ಕಡಲೂರು ಮೀನುಗಾರಿಕಾ ಬಂದರಿನಲ್ಲಿ ವ್ಯಾಪಾರ ಪ್ರಾರಂಭಿಸುವಾಗ ಅವರಿಗೆ ಕೇವಲ 17 ವರ್ಷ. ಆಗ ಅವರ ಕೈಯಲ್ಲಿದ್ದ ಮೊತ್ತ 1,800 ರೂಪಾಯಿಗಳು. ಈ ಬಂಡವಾಳವನ್ನು ಅವರ ತಾಯಿ ವ್ಯವಹಾರವನ್ನು ಆರಂಭಿಸಲೆಂದು ನೀಡಿದ್ದರು. ಇಂದು, 62 ವರ್ಷದವರಾಗಿರುವ ವೇಣಿ ಬಂದರಿನಲ್ಲಿ ಯಶಸ್ವಿ ಹರಾಜುದಾರರು ಮತ್ತು ಮಾರಾಟಗಾರರಾಗಿದ್ದಾರೆ. ಬಹಳ ಕಷ್ಟಪಟ್ಟು ಕಟ್ಟಿದ ಅವರ ಮೆಚ್ಚಿನ ಮನೆಯಂತೆಯೇ, ಅವರ ವ್ಯವಹಾರವನ್ನೂ “ಹಂತಹಂತವಾಗಿ” ಕಟ್ಟಿದ್ದಾರೆ

ಮದ್ಯ ವ್ಯಸನಿಯಾಗಿದ್ದ ಗಂಡ ಅವರನ್ನು ತೊರೆದ ನಂತರ ವೇಣಿ ನಾಲ್ಕು ಮಕ್ಕಳನ್ನು ಒಬ್ಬರೇ ದುಡಿದು ಬೆಳೆಸಿ ದೊಡ್ಡವರನ್ನಾಗಿಸಿದರು. ಅವರ ದೈನಂದಿನ ಗಳಿಕೆ ಬಹಳ ಕಡಿಮೆ, ಮತ್ತು ಬದುಕು ನಡೆಸಲು ಸಾಕಾಗುತ್ತಿರಲಿಲ್ಲ. ರಿಂಗ್ ಸೀನ್ ಮೀನುಗಾರಿಕೆಯ ಉಗಮದೊಂದಿಗೆ, ಅವರು ದೋಣಿಗಳಲ್ಲಿ ಹೂಡಿಕೆ ಮಾಡಿದರು, ಲಕ್ಷಾಂತರ ರೂಪಾಯಿಗಳನ್ನು ಸಾಲ ಮಾಡಿದರು. ಅವರ ಹೂಡಿಕೆಯ ಮೇಲಿನ ಆದಾಯವು ಅವರ ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಮನೆಯನ್ನು ನಿರ್ಮಿಸಲು ಸಹಾಯ ಮಾಡಿತು.

1990ರ ದಶಕದ ಉತ್ತರಾರ್ಧದಿಂದ ಕಡಲೂರು ಕರಾವಳಿಯಲ್ಲಿ ರಿಂಗ್ ಸೀನ್ ಮೀನುಗಾರಿಕೆ ಜನಪ್ರಿಯತೆಯನ್ನು ಗಳಿಸಿತು, ಆದರೆ 2004 ರ ಸುನಾಮಿಯ ನಂತರ ಇದರ ಬಳಕೆ ವೇಗವಾಗಿ ಹೆಚ್ಚಾಯಿತು. ರಿಂಗ್ ಸೀನ್ ಗೇರ್ ಬೂತಾಯಿ(ಬೈಗೆ), ಬಂಗುಡೆ ಮತ್ತು ಮನಂಗುವಿನಂತಹ ಸಮುದ್ರ ವಾಸಿ ಮೀನುಗಳು ಹಾದು ಹೋಗುವ ದಾರಿಗಳನ್ನು ಹಿಡಿಯಲು ಸುತ್ತುವರಿದ ತಂತ್ರಗಳನ್ನು ಬಳಸುತ್ತದೆ.

ವೀಡಿಯೊ ನೋಡಿ: 'ನನ್ನ ಕಠಿಣ ಪರಿಶ್ರಮದಿಂದಾಗಿ ಇಂದು ನಾನು ಈ ಸ್ಥಾನದಲ್ಲಿದ್ದೇನೆ '

ದೊಡ್ಡ ಬಂಡವಾಳ ಹೂಡಿಕೆಗಳ ಅಗತ್ಯ ಮತ್ತು ಕಾರ್ಮಿಕರ ಬೇಡಿಕೆಯು ಸಣ್ಣ ಪ್ರಮಾಣದ ಮೀನುಗಾರರನ್ನು ಷೇರುದಾರರ ಗುಂಪುಗಳನ್ನು ರೂಪಿಸಿಕೊಳ್ಳುವ ಅಗತ್ಯವನ್ನು ಸೃಷ್ಟಿಸುತ್ತದೆ, ಇದರಲ್ಲಿ ವೆಚ್ಚಗಳು ಮತ್ತು ಆದಾಯಗಳೆರಡನ್ನೂ ಹಂಚಿಕೊಳ್ಳಲಾಗುತ್ತದೆ. ವೇಣಿ ಹೂಡಿಕೆದಾರರಾದದ್ದು ಮತ್ತು ತನ್ನ ವ್ಯವಹಾರವನ್ನು ಬೆಳೆಸಿದ್ದು ಹೀಗೆ. ರಿಂಗ್ ಸೀನ್ ದೋಣಿಗಳು ಮಹಿಳೆಯರಿಗೆ ಅವಕಾಶಗಳ ಬಾಗಿಲನ್ನು ತೆರೆದವು, ಹರಾಜುದಾರರು, ಮಾರಾಟಗಾರರು ಮತ್ತು ಮೀನು ಒಣಗಿಸುವವರು. "ರಿಂಗ್ ಸೀನ್ ಬಲೆಯಿಂದಾಗಿ ನಾನು ಬದುಕಿದೆ, ಸಮಾಜದಲ್ಲಿ ನನ್ನ ಸ್ಥಾನಮಾನಬೆಳೆಯಿತು" ಎಂದು ವೇಣಿ ಹೇಳುತ್ತಾರೆ. "ನಾನು ಧೈರ್ಯಶಾಲಿ ಮಹಿಳೆಯಾದೆ, ಹೀಗಾಗಿ ನಾನು ಬದುಕಿನಲ್ಲಿ ಮೇಲಕ್ಕೆ ಬಂದೆ."

ದೋಣಿಗಳು ಪುರುಷರಿಗಷ್ಟೇ ಮೀಸಲಾದ ಸ್ಥಳಗಳಾಗಿದ್ದರೂ, ಆ ದೋಣಿಗಳು ಬಂದರಿನಲ್ಲಿ ಇಳಿದ ತಕ್ಷಣ, ಮಹಿಳೆಯರು ದೊರಕಿದ ಮೀನನ್ನು ಹರಾಜು ಮಾಡುವುದರಿಂದ ಹಿಡಿದು ಮಾರಾಟ ಮಾಡುವವರೆಗೆ, ಮೀನುಗಳನ್ನು ಕತ್ತರಿಸುವುದು ಮತ್ತು ಒಣಗಿಸುವುದು, ತ್ಯಾಜ್ಯವನ್ನು ವಿಲೇವಾರಿ ಮಾಡುವುದು, ಮಂಜುಗಡ್ಡೆ ಮಾರಾಟ, ಚಹಾ ಮತ್ತು ಬೇಯಿಸಿದ ಆಹಾರದವರೆಗೆ  ಎಲ್ಲದರಲ್ಲೂ ಪ್ರಮುಖ ಪಾತ್ರವಹಿಸುತ್ತಾರೆ.  ಮೀನುಗಾರ ಮಹಿಳೆಯರನ್ನು ಸಾಮಾನ್ಯವಾಗಿ ಮೀನು ಮಾರಾಟಗಾರರು ಎಂದು ನಿರೂಪಿಸಲಾಗುತ್ತದೆಯಾದರೂ, ಮೀನು ನಿರ್ವಹಣೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಮಾನ ಸಂಖ್ಯೆಯ ಮಹಿಳೆಯರು ಇದ್ದಾರೆ, ಆಗಾಗ್ಗೆ ಮಾರಾಟಗಾರರ ಸಹಭಾಗಿತ್ವದಲ್ಲಿಯೂ ಕೆಲಸ ಮಾಡುತ್ತಾರೆ. ಆದರೆ ಮೀನುಗಾರಿಕೆ ವಲಯಕ್ಕೆ ಮಹಿಳೆಯರ ಕೊಡುಗೆಗಳ ಮೌಲ್ಯ ಮತ್ತು ವೈವಿಧ್ಯತೆ ಎರಡಕ್ಕೂ ಕಡಿಮೆ ಮಾನ್ಯತೆ ನೀಡಲಾಗುತ್ತದೆ.

ವೀಡಿಯೊ ನೋಡಿ: ಕಡಲೂರಿನಲ್ಲಿ ಮೀನು ನಿರ್ವಹಣೆ

ವೇಣಿ ಮತ್ತು ಕಿರಿಯ ಭಾನುವಿನಂತಹ ಮಹಿಳೆಯರ ಪಾಲಿಗೆ, ಅವರು ಗಳಿಸುವ ಆದಾಯವು ಅವರ ಕುಟುಂಬಗಳಿಗೆ ಬೆನ್ನೆಲುಬಾಗಿದೆ. ಆದರೆ ಅವರು ತಮ್ಮ ಕೆಲಸಕ್ಕೆ ಗೌರವ ಮತ್ತು ಸಾಮಾಜಿಕ ಮೌಲ್ಯದ ಕೊರತೆ ಕಾಡುತ್ತಿರುವುದಾಗಿ ಹೇಳುತ್ತಾರೆ. ಈ ಕ್ಷೇತ್ರದಲ್ಲಿನ ಅವರ ನೇರ ಮತ್ತು ಪರೋಕ್ಷ ಪಾಲುದಾರಿಕೆಗಳೆರಡರಲ್ಲೂಅವರನ್ನು ನಿರ್ಲಕ್ಷಿಸಲಾಗುತ್ತಿದೆ.

2018ರಲ್ಲಿ, ತಮಿಳುನಾಡು ಸರ್ಕಾರವು ರಿಂಗ್ ಸೀನ್ ಬಲೆಯನ್ನು ನಿಷೇಧಿಸಿತು, ಮರಿ ಮೀನುಗಳು ಸೇರಿದಂತೆ ಅತಿಯಾದ ಮೀನುಗಾರಿಕೆಗೆ ಕೊಡುಗೆ ನೀಡುವಲ್ಲಿ ಮತ್ತು ಸಾಗರ ಪರಿಸರವನ್ನು ನಾಶಪಡಿಸುವಲ್ಲಿ ಅದರ ಪಾತ್ರಕ್ಕಾಗಿ ಈ ನಿಷೇಧವನ್ನು ವಿಧಿಸಲಾಯಿತು. ಈ ನಿಷೇಧವು ವೇಣಿಯವರ ಜೀವನೋಪಾಯವನ್ನು ನಾಶಪಡಿಸಿದೆ ಮತ್ತು ಅವರಂತಹ ಅನೇಕ ಮಹಿಳೆಯರನ್ನು ನಾಶಪಡಿಸಿದೆ. ಒಂದು ದಿನಕ್ಕೆ 1 ಲಕ್ಷ ರೂಪಾಯಷ್ಟಿದ್ದ ಅವರ ಗಳಿಕೆ ಈಗ ದಿನಕ್ಕೆ 800-1,200 ರೂಪಾಯಿಗಳಿಗೆ ಕುಸಿದಿದೆ. "ರಿಂಗ್ ಸೀನ್ ಮೇಲಿನ ನಿಷೇಧದಿಂದಾಗಿ ನಾನು ಸುಮಾರು 1 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದೇನೆ" ಎಂದು ವೇಣಿ ಹೇಳುತ್ತಾರೆ. "ನಾನು ಮಾತ್ರವಲ್ಲದೆ ಲಕ್ಷಗಟ್ಟಲೆ ಜನರು ಇದರಿಂದ ಬಾಧಿತರಾಗಿದ್ದಾರೆ."

ಇದೆಲ್ಲದರ ನಡುವೆಯೂ ಮಹಿಳೆಯರು ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ, ಕಠಿಣ ಸಮಯಗಳಲ್ಲಿ ಪರಸ್ಪರ ಬೆಂಬಲಕ್ಕೆ ನಿಲ್ಲುತ್ತಾರೆ, ಸಂಕಷ್ಟಗಳನ್ನು ಮೀರಲು ತಾಳ್ಮೆಯಿಂದ ಕೈಚೆಲ್ಲದೆ ಹೋರಾಡುತ್ತಿದ್ದಾರೆ.

ವೇಣಿಯವರನ್ನು ಒಳಗೊಂಡಿರುವ ಕಿರುಚಿತ್ರದ ಸಾಹಿತ್ಯವನ್ನು ತಾರಾ ಲಾರೆನ್ಸ್ ಮತ್ತು ನಿಕೋಲಸ್ ಬೌಟ್ಸ್ ಅವರ ಸಹಯೋಗದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಕಡಲ ತೀರದಲ್ಲೊಂದು ಪುಲಿ

ಅನುವಾದ: ಶಂಕರ. ಎನ್. ಕೆಂಚನೂರು

Nitya Rao

Nitya Rao is Professor, Gender and Development, University of East Anglia, Norwich, UK. She has worked extensively as a researcher, teacher and advocate in the field of women’s rights, employment and education for over three decades.

Other stories by Nitya Rao
Alessandra Silver

Alessandra Silver is an Italian-born filmmaker based in Auroville, Puducherry, who has received several awards for her film production and photo reportage in Africa.

Other stories by Alessandra Silver
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru