ಶ್ರೀಕಾಕುಳಂ ಪರದೇಸಂ ಅವರು ಈ ದೀಪಾವಳಿಗೆ ಸುಮಾರು 10,000-12,000 ದೀಪಗಳನ್ನು ತಯಾರಿಸಿರುವುದಾಗಿ ಹೇಳುತ್ತಾರೆ. 92 ವರ್ಷದ ಈ ವ್ಯಕ್ತಿ ಈ ವಾರ ಆಚರಿಸಲಾಗುತ್ತಿರುವ ಹಬ್ಬಕ್ಕೆ ಒಂದು ತಿಂಗಳ ಮೊದಲು ತಮ್ಮ ಕೆಲಸ ಪ್ರಾರಂಭಿಸಿದರು. ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಒಂದು ಕಪ್ ಚಹಾದ ನಂತರ ಕೆಲಸ ಮಾಡಲು ಪ್ರಾರಂಭಿಸಿ ಸಂಜೆಯವರೆಗೆ ಕೇವಲ ಒಂದೆರಡು ವಿರಾಮಗಳೊಂದಿಗೆ ಕೆಲಸದಲ್ಲಿ ಮುಂದುವರಿಯುತ್ತಿದ್ದರು.

ಕೆಲವು ವಾರಗಳ ಹಿಂದೆ, ಅಕ್ಟೋಬರ್ ತಿಂಗಳ ಆರಂಭದಲ್ಲಿ ಪರದೇಸಂ ಸಣ್ಣ ಸ್ಟ್ಯಾಂಡ್‌ ಹೊಂದಿರುವ ದೀಪಗಳನ್ನು ತಯಾರಿಸಲು ಪ್ರಯತ್ನಿಸಿದರು. “ಇಂತಹ ದೀಪಗಳನ್ನು ಮಾಡಲು ಒಂದಿಷ್ಟು ಶ್ರಮ ಬೇಕು. ಸ್ಟ್ಯಾಂಡಿನ ದಪ್ಪ ಸಮನಾಗಿರಬೇಕು,” ಎಂದು ಅವರು ಹೇಳುತ್ತಾರೆ. ಈ ಸ್ಟ್ಯಾಂಡ್‌ ದೀಪದಿಂದ ಎಣ್ಣೆಯು ತುಳಕದಂತೆ ತಡೆಯುತ್ತದೆ ಮತ್ತು ಬತ್ತಿಯು ಬಾರದಂತೆ ತಡೆಯುತ್ತದೆ. ಸಾಮನ್ಯ ದೀಪ ತಯಾರಿಸಲು ಎರಡು ನಿಮಿಷ ತೆಗೆದುಕೊಳ್ಳುವ ಅವರು, ಈ ವಿಶೇಷ ದೀಪಗಳಿಗೆ ಐದು ನಿಮಿಷ ಬೇಕಾಗುತ್ತದೆ. ಆದರೂ ಅವರು ಗ್ರಾಹಕರನ್ನು ಕಳೆದುಕೊಳ್ಳಬಾರದೆನ್ನುವ ಕಾರಣಕ್ಕೆ ಮಾಮೂಲಿ ದೀಪಕ್ಕಿಂತಲೂ ಒಂದು ರೂಪಾಯಿಯನ್ನಷ್ಟೇ ‌ಹೆಚ್ಚಿಗೆ ಇರಿಸಿದ್ದಾರೆ. ಎಂದರೆ ಸಾಧಾರಣ ದೀಪಕ್ಕೆ 3 ರೂಪಾಯಿಯಾದರೆ ಇದಕ್ಕೆ ಒಂದು ರೂಪಾಯಿ ಹೆಚ್ಚು.

ಪರದೇಸಂ ಅವರ ಉತ್ಸಾಹ ಮತ್ತು ಅವರ ಕರಕುಶಲತೆಯ ಮೇಲಿನ ಒಲವು ವಿಶಾಖಪಟ್ಟಣಂನ ಕುಮ್ಮಾರಿ ವೀಧಿ (ಕುಂಬಾರರ ಬೀದಿ)ಯಲ್ಲಿರುವ ಅವರ ಮನೆಯಲ್ಲಿ ಎಂಟು ದಶಕಗಳಿಗೂ ಹೆಚ್ಚು ಕಾಲ ಕುಂಬಾರಿಕೆಯ ಚಕ್ರವನ್ನು ತಿರುಗಿಸುತ್ತಿದೆ. ಈ ಸಮಯದಲ್ಲಿ ಅವರು   ದೀಪಾವಳಿಯನ್ನು ಆಚರಿಸುವ ಮನೆಗಳನ್ನು ಬೆಳಗಿಸುವ ಲಕ್ಷಾಂತರ ದೀಪಗಳನ್ನು ತಯಾರಿಸಿ ದ್ದಾರೆ. "ಆಕಾರವಿಲ್ಲದ ಮಣ್ಣು ಕೇವಲ ನಮ್ಮ ಕೈಗಳು, ಶಕ್ತಿ ಮತ್ತು ಚಕ್ರವನ್ನು ಬಳಸಿಕೊಂಡು ವಸ್ತುವಾಗಿ ಬದಲಾಗುತ್ತದೆ. ಇದು ಒಂದು ಕಲಾ , [ಒಂದು ಕಲೆ]" ಎನ್ನುವ ಈ ಹಿರಿಯರಿಗೆ ಈಗ ಕಿವಿ ಅಷ್ಟು ಸರಿಯಾಗಿ ಕೇಳಿಸುವುದಿಲ್ಲ, ಮತ್ತು ಹೆಚ್ಚು ಓಡಾಡಲು ಕೂಡಾ ಸಾಧ್ಯವಾಗುತ್ತಿಲ್ಲ.

ಕುಮ್ಮಾರಿ ವೀಧಿ ವಿಶಾಖಪಟ್ಟಣಂ ನಗರದ ಅಕ್ಕಯ್ಯ ಪಾಲೆಮ್ ಏರಿಯಾದ ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ಹತ್ತಿರವಿರುವ ಕಿರಿದಾದ ರಸ್ತೆಯಾಗಿದೆ. ಬೀದಿಯಲ್ಲಿರುವ ಹೆಚ್ಚಿನ ನಿವಾಸಿಗಳು ಕುಮ್ಮಾರ ಸಮುದಾಯದವರು. ಇದು ಸಾಂಪ್ರದಾಯಿಕವಾಗಿ ವಿಗ್ರಹಗಳು ಸೇರಿದಂತೆ ಜೇಡಿಮಣ್ಣಿನ ವಸ್ತುಗಳ ತಯಾರಿಕೆಯಲ್ಲಿ ತೊಡಗಿರುವ ಕುಂಬಾರ ಸಮುದಾಯವಾಗಿದೆ. ಪರದೇಸಂ ಅವರ ಅಜ್ಜ ವಿಶಾಖಪಟ್ಟಣಂ ಜಿಲ್ಲೆಯ ಪದ್ಮನಾಭನ್ ಮಂಡಲದ ಪೊಟ್ನೂರು ಗ್ರಾಮದಿಂದ  ಕೆಲಸ ಹುಡುಕಿಕೊಂಡು ನಗರಕ್ಕೆ ವಲಸೆ ಬಂದರು. ಅವರು ಚಿಕ್ಕವರಾಗಿದ್ದಾಗ ಮತ್ತು ಈ ಕುಂಬಾರ ಬೀದಿಯಲ್ಲಿನ 30 ಕುಮ್ಮಾರ ಕುಟುಂಬಗಳು ದೀಪಗಳು , ಹೂ ಕುಂಡ, ʼಹುಂಡಿ', ಮಣ್ಣಿನ ಜಾಡಿಗಳು, ಲೋಟಗಳು ಮತ್ತು ವಿಗ್ರಹಗಳು ಸೇರಿದಂತೆ ಇತರ ಜೇಡಿಮಣ್ಣಿನ ವಸ್ತುಗಳನ್ನು ತಯಾರಿಸುತ್ತಿದ್ದ ಸಮಯವನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಇಂದು, ವಿಶಾಖಪಟ್ಟಣದಲ್ಲಿ ದೀಪಗಳನ್ನು ತಯಾರಿಸುವ ಏಕೈಕ ಕುಂಬಾರರ ಮನೆಯ ಕೊನೆಯ ಕುಶಲಕರ್ಮಿ ಪರದೇಸಂ. ಇಲ್ಲಿನ ಇತರ ಕುಂಬಾರ ಕುಟುಂಬಗಳು ವಿಗ್ರಹಗಳು ಮತ್ತು ಇತರ ಜೇಡಿಮಣ್ಣಿನ ವಸ್ತುಗಳನ್ನು ಮಾತ್ರ ತಯಾರಿಸುತ್ತಿವೆ ಅಥವಾ ಕರಕುಶಲತೆಯನ್ನು ಸಂಪೂರ್ಣವಾಗಿ ತೊರೆದಿವೆ. ಒಂದು ದಶಕದ ಹಿಂದಿನವರೆಗೆ, ಅವರು ಸಹ ಹಬ್ಬಗಳಿಗಾಗಿ ವಿಗ್ರಹಗಳನ್ನು ತಯಾರಿಸುತ್ತಿದ್ದರು ಆದರೆ ನಿಧಾನವಾಗಿ ನಿಲ್ಲಿಸಿದರು: ವಿಗ್ರಹ ತಯಾರಿಕೆಯು ದೈಹಿಕವಾಗಿ ಹೆಚ್ಚು ಪ್ರಯಾಸಕರ ಕೆಲಸವಾಗಿದೆ ಮತ್ತು ಅವರಿಗೆ ಗಂಟೆಗಳ ಕಾಲ ನೆಲದ ಮೇಲೆ ಕುಳಿತುಕೊಳ್ಳಲು ಕಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ.

Paradesam is the only diya maker on Kummari Veedhi (potters' street) in Visakhapatnam He starts after Vinayak Chaturthi and his diyas are ready by Diwali
PHOTO • Amrutha Kosuru
Paradesam is the only diya maker on Kummari Veedhi (potters' street) in Visakhapatnam He starts after Vinayak Chaturthi and his diyas are ready by Diwali
PHOTO • Amrutha Kosuru

ಎಡ: ವಿಶಾಖಪಟ್ಟಣಂನ ಕುಮ್ಮಾರಿ ವೀಧಿ (ಕುಂಬಾರರ ಬೀದಿ)ಯಲ್ಲಿನ ಏಕೈಕ ದೀಪ ತಯಾರಕರಾದ ಪರದೇಸಂ ಅವರು ವಿನಾಯಕ ಚತುರ್ಥಿಯ ಹೊತ್ತಿಗೆ ಕೆಲಸ ಆರಂಭಿಸುತ್ತಾರೆ ಮತ್ತು ದೀಪಾವಳಿಯ ವೇಳೆಗೆ ಅವರ ಬಳಿ ದೀಪಗಳು ಸಿದ್ಧವಿರುತ್ತವೆ

Paradesam made a 1,000 flowerpots (in the foreground) on order and was paid Rs. 3 for each. These are used to make a firecracker by the same name.
PHOTO • Amrutha Kosuru
Different kinds of pots are piled up outside his home in Kummari Veedhi (potters' street)
PHOTO • Amrutha Kosuru

ಎಡ: ಪರದೇಸಂ 1,000 ಹೂಕುಂಡಗಳನ್ನು (ಮುಂಭಾಗದಲ್ಲಿ) ಆದೇಶದ ಮೇರೆಗೆ ತಯಾರಿಸಿದರು ಮತ್ತು ಪ್ರತಿಯೊಂದಕ್ಕೂ 3 ರೂ. ದರ ವಿಧಿಸಲಾಗಿತ್ತು. ಇದನ್ನು ಅದೇ ಹೆಸರಿನ ಪಟಾಕಿ (ಬಿರುಸು) ತಯಾರಿಸಲು ಬಳಸಲಾಗುತ್ತದೆ. ಬಲ: ಕುಮ್ಮಾರ ವೀಧಿ (ಕುಂಬಾರರ ಬೀದಿ) ಯಲ್ಲಿರುವ ಅವರ ಮನೆಯ ಹೊರಗೆ ವಿವಿಧ ರೀತಿಯ ಮಡಕೆಗಳನ್ನು ರಾಶಿ ಹಾಕಲಾಗಿರುವುದು

ಪರದೇಸಂ ಈಗ ವಿನಾಯಕ (ಗಣೇಶ) ಚತುರ್ಥಿ ಮುಗಿಯುವವರೆಗೆ ಕಾಯುತ್ತಾರೆ, ಅಲ್ಲಿಂದ ಅವರು ದೀಪಾವಳಿಗೆ ದೀಪಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. "ದೀಪಗಳನ್ನು ತಯಾರಿಸುವ ಮೂಲಕ ನಾನು ಏಕೆ ಸಂತೋಷವನ್ನು ಕಂಡುಕೊಳ್ಳುತ್ತೇನೆಂದು ನನಗೆ ನಿಜವಾಗಿಯೂ ತಿಳಿದಿಲ್ಲ. ಆದರೆ ನನಗೆ ಅದರಿಂದ ಸಂತೋಷ ದೊರೆಯುತ್ತದೆ. ಬಹುಶಃ ಮಣ್ಣಿನ ವಾಸನೆ ನನಗೆ ಹೆಚ್ಚು ಇಷ್ಟವಾಗುತ್ತದೆ," ಎಂದು ಅವರು ತಮ್ಮ ಮನೆಯ ಹತ್ತಿರದ ಓಣಿಯಲ್ಲಿನ ತಾತ್ಕಾಲಿಕ ಗುಡಿಸಲ್ಲಿ ಕೆಲಸ ಮಾಡುತ್ತಾ ಹೇಳುತ್ತಾರೆ. ಕೋಣೆಯು ಜೇಡಿಮಣ್ಣಿನ ರಾಶಿಗಳು, ಮುರಿದ ಮಡಕೆಗಳು, ವಿಗ್ರಹಗಳು ಮತ್ತು ನೀರನ್ನು ಸಂಗ್ರಹಿಸಲು ಬಳಸುವ ಡ್ರಮ್ಮುಗಳಿಂದ ತುಂಬಿದೆ.

ಹುಡುಗನಿದ್ದಾಗ, ಪರದೇಸಂ ತನ್ನ ತಂದೆಯಿಂದ ದೀಪಾವಳಿಯಲ್ಲಿ ಮನೆಗಳನ್ನು ಬೆಳಗಿಸಲು ಬಳಸುವ ಸಾಧಾರಣ ದೀಪಗಳ ತಯಾರಿಕೆಯನ್ನು ಕಲಿತರು. ಅವರು ಮಾಮೂಲಿ ದೀಪ ಮತ್ತು ಅಲಂಕಾರಿಕ ದೀಪಗಳು , ಹೂವಿನ ಗಿಡದ ಕುಂಡಗಳು, ವಿನಾಯಕ ಚತುರ್ಥಿಗಾಗಿ ಗಣೇಶ, ಕಾಸಿನ ಹುಂಡಿ, ವಿಗ್ರಹಗಳನ್ನು ತಯಾರಿಸುತ್ತಿದ್ದರು. ಪಟಾಕಿ ಉದ್ಯಮದಲ್ಲಿ 'ಹೂವಿನ ಕುಂಡ' ಎನ್ನುವ ಹೆಸರಿನಿಂದ ಕರೆಯಲ್ಪಡುವ ಪಟಾಕಿಯನ್ನು ರಚಿಸಲು ಬಳಸಲಾಗುವ ಒಂದು ಸಣ್ಣ ಮಣ್ಣಿನ ಕುಡಿಕೆಯನ್ನು ಸಹ ತಯಾರಿಸುತ್ತಿದ್ದರು. ಅವರು ಈ ವರ್ಷ 1,000 ಹೂ ಕುಂಡಗಳಿಗೆ ಆರ್ಡರ್ ಪಡೆದರು ಮತ್ತು ಪ್ರತಿಯೊಂದಕ್ಕೂ 3 ರೂ. ಬೆಲೆಯಂತೆ ಅವುಗಳನ್ನು ಕೊಂಡವರು ಪಾವತಿಸಿದರು.

ಒಂದು ದಿನದಲ್ಲಿ, ನುರಿತ ಕಸುಬುದಾರರಾದ ಪರದೇಸಂ ಈಗಲೂ ದೀಪಾವಳಿಗೆ ಮುಂಚಿನ ತಿಂಗಳುಗಳಲ್ಲಿ ಸುಮಾರು 500 ದೀಪಗಳು ಅಥವಾ ಹೂವಿನ ಕುಂಡಗಳನ್ನು ತಯಾರಿಸಬಲ್ಲರು.  ಅವನು ಅಚ್ಚು ಮಾಡುವ ಮೂರು ವಸ್ತುಗಳಲ್ಲಿ ಸುಮಾರು ಒಂದು ಕೈಗೆ ಸಿಗುವುದಿಲ್ಲ ಎಂದು ಅವನು ಅಂದಾಜಿಸುತ್ತಾರೆ. ಸೌದೆ ಒಲೆಯ ಗೂಡಿನಲ್ಲಿ ಅದನ್ನು ಸುಡುವಾಗ ಅಥವಾ ನಂತರ ಸ್ವಚ್ಛಗೊಳಿಸುವಾಗ ಒಡೆಯುವುದು ಅಥವಾ ಬಿರುಕು ಬಿಡುವುದು ಇದಕ್ಕೆ ಕಾರಣ. ಕುಂಬಾರರು ಇದಕ್ಕೆ ಈಗ ದೊರಕುವ ಕಳಪೆ ಮಣ್ಣು ಕಾರಣವೆಂದು ದೂಷಿಸುತ್ತಾರೆ.

ಪರದೇಸಂ ಅವರ ಮಗ ಶ್ರೀನಿವಾಸ್ ರಾವ್ ಮತ್ತು ಸೊಸೆ ಸತ್ಯವತಿ ಬಿಡುವಿಲ್ಲದ ಋತುವಿನಲ್ಲಿ ಅವರಿಗೆ ಸಹಾಯ ಮಾಡುತ್ತಾರೆ. ಒಟ್ಟಿಗೆ, ಕುಟುಂಬವು ಜುಲೈ-ಅಕ್ಟೋಬರ್, ಹಬ್ಬದ ಋತುವಿನಲ್ಲಿ ಸುಮಾರು 75,000 ರೂ.ಗಳನ್ನು ಗಳಿಸುತ್ತದೆ. ವರ್ಷದ ಉಳಿದ ದಿನಗಳಲ್ಲಿ ಕುಂಬಾರರ ಬೀದಿಯು ಕೆಲವೇ ಸಂದರ್ಶಕರನ್ನು ಕಾಣುತ್ತದೆ ಮತ್ತು ಬಹುತೇಕ ಯಾವುದೇ ಮಾರಾಟವನ್ನು ಕಾಣುವುದಿಲ್ಲ. ಒಂದು ಶಾಲೆಯೊಂದರಲ್ಲಿ ಶ್ರೀನಿವಾಸ್ ಅವರ ಕೆಲಸವು ತಿಂಗಳಿಗೆ 10,000 ರೂ.ಗಳ ಸಂಬಳವನ್ನು ತರುತ್ತದೆ ಮತ್ತು ಕುಟುಂಬವು ಬದುಕಿಗೆ ಈ ಆದಾಯವನ್ನು ಅವಲಂಬಿಸಿದೆ.

ಕಳೆದ ದೀಪಾವಳಿಯಲ್ಲಿ, ಕೋವಿಡ್ ಮಾರಾಟದ ಮೇಲೆ ನಿರ್ಬಂಧ ಹೇರಿತು, ಮತ್ತು ಅವರು  ಆ ಸಮಯದಲ್ಲಿ ಕೇವಲ 3,000-4,000 ದೀಪಗಳು ಮಾರಾಟ ಮಾಡುವಲ್ಲಿ ಯಶಸ್ವಿಯಾದರು. ಮತ್ತು ಯಾವುದೇ ಹೂವಿನ ಕುಂಡಗಳನ್ನು ಮಾರಲು ಸಾಧ್ಯವಾಗಲಿಲ್ಲ. "ಈಗೀಗ ಸರಳವಾದ, ಕೈಯಿಂದ ತಯಾರಿಸಿದ ದೀಪಗಳನ್ನು ಯಾರೂ ಬಯಸುವುದಿಲ್ಲ," ಎಂದು ದೀಪಾವಳಿಗೆ ಒಂದು ವಾರ ಮೊದಲು ಪರಿಯೊಂದಿಗೆ ಮಾತನಾಡುತ್ತಾ ಅವರು ಹೇಳಿದರು, ಆದರೆ ಬೇಡಿಕೆ ಹೆಚ್ಚಾಗುತ್ತದೆ ಎಂದು ಅವರು ಭರವಸೆ ಹೊಂದಿದ್ದರು.  "ಅವರು [ಖರೀದಿದಾರರು] ವಿನ್ಯಾಸಗಳೊಂದಿಗೆ ಯಂತ್ರದಿಂದ ತಯಾರಿಸಿದ ದೀಪಗಳನ್ನು ಬಯಸುತ್ತಾರೆ," ಎಂದು ಅವರು  ಸಣ್ಣ ಕೈಗಾರಿಕಾ ಘಟಕಗಳಲ್ಲಿ ಡೈ-ಎರಕ ಹೊಯ್ದ ಅಚ್ಚುಗಳಿಂದ ಮಾಡಿದ ಮಾದರಿ ದೀಪಗಳನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ. ಕುಮ್ಮಾರಿ ವೀಧಿಯಲ್ಲಿರುವ ಅನೇಕ ಕುಂಬಾರಿಕೆ ಬಿಟ್ಟಿರುವ ಕುಂಬಾರರ ಕುಟುಂಬವು ಈ ದೀಪಗಳನ್ನು ಒಂದಕ್ಕೆ  3-4 ರೂ.ಗಳಂತೆ ಖರೀದಿಸುತ್ತದೆ ಮತ್ತು ವಿನ್ಯಾಸವನ್ನು ಅವಲಂಬಿಸಿ ತಲಾ 5-10 ರೂ.ಗಳಿಗೆ ಮಾರಾಟ ಮಾಡುತ್ತದೆ.

ಸ್ಪರ್ಧೆಯ ಹೊರತಾಗಿಯೂ, ಪರದೇಸಂ "ಸರಳವಾದ ಮಣ್ಣಿನ ದೀಪಗಳನ್ನು ತಯಾರಿಸುವುದು  ನನ್ನ ನೆಚ್ಚಿನ ಕೆಲಸ, ಏಕೆಂದರೆ ನನ್ನ ಮೊಮ್ಮಗಳು ಅವುಗಳನ್ನು ಇಷ್ಟಪಡುತ್ತಾಳೆ," ಎಂದು ಹೇಳುವಾಗ ಅವರ ಮೊಗದಲ್ಲಿ ದೀಪದ ಹೊಳಪಿತ್ತು.

The kiln in Kummara Veedhi is used by many potter families.
PHOTO • Amrutha Kosuru
Machine-made diyas washed and kept to dry outside a house in the same locality
PHOTO • Amrutha Kosuru

ಎಡ: ಕುಮ್ಮಾರಿ ವೀಧಿಯಲ್ಲಿರುವ ಈ ಬೆಂಕಿ ಗೂಡನ್ನು ಅನೇಕ ಕುಂಬಾರ ಕುಟುಂಬಗಳು ಬಳಸುತ್ತವೆ. ಬಲ: ಯಂತ್ರದಿಂದ ತಯಾರಿಸಿದ ದೀಪಗಳನ್ನು ಅದೇ ಪ್ರದೇಶದಲ್ಲಿ ಮನೆಯ ಹೊರಗೆ ತೊಳೆದು ಒಣಗಲು ಇಡಲಾಗಿರುವುದು

On a rainy day, Paradesam moves to a makeshift room behind his home and continues spinning out diyas
PHOTO • Amrutha Kosuru

ಮಳೆಗಾಲದ ದಿನಗಳಲ್ಲಿ, ಪರದೇಸಂ ಮನೆಯ ಹಿಂದಿನ ತಾತ್ಕಾಲಿಕ ಗುಡಿಸಲಿನಲ್ಲಿ ಕುಳಿತು ದೀಪಗಳನ್ನು ತಯಾರಿಸುತ್ತಾರೆ

ಕುಮ್ಮಾರಿ ವೀಧಿಯ ಕೆಲವು ಕುಟುಂಬಗಳು ಈಗಲೂ ಕರಕುಶಲ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ,ಈ ಕುಟುಂಬಗಳು ಪ್ರತಿ ವರ್ಷ ವಿನಾಯಕ ಚತುರ್ಥಿಗೆ ಕೆಲವು ತಿಂಗಳು ಮುಂಚಿತವಾಗಿ ಡೀಲರ್‌ ಮೂಲಕ ಮಟ್ಟಿ (ಜೇಡಿಮಣ್ಣು) ಖರೀದಿಸುತ್ತವೆ. ಒಟ್ಟಾಗಿ ಸುಮಾರು ಐದು ಟನ್ ಗಳಷ್ಟು ಮಣ್ಣನ್ನು ಒಂದು ಟ್ರಕ್ ಲೋಡ್‌ ಮೂಲಕ ಖರೀದಿಸುತ್ತಾರೆ. ಅವರು ಮಣ್ಣಿಗೆ 15,000 ರೂ.ಗಳನ್ನು ಮತ್ತು ನೆರೆಯ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ನಿರ್ದಿಷ್ಟ ಸ್ಥಳಗಳಿಂದ ಅದನ್ನು ಸಾಗಿಸಲು 10,000 ರೂ.ಗಳನ್ನು ಪಾವತಿಸುತ್ತಾರೆ. ಸರಿಯಾದ ಜಿಂಕಾ ಮಟ್ಟಿಯನ್ನು ಪಡೆಯುವುದು  - ಮಣ್ಣಿನ ಕಲಾಕೃತಿಗಳು ಮತ್ತು ವಿಗ್ರಹಗಳೆರಡನ್ನೂ ತಯಾರಿಸಲು ನೈಸರ್ಗಿಕ ಅಂಟು ಗುಣವನ್ನು ಹೊಂದಿರುವ ಮಣ್ಣು ನಿರ್ಣಾಯಕವಾಗಿದೆ.

ಪರದೇಸಂ ಅವರ ಕುಟುಂಬವು ಸುಮಾರು ಒಂದು ಟನ್ ಅಥವಾ 1,000 ಕಿಲೋಗ್ರಾಂಗಳಷ್ಟು ಭಾರದ ಮಣ್ಣನ್ನು ತೆಗೆದುಕೊಳ್ಳುತ್ತದೆ. ದೀಪಾವಳಿಗೆ ಒಂದು ವಾರ ಮೊದಲು ಅವರ ಮನೆಯ ಹೊರಗೆ ದೊಡ್ಡ ಗೋಣಿ ಚೀಲಗಳಲ್ಲಿ ಒಂದಷ್ಟು ಮಣ್ಣು ಇನ್ನೂ ಜೋಡಿಸಿರುವುದನ್ನು ಕಾಣಬಹುದಿತ್ತು. ಗಾಢ ಕೆಂಪು ಮಣ್ಣು ಶುಷ್ಕ ಮತ್ತು ಉಂಡೆ ಉಂಡೆಯಾಗಿತ್ತು ಮತ್ತು ಅದನ್ನು ಸರಿಯಾದ ಸ್ಥಿತಿಗೆ ತರಲು ಅವರು ನಿಧಾನವಾಗಿ ನೀರಿನೊಂದಿಗೆ ಮಿಶ್ರಣ ಮಾಡಲು ಪ್ರಾರಂಭಿಸಬೇಕು. ನಂತರ ಅದನ್ನು ಬೆರೆಸಲು ತುಳಿಯಲಾಗುತ್ತದೆ; ಇದು ಗಟ್ಟಿಯಿರುತ್ತದೆ ಮತ್ತು ಕಾಲಿಗೆ ಚುಚ್ಚುವ ಸಣ್ಣ ಕಲ್ಲುಗಳೂ ಇರುತ್ತದೆ ಎಂದು ಅವರು ಹೇಳುತ್ತಾರೆ.

ಜೇಡಿಮಣ್ಣು ಸರಿಯಾದ ಹದವನ್ನು ತಲುಪಿದ ನಂತರ, ಈ ನುರಿತ ಕುಶಲಕರ್ಮಿಯು ಒಂದು ಮೂಲೆಯಿಂದ ಒಣಗಿದ ಜೇಡಿಮಣ್ಣಿನ ಕಲೆಗಳಿರುವ ಭಾರವಾದ ಮರದ ಚಕ್ರವನ್ನು ಹೊರತೆಗೆದು ಅದನ್ನು ಸ್ಟ್ಯಾಂಡ್ ಮೇಲೆ ಇಡುತ್ತಾರೆ. ನಂತರ ಖಾಲಿ ಬಣ್ಣದ ಡಬ್ಬಿಯ ಮೇಲೆ ಬಟ್ಟೆಯನ್ನು ಮಡಚಿಡುತ್ತಾರೆ ಮತ್ತು ಅದು ಆ ಚಕ್ರದ ಮುಂದೆ ಅವರ ಆಸನವಾಗುತ್ತದೆ.

ಕುಮ್ಮಾರಿ ವೀಧಿಯಲ್ಲಿರುವ ಇತರ ಕುಂಬಾರರ ಚಕ್ರಗಳಂತೆ ಪರದೇಸಂ ಅವರ ಬಳಿಯಿರುವ ಚಕ್ರವು ಸಹ ಕೈಯಲ್ಲಿ ತಿರುಗಿಸುವಂತಹದ್ದು. ಅವರು ವಿದ್ಯುತ್ ಚಾಲಿತ ಚಕ್ರದ ಬಗ್ಗೆ ಕೇಳಿದ್ದಾರೆ ಆದರೆ ಅದನ್ನು ಹೇಗೆ ನಿಯಂತ್ರಿಸುವುದು ಎನ್ನುವುದರ ಕುರಿತು ಅವರಿಗೆ ಖಾತರಿಯಲ್ಲ. "ಪ್ರತಿಯೊಂದು ಕುಂಡ ಮತ್ತು ದೀಪಕ್ಕೆ [ದೀಪ] ವೇಗವು ಬದಲಾಗಬೇಕು," ಎಂದು ಅವರು ಹೇಳುತ್ತಾರೆ.

ಚಕ್ರದ ಮಧ್ಯಭಾಗಕ್ಕೆ ಒಂದು ಹಿಡಿ ಒದ್ದೆ ಜೇಡಿಮಣ್ಣನ್ನು ಎಸೆದು, ಅವರ ಕೈಗಳು ನಿಧಾನವಾಗಿ ಆದರೆ ದೃಢವಾಗಿ ಜೇಡಿಮಣ್ಣನ್ನು ಹಿಡಿದು ಕ್ರಮೇಣ ದೀಪವನ್ನು ರೂಪಿಸುತ್ತವೆ. ಸುಮಾರು ಮೀಟರ್ ಅಗಲದ ಚಕ್ರವು ಚಲಿಸುತ್ತಿದ್ದಂತೆ ಒದ್ದೆ ಮಣ್ಣಿನ ವಾಸನೆಯು ಗಾಳಿಯನ್ನು ತುಂಬುತ್ತದೆ. ಆವೇಗವನ್ನು ಮುಂದುವರಿಸಲು, ಅವರು ಆಗಾಗ್ಗೆ ಅದನ್ನು ದೊಡ್ಡ ಮರದ ಕೋಲಿನ ಸಹಾಯದಿಂದ ತಿರುಗಿಸುತ್ತಾರೆ. "ನನಗೆ ಈಗ ವಯಸ್ಸಾಗುತ್ತಿದೆ. ನಾನು ಯಾವಾಗಲೂ ಒಂದೇ ರೀತಿಯಾಗಿ ಬಲವನ್ನು ಬಳಸಲು ಸಾಧ್ಯವಿಲ್ಲ," ಎಂದು ಪರದೇಸಮ್ ಹೇಳುತ್ತಾರೆ. ದೀಪವು ಆಕಾರವನ್ನು ಪಡೆಯಲು ಪ್ರಾರಂಭಿಸಿ, ಗಟ್ಟಿಮುಟ್ಟಾದ ನಂತರ, ಚಲಿಸುವ ಚಕ್ರದಿಂದ ಅದನ್ನು ಕತ್ತರಿಸಲು ದಾರವನ್ನು ಬಳಸುತ್ತಾರೆ.

ಚಕ್ರದಿಂದ ಹೊರತೆಗೆಯುತ್ತಿದ್ದಂತೆ ಅವುಗಳನ್ನು ಆಯತಾಕಾರದ ಮರದ ಹಲಗೆಯ ಮೇಲೆ ಸಾಲಾಗಿ ದೀಪಗಳು ಮತ್ತು ಹೂವಿನ ಕುಂಡಗಳನ್ನು ಜಾಗರೂಕತೆಯಿಂದ ಜೋಡಿಸುತ್ತಾರೆ. ಜೇಡಿಮಣ್ಣಿನ ವಸ್ತುಗಳು ನೆರಳಿನಲ್ಲಿ 3-4 ದಿನಗಳ ಕಾಲ ಒಣಗಬೇಕು. ಒಣಗಿದ ನಂತರ, ಗೂಡಿನಲ್ಲಿ ಇರಿಸಿ ಎರಡು ದಿನಗಳವರೆಗೆ ಸುಡಲಾಗುತ್ತದೆ. ಜುಲೈನಿಂದ ಅಕ್ಟೋಬರ್ ತನಕ (ವಿನಾಯಕ ಚತುರ್ಥಿ, ದಸರಾ ಮತ್ತು ದೀಪಾವಳಿಗೆ) ಪ್ರತಿ 2-3 ವಾರಗಳಿಗೊಮ್ಮೆ ಈ ಗೂಡನ್ನು ಬೆಳಗಿಸಲಾಗುತ್ತದೆ. ವರ್ಷದ ಇತರ ಸಮಯಗಳಲ್ಲಿ ಇದನ್ನು ತಿಂಗಳಿಗೆ ಒಮ್ಮೆ ಮಾತ್ರ ಹಚ್ಚಲಾಗುತ್ತದೆ.

Left: The wooden potters' wheel is heavy for the 92-year-old potter to spin, so he uses a long wooden stick (right) to turn the wheel and maintain momentum
PHOTO • Amrutha Kosuru
Left: The wooden potters' wheel is heavy for the 92-year-old potter to spin, so he uses a long wooden stick (right) to turn the wheel and maintain momentum
PHOTO • Amrutha Kosuru

ಎಡ: 92 ವರ್ಷದ ಈ ಕುಶಲಕರ್ಮಿಗೆ ಮರದ ಕುಂಬಾರಿಕೆ ಚಕ್ರವನ್ನು ತಿರುಗಿಸಲು ಕಷ್ಟವಾಗುತ್ತದೆ, ಹೀಗಾಗಿ ಅವರು ಚಕ್ರವನ್ನು ತಿರುಗಿಸಲು ಮತ್ತು ವೇಗವನ್ನು ಕಾಪಾಡಿಕೊಳ್ಳಲು ಉದ್ದವಾದ ಮರದ ಕೋಲನ್ನು (ಬಲ) ಬಳಸುತ್ತಾರೆ

Paradesam is not alone – a few kittens area always around him, darting in and out of the wheel.
PHOTO • Amrutha Kosuru
His neighbour and friend, Uppari Gauri Shankar in his house.
PHOTO • Amrutha Kosuru

ಪರದೇಸಂ ಈ ಕೆಲಸದಲ್ಲಿ ಒಬ್ಬಂಟಿಯಲ್ಲ ಅವರೊಂದಿಗೆ ಕೆಲವು ಬೆಕ್ಕಿನ ಮರಿಗಳು ಅಲ್ಲಿ ಓಡಾಡುತ್ತ ಸದಾ ಜೊತೆಗಿರುತ್ತವೆ, ಬಲ: ಅವರ ನೆರೆಮನೆಯ ಸ್ನೇಹಿತ ಉಪ್ಪಾರ ಗೌರಿ ಶಂಕರ್ ತನ್ನ ಮನೆಯಲ್ಲಿ

ಭಾರತದ ಪೂರ್ವ ಕರಾವಳಿಯಲ್ಲಿ ಮಾನ್ಸೂನ್ ಮಳೆಯು ದೀಪಾವಳಿ ಬರುವಾಗ ನಿಲ್ಲುವುದಿಲ್ಲ ಅಥವಾ ನಿಧಾನಗೊಳ್ಳುವುದಿಲ್ಲ. ಈ ಸಮಯದಲ್ಲಿ ಪರದೇಸಂ ತನ್ನ ಮನೆಯ ಹಿಂದಿನ ಇಕ್ಕಟ್ಟಾದ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಾರೆ, ಅದಕ್ಕೆ ಪ್ಲಾಸ್ಟಿಕ್‌ ಶೀಟುಗಳನ್ನು ಹೊದೆಸಲಾಗಿದೆ. ಮಳೆಗಾಲದಲ್ಲಿ ಅದು ಹಾಗೇ ಇರುತ್ತದೆ. ಅಲ್ಲಿ ಕೆಲವು ಬೆಕ್ಕಿನ ಮರಿಗಳು ಅವರ ಸುತ್ತಲೂ ಆಟವಾಡುತ್ತಿದ್ದವು, ತಿರುಗಣೆ ಚಕ್ರ ಮತ್ತು ಮಡಕೆಗಳು ಮತ್ತು ಬಿಸಾಡಿದ ಗೃಹೋಪಯೋಗಿ ವಸ್ತುಗಳ ತುಣುಕುಗಳು ಮತ್ತು ತುಣುಕುಗಳ ಸುತ್ತಲೂ ಬಿದ್ದಿದ್ದವು.

ಪರದೇಸಂ ಅವರ ಪತ್ನಿ ಪೇದಿತಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು, ಹಾಸಿಗೆಯಲ್ಲೇ ಇದ್ದಾರೆ. ಈ ದಂಪತಿಗೆ ನಾಲ್ವರು ಮಕ್ಕಳಿದ್ದರು- ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು, ಅವರಲ್ಲಿ ಒಬ್ಬರು ಚಿಕ್ಕವರಿದ್ದಾಗ ನಿಧನರಾದರು.

" ದೀಪಗಳನ್ನು ತಯಾರಿಸಲು ನಾನು ಮಾತ್ರವೇ ಉಳಿದಿರುವುದು ದುಃಖದ ಸಂಗತಿ. ನನ್ನ ಇಡೀ ಬದುಕಿನುದ್ದಕ್ಕೂ ನನ್ನ ಮಗ ಕುಂಬಾರಿಕೆಯನ್ನು ಮುಂದುವರಿಸುತ್ತಾನೆ ಎಂದು ಭಾವಿಸಿದ್ದೆ," ಎಂದು ಪರದೇಸಂ ಹೇಳುತ್ತಾರೆ. "ನಾನು ನನ್ನ ಮಗನಿಗೆ ಚಕ್ರವನ್ನು ತಿರುಗಿಸುವುದು ಹೇಗೆಂದು ಕಲಿಸಿದ್ದೆ. ಆದರೆ ಗಣೇಶ ಮೂರ್ತಿಗಳು ಮತ್ತು ದೀಪಗಳನ್ನು ತಯಾರಿಸುವುದರಿಂದ ಬರುವ ಹಣ  ಸಾಕಾಗುವುದಿಲ್ಲ, ಹೀಗಾಗಿ ಅವನು ಖಾಸಗಿ ಶಾಲೆಯಲ್ಲಿ ಜವಾನನಾಗಿ ಕೆಲಸ ಮಾಡುತ್ತಾನೆ."  ಪರದೇಸಂ ಅವರ ಕೈಯಿಂದ ತಯಾರಿಸಿದ ಒಂದು ಡಜನ್ ದೀಪಗಳು  20 ರೂ.ಗಳಿಗೆ ಮಾರಾಟವಾಗುತ್ತವೆ, ಆದರೆ ಯಾರಾದರೂ ಚೌಕಾಶಿ ಮಾಡಿದರೆ, ಅವನು ಬೆಲೆಯನ್ನು 10 ರೂ.ಗಳಿಗೆ ಇಳಿಸುತ್ತಾರೆ ಮತ್ತು ಇದರೊಂದಿಗೆ ಕೆಲವು ರೂಪಾಯಿಗಳ ಲಾಭವು ಕಣ್ಮರೆಯಾಗುತ್ತದೆ.

"ಸಾಮಾನ್ಯ ದೀಪಗಳನ್ನು ತಯಾರಿಸಲು ಎಷ್ಟು ಶ್ರಮಪಡುತ್ತೇವೆ ಎಂದು ಯಾರಿಗೂ ಅರ್ಥವಾಗುವುದಿಲ್ಲ," ಎಂದು ಉಪ್ಪಾರ ಗೌರಿ ಶಂಕರ್ ಹೇಳುತ್ತಾರೆ. ಕುಮ್ಮಾರಿ ವೀಧಿ ನಿವಾಸಿಯಾಗಿರುವ 65 ವರ್ಷದ ಅವರು ಪರದೇಸಂ ಅವರ ಮನೆಯಿಂದ ಕೆಲವು ಮನೆಗಳ ದೂರದಲ್ಲಿ ವಾಸಿಸುತ್ತಿದ್ದಾರೆ ಮತ್ತು ಮೊದಲಿನಿಂದಲೂ ಪರದೇಸಂ ಅವರಿಗೆ ಆತ್ಮೀಯರು. ಗೌರಿ ಶಂಕರ್ ಅವರಿಗೆ ಈಗ ಚಕ್ರವನ್ನು ತಿರುಗಿಸಲು ಅಥವಾ ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. "ನನ್ನ ಬೆನ್ನು ನೋಯುತ್ತದೆ ಮತ್ತು ಎದ್ದೇಳುವುದು ಅಸಾಧ್ಯವಾಗುತ್ತದೆ" ಎಂದು ಅವರು ಹೇಳುತ್ತಾರೆ.

ಕೆಲವು ವರ್ಷಗಳ ಹಿಂದಿನವರೆಗೆ, ಗೌರಿ ಶಂಕರ್ ಅವರ ಕುಟುಂಬವು ದೀಪಾವಳಿಗೆ ಒಂದು ತಿಂಗಳ ಮೊದಲು ಕೈಯಿಂದ ದೀಪಗಳನ್ನು ತಯಾರಿಸಲು ಪ್ರಾರಂಭಿಸುತ್ತಿದ್ದೆವು ಎಂದು ಹೇಳುತ್ತಾರೆ. ಕೈಯಿಂದ ತಯಾರಿಸಿದ ದೀಪಗಳ ಮಾರಾಟದಿಂದ ಮಣ್ಣಿನ ದುಡ್ಡೂ ವಾಪಸ್‌ ಬರುತ್ತಿರಲಿಲ್ಲವಾದ ಕಾರಣ ಅವರು ಅದನ್ನು ನಿಲ್ಲಿಸಿದರು. ಈ ವರ್ಷ ಗೌರಿ ಶಂಕರ್ ಅವರ ಕುಟುಂಬವು ಸುಮಾರು 25,000 ಯಂತ್ರದಿಂದ ತಯಾರಿಸಿದ ದೀಪಗಳನ್ನು ಖರೀದಿಸಿದೆ, ಅವುಗಳನ್ನು ಮಾರಾಟ ಮಾಡುವ ಮೂಲಕ ಒಂದಿಷ್ಟು ಹಣ ಸಂಪಾದಿಸುವ ನಿರೀಕ್ಷೆಯಲ್ಲಿದ್ದಾರೆ.

ಆದರೆ ಅವರು ತನ್ನ ಸ್ನೇಹಿತ ಪರದೇಸಂ ಅವರಿಗೆ ಕಾಲಿನಿಂದ ಮಣ್ಣು ಹದ ಮಾಡಲು ಸಹಾಯ ಮಾಡುತ್ತಾರೆ. " ದೀಪಗಳನ್ನು ತಯಾರಿಸುವಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಕುಂಬಾರಿಕೆ ಚಕ್ರವನ್ನು ತಿರುಗಿಸುವ ಅವರ ಬಯಕೆಗೆ ಇದು [ಮಣ್ಣು ತುಳಿದು ಹದ ಮಾಡುವುದು] ನನ್ನ ಸಣ್ಣ ಕೊಡುಗೆಯಾಗಿದೆ," ಎಂದು ಅವರು ಹೇಳುತ್ತಾರೆ ಮತ್ತು ಮುಂದುವರೆದು ಹೇಳುತ್ತಾರೆ, "ಪರದೇಸಂ ಹಿರಿಯರು. ಪ್ರತಿ ವರ್ಷವೂ ದೀಪಗಳನ್ನು ತಯಾರಿಸುವಾಗ ಇದು ತನ್ನ ಕೊನೆಯ ವರ್ಷವೆನ್ನುವ ಭಾವನೆ ಅವರಲ್ಲಿ ಮೂಡುತ್ತದೆ . "

ಇದು ರಂಗ್‌ ದೇ ಫೆಲೋಷಿಪ್‌ ಬೆಂಬಲಿತ ವರದಿ.

ಅನುವಾದ: ಶಂಕರ. ಎನ್. ಕೆಂಚನೂರು

Amrutha Kosuru

Amrutha Kosuru is a 2022 PARI Fellow. She is a graduate of the Asian College of Journalism and lives in Visakhapatnam.

Other stories by Amrutha Kosuru
Editor : Priti David

Priti David is the Executive Editor of PARI. A journalist and teacher, she also heads the Education section of PARI and works with schools and colleges to bring rural issues into the classroom and curriculum, and with young people to document the issues of our times.

Other stories by Priti David
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru