ಣವಾಗಿ ಅರಳಿರುತ್ತವೆ. ಇದರಲ್ಲಿ ಸಮಯ ಬೇರೆ ವ್ಯರ್ಥ. ಹೀಗಾಗಿ ರಾತ್ರಿಯ ವೇಳೆಯಲ್ಲಿ ತೆಗೆದ ಹೂವುಗಳೇ ಅತ್ಯುತ್ತಮ. ಇದನ್ನೀಗ ಕುಡಿಯಿರಿ ನೀವು'', ನೊರೆಗಟ್ಟಿರುವ ಮತ್ತು ಧಾರಾಳವಾಗಿ ಸಕ್ಕರೆಯನ್ನು ತುಂಬಿಕೊಂಡ ತಾಜಾಹಾಲನ್ನು ಆಕೆ ನನಗೆ ಕೊಟ್ಟಿದ್ದಾಳೆ. ಇತ್ತ ನನಗೆ ಹಾಲನ್ನು ನೀಡಿರುವ ಅವಳು ಮಾತ್ರ ಚಹಾವನ್ನು ಸವಿಯುತ್ತಿದ್ದಾಳೆ. ಹಾಲಿನ ಬಿಸ್ಕತ್ತುಗಳನ್ನು ಚಹಾಕ್ಕೆ ಮುಳುಗಿಸಿ ತಿಂದರೆ ಅವಳ ಬೆಳಗ್ಗಿನ ಉಪಾಹಾರ ಅಲ್ಲಿಗೆ ಮುಗಿಯುತ್ತದೆ. ನಂತರ ''ನಡೀರಿ ಹೋಗೋಣ'' ಎಂಬ ಚಂದ್ರಾಳ ಸೂಚನೆಯೊಂದಿಗೆ ನಾನು ಅವಳನ್ನು ಹಿಂಬಾಲಿಸುತ್ತೇನೆ.
ಚಂದ್ರಾಳನ್ನು ನಾನು ಮೊಟ್ಟಮೊದಲ ಬಾರಿ ಭೇಟಿಯಾಗಿದ್ದು ಅವಳ ಮೇಲಕಾಡು ಕೃಷಿಭೂಮಿಯಲ್ಲಿ. ಅದು 2014 ರ ಮಾತು. ಆಗ ಆಕೆಯ ಪತಿ ಆತ್ಮಹತ್ಯೆಯನ್ನು ಮಾಡಿಕೊಂಡು ಒಂದು ವರ್ಷವಷ್ಟೇ ಕಳೆದಿತ್ತು. ಚಂದ್ರಾಳ ಗಂಡನ ಸಾವಿನ ಎರಡು ವಾರಗಳ ಹಿಂದಷ್ಟೇ ಚಂದ್ರಾಳ ತಂದೆಯವರು ರಸ್ತೆ ಅಪಘಾತವೊಂದರಲ್ಲಿ ದೈವಾಧೀನರಾಗಿದ್ದರು. ಹೀಗೆ ಇವೆಲ್ಲಾ ದುರ್ಘಟನೆಗಳು ಬೆನ್ನುಬೆನ್ನಿಗೆ ಘಟಿಸಿದಾಗ ಚಂದ್ರಾ ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿದ್ದ 24 ರ ಪ್ರಾಯದ ತಾಯಿ. ಮುಂದೆ ಈಕೆ ತನ್ನಿಬ್ಬರು ಮಕ್ಕಳ ಸಮೇತವಾಗಿ ತನ್ನ ವಿಧವೆ ತಾಯಿಯೊಂದಿಗೆ ನೆಲೆಸಲು ತವರುಮನೆಗೆ ಮರಳುತ್ತಾಳೆ. ಇಬ್ಬರು ಹೆಂಗಸರಿಗೂ ಕೂಡ ಜೀಪನೋಪಾಯಕ್ಕಾಗಿ ಕೃಷಿಯೇ ಆಧಾರ.
ಚಂದ್ರಾ ತನ್ನ ಮಗಳಾದ ಇನಾಯಾ ಮತ್ತು ಮಗನಾದ ಧನುಷ್ ನೊಂದಿಗೆ ತನ್ನ ಜಮೀನಿನಲ್ಲಿ; ಬಲ: 'ಗೃಹೋದ್ಯಮಿ' ಪುರಸ್ಕಾರವನ್ನು ಚೆನ್ನೈಯಲ್ಲಿ ಪಡೆಯುತ್ತಿರುವ ಚಂದ್ರಾ
ಚಂದ್ರಾಳ ಬಳಿ ನಾಲ್ಕು ಎಕರೆಗಳ ಜಮೀನಿದೆ. ಒಳ್ಳೆಯ ಮಳೆಯಾದ ದಿನಗಳಲ್ಲಿ ಆಕೆ ಭತ್ತ ಮತ್ತು ಕಬ್ಬನ್ನು ಬೆಳೆದಿದ್ದಳು. ಆದರೆ ನಂತರದ ಎರಡು ಕೆಟ್ಟ ಮಳೆಗಾಲಗಳಿಂದಾಗಿ ಆಕೆ ತರಕಾರಿಗಳ ಕಡೆಗೆ ವಾಲಬೇಕಾಯಿತು. ಬೆಳೆಯುವುದು ಮಾತ್ರವಲ್ಲದೆ ಸ್ಥಳೀಯ ಜೋಪಡಿಯೊಂದರಲ್ಲಿ ಕುಳಿತುಕೊಂಡು ತರಕಾರಿಗಳನ್ನು ತಾನೇ ಸ್ವತಃ ಮಾರುತ್ತಿದ್ದಳು ಚಂದ್ರಾ. ಈ ವರ್ಷ ಆಕೆ ಹೂವುಗಳೊಂದಿಗೆ ಪಂದ್ಯ ಕಟ್ಟಿದ್ದಾಳೆ. ಈ ನಿಟ್ಟಿನಲ್ಲಿ ಎರಡೆಕರೆ ಜಮೀನನ್ನು ಹೂವಿನ ಬೆಳೆಗಾಗಿ ಮೀಸಲಿಟ್ಟಿದ್ದರೆ ಅರ್ಧ ಎಕರೆಯನ್ನು ತರಕಾರಿಗಳಿಗೆ ಇರಿಸಲಾಗಿದೆ. ಜಮೀನಿನ ಉಳಿದ ಭಾಗವು ಪಾಳುಭೂಮಿಯಾಗಿದೆ. ಹೂವಿನ ಬೆಳೆಗೆ ದಿನನಿತ್ಯವೂ ಬೇಕಾಗುವ ಶ್ರಮವು ಅಗಾಧವಾದದ್ದು. ಆದರೂ ಆಕೆ ಸ್ವತಃ ಇವೆಲ್ಲವನ್ನೂ ನಿಭಾಯಿಸುತ್ತಾಳೆ. ಹೂವನ್ನು ಕೀಳಲು ಬರುವವರಿಗೆ 150 ರೂಪಾಯಿಗಳ ದಿನಕೂಲಿಯನ್ನು ಕೊಡಬೇಕಂತೆ. ''ಹೀಗೆ ಬರುವವರು ಇಬ್ಬಿಬ್ಬರು ಜೊತೆಯಾಗಿ ಬರುತ್ತಾರೆ. ಅಂದರೆ ಒಂದು ರಾತ್ರಿಯ ಕೆಲಸಕ್ಕೆ ನಾನು 300 ರೂಪಾಯಿಗಳನ್ನು ಇವರಿಗೆ ಕೊಡಬೇಕಾಗುತ್ತದೆ. ಇದರಿಂದ ನನಗಾಗುವ ಲಾಭವಾದರೂ ಏನು?'', ಎಂದು ಕೇಳುತ್ತಿದ್ದಾಳೆ ಚಂದ್ರಾ.
''ಇಂದು ಸಂಪಂಗಿಯ ಭೂಮಿ'', ಜಮೀನಿನತ್ತ ಬೊಟ್ಟು ಮಾಡುತ್ತಾ ಹೇಳುತ್ತಿದ್ದಾಳೆ ಚಂದ್ರಾ. ಅತ್ತ ನೋಡುವ ಮೊದಲೇ ಹೂವುಗಳ ಸುಗಂಧದಿಂದ ನನಗೆ ಈ ಬಗ್ಗೆ ಗೊತ್ತಾಗುತ್ತದೆ. ಅದು ಬಹಳ ಮಟ್ಟಸವಾದ ಮತ್ತು ಹಚ್ಚಹಸಿರಾಗಿ ಕಂಗೊಳಿಸುತ್ತಿರುವ ಎರಡೆಕರೆ ಜಮೀನು. ಎತ್ತರಕ್ಕೆ ಬೆಳೆದ ಸಂಪಂಗಿ ಗಿಡಗಳು ಈಗ ಚಂದ್ರಾಳ ಭುಜದೆತ್ತರಕ್ಕೆ ಬಂದು ನಿಂತಿವೆ. ಪುಟ್ಟ ಗುಂಪುಗಳಲ್ಲಿ ಬೆಳೆಯುವ ಹೂವುಗಳು ಗಿಡಗಳ ಮೇಲ್ಭಾಗದಲ್ಲಿದ್ದು ಅವುಗಳನ್ನು ಕಿರೀಟದಂತೆ ಅಲಂಕರಿಸಿವೆ. ಅತ್ತ ಇಡೀ ಜಗತ್ತೇ ರಾತ್ರಿಯ ಸುಖನಿದ್ದೆಯನ್ನು ಸವಿಯುತ್ತಾ ಹಾಯಾಗಿದ್ದರೆ ಇತ್ತ ಚಂದ್ರಾ ಮಾತ್ರ ನೈಟಿ ಮತ್ತು ಗಣಿಕಾರ್ಮಿಕರು ಧರಿಸುವ ಟೋಪಿಯೊಂದನ್ನು ಧರಿಸಿ ಬರೋಬ್ಬರಿ ನಾಲ್ಕು ತಾಸುಗಳ ಕಾಲ ಹೂಗಳನ್ನು ಕೀಳುತ್ತಾಳೆ. ಜೊತೆಗೇ ದೀಪವನ್ನು ಹೊಂದಿರುವ ತಾನು ಧರಿಸಿದ್ದ ಗಣಿಕಾರ್ಮಿಕರ ಟೋಪಿಯನ್ನು ನನಗೆ ತೋರಿಸುತ್ತಾ, ''ಇದು 800 ರೂಪಾಯಿಗಳದ್ದು. ಬಹಳ ಶಕ್ತಿಶಾಲಿ. ಇದರ ಬೆಳಕಿನಲ್ಲಿ ನಾನು ದಿಕ್ಕಾಪಾಲಾಗಿ ಓಡುತ್ತಿರುವ ಇರುವೆಗಳನ್ನೂ ಕೂಡ ಈ ಕತ್ತಲೆಯಲ್ಲಿ ನೋಡಬಲ್ಲೆ'', ಎನ್ನುತ್ತಿದ್ದಾಳೆ ಚಂದ್ರಾ.
ಆದರೆ ಕತ್ತಲೆಯಲ್ಲಿ ಹಾವು ಮತ್ತು ಚೇಳುಗಳಿಂದಾಗುವ ಅಪಾಯಗಳೂ ಇರುತ್ತವಂತೆ. ಇತ್ತೀಚೆಗಷ್ಟೇ ಕೊಂಬಚೇಳುವೊಂದು ಚಂದ್ರಾಳಿಗೆ ಕಚ್ಚಿತ್ತು. ಇದನ್ನು ಕೇಳಿ ದಿಗಿಲಾದ ನಾನು ಮುಂದೇನು ಮಾಡಿದೆ ಎಂದು ವಿಚಾರಿಸಿದೆ. ಅದನ್ನು ಹೇಗೋ ನಿಭಾಯಿಸಿದೆ ಎನ್ನುವ ಚಂದ್ರಾಳಿಗೆ ನಾನು ಗಮ್ ಬೂಟುಗಳನ್ನು ಧರಿಸಲು ಒತ್ತಾಯ ಮಾಡಿದರೆ ಅವಳು ಸುಮ್ಮನೆ ಮುದ್ದಾಗಿ ನಗುತ್ತಲೇ ಇದ್ದಾಳೆ.
ಚಂದ್ರಾಳ ಎರಡೆಕರೆ ಭೂಮಿಯಲ್ಲಿ ಸಂಪಂಗಿ ಹೂವಿನ ಬೆಳೆಯನ್ನು ಬೆಳೆಯಲಾಗುತ್ತದೆ. ತನ್ನ ಜಮೀನಿನಲ್ಲಿ ಈಕೆ ಸಾವಯವ ಗೊಬ್ಬರವನ್ನಷ್ಟೇ ಬಳಸುತ್ತಾಳೆ
ಇನ್ನು ಪ್ರತೀ ಮುಂಜಾನೆಯೂ 5:30 ರ ಹೊತ್ತಿಗೆ ರಾತ್ರಿ ಕಿತ್ತ ಹೂವುಗಳನ್ನು ಮೂಟೆಗಳಾಗಿ ಕಟ್ಟಿ ದೊಡ್ಡ ಚೀಲಗಳಲ್ಲಿ ತುಂಬಿಸಿ ರೈಲ್ವೆ ಕ್ರಾಸಿಂಗ್ ಬಳಿ ಆಕೆ ತಲುಪಿಸುತ್ತಾಳೆ. ಇಲ್ಲಿಂದ ಲಾರಿಗಳು ಹೂವಿನ ಮೂಟೆಗಳನ್ನು ಮದುರೈಗೆ ಕೊಂಡೊಯ್ಯುತ್ತವೆಯಂತೆ.
ಮನೆಗೆ ಬಂದ ನಂತರದ ಅವಳ ಕೆಲ ಸಮಯವು ಮಕ್ಕಳೊಂದಿಗೆ ಕಳೆಯುತ್ತದೆ. 5 ನೇ ತರಗತಿಯಲ್ಲಿ ಓದುತ್ತಿರುವ ಮಗ ಧನುಷ್ ಮತ್ತು 2 ನೇ ತರಗತಿಯಲ್ಲಿ ಓದುತ್ತಿರುವ ಮಗಳು ಇನಾಯಾಳಿಗಾಗಿ ಮಧ್ಯಾಹ್ನದ ಊಟವನ್ನು ಬುತ್ತಿಯಲ್ಲಿ ಹಾಕಿ ಆಕೆ ಕಳಿಸಿಕೊಡುತ್ತಾಳೆ. ''ಈ ಹೊಸ ಶಾಲೆಯು ಹಿಂದಿನ ಶಾಲೆಗಿಂತ ಎರಡು ಪಟ್ಟು ದುಬಾರಿ. ಆದರೆ ಅವರಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಬೇಕೆಂಬುದೇ ನನ್ನಾಸೆ. ನಾನು ಇಷ್ಟೆಲ್ಲಾ ಗುಲಾಮಳಂತೆ ದುಡಿಯುವುದು ಇನ್ಯಾರಿಗಾಗಿ?'', ಎನ್ನುತ್ತಾಳೆ ಚಂದ್ರಾ. ನಂತರ ತಾನು ಬೆಳೆದ ತರಕಾರಿಗಳನ್ನು ಹಿಡಿದುಕೊಂಡು ಆಕೆ ಮಾರುಕಟ್ಟೆಗೆ ಹೋಗುತ್ತಾಳೆ. ಇಲ್ಲಿ ಸಂಪಾದನೆಯಾಗುವ ಮೊತ್ತವನ್ನು ಅವಳು 'ಬೋನಸ್' ಎನ್ನುತ್ತಾಳೆ. ಇದರಿಂದಾಗಿ ಹೆಚ್ಚಿನ ಆಹಾರ ಮತ್ತು ತಿಂಡಿಗಳನ್ನು ಖರೀದಿಸಲು ಆಕೆಗೆ ಅನುಕೂಲವಾಗುತ್ತದೆ. ''ನೀರು ಸಾಕಷ್ಟಿದ್ದರೆ ಕುಟುಂಬದ ಬಳಕೆಗಾಗಿಯೇ ನಾವು ಭತ್ತ ಬೆಳೆಯುತ್ತೇವೆ. ಆದರೆ ಈಗೇನು ಮಾಡುವುದು?'', ಎಂಬ ಪ್ರಶ್ನೆ ಆಕೆಯದ್ದು.
ಅಷ್ಟರಲ್ಲಿ ಚಂದ್ರಾಳ ತಾಯಿ ಒಳಕ್ಕೆ ಬಂದಿದ್ದಾರೆ. ''ನೀನು ಇವುಗಳನ್ನು ಮಾರಬಹುದು'', ಗಿನಿಯಾ ಇಲಿಗಳನ್ನು ತುಂಬಿದ್ದ ಚಿಕ್ಕ ಗೂಡಿನತ್ತ ಬೊಟ್ಟು ಮಾಡುತ್ತಾ ಆಕೆ ಹೇಳುತ್ತಿದ್ದಾಳೆ. ''ಕೋಳಿಯೋ, ಕುರಿಯೋ ಇದ್ದರೆ ಕನಿಷ್ಠಪಕ್ಷ ತಿನ್ನುವುದಕ್ಕಾದರೂ ಉಪಯೋಗವಾಗುತ್ತಿತ್ತು. ಇವುಗಳಿಂದೇನು ಲಾಭ?'', ಎಂಬ ವಾದ ಆಕೆಯದ್ದು. ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ತಾಯಿ-ಮಗಳ ಈ ವಾದವು ನಡೆಯುತ್ತಲೇ ಇದೆಯಂತೆ. ದಂಶಕಗಳು ಸಾಕುಪ್ರಾಣಿಗಳಿದ್ದಂತೆ, ಅವುಗಳನ್ನು ಆಹಾರವಾಗಿ ಉಪಯೋಗಿಸಬಾರದು ಎನ್ನುವುದು ಇದಕ್ಕೆ ಚಂದ್ರಾಳ ಉತ್ತರ.
ಅದೃಷ್ಟವು ಚೆನ್ನಾಗಿರುವ ದಿನಗಳಲ್ಲಿ ರಾತ್ರಿಗಳಲ್ಲಿ ಕಳೆದುಕೊಂಡ ನಿದ್ದೆಯನ್ನು ಒಂದಿಷ್ಟು ಪಡೆಯಲು ಮಧ್ಯಾಹ್ನದ ಅವಧಿಯಲ್ಲಿ ಒಂದೆರಡು ತಾಸುಗಳ ನಿದ್ದೆಯು ಚಂದ್ರಾಳಿಗೆ ನಸೀಬಾಗುತ್ತದೆ. ಸದ್ಯ ಮೋಟಾರ್ ಅನ್ನು ನೋಡಿಕೊಳ್ಳಲು ಅವಳು ಹೋಗಿಯಾಗಿದೆ. ''ಈ ನೀರನ್ನು ನೋಡಿದಿರಾ?'', ಅವಳು ನನ್ನನ್ನು ಕೇಳುತ್ತಿದ್ದಾಳೆ. ಸುಮಾರು 20 ಅಡಿಗಳ ವ್ಯಾಸವನ್ನು ಹೊಂದಿರುವ ತೆರೆದ ಬಾವಿಯ ಸಾಕಷ್ಟು ಆಳದಲ್ಲಿ ತಂಪಾದ, ಕಪ್ಪು ನೀರು ಕಾಣುತ್ತಿದೆ. ಚಂದ್ರಾ ಮತ್ತು ಆಕೆಯ ಸಹೋದರ ತಮ್ಮ ತಮ್ಮ ಕೊಳವೆಬಾವಿಗಳಿಂದ ನೀರನ್ನು ತೆಗೆದು ಈ 75 ಅಡಿ ಆಳದ ತೆರೆದ ಬಾವಿಯಲ್ಲಿ ಸಂಗ್ರಹಿಸಿ ನೀರಾವರಿಗಾಗಿ ಬಳಸುತ್ತಿದ್ದಾರೆ. ನನ್ನ ಕೊಳವೆಬಾವಿಗೆ 450 ಅಡಿಗಳ ಆಳದಲ್ಲೇ ನೀರು ಸಿಕ್ಕಿತ್ತು ಎನ್ನುವ ಚಂದ್ರಾ, ಆದರೆ ನನ್ನ ಸಹೋದರನು ಕೊರೆಸಿದ ಹೊಸ ಕೊಳವೆಬಾವಿಯಲ್ಲಿ ನೀರು ಸಿಗಲು 1000 ಅಡಿಗಳಷ್ಟು ಆಳಕ್ಕೆ ಹೋಗಬೇಕಾಯಿತು ಎನ್ನುತ್ತಾರೆ.
ತನ್ನ ಗಣಿಕಾರ್ಮಿಕರ ಟೋಪಿಯನ್ನು ಧರಿಸುತ್ತಿರುವ ಚಂದ್ರಾ. ಇದರಲ್ಲಿ ಅಳವಡಿಸಿರುವ ದೀಪವು ಅದೆಷ್ಟು ಚೆನ್ನಾಗಿದೆಯೆಂದರೆ ಓಡಾಡುತ್ತಿರುವ ಇರುವೆಗಳೂ ಕೂಡ ರಾತ್ರಿಯಲ್ಲಿ ಅವಳಿಗೆ ಕಾಣುತ್ತದಂತೆ; ಬಲ: ಕೊಳವೆಬಾವಿಗಳಿಂದ ತೆಗೆದ ನೀರನ್ನು ಚಂದ್ರಾ ಮತ್ತು ಆಕೆಯ ಸಹೋದರ ಈ ತೆರೆದ ಬಾವಿಯಲ್ಲಿ ಸಂಗ್ರಹಿಸಿ ನೀರಾವರಿಗೆಂದು ಬಳಸುತ್ತಾರೆ
''ಒಳ್ಳೆಯ ಮಳೆಯಾದಾಗ ಬಾವಿಯು ತುಂಬುತ್ತದೆ. ಕೆಲವೊಮ್ಮೆ ನೀರು ತುಂಬಿ ಹೊರಚೆಲ್ಲುವುದೂ ಉಂಟು. ಒಮ್ಮೆ ಚಿಕ್ಕ ಮಕ್ಕಳ ಸೊಂಟಕ್ಕೆ ಪ್ಲಾಸ್ಟಿಕ್ ಕ್ಯಾನ್ ಗಳನ್ನು ಕಟ್ಟಿ ಬಾವಿಗಿಳಿಸಿದ್ದೆವು ಎಂದಾಗ ನನ್ನ ಮುಖದಲ್ಲಿ ಮೂಡುವ ಆತಂಕವನ್ನು ನೋಡಿ ನಗುವ ಚಂದ್ರಾ ''ಅವರೇನೂ ಮುಳುಗುವುದಿಲ್ಲ. ಪ್ಲಾಸ್ಟಿಕ್ ಕ್ಯಾನ್ ಅವರನ್ನು ತೇಲುವಂತೆ ಮಾಡುತ್ತದೆ. ಇಲ್ಲದಿದ್ದರೆ ಈ ಮಕ್ಕಳು ಈಜು ಕಲಿಯುವುದಾದರೂ ಹೇಗೆ?'', ಎಂದು ಕೇಳುತ್ತಾರೆ.
''ಆ ಕೂದಲು ನೋಡು, ಅದೆಷ್ಟು ಒಣಗಿಹೋಗಿದೆ. ಹೋಗಿ ಎಣ್ಣೆ ಹಚ್ಚಿ, ತಲೆ ಬಾಚಿಕೋ'', ಈಗ ನಮ್ಮನ್ನು ಜೊತೆಯಾದ ಮಕ್ಕಳನ್ನು ಕಂಡ ಚಂದ್ರಾ ಈ ಮಕ್ಕಳಿಗೆ ಗದರಿದ್ದಾಳೆ. ನಂತರ ನಾವು ಪೇರಳೆ ಹಣ್ಣುಗಳನ್ನು ತರಲು ಹೊರ ನಡೆದಿದ್ದೆವು. ನಾನು ಮರಳುವಾಗ ಕೆಲ ಪೇರಳೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲೇಬೇಕು ಎಂಬುದು ಚಂದ್ರಾ ಮತ್ತು ಆಕೆಯ ತಾಯಿಯ ಒತ್ತಾಯ.
ತನ್ನ ಸಹೋದರನ ಜಮೀನಿನಿಂದ ಮಲ್ಲಿಗೆ ಹೂಗಳನ್ನು ಕೀಳುತ್ತಿರುವ ಚಂದ್ರಾ ತನಗೆ ಹೂವಿನ ಬೆಳೆಯನ್ನಷ್ಟೇ ಮಾಡಬೇಕು ಎಂಬ ಆಸೆಯಿರುವ ಬಗ್ಗೆ ಹೇಳುತ್ತಾಳೆ. ''ಸಂಪಂಗಿಯ ದರಗಳಲ್ಲಿ ಬಹಳ ಅನಿಶ್ಚಿತತೆಯಿರುವುದು ಸತ್ಯ. ಆದರೆ ನನಗಿಲ್ಲಿ ಲಾಭವೂ ಕಾಣುತ್ತಿದೆ'', ಎನ್ನುತ್ತಿದ್ದಾಳೆ ಚಂದ್ರಾ. ಪ್ರತೀ ಎಕರೆಯಲ್ಲೂ ಸಂಪಂಗಿಯನ್ನು ಬೆಳೆಯಲು ತಲಾ ಒಂದೊಂದು ಲಕ್ಷದಷ್ಟು ಹೂಡಿಕೆಯನ್ನು ಈಕೆ ಮಾಡಿದ್ದಾಳೆ. ಇದರಲ್ಲಿ ಸುಮಾರು 40,000 ರೂ. ಗಳನ್ನು ಬಲ್ಬ್ ಗಳಿಗೆ, 30,000 ರೂ. ಗಳನ್ನು ಹನಿ ನೀರಾವರಿಗೆ ಮತ್ತು ಉಳಿದ ಮೊತ್ತವನ್ನು ಗಿಡ ಮತ್ತು ಗದ್ದೆಯನ್ನು ಸಿದ್ಧಪಡಿಸಲು ವ್ಯಯಿಸಲಾಗಿದೆ. ''ನಾನು ಸಾವಯವ ಗೊಬ್ಬರವನ್ನಷ್ಟೇ ಬಳಸೋದು, ಅದೂ ಕೂಡ ಸೆಗಣಿಯನ್ನು'', ಅನ್ನುತ್ತಾಳೆ ಚಂದ್ರಾ. ಅಂದಹಾಗೆ ನೆಟ್ಟ ಗಿಡದಲ್ಲಿ ಹೂಬಿಡಲು ಸುಮಾರು ಏಳು ತಿಂಗಳುಗಳು ತಗುಲಿದರೆ ಇಳುವರಿಯು ಸುಸ್ಥಿರ ಸ್ಥಿತಿಯನ್ನು ತಲುಪಲು ಇನ್ನೊಂದೆರಡು ತಿಂಗಳು ಹೆಚ್ಚಿಗೆ ಬೇಕಾಗುತ್ತವೆ.
ತನ್ನ ಜಮೀನಿನಲ್ಲಿ ಬೆಳೆದ ಪೇರಳೆ ಹಣ್ಣುಗಳನ್ನು ಚಂದ್ರಾ ಕೀಳುತ್ತಿದ್ದರೆ ಮಗಳಾದ ಇನಾಯಾ ಚೀಲವನ್ನು ಹಿಡಿದುಕೊಂಡಿದ್ದಾಳೆ
ಈಗ ದಿನವೊಂದಕ್ಕೆ 40 ಕಿಲೋಗಳಷ್ಟು ಹೂವನ್ನು ಚಂದ್ರಾ ಕೀಳುತ್ತಾಳೆ. ದಿನವು ಚೆನ್ನಾಗಿದ್ದರೆ ಅದು ಕೆಲವೊಮ್ಮೆ 50 ಕಿಲೋಗಳಷ್ಟೂ ಆಗುತ್ತದೆ. ಆದರೆ ದರಗಳ ಏರಿಳಿತಗಳಾಗುವುದು ಮಾತ್ರ ಸತ್ಯವೇ. ''ಇದು ಒಂದು ಕಿಲೋಗೆ 5 ರೂಪಾಯಿಯಿಂದ 300 ರೂಪಾಯಿಗಳಿಗಿಂತಲೂ ಹೆಚ್ಚು'', ಎನ್ನುತ್ತಾಳೆ ಆಕೆ. ಸಾಮಾನ್ಯವಾಗಿ ಹಬ್ಬ ಮತ್ತು ವಿವಾಹದ ಸೀಸನ್ನುಗಳಲ್ಲಿ ಬೆಲೆಗಳು ಏಕಾಏಕಿ ಏರಿದರೆ ಉಳಿದ ದಿನಗಳಲ್ಲಿ ಬಹುಬೇಗನೇ ಇಳಿಯುತ್ತದೆ. ''ನಿತ್ಯವೂ ಕಿಲೋ ಒಂದಕ್ಕೆ 50 ರಿಂದ 100 ರೂಪಾಯಿಗಳು ನನಗೆ ಸಿಕ್ಕಲ್ಲಿ ನಾನು ಲಾಭ ಮಾಡಿಕೊಳ್ಳುವುದು ಖಚಿತ'', ಎಂಬುದು ಚಂದ್ರಾಳ ಅನಿಸಿಕೆ. ಒಟ್ಟಾರೆಯಾಗಿ ಹೇಳುವುದಾದರೆ ತಿಂಗಳೊಂದಕ್ಕೆ ಇವರೆಡು ಎಕರೆ ಜಮೀನಿನಿಂದ 10,000 ರೂಪಾಯಿಗಳಷ್ಟು ನಿವ್ವಳವು ಈಕೆಗೆ ಸಿಗುತ್ತದಂತೆ. ಕೆಲವೊಮ್ಮೆ ಈ ಮೊತ್ತವು ಹೆಚ್ಚಾಗುವುದೂ ಇದೆ. ಇದು ಆರಂಭಿಕ ಖರ್ಚು, ನಿರ್ವಹಣೆಯ ವೆಚ್ಚ, ಸಾಲದಿಂದಾಗಿ ಕಡಿತವಾಗುವ ಮೊತ್ತ ಮತ್ತು ಬಡ್ಡಿಯ ಕಂತುಗಳನ್ನು ಕಳೆದ ನಂತರ ಸಿಗುವ ನಿವ್ವಳ. ಚಂದ್ರಾಳ ಕುಟುಂಬಕ್ಕೆ ಇದುವೇ ಆಧಾರ. ಇನ್ನು ತರಕಾರಿಗಳಿಂದ ಸುಮಾರು 2000 ರೂಪಾಯಿಗಳವರೆಗಿನ ಪ್ರತ್ಯೇಕ ಮೊತ್ತವು ಅವಳ ಕೈಸೇರುತ್ತದೆ.
ಈ ನಡುವೆ ಎಲ್.ಐ.ಸಿ ಜೀವವಿಮೆಯಲ್ಲಿ ಚಿಕ್ಕ ಮೊತ್ತವೊಂದನ್ನು ಹೂಡಿಕೆ ಮಾಡುವುದರಲ್ಲೂ ಅವಳು ಯಶಸ್ವಿಯಾಗಿದ್ದಾಳೆ. ಇನ್ನು ತರಕಾರಿಗಳನ್ನು ಬೆಳೆಯುವುದನ್ನು ಚಂದ್ರಾ ಸೀಮಿತಗೊಳಿಸುತ್ತಾಳಂತೆ (ಉಪ್ಪಿನಕಾಯಿಗಾಗಿ ಘೆರ್ಕಿನ್ ಗಳನ್ನು ಬೆಳೆಯುವುದು ಅವಳ ಮುಂದಿನ ಯೋಜನೆ). ''ಆ ಪಾಳುಭೂಮಿಯನ್ನು ನೋಡಿದಿರಾ? ಅವುಗಳನ್ನು ಹಾಗೆ ಖಾಲಿ ಬಿಟ್ಟವಳೇ ಅಲ್ಲ ನಾನು. ಆದರೆ ಮಳೆಯಿಲ್ಲದಿದ್ದರೆ ಕೃಷಿ ಮಾಡುವುದರಲ್ಲಿ ಯಾವ ಉಪಯೋಗವೂ ಇಲ್ಲ. ಈ ಕಲ್ಲಂಗಡಿ, ತೆಂಗಿನಕಾಯಿಗಳೂ ಕೂಡ ಹೇಗೆ ಕುಗ್ಗಿವೆ ನೋಡಿ'', ಎನ್ನುತ್ತಿದ್ದಾಳೆ ಚಂದ್ರಾ.
ಇತ್ತ ಮನೆಯಲ್ಲಿ ಹೂವುಗಳನ್ನೆಲ್ಲಾ ಚೆಂದಗೆ ಕಟ್ಟಿ ಚಂದ್ರಾ ನನಗೆ ಮುಡಿಸುತ್ತಿದ್ದಾಳೆ. ''ನಿಮ್ಮ ಮಗಳಿಗೂ ಸ್ವಲ್ಪ ಕೊಂಡುಹೋಗಿ'', ಎಂಬ ಒತ್ತಾಯವೂ ಕೂಡ ಅವಳದ್ದು. ನನ್ನ ಮಗಳ ಚಿತ್ರವೊಂದನ್ನು ಚಂದ್ರಾಳಿಗೆ ತೋರಿಸುತ್ತಾ ಹೂವುಗಳು ಮುಂಬೈ ತಲುಪುವವರೆಗೆ ಉಳಿಯುವುದು ಕಷ್ಟ ಎನ್ನುತ್ತಿದ್ದೇನೆ ನಾನು. ''ಅವಳ ಕೂದಲು ನೋಡಿ! ಈ ಕೇಶವಿನ್ಯಾಸಕ್ಕೆ ಹೂಮುಡಿಯುವುದು ಕಷ್ಟ'', ಎಂದು ಮೌನವನ್ನು ತುಂಬಿದ ನಗುವಿನೊಂದಿಗೆ ಚಿತ್ರವನ್ನು ನೋಡುತ್ತಿದ್ದಾಳೆ ಆಕೆ. ಜೊತೆಗೇ ''ನಿಮಗೆ ಒಂದು ಬಾಟಲಿ ಎಣ್ಣೆ ಮತ್ತು ಬಾಚಣಿಗೆಯನ್ನೂ ಕೂಡ ತರಿಸಿಕೊಡಲಾಗುವುದಿಲ್ಲವೇ?'', ಎಂದು ಬೇರೆ ನನ್ನಲ್ಲಿ ಕೇಳುತ್ತಿದ್ದಾಳೆ. ಚಂದ್ರಾಳ ಆ ಮಾತಿನೊಂದಿಗೆ ಬೇಸಿಗೆಯಲ್ಲಿ ಬರುವ ಮಳೆಯಂತೆ ನಗುವು ಸುತ್ತಲೂ ಚೆಲ್ಲತೊಡಗುತ್ತದೆ.