“ಇಲ್ಲಿಗೆ ಬಂದು ನಮ್ಮ ಸ್ಥಿತಿಯನ್ನು ನೋಡಿ. ನಾವೆಲ್ಲರೂ ಆದೇಶಗಳನ್ನು ಮತ್ತು ಪರಸ್ಪರ ದೈಹಿಕ ಅಂತರವನ್ನು ಪಾಲಿಸುತ್ತಿದ್ದು, ಮಾಸ್ಕ್‌ ಧರಿಸುತ್ತಿದ್ದೇವೆ. ಪಡಿತರದ ಸೌಲಭ್ಯಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಆದರೆ, ಇದು ನನ್ನ ಕುಟುಂಬವನ್ನು ಕೆಲವು ದಿನಗಳವರೆಗೆ ಮಾತ್ರವೇ ಸಲಹಬಲ್ಲದು. ನಂತರ, ನಾವೇನು ಮಾಡುತ್ತೇವೋ ತಿಳಿಯದಾಗಿದೆ” ಎಂದರಾಕೆ.

ರಾಜಾಸ್ಥಾನದ ಛುರು ಜಿಲ್ಲೆಯ ಸುಜನ್‌ಘರ್‌ ಊರಿನ ದಿಶ ಶೇಖಾವತಿ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಶಿಬೊರಿ ಕಲೆಯ ಕೆಲಸದಲ್ಲಿ ತೊಡಗಿರುವ 55ರ ವಯಸ್ಸಿನ ದುರ್ಗಾ ದೇವಿಯವರು, ಪಡಿತರವನ್ನು ಪಡೆಯಲು ಸಾಲಿನಲ್ಲಿ ಕಾಯುತ್ತಿರುವ ಸಮಯದಲ್ಲಿ, ನಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಶಿಬೊರಿ ಎಂಬುದು, ಬಟ್ಟೆಯನ್ನು ಕಟ್ಟಿ ಅದಕ್ಕೆ ಬಣ್ಣವನ್ನು ಹಾಕಿ (tie & die), ಸಂಪೂರ್ಣವಾಗಿ ಕೈಯಿಂದಲೇ ನಿರ್ವಹಿಸಲ್ಪಡುವ ಒಂದು ಕುಶಲ ಕಲೆ. ತಮ್ಮ ಭಯಾನಕ ಭವಿಷ್ಯವಾಣಿಗೆ ನಗುವನ್ನು ಸೂಸುತ್ತ, “ಯಾವಾಗ ನಾವು ಕೊರಾನಾ ರೋಗದ ಸೋಂಕಿತರಾಗುತ್ತೇವೋ ತಿಳಿಯದು. ಆದರೆ, ಅದಕ್ಕೂ ಮೊದಲು ನಾವು ಹಸಿವಿನಿಂದಲೇ ಸತ್ತುಹೋಗುತ್ತೇವೆ” ಎಂದರು ದುರ್ಗಾ ದೇವಿ.

ಮದ್ಯವ್ಯಸನಿಯಾಗಿದ್ದ ದುರ್ಗಾ ದೇವಿಯವರ ಪತಿಯು ಕೆಲವು ವರ್ಷಗಳ ಹಿಂದೆ ಸಾವಿಗೀಡಾದ ನಂತರ ಆಕೆಯ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿದೆ. ಒಂಭತ್ತು ಮಕ್ಕಳ ಪಾಲನೆ ಪೋಷಣೆಯನ್ನು ಸ್ವತಃ ನಿರ್ವಹಿಸುತ್ತಿರುವ ಇವರು, 200 ರೂ.ಗಳ ದಿನಗೂಲಿಯನ್ನು ಸಂಪಾದಿಸುತ್ತಾರೆ. ಮಾಹೆಯಾನ ಸುಮಾರು 15 ದಿನಗಳ ಕೆಲಸವು ದೊರೆಯುತ್ತದೆಂದು ಆಕೆ ತಿಳಿಸಿದರು.

ಪಡಿತರಕ್ಕಾಗಿ ಸಾಲಿನಲ್ಲಿ ತನ್ನ ಹಿಂದೆ ನಿಂತಿದ್ದ 35ರ ವಯಸ್ಸಿನ ಪರಮೇಶ್ವರಿಗೆ ಅವರು ಫೋನನ್ನು ದಾಟಿಸಿದರು. ಈಕೆಯೂ ದಿನಗೂಲಿಯನ್ನು ಪಡೆಯುವ ಕುಶಲಕರ್ಮಿ. “ತಮ್ಮ ಪತಿಯು ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ದುಡಿಯುತ್ತಿದ್ದು (ಇವರು ತಮ್ಮ ಮೊದಲ ಹೆಸರನ್ನು ಬಳಸಲು ಇಚ್ಛಿಸುತ್ತಾರೆ), ಅವು ಲಾಕ್‌ಡೌನ್‌ ಕಾರಣದಿಂದಾಗಿ ಮುಚ್ಚಿರುವ ಕಾರಣ, ಈಗ ಕೆಲಸವಿಲ್ಲದಂತಾಗಿದ್ದಾರೆ. ನಮಗೆ ಕೆಲಸವೂ ಇಲ್ಲ ಹಣವೂ ಇಲ್ಲ” ಎಂದರು ಪರಮೇಶ್ವರಿ. ದುರ್ಗಾ ದೇವಿಯವರಂತೆ ಈಕೆಯೂ 5 ಕೆ.ಜಿ. ಹಿಟ್ಟು, ಒಂದು ಕೆ.ಜಿ ಬೇಳೆ ಮತ್ತು ದನಿಯ, ಅರಿಶಿಣ ಹಾಗೂ ಮೆಣಸಿನಕಾಯಿಗಳ ತಲಾ 200 ಗ್ರಾಂ. ಪೊಟ್ಟಣಗಳಿಂದ ತಾನು, ತನ್ನ ಪತಿ ಹಾಗೂ 4 ಮಕ್ಕಳ ಊಟದ ವ್ಯವಸ್ಥೆಯನ್ನು ಕೆಲವು ದಿನಗಳ ಮಟ್ಟಿಗೆ ನಿಭಾಯಿಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

65 ವರ್ಷದ ಚಾಂದಿ ದೇವಿಯವರು ಈಗೀಗ ಶಿಬೊರಿ ಕೆಲಸವನ್ನು ನಿಲ್ಲಿಸಿದ್ದಾರಾದರೂ, ಪಡಿತರಕ್ಕಾಗಿ ಬಂದವರ ಸಾಲಿನಲ್ಲಿ ನಿಂತಿದ್ದರು. “ನಾನು ಊಟಮಾಡಿದ್ದು 24 ಗಂಟೆಗಳ ಹಿಂದೆ. ಅನ್ನವನ್ನು ಮಾತ್ರ ತಿಂದಿದ್ದೆ. ಬರೀ ಅನ್ನವಷ್ಟೇ. ಈ ಪ್ರದೇಶದಲ್ಲಿ ನಿನ್ನೆ, ಕೆಲವು ವಸ್ತುಗಳ ಸರಬರಾಜಿಗೆಂದು ಒಂದು ವ್ಯಾನ್‌ ಬಂದಿತ್ತು. ಆದರೆ ನಾನು ನಡೆಯುವುದು ನಿಧಾನ. ಆ ಜಾಗವನ್ನು ನಾನು ತಲುಪುವಷ್ಟರಲ್ಲಿ ಎಲ್ಲವೂ ಮುಗಿದುಹೋಗಿತ್ತು. ನನಗೆ ಬಹಳ ಹಸಿವಾಗುತ್ತಿದೆ” ಎಂದರಾಕೆ.

'The last meal I ate was 24 hours ago. I am very hungry', says Chandi Devi (bottom row left). She and 400 shibori artisans including Parmeshwari (top right) and Durga Devi (bottom row middle) are linked to Disha Skekhawati, an NGO in Sujangarh, Rajasthan. Bottom right:Founder Amrita Choudhary says, 'Ninety per cent of the artisans are daily wage labourers and have no savings to fall back on'
PHOTO • Pankaj Kok

‘ನಾನು ಊಟಮಾಡಿದ್ದು, 24 ಗಂಟೆಗಳ ಹಿಂದೆ. ನನಗೆ ಬಹಳ ಹಸಿವಾಗುತ್ತಿದೆ’ ಎಂದರು ಚಾಂದಿ ದೇವಿ (ಕೆಳಗಿನ ಸಾಗಿನಲ್ಲಿ ಎಡಕ್ಕೆ). ಪರಮೇಶ್ವರಿ (ಮೇಲಿನ ಸಾಲಿನಲ್ಲಿ ಬಲಕ್ಕೆ), ದುರ್ಗಾ ದೇವಿ (ಕೆಳಗಿನ  ಸಾಲಿನಲ್ಲಿ ಮಧ್ಯದಲ್ಲಿರುವವರು), ಚಾಂದಿ ದೇವಿ ಹಾಗೂ ಇನ್ನಿತರ 400 ಜನ ಶಿಬೊರಿ ಕುಶಲಕರ್ಮಿಗಳು ರಾಜಾಸ್ಥಾನದ ಸುಜನ್‌ಘರ್‌ನಲ್ಲಿನ ದಿಶ ಶೇಖಾವತಿಯೆಂಬ ಸರ್ಕಾರೇತರ ಸಂಸ್ಥೆಗೆ ಸೇರಿದವರು. ಕೆಳಗಿನ ಸಾಲು: ‘ಶೇಕಡ 90ರಷ್ಟು ಕುಶಲಕರ್ಮಿಗಳು ದಿನಗೂಲಿ ನೌಕರರಾಗಿದ್ದು, ಅವರಲ್ಲಿ ತಾವು ಆಶ್ರಯಿಸಬಹುದಾದ ಯಾವುದೇ ಉಳಿತಾಯವಿಲ್ಲ’ ಎನ್ನುತ್ತಾರೆ ಈ ಸಂಸ್ಥೆಯ ಸಂಸ್ಥಾಪಕರಾದ ಅಮ್ರಿತ ಚೌಧರಿ

ದಿಶ ಶೇಖಾವತಿಯ ನೌಕರರ ಪಟ್ಟಿಯಲ್ಲಿ ಬಟ್ಟೆಯನ್ನು ಕಟ್ಟಿ ಅದಕ್ಕೆ ಬಣ್ಣವನ್ನು ಹಾಕುವ (tie & die) ದುರ್ಗ ಮತ್ತು ಪರಮೇಶ್ವರಿಯವರಂತಹ 400 ಶಿಬೊರಿ ಕುಶಲಕರ್ಮಿಗಳಿದ್ದಾರೆ. “ಸರ್ಕಾರವು ಈ ಬಗ್ಗೆ ಯಾವುದೇ ಕಾಳಜಿವಹಿಸುತ್ತಿಲ್ಲ. ಶೇಕಡ ೯೦ರಷ್ಟು ಕುಶಲಕರ್ಮಿಗಳು ದಿನಗೂಲಿಗಳಾಗಿದ್ದು, ಅವರಲ್ಲಿ ತಾವು ಅವಲಂಬಿಸಬಹುದಾದ ಯಾವುದೇ ಉಳಿತಾಯವಿಲ್ಲ. ನಮ್ಮಿಂದ ಏನು ಸಾಧ್ಯವೋ ಅದನ್ನು ನಾವು ನಿರ್ವಹಿಸುತ್ತಿದ್ದೇವೆ.” ಎಂದರು ಅಮ್ರಿತ ಚೌಧರಿ.

ಸುಮಾರು 10 ದಿನಗಳ ಹಿಂದೆ, ಕರಕುಶಲ ಉತ್ಪನ್ನಗಳ ಬೃಹತ್‌ ಖರೀದಿದಾರರಿಂದ ಚೌಧರಿಯವರಿಗೆ ದೂರವಾಣಿ ಕರೆಗಳು ಬರತೊಡಗಿದವು. ಸರಕು ಪೂರೈಕೆಗಾಗಿ ನೀಡಲಾಗಿದ್ದ ವ್ಯಾಪಾರಾದೇಶಗಳನ್ನು (order) ತಮ್ಮಿಂದ ಭರಿಸಲು ಸಾಧ್ಯವಿಲ್ಲವಾಗಿ, ಇನ್ನು ಮುಂದೆ, ಸರಕುಗಳ ತಯಾರಿಕೆಯನ್ನು ನಿಲ್ಲಿಸುವಂತೆದ ಅವರು ತಿಳಿಸಿದರು. “ನನ್ನಲ್ಲೀಗ 25 ಲಕ್ಷ ರೂ.ಗಳ ಸರಕುಗಳು ಬಾಕಿಯುಳಿದಿವೆ. ಸರಕುಗಳ ಭಾಂಗಿ (package), ಗುರುತು ಪಟ್ಟಿ (labelling) ಹಾಗೂ ಪಟ್ಟಿಕೆ ಸಂಕೇತದ (bar coding) ಕೆಲಸಗಳೆಲ್ಲವೂ ಮುಗಿದಿವೆ. ಈ ಸರಕುಗಳು ಖರೀದಿದಾರನ್ನು ತಲುಪುವುದೆಂದು? ಹಣವು ನನಗೆ ತಲುಪಿ, ನಮ್ಮ ಕೆಲಸಗಾರರಿಗೆ ನಾನು ಅದನ್ನು ಪಾವತಿಸುವುದು ಯಾವಾಗ? ಯಾರ ಬಳಿಯೂ ಇದಕ್ಕೆ ಉತ್ತರವಿಲ್ಲ” ಎನ್ನುತ್ತಾರೆ ಆಕೆ.

ಕೃಷಿಯ ನಂತರ, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಒಟ್ಟಾರೆ ಉದ್ಯಮವು ಬಹುಶಃ ದೇಶದಲ್ಲಿನ ಉದ್ಯೋಗವನ್ನು ಒದಗಿಸುವ ಬೃಹತ್‌ ವಲಯಗಳೆನಿಸಿವೆ . ಕೈಮಗ್ಗದ ನೇಯ್ಗೆಯೊಂದರಲ್ಲಿಯೇ, 3.5 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ನೂರಾರು ರೀತಿಯ ವಸ್ತ್ರಗಳ ತಯಾರಿಕೆಯಲ್ಲಿ ತೊಡಗಿದ್ದು, ಇವರಲ್ಲಿನ ಬಹುತೇಕರು ಸ್ವತಂತ್ರವಾಗಿ ಈ ಉದ್ಯೋಗದಲ್ಲಿ ತೊಡಗಿದ್ದಾರೆ. ಕರಕುಶಲ ಅಭಿವೃದ್ಧಿ ಕಾರ್ಪೊರೇಷನ್‌ ಕೌನ್ಸಿಲ್‌ನ ಪ್ರಕಾರ, ಕನಿಷ್ಠ 70 ಲಕ್ಷ ಜನರು ಸಾವಿರಾರು ಸಾಂಪ್ರದಾಯಿಕ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ನಿರತರಾಗಿದ್ದು, 2015ರಲ್ಲಿ, ಈ ವಲಯದ ರಫ್ತು ವ್ಯವಹಾರವೇ ಸುಮಾರು 8,318 ಕೋಟಿ ರೂ .ಗಳ ಮೌಲ್ಯವನ್ನು ಹೊಂದಿದೆ.

ಆದರೆ ಚನ್ನೈ ಕ್ರಾಫ್ಟ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷರಾದ ಗೀತ ರಾಮ್‌ ಅವರು ಈ ಅಂಕಿ ಅಂಶಗಳನ್ನು ತಳ್ಳಿಹಾಕುತ್ತ, “ಈ ಅಂಕಿ ಸಂಖ್ಯೆಗಳು ವಿಶ್ವಾಸಾರ್ಹವಲ್ಲ. ಕುಶಲಕರ್ಮಿಗಳ ದತ್ತಸಂಚಯವು (database) ಲಭ್ಯವಿಲ್ಲದ ಕಾರಣ, ಒಟ್ಟು ದೇಶೀಯ ಉತ್ಪಾದನೆಗೆ ಅವರ ವಾಸ್ತವಿಕ ಕೊಡುಗೆಯು ಅಜ್ಞಾತವಾಗಿಯೇ ಉಳಿದಿದೆ. ಆದಾಗ್ಯೂ, ಬಹುತೇಕ ಉತ್ಪನ್ನವು ಅಸಂಘಟಿತ ವಲಯದಲ್ಲಿ ಸ್ವಂತ ಉದ್ಯೋಗದಲ್ಲಿ ನಿರತರಾದ ಕುಶಲಕರ್ಮಿಗಳಿಂದ ತಯಾರಾಗುತ್ತಿದ್ದು, ಅವರಿಗೆ ಪರಿಹಾರದ ತೀವ್ರ ಅವಶ್ಯಕತೆಯಿದೆ” ಎನ್ನುತ್ತಾರೆ.

ಆಂಧ್ರ ಪ್ರದೇಶದ ಪ್ರಕಾಸಂ ಜಿಲ್ಲೆಯ ಚಿರಲ ಎಂಬ ಊರಿನ ನೇಕಾರರಾದ 50 ವಯಸ್ಸಿನ ಜಿ. ಸುಲೋಚನ ಮತ್ತು ಆಕೆಯ ಪತಿ, ಜಿ. ಶ್ರೀನಿವಾಸ ರಾವ್‌ ಸಹ ಇದನ್ನು ಒಪ್ಪುತ್ತಾರೆ.

“ಕಚ್ಚಾ ಸಾಮಗ್ರಿಯು ದೊರೆಯುತ್ತಿಲ್ಲವಾದ್ದರಿಂದ ನಮಗೆ ಕೆಲಸವಿಲ್ಲದಂತಾಗಿದೆ. ಈ ಲಾಕ್‌ಡೌನ್‌, ನಮಗೆ ಹಲವಾರು ಆರ್ಥಿಕ ಸಮಸ್ಯೆಗಳನ್ನು ತಂದೊಡ್ಡಿದೆ. ಊಟದ ಖರ್ಚಿಗೆ ಇಷ್ಟರಲ್ಲೇ ನಾವು ಸಾಲಮಾಡಿ ಹಣವನ್ನು ಹೊಂದಿಸಬೇಕಾಗುತ್ತದೆ” ಎನ್ನುತ್ತಾರೆ ಶ್ರೀನಿವಾಸ ರಾವ್‌. “ನಮ್ಮ ಕೂಲಿಯು ಅತ್ಯಂತ ಕಡಿಮೆಯಿದ್ದು, ಯಾವುದೇ ಉಳಿತಾಯವು ಸಾಧ್ಯವಾಗುವುದಿಲ್ಲವೆಂದು” ಸುಲೋಚನಾರವರು ದೂರವಾಣಿಯಲ್ಲಿ ನಮ್ಮೊಂದಿಗೆ ಅಲವತ್ತುಕೊಂಡರು.

G. Sulochana and her husband G. Srinivas Rao, weavers in their 50s in Chirala town of Andhra Pradesh’s Prakasam district: 'We are not getting raw material, and so have no work. Soon we will need to borrow money to eat'
PHOTO • Srikant Rao

ಆಂಧ್ರ ಪ್ರದೇಶದ ಪ್ರಕಾಸಂ ಜಿಲ್ಲೆಯ ಛಿರಲ ಊರಿನ 50ರ ವಯಸ್ಸಿನ ಜಿ. ಸುಲೋಚನ ಮತ್ತು ಆಕೆಯ ಪತಿ ಜಿ. ಶ್ರೀನಿವಾಸ ರಾವ್‌, “ಕಚ್ಚಾ ವಸ್ತುಗಳು ದೊರೆಯುತ್ತಿಲ್ಲವಾದ್ದರಿಂದ, ನಮಗೆ ಕೆಲಸವಿಲ್ಲದಂತಾಗಿದೆ. ಊಟದ ಖರ್ಚಿಗೆ ಇಷ್ಟರಲ್ಲೇ ನಾವು ಸಾಲಮಾಡಿ ಹಣವನ್ನು ಹೊಂದಿಸಬೇಕಾಗುತ್ತದೆ” ಎಂದರು

ಛಿರಲ ಊರಿನಲ್ಲಿ ಅನೇಕ ನೇಕಾರ ಕುಟುಂಬಗಳಿದ್ದು, ಹತ್ತಿ ಹಾಗೂ ರೇಷ್ಮೆಯ ಮಿಶ್ರಣದೊಂದಿಗೆ ಕಲಾತ್ಮಕ ಚಿತ್ರಗಳಿಂದ ಕೂಡಿದ್ದು, ಈ ಊರಿನ ಹೆಸರಿನಿಂದ ಕರೆಯಲ್ಪಡುವ ಸೀರೆಗಳನ್ನು ಅವರು ತಯಾರಿಸುತ್ತಾರೆ. ಸುಲೋಚನ ಮತ್ತು ಆಕೆಯ ಪತಿಯು ಒಟ್ಟಾಗಿ ಸೇರಿ, ಮಾಹೆಯಾನ 10-15 ಸೀರೆಗಳನ್ನು ಸಿದ್ಧಪಡಿಸುತ್ತಾರೆ. ಇವರಿಗೆ ಕೆಲಸವನ್ನು ವಹಿಸುವ ಪ್ರಧಾನ ನೇಕಾರನು, ಕಚ್ಚಾ ವಸ್ತುಗಳನ್ನು ಒದಗಿಸಿ, ೫ ಸೀರೆಗಳಿಗೆ ಸುಮಾರು 6,000 ರೂ.ಗಳನ್ನು ನೀಡುತ್ತಾನೆ. ಹೀಗಾಗಿ, ಇವರಿಬ್ಬರೂ ಸೇರಿ ಮಾಹೆಯಾನ ಸುಮಾರು 15,000 ರೂ.ಗಳನ್ನು ಸಂಪಾದಿಸುತ್ತಾರೆ.

ಚಿರಾಲದಲ್ಲಿನ ಮತ್ತೊಬ್ಬ ನೇಕಾರ ದಂಪತಿಗಳಾದ 35 ವರ್ಷದ ಬಿ. ಸುನಿತ ಹಾಗೂ 37ರ ವಯಸ್ಸಿನ ಆಕೆಯ ಪತಿ ಬಂಡ್ಲ ಪ್ರದೀಪ್‌ ಕುಮಾರ್‌ ಅವರಿಗೂ ಸಹ, ಇಬ್ಬರು ಮಕ್ಕಳು ಹಾಗೂ ಅವರ ಜೀವನ ನಿರ್ವಹಣೆಯು ಪ್ರಯಾಸಕರವೆನಿಸಿದೆ. ಸಾಮಾನ್ಯವಾಗಿ, ಇವರಿಬ್ಬರೂ ಸೇರಿ, 15 ಸೀರೆಗಳ ನೇಯ್ಗೆಗೆ, ಮಾಹೆಯಾನ ಸುಮಾರು 12,000 ರೂ.ಗಳನ್ನು ಸಂಪಾದಿಸುತ್ತಿದ್ದರು. “ಜರಿಯ (ಚಿನ್ನದ ಎಳೆಗಳು) ಸರಬರಾಜು ಮಾರ್ಚ್‌ 10ರಂದೇ ನಿಂತುಹೋಯಿತಲ್ಲದೆ, ಒಡನೆಯೇ ರೇಷ್ಮೆ ನೂಲಿನ ಪೂರೈಕೆಯೂ ಸಹ ನಿಲುಗಡೆಯಾಯಿತು. ಕಚ್ಚಾ ಸಾಮಗ್ರಿಗಳಿಲ್ಲದೆ, ನಾವು ಕೆಲಸಮಾಡುವುದು ಸಾಧ್ಯವಾಗುವುದಿಲ್ಲ” ಎಂದರು ಸುನಿತ.

ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದಲೂ ಇವರು ಪಡಿತರದ ಅಂಗಡಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆಯಲ್ಲಿ ಏರಿಕೆಯಾಗಿದ್ದು, ಇವರ ಅಕ್ಕಿಯ ದಾಸ್ತಾನು ಮುಗಿದುಹೋಗಿದೆ. “ನಮ್ಮ ಜೀವನ ನಿರ್ವಹಣೆಗೆ ಇದನ್ನು ಬಿಟ್ಟರೆ ಬೇರಾವ ಕೆಲಸವೂ ನಮಗೆ ತಿಳಿದಿಲ್ಲ” ಎಂದು ಸಹ ಅವರು ತಿಳಿಸಿದರು.

ಚಿರಾಲದಲ್ಲಿನ ಈ ಎರಡೂ ನೇಕಾರ ಕುಟುಂಬಗಳು ಇತರೆ ಹಿಂದುಳಿದ ವರ್ಗದ (OBC) ಪಟ್ಟಿಯಲ್ಲಿದ್ದಾರೆ. ವಾಸ್ತವದಲ್ಲಿ, ನಾಲ್ಕನೇ ಅಖಿಲ ಭಾರತ ಕೈಮಗ್ಗದ ಗಣತಿಯಲ್ಲಿ (2019-2020) ಎಲ್ಲ ನೇಕಾರರ ಕುಟುಂಬಗಳ ಶೇ.67ರಷ್ಟು ಭಾಗವನ್ನು ಪರಿಶಿಷ್ಟ ಜಾತಿ (14), ಪರಿಶಿಷ್ಟ ವರ್ಗ (19) ಅಥವಾ ಇತರೆ ಹಿಂದುಳಿದ ವರ್ಗಗಳೆಂದು (ಶೇ. 33.6) ಪಟ್ಟಿಮಾಡಲಾಗಿದೆ.

ಸುನಿತ ಮತ್ತು ಶ್ರೀನಿವಾಸ್‌ ದಂಪತಿಯ ಒಟ್ಟಾರೆ ಆದಾಯವು ಅವರನ್ನು ಶೇ.7ರ ಉಚ್ಛ ಶ್ರೇಣಿಯಲ್ಲಿರಿಸಿದಾಗ್ಯೂ. ಅವರ ವ್ಯಕ್ತಿಗತ (individual) ಆದಾಯವು ಭಾರತದಲ್ಲಿನ ಮಾಸಿಕ ತಲಾ ಆದಾಯ ರೂ.11,254ಕ್ಕಿಂತಲೂ ಕಡಿಮೆಯಿದೆ. ಶೇ.66ಕ್ಕಿಂತಲೂ ಹೆಚ್ಚಿನ ಕುಟುಂಬಗಳ ಆದಾಯವು, ಮಾಹೆಯಾನ 5,000 ರೂ.ಗಳಿಗಿಂತಲೂ ಕಡಿಮೆಯೆಂಬುದಾಗಿ ನಾಲ್ಕನೇ ಅಖಿಲ-ಭಾರತ ಕೈಮಗ್ಗದ ಗಣತಿಯು ತಿಳಿಯಪಡಿಸುತ್ತದೆ.

Left: B. Sunitha and her husband Bandla Pradeep Kumar in Chirala: 'With no raw material, we cannot work'. Right" Macherla Mohan Rao, founder president of the Chirala-based National Federation of Handlooms and Handicrafts, says, 'This [lockdown] will finish them off the weavers'
PHOTO • Guthi Himanth
Left: B. Sunitha and her husband Bandla Pradeep Kumar in Chirala: 'With no raw material, we cannot work'. Right" Macherla Mohan Rao, founder president of the Chirala-based National Federation of Handlooms and Handicrafts, says, 'This [lockdown] will finish them off the weavers'
PHOTO • M. Sravanthi

ಎಡಕ್ಕೆ: ಚಿರಲದಲ್ಲಿನ ಬಿ. ಸುನಿತ ಹಾಗೂ ಆಕೆಯ ಪತಿ ಬಂಡ್ಲ ಪ್ರದೀಪ್‌ ಕುಮಾರ್‌: ‘ಕಚ್ಚಾ ಸಾಮಗ್ರಿಗಳಿಲ್ಲದೆ ನಾವು ಕೆಲಸಮಾಡುವುದು ಸಾಧ್ಯವಾಗುವುದಿಲ್ಲ’ ಎಂದರು. ಬಲಕ್ಕೆ: ನ್ಯಾಷನಲ್‌ ಫೆಡರೇಷನ್‌ ಆಫ್‌ ಹ್ಯಾಂಡ್‌ಲೂಮ್ಸ್‌ ಅಂಡ್‌ ಹ್ಯಾಂಡಿಕ್ರಾಫ್ಟ್ಸ್‌ನ ಸಂಸ್ಠಾಪಕ ಅಧ್ಯಕ್ಷರಾದ ಚಿರಲ ಊರಿನ ನಿವಾಸಿ, ಮಚೆರ್ಲ ಮೋಹನ್‌ ರಾವ್‌, ‘ಈ ಲಾಕ್‌ಡೌನ್‌, ನೇಕಾರರನ್ನು ಮುಗಿಸಿಬಿಡುತ್ತದೆ’ ಎನ್ನುತ್ತಾರೆ

1990ರ ದಶಕದಲ್ಲಿ ಭಾರತದಲ್ಲಿ ಅವನತಿಗೀಡಾದ ಉದ್ಯಮವೆಂದು ತಾತ್ಸಾರಕ್ಕೊಳಗಾದ ಕೈಮಗ್ಗ ಹಾಗೂ ಕರಕುಶಲ ವಲಯವು, ತನ್ನ ಉತ್ಪನ್ನಗಳ ಮೇಲೆ 2018ರಲ್ಲಿ ಶೇ. 5ರಿಂದ 18ರಷ್ಟು ಜಿಎಸ್‌ಟಿಯನ್ನು (GST) ವಿಧಿಸಿದಾಗ ಆಘಾತಕ್ಕೊಳಗಾಯಿತು.

ನಂತರ, ಕೈಮಗ್ಗದ ವಸ್ತ್ರಗಳಿಗೆ ಮಾತ್ರ ಜಿಎಸ್‌ಟಿಯನ್ನು ಶೇ. 5ಕ್ಕೆ  ಇಳಿಸಲಾಯಿತು. ಆದಾಗ್ಯೂ, ಜವಳಿಗಳಿಗೆ ಅತ್ಯಂತ ಪ್ರಮುಖವೆನಿಸಿದ ಬಣ್ಣಗಳು ಮತ್ತು ರಾಸಾಯನಿಕ ವಸ್ತುಗಳ ಮೇಲಿನ ಶೇ. 12-18ರಷ್ಟು ತೆರಿಗೆಯೇ (ಜಿಎಸ್‌ಟಿ) ಮುಂದುವರಿಯಿತು. ಕರಕುಶಲ ವಸ್ತುಗಳಿಗೆ ಇದು ಶೇ. 8 ಹಾಗೂ 18ರ ಶ್ರೇಣಿಯಲ್ಲಿದೆ.

ಸುಮಾರು 20,000 ಕೆಲಸಗಾರರ ಪಟ್ಟಿಯನ್ನು ಹೊಂದಿರುವ ಚಿರಲದಲ್ಲಿನ ನ್ಯಾಷನಲ್‌ ಫೆಡರೇಷನ್‌ ಆಫ್‌ ಹ್ಯಾಂಡ್‌ಲೂಮ್ಸ್‌ ಅಂಡ್‌ ಹ್ಯಾಂಡಿಕ್ರಾಫ್ಟ್‌ ಎಂಬ ಕಾರ್ಮಿಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ 59 ವರ್ಷ ವಯಸ್ಸಿನ ಮಚೆರ್ಲ ಮೋಹನ್‌ ರಾವ್‌, “ಕೊರೊನಾ ಮತ್ತು ಲಾಕ್‌ಡೌನ್‌ಗಿಂತಲೂ ಮೊದಲೇ, ನೇಕಾರರಿಗೆ ಸವೇತನ (paid) ಕೆಲಸವು ದೊರೆಯುತ್ತಿರಲಿಲ್ಲವಾಗಿ, ಅವರಿಗೆ ತಮ್ಮ ಕುಟುಂಬಗಳನ್ನು ನಿಭಾಯಿಸುವುದು ಕಷ್ಟಕರವಾಗಿತ್ತು. ಈಗ ಈ ಲಾಕ್‌ಡೌನ್‌, ಅವರನ್ನು ಮುಳುಗಿಸಿಬಿಡುತ್ತದೆ ಎನ್ನುತ್ತಾರೆ.

“ಬಡಪಾಯಿ ನೇಕಾರರನ್ನು ಸರ್ಕಾರವು (ಜವಳಿ ಸಚಿವಾಲಯ) ನಿರ್ಲಕ್ಷಿಸುತ್ತಿರುವುದೇಕೆ? ಗಾರ್ಮೆಂಟ್‌ ಹಾಗೂ ಸಂಬಂಧಿತ ವ್ಯವಸ್ಥಿತ ವಲಯಗಳಿಗೆ ಸಮಾನವಾಗಿ ಕೈಮಗ್ಗ ಹಾಗೂ ಕರಕುಶಲ ವಲಯಗಳಿಗೂ ಉದ್ಯೋಗಿಗಳ ರಾಜ್ಯ ವಿಮೆ, ಭವಿಷ್ಯ ನಿಧಿ ಮತ್ತು ಹೆರಿಗೆ ಸೌಲಭ್ಯಗಳನ್ನು ಏಕೆ ನೀಡಲಾಗುತ್ತಿಲ್ಲ? ನಿರ್ಗತಿಕ ನೇಕಾರರಿಗೆ ವಸತಿ ಸೌಲಭ್ಯವಿಲ್ಲವೇಕೆ?” ಎಂಬುದಾಗಿ ಮೋಹನ್‌ ರಾವ್‌ ಪ್ರಶ್ನಿಸುತ್ತಾರೆ. ಅವರು 2014ರಿಂದ ಸಂಸತ್ ಸದಸ್ಯರಿಗೆ ಅನೇಕ ಮೇಲ್‌ಗಳನ್ನು ಕಳುಹಿಸಿ ಈ ಪ್ರಶ್ನೆಗಳನ್ನು ಸಂಸತ್ತಿನ ಅಧಿವೇಶನದಲ್ಲಿ  ಎತ್ತುವಂತೆ ಒತ್ತಾಯಿಸಿದರು.

ತಮಿಳು ನಾಡಿನ ಕಾಂಚೀಪುರಂ ಊರಿನ (ಮತ್ತು ಜಿಲ್ಲೆಯ) ಪ್ರಧಾನ ನೇಕಾರರು ಹಾಗೂ ರಾಷ್ಟ್ರೀಯ ಪುರಸ್ಕಾರ ವಿಜೇತರೂ ಆದ  60ರ ವಯಸ್ಸಿನ ಬಿ. ಕೃಷ್ಣಮೂರ್ತಿ ಮತ್ತು 50 ವರ್ಷ ವಯಸ್ಸಿನ ಅವರ ಪತ್ನಿ ಬಿ. ಜಯಂತಿ, 10 ಮಗ್ಗಳನ್ನು ಹೊಂದಿದ್ದು, ಸುಪ್ರಸಿದ್ಧ ಕಾಂಜೀವರಂ ರೇಷ್ಮೆ ಸೀರೆಗಳನ್ನು ತಯಾರಿಸುತ್ತಾರೆ. ಇವರು ಒಂದು ಮಗ್ಗದಲ್ಲಿ ಕೆಲಸವನ್ನು ನಿರ್ವಹಿಸುತ್ತಾ, ತಾವು ನೇಮಿಸಿಕೊಂಡ ನೇಕಾರರ ಮನೆಗಳಲ್ಲಿ ಇತರೆ ಮಗ್ಗಗಳನ್ನು ಅಳವಡಿಸಿದ್ದಾರೆ.

“ನನ್ನ ನೇಕಾರರು ನನಗೆ ಕರೆಮಾಡುತ್ತಲೇ ಇದ್ದು, (ಲಾಕ್‌ಡೌನ್‌ ಆರಂಭವಾದಾಗಿನಿಂದಲೂ), ಊಟದ ವ್ಯವಸ್ಥೆಗೆಂದು, 2,000-3,000 ಸಾವಿರ ರೂ.ಗಳ ಸಾಲವನ್ನು ಕೇಳುತ್ತಿದ್ದಾರೆ” ಎಂಬುದಾಗಿ ಕೃಷ್ಣಮೂರ್ತಿ ತಿಳಿಸಿದರು. ಇವರು ಈಗಾಗಲೇ ಮುಂಗಡವನ್ನು ಸಹ ನೀಡಿದ್ದಾರೆ. ಉನ್ನತ ಮಟ್ಟದ ನೈಪುಣ್ಯವನ್ನು ಹೊಂದಿರುವ ತನ್ನ ನೇಕಾರರು ನಿರುತ್ಸಾಹದಿಂದಾಗಿ, ಇತರೆ ಕೆಲಸಗಳನ್ನು ಹುಡುಕಿಕೊಳ್ಳಬಹುದು ಅಥವಾ ಊರನ್ನೇ ತ್ಯಜಿಸಬಹುದೆಂದು ಇವರು ಚಿಂತಿತರಾಗಿದ್ದಾರೆ. ಕೃಷ್ಣಮೂರ್ತಿಯವರ ಆತಂಕವು ವಾಸ್ತವವಾದುದು: 1995 ಮತ್ತು 2010ರ ನಡುವೆ ನೇಕಾರರ ಕುಟುಂಬಗಳ ಸಂಖ್ಯೆಯು 2.5 ಲಕ್ಷದಷ್ಟು ಕುಸಿತವನ್ನು ಕಂಡಿದೆ .

In Kancheepuram, Tamil Nadu, master weavers and national award winners B. Krishnamoorthy and B. Jayanthi: 'Weavers keep calling [since the lockdown began] asking for loans of Rs. 2,000-3,000 for food'
PHOTO • Prashanth Krishnamoorthy
In Kancheepuram, Tamil Nadu, master weavers and national award winners B. Krishnamoorthy and B. Jayanthi: 'Weavers keep calling [since the lockdown began] asking for loans of Rs. 2,000-3,000 for food'
PHOTO • Prashanth Krishnamoorthy

ತಮಿಳು ನಾಡಿನ ಕಾಂಚೀಪುರಂನಲ್ಲಿನ ಪ್ರಧಾನ ನೇಕಾರರು ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತರೂ ಆದ ಬಿ. ಕೃಷ್ಣಮೂರ್ತಿ ಹಾಗೂ ಬಿ. ಜಯಂತಿ: ‘ನೇಕಾರರು ಕರೆಮಾಡುತ್ತಲೇ ಇದ್ದು, (ಲಾಕ್‌ಡೌನ್‌ ಆರಂಭವಾದಾಗಿನಿಂದಲೂ), ಊಟದ ವ್ಯವಸ್ಥೆಗೆಂದು, 2,000-3,000 ಸಾವಿರ ರೂ.ಗಳ ಸಾಲವನ್ನು ಕೇಳುತ್ತಿರುತ್ತಾರೆ

ಭಾರತದ ಮಹಾನಗರ ಮತ್ತು ಚಿಕ್ಕ ಜಿಲ್ಲೆ ಹಾಗೂ ಊರುಗಳಲ್ಲಿ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ವಸ್ತುಪ್ರದರ್ಶನವು ನಿರಂತರವಾಗಿ ಕಂಡುಬರುತ್ತದೆ. ನಮ್ಮ ಉತ್ಪನ್ನಗಳ ಗರಿಷ್ಠ ಮಾರಾಟವು ಸಾಧ್ಯವಾಗುವುದು ಇಂತಹ ಕಡೆಗಳಲ್ಲಿಯೇ ಎಂಬುದಾಗಿ ಕುಶಲಕರ್ಮಿಗಳು ತಿಳಿಸುತ್ತಾರೆ. ಆದರೆ ಉತ್ಪನ್ನಗಳು ಅತ್ಯಧಿಕವಾಗಿ ಮಾರಾಟವಾಗುವ ಈ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ, ಅನೇಕ ವಸ್ತುಪ್ರದರ್ಶನಗಳು ರದ್ದುಗೊಂಡ ಕಾರಣ, ಇವರು ತಯಾರಿಸಿದ ಕರಕುಶಲ ವಸ್ತುಗಳ ಬೃಹತ್‌ ದಾಸ್ತಾನು ಹಾಗೆಯೇ ಉಳಿದಿದೆ.

“ದೆಹಲಿ ಮತ್ತು ಕಲ್ಕತ್ತಗಳಲ್ಲಿನ 3 ವಸ್ತುಪ್ರದರ್ಶನಗಳು ರದ್ದುಗೊಂಡವು. ನನ್ನಲ್ಲಿರುವ ಸರಕುಗಳ ಬೃಹತ್‌ ದಾಸ್ತಾನು ಹಾಗೆಯೇ ಉಳಿದಿದೆ. ಅದನ್ನು ಯಾರೂ ಕೊಳ್ಳುತ್ತಿಲ್ಲ. ನಾನು ಊಟಮಾಡುವುದಾದರೂ ಹೇಗೆ? ವಿದೇಶೀ ಖರೀದಿದಾರರಿಂದ ನನಗೆ ಕರೆಗಳು ಬರುತ್ತಿದ್ದು, ನೇಯ್ಗೆಯನ್ನು ನಿಲ್ಲಿಸುವಂತೆಯೂ, ಸ್ವಲ್ಪ ಸಮಯದವರೆಗೂ ಯಾವುದೇ ವಸ್ತುಗಳನ್ನೂ ಅವರು ತೆಗೆದುಕೊಳ್ಳುವುದಿಲ್ಲವೆಂಬುದಾಗಿ ತಿಳಿಸುತ್ತಿದ್ದಾರೆ” ಎನ್ನುತ್ತಾರೆ, ಗುಜರಾತಿನ ಕಛ್‌ ಜಿಲ್ಲೆಯ ಭುಜೊಡಿ ಎಂಬ ಚಿಕ್ಕ ಊರಿನ 45 ವರ್ಷ ವಯಸ್ಸಿನ ನೇಕಾರರಾದ, ವಂಕರ್‌ ಶಾಂಜಿ ವಿಶ್ರಮ್‌.

“ನೀವು ಕರೆಮಾಡಿರುವ ಅಪರಾಹ್ನ 3 ಗಂಟೆಯ ಈ ಸಮಯದಲ್ಲಿ ನಾನು, ಕೆಲಸದ ಸ್ಥಳದಲ್ಲಿ ನನ್ನ ಸಹೋದರ ಹಾಗೂ ತಂದೆಯೊಂದಿಗೆ ದುಡಿಮೆಯಲ್ಲಿ ತೊಡಗಿರುತ್ತಿದ್ದೆ. ಈಗ ನಾನು ಊಟವನ್ನು ಎಲ್ಲಿಂದ ದೊರಕಿಸಿಕೊಳ್ಳುವುದು? ಹಿಟ್ಟು, ಬೇಳೆ ಮತ್ತು ಆಲೂಗಡ್ಡೆಗೆ ಕಾಳಸಂತೆಯ ದರವನ್ನು ಪಾವತಿಸುವುದನ್ನು ತಪ್ಪಿಸಿಕೊಳ್ಳುವುದು ಹೇಗೆಂದು ಯೋಚಿಸುತ್ತಿದ್ದೇನೆ” ಎನ್ನುತ್ತಾರೆ, ಉತ್ತರಪ್ರದೇಶದ ವಾರಣಾಸಿಯಲ್ಲಿ ಮರದ ಗೊಂಬೆಗಳನ್ನು ತಯಾರಿಸುವ 35ರ ವಯಸ್ಸಿನ ಅಜಿತ್‌ ಕುಮಾರ್‌ ವಿಶ್ವಕರ್ಮ.

Ajit Kumar Vishwakarma, a wooden toy-maker in Varanasi, Uttar Pradesh, with his family: '“Now I am thinking of where to get food'
PHOTO • Sriddhi Vishwakarma

ಎಡಕ್ಕೆ: ‘ಈಗ ನಾನು, ಊಟವನ್ನು ದೊರಕಿಸಿಕೊಳ್ಳುವುದಾದರೂ ಎಲ್ಲಿಂದ’ ಎಂದು ಯೋಚಿಸುತ್ತಿದ್ದೇನೆ ಎನ್ನುತ್ತಾರೆ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮರದ ಗೊಂಬೆಗಳನ್ನುತಯಾರಿಸುವ ಅಜಿತ್‌ ಕುಮಾರ್‌ ವಿಶ್ವಕರ್ಮ. ಬಲಕ್ಕೆ: ಮಧ್ಯ ಪ್ರದೇಶದ ಭೂಪಾಲ್‌ನ ಉತ್ತಮ ಕಲಾಕಾರರಲ್ಲೊಬ್ಬರಾದ ಸುರೇಶ್‌ ಕುಮಾರ್‌ ಧುರ್ವೆ, ‘ಏನೂ ಕೆಲಸವಿಲ್ಲದೆ, ಮನೆಯಲ್ಲಿ ಬರಿಗೈಯಲ್ಲಿ ಕುಳಿತಿದ್ದೇನೆ’ ಎನ್ನುತ್ತಾರೆ

ಅಜಿತ್‌ ಮತ್ತು ಅವರ ಕುಟುಂಬದವರು, ಮರದ ಗೊಂಬೆಗಳು, ಪಕ್ಷಿಗಳ ಚಿಕ್ಕ ಪ್ರತಿರೂಪಗಳು (miniature) ಮತ್ತು ಹಿಂದೂ ದೇವರುಗಳ ಚಿಕ್ಕ ಮೂರ್ತಿಗಳನ್ನು ತಯಾರಿಸುತ್ತಾರೆ. “ನಮ್ಮ ಇಡೀ ಕುಟುಂಬವು ಇದರಿಂದ ಬರುವ ಆದಾಯವನ್ನು ಅವಲಂಬಿಸಿದೆ. ನನಗೆ ಸಂದಾಯವಾಗಬೇಕಿರುವ ಹಣ ಬಹಳಷ್ಟಿದೆಯಾದರೂ, ಯಾರೂ ಅದನ್ನು ಪಾವತಿಸಲು ತಯಾರಿಲ್ಲ. ವಸ್ತುಪ್ರದರ್ಶನಕ್ಕೆಂದು ಸಿದ್ಧಗೊಂಡ 5-6 ಲಕ್ಷದಷ್ಟು ಮೌಲ್ಯದ ವಸ್ತುಗಳು ನನ್ನಲ್ಲಿವೆಯಾದರೂ, ವಸ್ತುಪ್ರದರ್ಶನವು ರದ್ದುಗೊಂಡಿದೆ. ಗೊಂಬೆಗಳಿಗೆ ಬಣ್ಣವನ್ನು ಹಾಕುವ ನನ್ನ ಕುಂಬಾರರಿಗೆ ಮುಂಗಡವನ್ನು ನೀಡಿದ್ದೇನೆ. ಅವರೂ ಈಗ ಸಂಕಷ್ಟದಲ್ಲಿದ್ದಾರೆ” ಎಂದು ಅವರು ತಿಳಿಸುತ್ತಾರೆ.

ಪಕ್ಷಿ ಹಾಗೂ ಹಿಂದೂ ದೇವರುಗಳ ಒಂದು ಇಂಚಿನ ಪ್ರತಿರೂಪಗಳ ಬಗ್ಗೆ ಅಜಿತ್‌ ಅವರಿಗೆ ಬಹಳ ಹೆಮ್ಮೆ. ಇವರ ತಂದೆ, ಇಬ್ಬರು ಸಹೋದರರು, ತಾಯಿ, ಸಹೋದರಿ ಮತ್ತು ಪತ್ನಿಯನ್ನೊಳಗೊಂಡಂತೆ ಇವರ ಕುಟುಂಬದ ಸದಸ್ಯರೆಲ್ಲರೂ ಮರದ ಆಟಿಕೆಗಳು ಮತ್ತು ಆಭರಣಗಳ ಕೆತ್ತನೆ ಹಾಗೂ ಚಿತ್ತಾರಗಳನ್ನು ಮಾಡುವ ಕಾರ್ಯದಲ್ಲಿ ಭಾಗವಹಿಸುತ್ತಾರೆ; ಸ್ತ್ರೀಯರು ತಮ್ಮ ಮನೆಗೆಲಸಗಳ ನಡುವೆ ಈ ಕೆಲಸಗಳನ್ನೂ ಮನೆಯಲ್ಲಿಯೇ ನಿರ್ವಹಿಸುತ್ತಾರೆ. ಪುರುಷರು ಸುಮಾರು 12 ಕಿ.ಮೀ. ದೂರದಲ್ಲಿನ ತಮ್ಮ ವರ್ಕ್‌ಶಾಪ್‌ಗೆ ತೆರಳುತ್ತಾರೆ. ಮಾವು, ಅರಳಿ, ಕದಂಬ ಹಾಗೂ ಇತರೆ ಮೆದುವಾದ ಮರಗಳನ್ನು ಆಟಿಕೆಗಳ ತಯಾರಿಕೆಗೆ ಬಳಸಲಾಗುತ್ತದೆ. ನಂತರದಲ್ಲಿ ಅವಕ್ಕೆ ಬಣ್ಣವನ್ನು ಹಾಕಲು, ಕುಂಬಾರರ ಸಮುದಾಯಕ್ಕೆ ಕಳುಹಿಸಲಾಗುತ್ತದೆ.

“ನಾನು ಖಾಲಿ ಕೈಯಲ್ಲಿ ಕುಳಿತಿದ್ದೇನೆ. “ದಿನಸಿ ಹಾಗೂ ನೀರನ್ನು ದೊರಕಿಸಿಕೊಳ್ಳುವುದು ಈಗ ಕಷ್ಟವಾಗಿದೆಯಲ್ಲದೆ, ಬಣ್ಣ, ಬ್ರಶ್‌, ಕಾಗದ ಮತ್ತು ನಾರುಬಟ್ಟೆಗಳ (canvas) ಸರಬರಾಜು ಸಹ ಇಲ್ಲವಾಗಿದ್ದು, ನಾನು ಯಾವುದೇ ಕೆಲಸವನ್ನು ನಿಭಾಯಿಸುವುದಾರೂ ಹೇಗೆ? ಹೊಸ ಕಲಾಕೃತಿಗಳ ಕೆಲಸವನ್ನು ಪ್ರಾರಂಭಿಸಿ, ಅವನ್ನು ಮಾರಿ, ಹಣವನ್ನು ನಾನು ಪಡೆಯುವುದು ಯಾವಾಗ? ನನಗೊಂದೂ ತಿಳಿಯುತ್ತಿಲ್ಲ. ನನ್ನ ಕುಟುಂಬವನ್ನು ನಾನು ಸಾಕುವುದು ಹೇಗೆಂಬುದೂ ತಿಳಿಯುತ್ತಿಲ್ಲ” ಎನ್ನುತ್ತಾರೆ ಮಧ್ಯಪ್ರದೇಶದ ಭೋಪಾಲ್‌ನ ಗೊಂಡ್‌ ಕಲಾಕಾರರ 4ನೇ ತಲೆಮಾರಿನವರಾದ 35 ವರ್ಷ ವಯಸ್ಸಿನ ಸುರೇಶ್‌ ಕುಮಾರ್‌ ಧುರ್ವೆ.

ತನ್ನ ಕಲಾಕೃತಿಗಳಿಗೆ ವ್ಯಾಪಾರಾದೇಶವನ್ನಿತ್ತ (order) ಜನರಿಂದ 50,000 ರೂ.ಗಳು ಬಾಕಿಯಿದ್ದು, ಆ ಹಣವನ್ನೆಂದಿಗೆ ನೋಡುತ್ತೇನೆಂಬುದು ಇವರಿಗೆ ತಿಳಿದಿಲ್ಲ. “ನನ್ನ ತಲೆಯ ತುಂಬೆಲ್ಲ ಈ ಕೋವಿಡ್‌ನ ವಿಚಾರವೇ ತುಂಬಿಹೋಗಿದ್ದು, ಬೇರೆನನ್ನೂ ಆಲೋಚಿಸಲು ನನಗೆ ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಆತ.

ಈ ಲೇಖನದ ಬಹುತೇಕ ಸಂದರ್ಶನಗಳನ್ನು ದೂರವಾಣಿಯ ಮೂಲಕ ಕೈಗೊಳ್ಳಲಾಗಿದೆ.

ಅನುವಾದ - ಶೈಲಜಾ ಜಿ.ಪಿ

Priti David

Priti David is the Executive Editor of PARI. A journalist and teacher, she also heads the Education section of PARI and works with schools and colleges to bring rural issues into the classroom and curriculum, and with young people to document the issues of our times.

Other stories by Priti David
Translator : Shailaja G. P.
shailaja1.gp@gmail.com

Shailaja (shailaja1.gp@gmail.com) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.