ಪನಾಮಿಕ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ನೂರು ಜನರು ತಮ್ಮ ಕೋವಿಡ್ -19 ಲಸಿಕೆಗಳಿಗಾಗಿ ಕಾಯುತ್ತಿರುವುದನ್ನು ನಾನು ನೋಡಿದೆ. ಇಂದು ಆಗಸ್ಟ್ 11. ಇಂತಹ ಸಾವಿರಾರು ಕೇಂದ್ರಗಳಲ್ಲಿ ದೇಶಾದ್ಯಂತ ಲಕ್ಷಾಂತರ ಭಾರತೀಯರಂತೆ ಇವರೂ ಕಾಯುತ್ತಿದ್ದಾರೆಂದು ನಾವು ಹೇಳಬಹುದೆ? ಬಹುತೇಕ ಸಾಧ್ಯವಿಲ್ಲ. ಲೆಹ್‌ನಲ್ಲಿರುವ ಪನಾಮಿಕ್ ಬ್ಲಾಕ್‌ನ ಅತಿ ಅತಿ ಎತ್ತರದ ತುದಿ ಸಮುದ್ರ ಮಟ್ಟದಿಂದ 19,091 ಅಡಿಗಳಷ್ಟು ಎತ್ತರದಲ್ಲಿದೆ ಎಂದು ಪಟ್ಟಿ ಮಾಡಲಾಗಿದೆ. ಅದೇ ಹೆಸರಿನ ಮುಖ್ಯ ಗ್ರಾಮವು ಕೆಲವು ಸಾವಿರ ಅಡಿಗಳಷ್ಟು ಆಳದಲ್ಲಿದೆ. ಆದರೆ ಸುಮಾರು 11,000 ಅಡಿಗಳ ಆಳದಲ್ಲಿದ್ದರೂ ಸಹ, ಈ ಆರೋಗ್ಯ ಕೇಂದ್ರವು ಅತಿ ಎತ್ತರದ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಒಂದಾಗಿದೆ.

ಕೋವಿಡ್-19 ಲಸಿಕೆಗಳನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಹೆಚ್ಚಿನ ಭಾಗಗಳಿಗೆ ತರುವುದು ಮತ್ತು ದಾಸ್ತಾನು ಮಾಡುವುದೇ ಬಹಳ ದೊಡ್ಡ ಸಾಧನೆಯಾಗಿದೆ. ಜೊತೆಗೆ ದೂರದ ಸ್ಥಳಗಳಿಂದ ಕೇಂದ್ರವನ್ನು ತಲುಪಬೇಕಾದ ಜನರು ಎದುರಿಸುವ ಸವಾಲುಗಳನ್ನು ಕೂಡಾ ಮರೆಯಬಾರದು.

ಆದಾಗ್ಯೂ, ಸಮುದ್ರ ಮಟ್ಟಕ್ಕಿಂತ ಹೆಚ್ಚಿನ ಎತ್ತರವನ್ನು ಹೊರತುಪಡಿಸಿಯೂ, ಈ ಕೇಂದ್ರಕ್ಕೆ ಹೆಚ್ಚು ಮಹತ್ವವಿದೆ. ಈ ಕೇಂದ್ರವು ಸಮುದ್ರ ಮಟ್ಟದಿಂದ ಅಸಾಧಾರಣ ಎತ್ತರದಲ್ಲಿದೆ ಎಂದು ಹೇಳಬೇಕು. ಲೆಹ್‌ನಲ್ಲಿರುವ ಸಿಯಾಚಿನ್ ಹಿಮನದಿಗೆ ಅತ್ಯಂತ ಸಮೀಪದಲ್ಲಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಒಂದು ವಿಶಿಷ್ಟ ದಾಖಲೆಯನ್ನು ಹೊಂದಿದೆ: ಇಲ್ಲಿ 250 ಸೇನಾ ಸಿಬ್ಬಂದಿಗೆ ಒಂದೇ ದಿನದಲ್ಲಿ ಲಸಿಕೆಯನ್ನು ನೀಡಲಾಯಿತು. ಅದೂ ಕಳಪೆ ಇಂಟರ್ನೆಟ್ ಸೌಲಭ್ಯ ಮತ್ತು ಕಳಪೆ ಸಂವಹನ ವ್ಯವಸ್ಥೆ. ಲಡಾಖ್‌ನಲ್ಲಿರುವ ಇತರ ಕೆಲವು ಕೇಂದ್ರಗಳಂತೆ ಅಗತ್ಯ ಸೌಲಭ್ಯಗಳ ಕೊರತೆಯ ಹೊರತಾಗಿಯೂ, ಪನಾಮಿಕ್‌ನಲ್ಲಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಲಸಿಕೆ ನೀಡುವಿಕೆಯನ್ನು ಯಶಸ್ವಿಯಾಗಿ ನಡೆಸಿತು.

ಲೇಹ್ ಪಟ್ಟಣದಿಂದ ಸುಮಾರು 140 ಕಿಮೀ ದೂರದಲ್ಲಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದೆ ಇದೆಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ? ಇಲ್ಲಿರುವ ಕೋಲ್ಡ್ ಚೈನ್ ಆಪರೇಟರ್ ಸೆರಿಂಗ್ ಅಂಚೋಕ್ ಅವರ ಮಾತುಗಳಿಂದ, ಎಲ್ಲವೂ ತುಂಬಾ ಸುಲಭವೆನ್ನುವಂತೆ ಕಾಣುತ್ತದೆ. ಅವರು ಹೇಳುತ್ತಾರೆ, "ಇದು ಕಷ್ಟದ ಕೆಲಸವಲ್ಲ. ನಾವು ಒಂದಿಷ್ಟೊ ತಾಳ್ಮೆ ವಹಿಸಿದೆವು. ನಾವು ಹಲವು ಗಂಟೆಗಳ ಕಾಲ ಕೆಲಸ ಮಾಡಿದೆವು ಮತ್ತು ಅಂತಿಮವಾಗಿ ನಾವು ನಮ್ಮ ಕೆಲಸದಲ್ಲಿ ಯಶಸ್ವಿಯಾದೆವು. ಇದರರ್ಥ ಅವರು ಗಂಟೆಗಳವರೆಗೆ ತಾಳ್ಮೆಯಿಂದ ಕೆಲಸ ಮಾಡಿದರು, ಅತ್ಯಂತ ಕಳಪೆ ಇಂಟರ್ನೆಟ್ ಸಂಪರ್ಕಗಳ ಹೊರತಾಗಿಯೂ, ಕೆಲವೆಡೆ ಸಂಪರ್ಕವನ್ನು ಸುಲಭವಾಗಿ ಗಳಿಸಬಹುದಿತ್ತು. ಮತ್ತು ಲಸಿಕೆಯನ್ನು ಅನ್ವಯಿಸುವ ನಿಜವಾದ ಪ್ರಕ್ರಿಯೆಯು ಇನ್ನೂ ಹೆಚ್ಚು ಸಮಯ ತೆಗೆದುಕೊಂಡಿತು.

PHOTO • Ritayan Mukherjee

"ನಾನು ಫೋಟೋ ತೆಗೆಸಿಕೊಳ್ಳಲು ಬಯಸುವುದಿಲ್ಲ" ಎಂದು ಪನಾಮಿಕ್‌ನ ಪಿಎಚ್‌ಸಿಯಲ್ಲಿ ಫಾರ್ಮಾಸಿಸ್ಟ್ ಆಗಿರುವ ಸ್ಟಾನ್ಜಿನ್ ಡಾಲ್ಮಾ ಅವರ ಎಂಟು ವರ್ಷದ ಮಗ ಜಿಗ್ಮತ್ ಜೋರ್ಫಾಲ್ ಹೇಳುತ್ತಾನೆ. ಲಸಿಕೆ ಅಭಿಯಾನಗಳ ಸಮಯದಲ್ಲಿ ಪುಟ್ಟ ಹುಡುಗ ಆಗಾಗ್ಗೆ ಕರ್ತವ್ಯದಲ್ಲಿರುವ ತನ್ನ ತಾಯಿಯ ಜೊತೆಗೂಡುತ್ತಾನೆ

ಈ ಪಿಎಚ್‌ಸಿಯಲ್ಲಿ ಫಾರ್ಮಾಸಿಸ್ಟ್ ಆಗಿರುವ ಸ್ಟಾನ್ಜಿನ್ ಡಾಲ್ಮಾ, ದೀರ್ಘ ಸಮಯವನ್ನು ಕೆಲಸಕ್ಕೆ ನೀಡುವುದು ಮಾತ್ರವಲ್ಲದೆ, ಆಗಾಗ್ಗೆ ತನ್ನ ಎಂಟು ವರ್ಷದ ಮಗು ಅವರನ್ನು ಹಿಂಬಾಲಿಸುತ್ತಾನೆಯೇ ಎಂದು ಕೂಡಾ ಅದೇ ಸಮಯದಲ್ಲಿ ಕಣ್ಣಿಡಬೇಕಾಗಿತ್ತು. "ನನ್ನ ಕಿರಿಯ ಮಗ ನನ್ನಿಂದ ಹೆಚ್ಚು ಕಾಲ ದೂರವಿರಲು ಸಾಧ್ಯವಿಲ್ಲ," ಅವರು ಹೇಳಿದರು. "ಹೀಗಾಗಿ ಹಗಲಿನಲ್ಲಿ ಹೆಚ್ಚು ಹೊತ್ತಿನ ಕೆಲಸಗಳಿದ್ದಾಗ (ವಿಶೇಷವಾಗಿ ಲಸಿಕೆ ನೀಡುವ ದಿನಗಳಲ್ಲಿ), ಅವನನ್ನು ನನ್ನೊಂದಿಗೆ ಕರೆತರುತ್ತೇನೆ. ಅವನು ಹಗಲಿನಲ್ಲಿ ರೋಗ್ಯ ಕೇಂದ್ರದಲ್ಲಿ ಉಳಿಯುತ್ತಾನೆ. ಕೆಲವೊಮ್ಮೆ ರಾತ್ರಿ ಪಾಳಿಯಲ್ಲಿಯೂ ಅವನು ನನ್ನೊಂದಿಗಿರುತ್ತಾನೆ."

ಅಲ್ಲಿಗೆ ಮಗನನ್ನು ಕರೆತಂದರೆ ಆಗುವ ಅಪಾಯಗಳ ಅರಿವೂ ಅವರಿಗೆ ಇಲ್ಲದಿಲ್ಲ. ಆದರೆ ಅವರಿಗೆ ಇಲ್ಲಿ ಚೆನ್ನಾಗಿ ಮಗನನ್ನು ಕಾಳಜಿ ಮಾಡಬಹುದೆನ್ನುವ ಕುರಿತು ಖಾತರಿಯಿದೆ. “ರೋಗಿಗಳು ಮತ್ತು ನನ್ನ ಮಗ – ಇಬ್ಬರೂ ಸಮಾನವಾಗಿ ಪ್ರಮುಖರು.” ಎಂದು ಅವರು ಹೇಳುತ್ತಾರೆ.

ಮಣಿಪುರದ ಪಿಎಚ್‌ಸಿಯ ರೆಸಿಡೆಂಟ್ ವೈದ್ಯರಾದ ಚಬುಂಗಮ್ ಮೀರಾಬಾ ಮೀಟೆ ಅವರು ,"ಆರಂಭದಲ್ಲಿ ಅವ್ಯವಸ್ಥೆ ಇತ್ತು" ಎಂದು ನೆನಪಿಸಿಕೊಂಡರು. “ಕಡಿಮೆ ಮೂಲಸೌಕರ್ಯ ಮತ್ತು ಕಳಪೆ ಮಾಹಿತಿಯೊಂದಿಗೆ ವ್ಯವಸ್ಥೆಯನ್ನು ನಿರ್ವಹಿಸಲು ನಾವು ಹೆಣಗಾಡುತ್ತಿದ್ದೆವು. ಕೊನೆಗೂ, ನಾವು ಪ್ರಕ್ರಿಯೆಯ ಮೇಲೆ ಹಿಡಿತವನ್ನು ಪಡೆದೆವು, ಮತ್ತು ಅದೇ ಸಮಯದಲ್ಲಿ, ಲಸಿಕೆ ಏಕೆ ಅತ್ಯಗತ್ಯ ಎಂಬುದರ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿಯನ್ನೂ ಮೂಡಿಸಿದ್ದೇವೆ."

ದೇಶದ ಹೆಚ್ಚಿನ ಭಾಗಗಳಂತೆ ಲಡಾಖ್ ಕೂಡ ಕೋವಿಡ್‌ನ 'ಎರಡನೇ ಅಲೆ'ಯಿಂದ ತೀವ್ರ ಹಾನಿಗೊಳಗಾಯಿತು. ನಿರಂತರ ಸಾರಿಗೆಯ ಚಲನೆ, ನಿಯಮಿತವಾಗಿ ಬರುವ ಕಾರ್ಮಿಕರ ಆಗಮನ ಮತ್ತು ಲಡಾಖಿನಿಂದ ಹೊರಗೆ ಕೆಲಸ ಮಾಡುವ ಇಲ್ಲಿನ ಜನರು ಮತ್ತು ವಿದ್ಯಾರ್ಥಿಗಳ ಮರುಳುವಿಕೆ ಇಲ್ಲಿ ಕೊರೋನಾ ಕೇಸುಗಳ ಏರಿಕೆಗೆ ಕಾರಣವಾಗಿರುವಂತೆ ತೋರುತ್ತದೆ.

"ಅದೊಂದು ಹುಚ್ಚು ಹಿಡಿಸುವಂತಹ ಸಮಯವಾಗಿತ್ತು" ಎಂದು ಲೇಹ್‌ನ ಜಿಲ್ಲಾ ಲಸಿಕಾ ಅಧಿಕಾರಿ ತಾಶಿ ನಮಗ್ಯಾಲ್ ಆರಂಭಿಕ ಮಹಾಮಾರಿ ಅವಧಿಯ ಕುರಿತು ಹೇಳಿದರು. "ಆ ಸಮಯದಲ್ಲಿ, ಲೇಹ್ ಪಟ್ಟಣದಲ್ಲಿ ಸಾಕಷ್ಟು ಜನರನ್ನು ಪರೀಕ್ಷಿಸಲು ನಮ್ಮಲ್ಲಿ ಯಾವುದೇ ಸರಿಯಾದ ಮೂಲಸೌಕರ್ಯ ಇರಲಿಲ್ಲ. ಹಾಗಾಗಿ ನಾವು ಪರೀಕ್ಷೆಗಾಗಿ ಮಾದರಿಗಳನ್ನು ಚಂಡೀಗಢಕ್ಕೆ ಕಳುಹಿಸಬೇಕಾಗಿತ್ತು. ಫಲಿತಾಂಶ ಬರುವುದಕ್ಕೆ ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಈಗ ನಾವು ದಿನವೊಂದಕ್ಕೆ 1,000 ಜನರನ್ನು ಪರೀಕ್ಷಿಸಬಹುದು. ಲೇಹ್‌ನ ಸೋನಮ್ ನೂರ್ಬೂ ಮೆಮೋರಿಯಲ್ ಆಸ್ಪತ್ರೆಯಲ್ಲಿ ಈ ವ್ಯವಸ್ಥೆಯಿದೆ. ಈ ವರ್ಷದ ಆರಂಭದಿಂದ ನಾವು ಚಳಿಗಾಲ ಬರುವ ಮುನ್ನ ಲಸಿಕೆ ಹಾಕುವುದನ್ನು ಪೂರ್ಣಗೊಳಿಸಲು ಯೋಜಿಸಿದ್ದೇವೆ - ಅಂದರೆ ಅಕ್ಟೋಬರ್ ಮುಗಿಯುವ ಮುನ್ನ.

ಇಲ್ಲಿ ಆರೋಗ್ಯ ಕೇಂದ್ರಗಳು ಸ್ಥಿರವಾದ ಅಂತರ್ಜಾಲವನ್ನು ಹೊಂದಿಲ್ಲ ಮತ್ತು ಜನರು ಸಂವಹನ ತಂತ್ರಜ್ಞಾನಗಳಿಗೆ ಸೀಮಿತ ಪ್ರವೇಶವನ್ನು ಹೊಂದಿರುವುದರಿಂದ, ಅವರು ಕೆಲಸಗಳನ್ನು ಮಾಡಲು ಹೊಸ ದಾರಿಗಳನ್ನು ಕಂಡುಕೊಳ್ಳಬೇಕಾಯಿತು. "ವಯಸ್ಸಾದ ಜನರು ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದಿಲ್ಲ. ಮತ್ತು ಇಂಟರ್ನೆಟ್ ಸಮಸ್ಯೆಗಳೂ ಇವೆ" ಎಂದು ಸಮುದ್ರ ಮಟ್ಟದಿಂದ 9,799 ಅಡಿ ಎತ್ತರದ ಲೇಹ್ ಜಿಲ್ಲೆಯ ಖಾಲ್ಸಿ ಎಂಬ ಹಳ್ಳಿಯ ಆರೋಗ್ಯ ಕಾರ್ಯಕರ್ತ ಕುಂಜಾಂಗ್ ಚೊರೊಲ್ ಹೇಳಿದರು. ಹಾಗಾದರೆ ಅವರು ಅದನ್ನು ಹೇಗೆ ನಿಭಾಯಿಸಿದರು?

PHOTO • Ritayan Mukherjee

ಖಾಲ್ಸಿ ತಹಸಿಲ್‌ನ ಪಿಎಚ್‌ಸಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಕುಂಜಾಂಗ್ ಚೋರೊಲ್, ಖಲ್ತ್ಸೆ ಎನ್ನುವ ಊರಿನಲ್ಲಿ ಕೋವಿನ್ ಆಪ್‌ನಲ್ಲಿ ರೋಗಿಯ ವಿವರಗಳನ್ನು ನೋಂದಾಯಿಸುತ್ತಿರುವುದು

ಕುಂಜಂಗ್ ಅವರನ್ನು ಇಲ್ಲಿ 'ಕುನೆ' ಎಂದೂ ಕರೆಯಲಾಗುತ್ತದೆ. "ಮೊದಲ ಡೋಸ್ ನಂತರ, ನಾವು ಅನನ್ಯ ಸಂಖ್ಯೆ ಮತ್ತು ಲಸಿಕೆಯ ಎರಡನೇ ಡೋಸ್‌ನ ದಿನಾಂಕವನ್ನು ಕಾಗದದ ಮೇಲೆ ಬರೆದು ಕೊಡುತ್ತಿದ್ದೆವು,” ಎಂದು ಅವರು ವಿವರಿಸುತ್ತಾರೆ. ನಂತರ, ನಾವು ಜನರ ಅಗತ್ಯ ದಾಖಲೆಗಳ ಹಿಂಬದಿಯಲ್ಲಿ ಆ ಕಾಗದದ ತುಂಡನ್ನು ಅಂಟಿಸುತ್ತಿದ್ದೆವು. ಉದಾಹರಣೆಗೆ, ಅವರ ಆಧಾರ್ ಕಾರ್ಡ್ ಹಿಂಬದಿಯಲ್ಲಿ. ಅದೇ ರೀತಿ, ನಾವು ಇಡೀ ಪ್ರಕ್ರಿಯೆಯನ್ನು ಹೇಗೋ ನಿರ್ವಹಿಸಿದ್ದೇವೆ. ಮತ್ತು ಇಲ್ಲಿಯವರೆಗೆ ಈ ವಿಧಾನವು ಹಳ್ಳಿಯ ಜನರಿಗೆ ತುಂಬಾ ಪರಿಣಾಮಕಾರಿಯಾಗಿದೆ."

ಅವರು ಹೇಳುತ್ತಾರೆ, "ಲಸಿಕೆಯ ಡೋಸ್ ಪೂರ್ಣಗೊಂಡ ನಂತರ, ನಾವು ಲಸಿಕೆ ಪ್ರಮಾಣಪತ್ರವನ್ನು ಮುದ್ರಿಸಿ ಸಾರ್ವಜನಿಕರಿಗೆ ಹಸ್ತಾಂತರಿಸಿದೆವು."

ಬಹುತೇಕ ಎಲ್ಲಾ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳು ಕೋವಿಡ್ನೊಂದಿಗೆ ಹೋರಾಡಲು ತಮ್ಮ ಸಂಪೂರ್ಣ ಸಂಪನ್ಮೂಲಗಳನ್ನು ಬಳಸುತ್ತಿದ್ದಾಗ, ಫಿಯಾಂಗ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಅಭಿಯಾನಕ್ಕೆ ಸಮಾನಾಂತರವಾಗಿ ಮಕ್ಕಳಿಗೆ ವಾಡಿಕೆಯ ರೋಗನಿರೋಧಕ ಸೇವೆಯನ್ನು ಒದಗಿಸುವ ವಿಧಾನ ನನಗೆ ಅತ್ಯಂತ ಆತಂಕ ಹುಟ್ಟಿಸುವಂತಿತ್ತು. ಫಿಯಾಂಗ್ ಗ್ರಾಮ ಸಮುದ್ರ ಮಟ್ಟದಿಂದ ಸುಮಾರು 12,000 ಅಡಿಗಳಷ್ಟು ಎತ್ತರದಲ್ಲಿದೆ.

ಈಗ, ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ಆಡಳಿತ ಹೇಳುವಂತೆ - ಅದರ ವ್ಯಾಪ್ತಿಯ ಅರ್ಹ ಜನಸಂಖ್ಯೆಯ 100 ಪ್ರತಿಶತದಷ್ಟು ಜನರು ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ- ಇದರ ಸತ್ಯಾಸತ್ಯತೆ ಚರ್ಚಾಸ್ಪದವಿರಬಹುದು. ಆದಾಗ್ಯೂ, ಈ ಹೇಳಿಕೆಯಲ್ಲಿ ಪ್ರಶ್ನಾತೀತವಾಗಿ ಉಳಿದಿರುವುದು ಪರ್ವತಮಯ ಭೂಪ್ರದೇಶದಲ್ಲಿ ಸಂಚರಿಸುವ ಅದರ ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ಸ್ಪೂರ್ತಿದಾಯಕ ಪಾತ್ರವಾಗಿದೆ. ಲಡಾಖ್‌ನ ಸರಿಸುಮಾರು 270,000 ನಿವಾಸಿಗಳಿಗೆ ಲಸಿಕೆಗಳನ್ನು ಸಾಗಿಸಲು ಅವರು ಹೆಣಗಾಡಿದರು, ದೀರ್ಘಕಾಲಿಕ ಶೀತ ಮತ್ತು ಶುಷ್ಕ ವಾತಾವರಣದಲ್ಲಿ 8,000ದಿಂದ 20,000 ಅಡಿಗಳಷ್ಟು ಎತ್ತರದಲ್ಲಿ ವಾಸಿಸುತ್ತಿದ್ದಾರೆ.

ಲೇಹ್‌ನಲ್ಲಿ ಲಸಿಕೆ ಮತ್ತು ಕೋಲ್ಡ್ ಚೈನ್ ಮ್ಯಾನೇಜರ್ ಜಿಗ್ಮೆಟ್ ನಾಮ್‌ಗಿಯಾಲ್ ಹೇಳುವಂತೆ, "ನಮ್ಮ ಪಾಲಿಗೆ, ಸವಾಲುಗಳು ಅಗಾಧವಾಗಿದ್ದವು. ಉದಾಹರಣೆಗೆ, ಕೋವಿನ್ ಅಂತಹ ಬಳಕೆದಾರ ಸ್ನೇಹಿ ವೇದಿಕೆಯಲ್ಲ. ಮತ್ತು ಪನಾಮಿಕ್‌ನಲ್ಲಿರುವಂತಹ ದೂರದ ಪಿಎಚ್‌ಸಿಗಳಲ್ಲಿ ಯಾವುದೇ ಸ್ಥಿರವಾದ ಇಂಟರ್ನೆಟ್ ಸೌಲಭ್ಯ ಲಭ್ಯವಿಲ್ಲ." ನಾಮ್‌ಗಿಯಾಲ್ ಆಗಾಗ್ಗೆ ಶೀತಲ ಮರುಭೂಮಿಯಲ್ಲಿ 300 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸುತ್ತಾ ಲಸಿಕೆಗಳನ್ನು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸಲಾಗಿದೆಯೇ ಮತ್ತು ಸರಿಯಾದ ಪ್ರಮಾಣದಲ್ಲಿ ವಿವಿಧ ಶೇಖರಣಾ ಸ್ಥಳಗಳಲ್ಲಿ ಲಭ್ಯವಿದೆಯೇ ಎಂದು ಪರಿಶೀಲಿಸುತ್ತಿರುತ್ತಾರೆ.

PHOTO • Ritayan Mukherjee

ಫಿಯಾಂಗ್‌ನ ಪಿಎಚ್‌ಸಿಯಲ್ಲಿ - ಸಮುದ್ರ ಮಟ್ಟದಿಂದ 12,000 ಅಡಿಗಳಷ್ಟು ಎತ್ತರದಿಂದ - ವೈದ್ಯರು ಲಸಿಕೆ ಅಭಿಯಾನದೊಂದಿಗೆ ಮಕ್ಕಳಿಗೆ ರೋಗನಿರೋಧಕ ಸೇವೆಯನ್ನು ನಡೆಸುತ್ತಿದ್ದಾರೆ

"ಓಹ್, ಕೋವಿನ್ ಮಾತ್ರವಲ್ಲ, ಮುಖ್ಯ ಕಾಳಜಿ ಲಸಿಕೆ ವ್ಯರ್ಥವಾಗುವ ಬಗ್ಗೆಯೂ ಇತ್ತು" ಎಂದು ಖಾಲ್ಸಿ ತಹಸಿಲ್‌ನ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ಡೀಚನ್ ಆಂಗ್ಮೋ ಹೇಳಿದರು. "ಲಸಿಕೆಗಳನ್ನು ಎಂದಿಗೂ ವ್ಯರ್ಥ ಮಾಡಬಾರದು ಎಂದು ಕೇಂದ್ರ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆಯಿದೆ."

ಆಂಗ್ಮೋ ಸೂಚಿಸಿದ್ದು ಬಹಳ ದೊಡ್ಡ ಸವಾಲಾಗಿತ್ತು. ಅವರು ವಿವರಿಸುತ್ತಾರೆ, “ನಾವು ಒಂದು ಬಾಟಲಿಯಿಂದ 10 ಡೋಸ್ ಲಸಿಕೆಯನ್ನು ನೀಡಬಹುದು. ಆದರೆ, ಒಮ್ಮೆ ಬಾಟಲಿಯನ್ನು ತೆರೆದರೆ, ಅದನ್ನು ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಬಳಸಬೇಕಾಗುತ್ತದೆ. ಖಾಲ್ಸಿಯ ನಮ್ಮ ಹಳ್ಳಿಯಂತಹ ದೂರದ ಹಳ್ಳಿಗಳಲ್ಲಿ, ನಾಲ್ಕು ಗಂಟೆಗಳ ಅವಧಿಯಲ್ಲಿ ಲಸಿಕೆ ಪಡೆಯಲು ನಾಲ್ಕರಿಂದ ಐದು ಜನರು ಬರುವುದಿಲ್ಲ, ಏಕೆಂದರೆ ಅವರು ಇಲ್ಲಿಗೆ ತಲುಪಲು ಬಹಳ ದೂರ ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ, ವ್ಯರ್ಥವಾಗುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. ಇದನ್ನು ತಪ್ಪಿಸಲು, ಜನರು ಸಮಯಕ್ಕೆ ಸರಿಯಾಗಿ ಆರೋಗ್ಯ ಕೇಂದ್ರವನ್ನು ತಲುಪುವುದನ್ನು ಎಂದು ಖಚಿತಪಡಿಸಿಕೊಳ್ಳಲು ನನ್ನ ಅನೇಕ ಸಹೋದ್ಯೋಗಿಗಳು ಹಿಂದಿನ ದಿನವೇ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು. ಇದು ನೀರಸವೆನ್ನಿಸುವ ಮತ್ತು ಬೇಸರ ಮೂಡಿಸುವ ಚಟುವಟಿಕೆ, ಆದರೆ ಇದು ಅರ್ಥಪೂರ್ಣ ಕಾರ್ಯವಾಗಿದೆ. ಪರಿಣಾಮವಾಗಿ, ನಮ್ಮ ಕೇಂದ್ರದಲ್ಲಿ ಲಸಿಕೆಯ ವ್ಯರ್ಥವಾಗುವುದಿಲ್ಲ.”

ಖಾಲ್ಸಿಯ ಆರೋಗ್ಯ ಸಿಬ್ಬಂದಿಯು ಈ ತಹಸಿಲ್ ವ್ಯಾಪ್ತಿಯಲ್ಲಿ ಬರುವ ಲಿಂಗ್‌ಶೆಟ್ ಎಂಬ ದೂರದ ಹಳ್ಳಿಗೆ ಲಸಿಕೆಗಳೊಂದಿಗೆ ಹೋಗಿದ್ದರೆಂದು ನನಗೆ ನಂತರ ತಿಳಿಯಿತು. ಈ ಗ್ರಾಮವೂ ತಹಸಿಲ್ ವ್ಯಾಪ್ತಿಗೆ ಬರುತ್ತದೆ. ಸ್ತ್ರೀರೋಗ ತಜ್ಞೆ ಮತ್ತು ಪ್ರಸೂತಿ ತಜ್ಞೆ ಡಾ.ಪದ್ಮಾ ಅವರು ಲಸಿಕೆಯ ಉಸ್ತುವಾರಿಯಾಗಿದ್ದರು. ಅವರು ಹೇಳುತ್ತಾರೆ, "ಆರಂಭದಲ್ಲಿ ಜನರು ಲಸಿಕೆಯ ಬಗ್ಗೆ ಸ್ವಲ್ಪ ಹಿಂಜರಿಯುತ್ತಿದ್ದರು, ಆದರೆ ನಾವು ವಿವರಿಸಿದ ನಂತರ, ಅವರು ಅದರ ಮಹತ್ವವನ್ನು ಅರ್ಥಮಾಡಿಕೊಂಡರು. ಈಗ ನಾವು ದಿನಕ್ಕೆ 500 ಜನರಿಗೆ ಲಸಿಕೆ ಹಾಕುವ ಮೂಲಕ ದಾಖಲೆಯನ್ನು ಮಾಡಿದ್ದೇವೆ. ಮತ್ತು ನಾವು ತಂಡವಾಗಿ ಕೆಲಸ ಮಾಡುವ ಮೂಲಕ ಈ ಮೈಲಿಗಲ್ಲನ್ನು ಸಾಧಿಸಿದ್ದೇವೆ.

ಜಿಗ್ಮತ್ ನಾಮ್‌ಗ್ಯಾಲ್ ಹೇಳುತ್ತಾರೆ, “ದಾದಿಯರು, ಫಾರ್ಮಸಿಸ್ಟ್‌ಗಳು ಮತ್ತು ವೈದ್ಯರು ಈ ಸವಾಲನ್ನು ಹೇಗೆ ಎದುರಿಸಿದರು ಮತ್ತು ಲಸಿಕೆ ನೀಡುವಿಕೆಯನ್ನು ಯಶಸ್ವಿಯಾಗಿ ನಡೆಸಿದರೆಂಬುದು ನನಗೆ ಆಶ್ಚರ್ಯ ತಂದಿದೆ. ಆ ಸಮಯದಲ್ಲಿ ನಾವು ಲಡಾಖ್ ಜನರಿಗೆ ಮಾತ್ರವಲ್ಲ, ನಿಯತಕಾಲಿಕ ವಲಸೆ ಕಾರ್ಮಿಕರು, ನೇಪಾಳದ ಕಾರ್ಮಿಕರು ಮತ್ತು ಲಸಿಕೆ ಹಾಕಿಸಿಕೊಳ್ಳದಿರುವ ಇತರ ರಾಜ್ಯಗಳ ಪ್ರಯಾಣಿಕರಿಗೂ ಲಸಿಕೆ ನೀಡುತ್ತಿದ್ದೆವು."

ಇದು ಸುಮ್ಮನೆ ಅವರನ್ನು ಅವರೇ ಹೊಗಳಿಕೊಳ್ಳುತ್ತಿರುವುದಲ್ಲ. ನಾನು ಜಾರ್ಖಂಡ್‌ನ ಕೆಲವು ನಿಯತಕಾಲಿಕ ವಲಸೆ ಕಾರ್ಮಿಕರನ್ನು ಭೇಟಿಯಾದೆ, ಪನಾಮಿಕ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ರಸ್ತೆಯನ್ನು ಗುಡಿಸುತ್ತಿದ್ದ ಅವರು ನನಗೆ ಹೇಳಿದರು, "ನಾವು ಲಡಾಖ್‌ನಲ್ಲಿರುವುದಕ್ಕೆ ಕೃತಜ್ಞರಾಗಿರುತ್ತೇವೆ. ನಾವೆಲ್ಲರೂ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದೇವೆ. ಈಗ ನಾವು ಎರಡನೇ ಡೋಸ್‌ಗಾಗಿ ಕಾಯುತ್ತಿದ್ದೇವೆ. ಇದರಿಂದ ನಾವು ನಮ್ಮ ಮನೆಗಳಿಗೆ ಹಿಂತಿರುಗಿದಾಗ, ನಾವು ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುತ್ತೇವೆ. ಮತ್ತು ಈ ರೀತಿಯಾಗಿ ನಾವು ನಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗುತ್ತದೆ" ಎಂದರು.

PHOTO • Ritayan Mukherjee

ಪನಾಮಿಕ್ ನಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಟೆರೇಸ್‌ ಮೇಲೇರಿ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸುತ್ತಿರುವ ಆರೋಗ್ಯ ಕಾರ್ಯಕರ್ತ; ಕನೆಕ್ಟಿವಿಟಿಯೆನ್ನುವುದು ಇಲ್ಲಿ ದೊಡ್ಡ ಸವಾಲಾಗಿದೆ

PHOTO • Ritayan Mukherjee

ಲೇಹ್ ಪಟ್ಟಣದಿಂದ 140 ಕಿಮೀ ದೂರದ ಪನಾಮಿಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 100 ಜನರು ಲಸಿಕೆ ಪಡೆಯಲೆಂದು ಸಾಲುಗಟ್ಟಿ ನಿಂತಿರುವುದು. ಈ ಕೇಂದ್ರವು ಸಿಯಾಚಿನ್ ಹಿಮನದಿಗೆ ಬಹಳ ಹತ್ತಿರದಲ್ಲಿದೆ. ಪನಾಮಿಕ್ ಬ್ಲಾಕ್ನ ಎಲ್ಲದಕ್ಕಿಂತಲೂ ಹೆಚ್ಚು ಎತ್ತರದ ಸ್ಥಳವು ಸಮುದ್ರ ಮಟ್ಟದಿಂದ 19,091 ಅಡಿಗಳಷ್ಟು ಎತ್ತರವನ್ನು ಹೊಂದಿದೆ

PHOTO • Ritayan Mukherjee

ಫಾರ್ಮಸಿಸ್ಟ್ ಸ್ಟಾಂಜಿನ್ ಡೋಲ್ಮಾ ಪನಾಮಿಕ್ ಪಿಎಚ್‌ಸಿಯಲ್ಲಿ ಲಸಿಕಾ ಅಭಿಯಾನಕ್ಕೆ ಸಿದ್ಧತೆ ನಡೆಸುತ್ತಿರುವುದನ್ನು ನೀವು ನೋಡಬಹುದು

PHOTO • Ritayan Mukherjee

ತ್ಸೆರಿಂಗ್ ಆಂಗ್‌ಚಾಕ್ ಪನಾಮಿಕ್ ಪಿಎಚ್‌ಸಿಯಲ್ಲಿ ಲಸಿಕೆ ದಾಸ್ತಾನು ಪರಿಶೀಲಿಸುತ್ತಿರುವುದು. ಕೋವಿನ್ ಆಪ್ ದಾಸ್ತಾನುಗಳನ್ನು ಡಿಜಿಟಲ್ ರೀತಿಯಲ್ಲಿ ಟ್ರ್ಯಾಕ್ ಮಾಡಿದರೂ, ಕೆಲವೊಮ್ಮೆ ನಿಜವಾದ ಸಂಖ್ಯೆಗಳು ಎಣಿಕೆಯಿಂದ ಭಿನ್ನವಾಗಿರಬಹುದು. ಆದ್ದರಿಂದ ಆರೋಗ್ಯ ಕಾರ್ಯಕರ್ತರು ಯಾವಾಗಲೂ ಎರಡೆರಡು ಬಾರಿ ಪರಿಶೀಲಿಸುವ ಮೂಲಕ ಆ ಕುರಿತು ಖಚಿತಪಡಿಸಿಕೊಳ್ಳುತ್ತಾರೆ

PHOTO • Ritayan Mukherjee

ಈ ಚಿತ್ರದಲ್ಲಿ ಆರೋಗ್ಯ ಸೇವಕ ತ್ಸೆವಾಂಗ್ ಡೋಲ್ಮಾ ಅವರುಪನಾಮಿಕ್ ಪಿಎಚ್‌ಸಿಯಲ್ಲಿ ಲಸಿಕೆಗೆ ಮೊದಲು ಆತಂಕದಲ್ಲಿರುವ ಗ್ರಾಮಸ್ಥರಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಾರೆ

PHOTO • Ritayan Mukherjee

ಡಾ. ಚಾಬುಂಗ್‌ಬಾಮ್ ಮಿರಾಬ ಮೀಟೇಯ್ ಅವರು ಹಲವಾರು ದಿನಗಳಿಂದ ಜ್ವರದಿಂದ ಬಳಲುತ್ತಿರುವ ಬೌದ್ಧ ಸನ್ಯಾಸಿಯ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ

PHOTO • Ritayan Mukherjee

ಪನಾಮಿಕ್‌ನ ಪಿಎಚ್‌ಸಿಯಲ್ಲಿ ಹಿರಿಯ ದಾದಿಯೊಬ್ಬರು ಆಸ್ತಮಾದಿಂದ ಬಳಲುತ್ತಿರುವ ಪುಟ್ಟ ತೆನ್ಝಿನ್‌ಗೆ ನೆಬ್ಯುಲೈಸರ್ ಹಾಕುತ್ತಿರುವುದು

PHOTO • Ritayan Mukherjee

ಡಾ. ಚಾಬುಂಗ್‌ಬಾಮ್ ಕೃಷಿ ಕೆಲಸದ ಸಮಯದಲ್ಲಿ ನಡೆದ ಅವಘಡದಿಂದ ಗಾಯಗೊಂಡ ಗ್ರಾಮಸ್ಥರ ಬೆರಳನ್ನು ಹೊಲಿಯುವಲ್ಲಿ ನಿರತರಾಗಿರುವುದು

PHOTO • Ritayan Mukherjee

ತುರತುಕ್ ಎನ್ನುವ ಊರಿನವರಾದ, ಪನಾಮಿಕ್ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಅಲಿ ಮೂಷಾ ಹೇಳುತ್ತಾರೆ, 'ಆರಂಭದಲ್ಲಿ ಸೋಂಕಿನ ಪ್ರಕರಣಗಳು ಇಲ್ಲಿ ನಿಯಂತ್ರಣ ತಪ್ಪಿತ್ತು, ಆದರೆ ಈಗ ನಾವು ಜನರಿಗೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿದ್ದೇವೆ '

PHOTO • Ritayan Mukherjee

ಖಲ್ತ್ಸೆ ಎನ್ನುವ ಊರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಡೀಚೆನ್ ಆಂಗ್ಮೋ ತನ್ನ ಸಹೋದ್ಯೋಗಿ ತ್ಸೆರಿಂಗ್ ಲ್ಯಾಂಡಾಲ್ ಲಸಿಕೆ ಹಾಕುವ ಮೊದಲು ಪಿಪಿಇ ಉಡುಪನ್ನು ಧರಿಸಲು ಸಹಾಯ ಮಾಡುತ್ತಿದ್ದಾರೆ

PHOTO • Ritayan Mukherjee

ಖಲ್ತ್ಸೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ಮತ್ತು ಪ್ರಸೂತಿ ತಜ್ಞೆ ಡಾ.ಪದ್ಮಾ, ಲಸಿಕೆ ಹಾಕುವ ಕಾರ್ಯಕ್ರಮ ಆರಂಭಕ್ಕೆ ಮುನ್ನ ತನ್ನ ಫೋನಿನಲ್ಲಿ ಕೆಲವು ವಿವರಗಳನ್ನು ಪರಿಶೀಲಿಸುತ್ತಿರುವುದು

PHOTO • Ritayan Mukherjee

ಡೆಚೆನ್ ಆಂಗ್ಮೋ ಖಲ್ಸ್ತೆಯಲ್ಲಿನ  ಆರೋಗ್ಯ ಕೇಂದ್ರದಲ್ಲಿ ಮುಂದಿನ ರೋಗಿಗಾಗಿ ಕಾಯುತ್ತಿರುವುದು. ಲಡಾಖ್‌ನಲ್ಲಿ ಲಸಿಕೆಯನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ, ಆದ್ದರಿಂದ ಆರೋಗ್ಯ ಕಾರ್ಯಕರ್ತರು ಒಂದೇ ಬಾಟಲಿಯಿಂದ 10-11 ಡೋಸ್ ಲಸಿಕೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ತಮ್ಮಿಂದ ಸಾಧ್ಯವಿರುವುದನ್ನೆಲ್ಲ ಮಾಡುತ್ತಾರೆ

PHOTO • Ritayan Mukherjee

ಖಲ್ತ್ಸೆ ಗ್ರಾಮದಲ್ಲಿ ವ್ಯಾಕ್ಸಿನೇಷನ್ ಕೇಂದ್ರವಾಗಿ ಬಳಸಲಾಗುತ್ತಿರುವ ತರಗತಿಯೊಂದರಲ್ಲಿ ಜನರು ತಮ್ಮ ಸರದಿಗಾಗಿ ಕಾಯುತ್ತಿರುವುದು

PHOTO • Ritayan Mukherjee

ಖಾಲ್ಸಿ ತಹಸಿಲ್‌ನ ದೂರದ ಹಳ್ಳಿಯ ಹಿರಿಯ ವ್ಯಕ್ತಿ, ತನ್ನ ಎರಡನೇ ಡೋಸ್‌ ಸಲುವಾಗಿ ಬಂದಿದ್ದಾರೆ, ಆರೋಗ್ಯ ಕಾರ್ಯಕರ್ತರು ಅವರಿಗೆ ಅಗತ್ಯ ಸಹಾಯವನ್ನು ನೀಡಿದರು

PHOTO • Ritayan Mukherjee

ಲಮಾಯುರು ಪ್ರದೇಶದ ಗ್ರಾಮಸ್ಥರು ಖಲ್ತ್ಸೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಡೋಸ್ ಪಡೆಯುತ್ತಿರುವುದು

PHOTO • Ritayan Mukherjee

ಡಿಯಾಚೆನ್ ಆಂಗ್ಮೊ ಖಲ್ತ್ಸೆಯೆನ್ನುವ ಊರಿನ ಹಿರಿಯರಿಗೆ ಎಚ್ಚರಿಕೆಯಿಂದ ಲಸಿಕೆ ಹಾಕುತ್ತಿರುವುದು

PHOTO • Ritayan Mukherjee

ಲಸಿಕೆ ಹಾಕಲಾಗಿದೆ, ಲಸಿಕೆ ಪ್ರಮಾಣಪತ್ರದೊಂದಿಗೆ ಲಸಿಕೆ ಪಡೆದವರು

PHOTO • Ritayan Mukherjee

"ಇದು ಆರಾಮದಾಯಕವಾದ ಉಡುಪಲ್ಲ. ಪಿಪಿಇ ಸೂಟ್‌ನಲ್ಲಿ ಒಂದಿಡೀ ದಿನ ಕಳೆಯುವುದು ತುಂಬಾ ಸವಾಲಿನದ್ದಾಗಿದೆ. ಆದರೆ ಇಲ್ಲಿನ ಒಂದು ಅನುಕೂಲವೆಂದರೆ ವಾತಾವರಣವು ತಂಪಾಗಿರುತ್ತದೆ; ಬಯಲು ಪ್ರದೇಶದ ಆರೋಗ್ಯ ಕಾರ್ಯಕರ್ತರಿಗೆ ಇದನ್ನು ಧರಿಸಿ ಕೆಲಸ ಮಾಡುವುದು ತುಂಬಾ ಕಠಿಣವಾಗಿರಬಹುದು" ಎಂದು ಖಲ್ತ್ಸೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ತ್ಸೆರಿಂಗ್ ಆಂಗ್ಚುಕ್ ಹೇಳುತ್ತಾರೆ

PHOTO • Ritayan Mukherjee

ಒಂದಿಡೀ ದಿನ ಜನರಿಗೆ ಲಸಿಕೆ ಹಾಕಿದ ನಂತರ ಖಾಲ್ಸಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿನ ನಿರ್ಜನ ತಾತ್ಕಾಲಿಕ ಲಸಿಕೆ ಕೊಠಡಿ

ಅನುವಾದ: ಶಂಕರ ಎನ್. ಕೆಂಚನೂರು

Ritayan Mukherjee

Ritayan Mukherjee is a Kolkata-based photographer and a PARI Senior Fellow. He is working on a long-term project that documents the lives of pastoral and nomadic communities in India.

Other stories by Ritayan Mukherjee
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru