ಅವರಿಗೆ ಅವರ ಹೆಸರು ಬರೆಯಲು ಮತ್ತು ಓದಲು ಮಾತ್ರ ಬರುತ್ತಿತ್ತು. ಅವರು ಅದನ್ನು ಹೆಮ್ಮೆಯಿಂದ ದೇವನಾಗರಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಗೊ-ಫ-ಲೀ ಎಂದು ತಿದ್ದುತ್ತಿದ್ದರು. ಮತ್ತು ನಗುವಿನ ಅಲೆಯನ್ನು ವ್ಯಾಪಿಸುತ್ತಿದ್ದರು.
ಮಹಿಳೆ ತನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡರೆ ಏನು ಬೇಕಾದರೂ ಮಾಡಬಲ್ಲಳೂ ಎಂದು ನಾಲ್ಕು ಮಕ್ಕಳ ತಾಯಿ 38ವರ್ಷದ ಗೋಪ್ಲಿ ಗಮೇತಿ ಹೇಳಿದರು.
ಉದಯಪುರ ಜಿಲ್ಲೆಯ ಗೊಗುಂಡಾ ಬ್ಲಾಕ್‌ನಲ್ಲಿರುವ ಕಾಡ್ರಾ ಗ್ರಾಮದ ಹೊರವಲಯದಲ್ಲಿರುವ ಹೆಚ್ಚೆಂದರೆ 30 ಮನೆಗಳಿಂದ ಕೂಡಿರುವ ಸಮುದಾಯದಲ್ಲಿರುವ ಗೋಪಿ, ತನ್ನ ನಾಲ್ಕು ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಸಮುದಾಯದ ಬೇರೆ ಮಹಿಳೆಯರ ನೆರವಿನಿಂದ ಮನೆಯಲ್ಲೇ ಜನ್ಮನೀಡುತ್ತಾರೆ. ತನ್ನ ನಾಲ್ಕನೇ ಮಗುವಿಗೆ ಜನ್ಮ ನೀಡಿ ಕೆಲವು ತಿಂಗಳ ನಂತರ ಮೊದಲ ಬಾರಿಗೆ ಆಸ್ಪತ್ರೆಗೆ ಹೋಗುತ್ತಾರೆ, ಅವರ ಮೂರನೇ ಮಗಳಿಗೆ ಜನ್ಮನೀಡಿದ ನಂತರ ಸಂತಾನ ನಿಯಂತ್ರಣಕ್ಕಾಗಿ ಹೋಗಿದ್ದರು.
“ನಮ್ಮ ಕುಟುಂಬ ಪರಿಪೂರ್ಣವಾಗಿದೆ ಎಂಬುದನ್ನು ಒಪ್ಪಿಕೊಳ್ಳುವ ಸಮಯ ಅದು,” ಎಂದು ಅವರು ಹೇಳುತ್ತಾರೆ. ಗೊಗುಂಡಾ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಆರೋಗ್ಯ ಕಾರ್ಯಕರ್ತೆಯರು ಭೇಟಿ ನೀಡಿದಾಗ ಮುಂದಿನ ಗರ್ಭಧಾರಣೆಯನ್ನು ತಡೆಯಲು “ಶಸ್ತ್ರಚಿಕಿತ್ಸೆ”ಯ ಬಗ್ಗೆ ಮಾಹಿತಿ ನೀಡಿದ್ದರು. ಅದು ಉಚಿತವಾಗಿರುತ್ತದೆ. ಇದಕ್ಕೆ ಅವರು ಮಾಡಬೇಕಾಗಿರು ಕೆಲಸವೆಂದರೆ 30ಕೀಮೀ, ದೂರದಲ್ಲಿರುವ ಸರಕಾರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವುದು.
ಹಲವು ಬಾರಿ ಈ ವಿಷಯವನ್ನು ಮನೆಯಲ್ಲಿ ತಿಳಿಹೇಳಿದರೂ ಅವರ ಪತಿ ಇದನ್ನು ಲೆಕ್ಕಿಸಲಿಲ್ಲ. ಒಂದು ತಿಂಗಳವರೆಗೆ ಕಾಯುತ್ತ, ತನ್ನ ಕಿರಿಯ ಮಗಳಿಗೆ ಹಾಲುಣಿಸುತ್ತ ತನ್ನನಿರ್ಧಾರದ ಬಗ್ಗೆ ಯೋಚಿಸತೊಡಗಿದರು.
“ಒಂದು ದಿನ ಸಂತಾನ ಹರಣ ಚಿಕಿತ್ಸೆ ಪಡೆಯಲು ನಾನು ದವಾಖಾನೆಗೆ ಹೋಗುತ್ತೇನೆಂದು ನಡೆದೆ,” ಎಂದು ಅವರು ನಗುತ್ತ ನೆನಪಿನಾಳದಿಂದ ಹರಕು ಹಿಂದಿ ಮತ್ತು ಭಿಲಿ ಭಾಷೆಯಲ್ಲಿ ಹೇಳಿದರು. “ನನ್ನ ಪತಿ ಮತ್ತು ಅತ್ತೆ ನನ್ನ ಹಿಂದೆ ಓಡಿ ಬಂದರು,” ರಸ್ತೆಯಲ್ಲಿ ಚಿಕ್ಕ ವಾಗ್ವಾದ ನಡೆಯಿತು. ಅದು ಗೋಪ್ಲಿ ನಿರ್ಧಾರ ಕೈಗೊಂಡಿರುವುದನ್ನು ಖಚಿತಪಡಿಸಿತ್ತು. ನಂತರ ಅವರು ಒಟ್ಟಾಗಿ ಬಸ್ಸಿನಲ್ಲಿ ಗೋಗುಂಡಾ ಆರೋಗ್ಯ ಕೇಂದ್ರಕ್ಕೆ ಗೋಪ್ಲಿಯ ಚಿಕಿತ್ಸೆಗಾಗಿ ಹೋದರು.
ಆ ಪ್ರಾಥಮಿ ಆರೋಗ್ಯ ಕೇಂದ್ರದಲ್ಲಿ ಇತರ ಮಹಿಳೆಯರೂ ಸಂತಾನ ನಿಯಂತ್ರಣ ಚಿಕಿತ್ಸೆಗಾಗಿ ಬಂದಿದ್ದರು ಎಂದು ಅವರು ಹೇಳಿದರು. ಆದರೆ ಅವರಿಗೆ ಅದು ಸಂತಾನಶಕ್ತಿಹರಣ ಚಿಕಿತ್ಸೆಯ ಶಿಬಿರ ಎಂಬದು ಗೊತ್ತಿರಲಿಲ್ಲ. ಅಲ್ಲದೆ ಅದೇ ದಿನ ಎಷ್ಟು ಜನ ಇತರ ಮಹಿಳೆಯರು ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆಂಬುದೂ ತಿಳಿದಿರಲಿಲ್ಲ. ಸಣ್ಣ ಪಟ್ಟಣಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಯುವಾಗ ಹತ್ತಿರದ ಗ್ರಾಮಗಳಿಂದ ಬರುವ ಮಹಿಳೆಯರು ಹಲವಾರು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಕಳಪೆ ಮಟ್ಟದ ಸಿಬ್ಬಂದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಶಿಬಿರಗಳಲ್ಲಿ ಕಳಪೆ ಮಟ್ಟದ ಶುಚಿತ್ವ, ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆ ಇಂತಿಷ್ಟು ಮಾಡಬೇಕೆಂಬ ಗುರಿ ಇರುವುದು ದಶಕಗಳಿಂದ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ.
ಸಂತಾನ ಹರಣ ಶಸ್ತ್ರಚಿಕಿತ್ಸೆ (ಟ್ಬೂಬಲ್ ಲಿಗೇಷನ್) ಇದು ಕಾಯಂ ಜನನ ನಿಯಂತ್ರಣ ಪದ್ಧತಿಯಾಗಿದೆ, ಇದರಲ್ಲಿ ಮಹಿಳೆಯ ಅಂಡನಾಳವನ್ನು ಪ್ರತಿಬಂಧಗೊಳಿಸಲಾಗುವುದು. ಇದು 30 ನಿಮಿಷಗಳಲ್ಲಿ ನಡೆಯುವ ಶಸ್ತ್ರಚಿಕಿತ್ಸೆ. ಇದನ್ನು “ನಾಳ ಸಂತಾನರಹಣ” ಅಥವಾ “ಮಹಿಳಾ ಸಂತಾನಹರಣ” ಎಂದೂ ಕರೆಯುತ್ತಾರೆ. ವಿಶ್ವಸಂಸ್ಥೆಯ 2015ರ ವರದಿಯೊಂದರ ಪ್ರಕಾರ ಮಹಿಳಾ ಸಂತಾನಹರಣ ಶಸ್ತ್ರಚಿಕಿತ್ಸೆಯು ಜಗತ್ತಿನಲ್ಲಿಯೇ ಅತ್ಯಂತ ಜನಪ್ರಿಯ ಸಂತಾನಹರಣ ಮಾದರಿಯಾಗಿದೆ ಎಂದು ತಿಳಿದುಬಂದಿದೆ. ಶೇ.19ರಷ್ಟು ಮದುವೆಯಾಗಿರುವ ಅಥವಾ ಕಾನೂನು ರೀತಿಯಲ್ಲಿ ಒಟ್ಟಿಗೆ ನೆಲೆಸಿರುವ ಮಹಿಳೆಯರು ಇದನ್ನು ಆಯ್ಕೆ ಮಾಡುತ್ತಾರೆ.
ಭಾರತದಲ್ಲಿ15 ರಿಂದ 49 ವರ್ಷ ವಯೋಮಿತಿಯ ಶೇ 37.9ರಷ್ಟು ಮಹಿಳೆಯರು ಟ್ಯೂಬಲ್ ಲಿಗೇಷನ್ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡುತ್ತಾರೆ ಎಂದು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5 (2010-21) ತಿಳಿಸಿದೆ.
ಕಿತ್ತಳೆ ಬಣ್ಣದ ಮುಸುಕು ಧರಿಸಿ, ಅದನ್ನು ತಲೆಯ ಮೇಲೆ ಎಳೆದುಕೊಂಡಿರುವ ಕಾರಣ ಕಣ್ಣುಗಳನ್ನು ಭಾಗಶಃ ಮುಚ್ಚಿಕೊಂಡಂತೆ ಕಾಣುವ ಗೋಪ್ಲಿ ಪಾಲಿಗೆ ಇದೊಂದು ಬಂಡಾಯದ ತಿರುವು. ನಾಲ್ಕನೇ ಮಗುವನ್ನು ಪಡೆದ ನಂತರ ಆಕೆ ಸಂಪೂರ್ಣವಾಗಿ ಬಳಲಿದ್ದಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದು. ಆಕೆಯ ನಿರ್ಧಾರವು ಬಹಳವಾಗಿ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ್ದು.
ಆಕೆಯ ಪತಿ ಸೋಹನ್‌ರಾಮ್ ಸೂರತ್‌ನಲ್ಲಿ ವಲಸೆ ಕಾರ್ಮಿಕ, ಮತ್ತು ವರ್ಷದಲ್ಲಿ ಹೆಚ್ಚಿನ ಸಮಬ ಮನೆಯಿಂದ ದೂರ ಇರುತ್ತಿದ್ದ, ಹೋಳಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭ ಒಂದು ತಿಂಗಳ ಅವಧಿಗೆ ಮನೆಗೆ ಬರುತ್ತಿದ್ದರು. ನಾಲ್ಕನೇ ಮಗು ಜನಿಸಿ ಕೆಲವು ತಿಂಗಳು ಕಳೆದ ನಂತರ ಆತ ಮನೆಗೆ ಬಂದಾಗ ಗೋಪ್ಲಿ ಮತ್ತೆ ಗರ್ಭಿಯಾಗಬಾರದೆಂಬ ತೀರ್ಮಾನವನ್ನು ಕೈಗೊಂಡರು.
“ಮಗುವಿನ ಆರೈಕೆಯ ವಿಷಯದಲ್ಲಿ ಸಹಾಯ ಮಾಡಲು ಗಂಡಸರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ,” ಎಂದು ತಮ್ಮ ಇಟ್ಟಿಗೆಯ ಹುಲ್ಲು ಹಾಸಿನ ಮನೆಯ ತಣ್ಣನೆಯ ನೆಲದ ಮೇಲೆ ಕುಳಿತ ಗೋಪ್ಲಿ ಹೇಳಿದರು. ನೆಲದಲ್ಲಿ ಅಲ್ಪ ಪ್ರಮಾಣದ ಜೋಳದ ಕಾಳುಗಳನ್ನು ಒಣಗಿಸಲಾಗಿತ್ತು. ಅವರು ಪ್ರತಿಬಾರಿಯೂ ಗರ್ಭಧರಿಸಿದ ನಂತರ ಸೋಹನ್‌ರಾಮ್ ಅಲ್ಲಿ ಇರುತ್ತಿರಲಿಲ್ಲ. ಗರ್ಭಿಣಿಯಾಗಿದ್ದರೂ ಅವರು 0,3 ಎಕರೆಯ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತ, ಜೊತೆಯಲ್ಲಿ ಬೇರೆಯವರ ಗದ್ದೆಯಲ್ಲಿ ದುಡಿಯುತ್ತ ಮನೆ ನೋಡಿಕೊಳ್ಳುತ್ತಿದ್ದರು. “ನಮಗಿರುವ ಮಕ್ಕಳಿಗೆ ಆಹಾರ ನೀಡಲು ನಮ್ಮಲ್ಲಿ ಹಣ ಇರುವುದಿಲ್ಲ, ಇದರಿಂದಾಗಿ ಮತ್ತಷ್ಟು ಮಕ್ಕಳನ್ನು ಪಡೆಯುವುದರಲ್ಲಿ ಏನು ಅರ್ಥ ಇದೆ?”
ಸಂತಾನ ನಿಯಂತ್ರಣಕ್ಕೆ ಬೇರೆ ಯಾವ ಮಾರ್ಗವನ್ನಾದರೂ ಕಂಡುಕೊಂಡಿದ್ದೀರಾ ಎಂದು ಕೇಳಿದ್ದಕ್ಕೆ ಆಕೆ ನಾಚಿಕೆಯಿಂದ ನಗುಬೀರಿದರು. ಅವರು ತಮ್ಮ ಪತಿಯ ಬಗ್ಗೆ ಮಾತನಾಡಲು ಬಯಸಿಲ್ಲ, ಆದರೆ ಗಂಡಸರನ್ನು ಸಂತಾನ ನಿಯಂತ್ರಣದ ವಿಷಯದಲ್ಲಿ ನಂಬುವುದು ಕೆಲಸಕ್ಕೆ ಬಾರದ ವಿಷಯ ಎಂಬುದನ್ನು ಸಮುದಾಯದ ಹೆಂಗಸರು ಚೆನ್ನಾಗಿ ತಿಳಿದಿದ್ದಾರೆ ಎಂದರು.
*****
ನೆರೆಯ ರಾಜಸಮಂದ ಜಿಲ್ಲೆಯ ಪ್ರವಾಸಿ ತಾಣವಾದ ಕುಂಬಲ್‌ಘಡ ಕೋಟೆಯಿಂದ ಕೇವಲ 35ಕಿ.ಮೀ. ದೂರದಲ್ಲಿರುವ ಅರಾವಳಿ ಬೆಟ್ಟ ತಪ್ಪಲಿನ ರೋಯಡಾ ಪಂಚಾಯತಿಯ ಭಾಗವಾಗಿರುವುದು ಕರಾಡ ಗ್ರಾಮ. ಕರಾಡ ಗ್ರಾಮದ ಗಾಮಿಟಿಗಳು 15-20 ಕುಟುಂಬಗಳಿಂದ ಕೂಡಿದ ಒಂದೇ ವರ್ಗಕ್ಕೆ ಸೇರಿದ ಪರಿಶಿಷ್ಠ ಪಂಗಡದ ಭಿಲ್-ಗಾಮೆಟಿ ಸಮುದಾಯ. ಗ್ರಾಮದ ಹೊರವಲಯದಲ್ಲಿ ನೆಲೆಸಿರುವ ಪ್ರತಿಯೊಂದು ಕುಟುಂವು ಕಡಿಮೆ ಎಂದರೆ ಒಂದು ಬಿಘಾ ಭೂಮಿಯನ್ನು ಹೊಂದಿತ್ತು. ಈ ಭಾಗದಲ್ಲಿ ಯಾವುದೇ ಮಹಿಳೆಯು ಶಾಲಾ ಶಿಕ್ಷಣವನ್ನು ಪೂರ್ತಿಗೊಳಿಸಿಲ್ಲ, ಕಡೇ ಪಕ್ಷ ಈ ವಿಷಯದಲ್ಲಿ ಗಂಡಸರು ವಾಸಿ.
ಮಳೆಗಾಲದ ತಿಂಗಳಾದ ಜೂನ್ ಕೊನೆ ಮತ್ತು ಸೆಪ್ಟೆಂಬರ್ ಹೊರತಾಗಿ ಅವರು ತಮ್ಮ ಭೂಮಿಯನ್ನು ಗೋದಿ ಬೆಳೆಯಲು ಉಳುತ್ತಿದ್ದರು. ಪುರುಷರು ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಮನೆಯಲ್ಲೇ ಇರುತ್ತಿದ್ದರು. ಕೋವಿಡ್ -19 ಲಾಕ್‌ಡೌನ್‌ನ ನಿರ್ದಿಷ್ಟ ಕಷ್ಟದ ತಿಂಗಳುಗಳಲ್ಲಿ ಪುರುಷರು ಸೂರತ್‌ನಲ್ಲಿಸೀರೆ ಕತ್ತರಿಸುವ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿಬೃಹತ್ ಗಾತ್ರದ ಬಟ್ಟೆಯ ಬಂಡಲುಗಳನ್ನು ಆರು ಮೀಟರ್ ಗಾತ್ರದಲ್ಲಿ ಕೈಯಿಂದಲೇ ಕತ್ತರಿಸಲಾಗುತ್ತಿತ್ತು. ತುದಿಗಳನ್ನು ನಂತರ ಹಾಸಿಗಗಳಿಗೆ ಅಥವಾ ಅಲಂಕಾರಿಕಗಳಿಗೆ ಬಳಸಲಾಗುತ್ತಿತ್ತು. ಇದು ಸಂಪೂರ್ಣ ಕೌಶಲ ರಹಿತ ಕಾರ್ಮಿಕರ ಕೆಲಸ್ಕಕೆ ದಿನಕ್ಕೆ 350-400ರೂ. ಗಳಿಸುತ್ತಿದ್ದರು.
ಗೋಪ್ಲಿಯ ಪತಿ ಸೋಹನ್‌ರಾಮ್ ಮತ್ತು ಇತರ ಗೋಮಟಿ ಪುರುಷರು ಸೇರಿದಂತೆ ದಕ್ಷಿಣ ರಾಜಸ್ಥಾನದ ಲಕ್ಷಾಂತರ ಕೆಲಸಗಾರರು ದಶಕಗಳ ಹಿಂದೆ ಕೆಲಸಕ್ಕಾಗಿ ಸೂರತ್, ಅಹಮದಾಬಾದ್, ಮುಂಬೈ, ಜೈಪುರ ಮತ್ತು ಹೊಸದಿಲ್ಲಿಗೆ ವಲಸೆ ಹೋಗಿದ್ದರು. ಇದರಿಂದಾಗಿ ಗ್ರಾಮವು ಹೆಚ್ಚಾಗಿ ಮಹಿಳಾ ಜನಸಂಖೆಯಿಂದಲೇ ತುಂಬಿತ್ತು.
ಅವರ ಅನುಪಸ್ಥಿತಿಯಲ್ಲಿ ಸಂಪೂರ್ಣ ಅನಕ್ಷರಸ್ಥ ಮತ್ತು ಅರೆ ಅನಕ್ಷರಸ್ಥ ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ ಸಂಕೀರ್ಣ ಆರೋಗ್ಯ ಚಿಕಿತ್ಸೆ ಆಯ್ಕೆ ಮತ್ತು ನಿರ್ಧಾರಗಳನ್ನು ತಾವಾಗಿಯೇ ಕೈಗೊಳ್ಳುವುದನ್ನು ಕಲಿತಿದ್ದರು.
ಸಾಂಕ್ರಾಮಿಕ ಬರುವುದಕ್ಕೆ ಮೊದಲು ಸೂರತ್‌ನಲ್ಲಿ ಬಾಲಕಾರ್ಮಿಕ ಚಳುವಳಿಗಾರರ ದೃಷ್ಟಿಗೆ ಬಿದ್ದು ಮನೆಸೇರಿದ ಹದಿಹರೆಯದ ಬಾಲಕ ಸೇರಿದಂತೆ ಮೂರು ಮಕ್ಕಳ ತಾಯಿಯಾಗಿರುವ ಪುಷ್ಪಾ ಗಮೇತಿ ಅವರ ಪ್ರಕಾರ ಮಹಿಳೆರು ಒಗ್ಗಿಕೊಳ್ಳಲೇಬೇಕಾಗಿತ್ತು.
ಈ ಹಿಂದೆ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದಾಗ ಮಹಿಳೆಯರು ಆತಂಕಗೊಳ್ಳುತ್ತಿದ್ದರು. ವಾರಗಳ ಕಾಲ ಮಗುವಿನ ಜ್ವರ ಗುಣವಾಗದಿದ್ದರೆ, ತೋಟಗಳಲ್ಲಿ ಕೆಲಸ ಮಾಡುವಾಗ ಗಾಯಗೊಂಡು ರಕ್ತ ಹರಿಯುವುದು ನಿಲ್ಲದಿದ್ದರೆ ಮಹಿಳೆಯರು ಆತಂಕಗೊಳ್ಳುತ್ತಿದ್ದನ್ನು ಅವರು ವಿವರಿಸಿದರು. “ನಮ್ಮಲ್ಲಿ ಯಾವುದೇ ಗಂಡಸರು ಇಲ್ಲದಿರುವಾಗ ವೈದ್ಯಕೀಯ ವೆಚ್ಚಕ್ಕೆ ನಮ್ಮಲ್ಲಿ ಹಣ ಇರುತ್ತಿರಲಿಲ್ಲ. ಚಿಕಿತ್ಸಾ ಕೇಂದ್ರಕ್ಕೆ ಹೋಗಲು ಸಾರ್ವಜನಿಕ ಸಾರಿಗೆಯನ್ನು ಬಳಸಲೂ ನಮಗೆ ಗೊತ್ತಿರಲಿಲ್ಲ,” ಎನ್ನುತ್ತಾರೆ ಪುಷ್ಪಾ. “ನಿಧಾನವಾಗಿ ನಾವು ಎಲ್ಲವನ್ನೂ ತಿಳಿದುಕೊಂಡೆವು,”
ಪುಷ್ಪಾ ಅವರ ಹಿರಿಯ ಮಗ ಕಿಶನ್, ಈ ಬಾರಿ ನೆರೆಯ ಗ್ರಾಮದ ಭೂಮಿ ಅಗೆಯುವ ಯಂತ್ರದ ಚಾಲಕನ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡ. ಕಿರಿಯ ಮಕ್ಕಳಾದ 5 ಮತ್ತು 6 ವರ್ಷ ಪ್ರಾಯದ ಮಂಜು ಮತ್ತು ಮನೋಹರ್‌ಗೆ 5 ಕಿ.ಮೀ. ದೂರದಲ್ಲಿರುವ ಅಂಗನವಾಡಿಗೆ ಹೋಗುವುದನ್ನು ಪುಷ್ಪಾ ಕಲಿಸಿದರು.
“ನಮ್ಮ ಹಿರಿಯ ಮಕ್ಕಳಿಗೆ ನಾವು ಅಂಗನವಾಡಿಯಿಂದ ಏನನ್ನೂ ಪಡೆದಿಲ್ಲ,” ಎನ್ನುತ್ತಾರೆ ಅವರು. ಆದರೆ ಇತ್ತೀಚಿನ ವರ್ಷಗಳಲ್ಲಿಕಾರ್ಡಾದ ಯುವ ತಾಯಂದಿರು ರಾಯ್ಡಾಕ್ಕೆ ಸಾಗುವ ಅಗಲೀಕರಣಗೊಳ್ಳುತ್ತಿರುವ ಹೆದ್ದಾರಿಯನ್ನು ಎಚ್ಚರಿಕೆಯಿಂದ ದಾಟಿ, ಅಲ್ಲಿಯ ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ಮತ್ತು ಚಿಕ್ಕ ಮಕ್ಕಳಿಗೆ ಸಿಗುವ ಬಿಸಿಯೂಟವನ್ನು ತರುತ್ತಿದ್ದಾರೆ. ಮಂಜುವನ್ನು ಸೊಂಟದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಯಾರಾದರೂ ಕರೆದೊಯ್ಯುತ್ತಿದ್ದರು.
“ಅದು ಕೊರೋನಾಕ್ಕಿಂತ ಮೊದಲು,” ಎನ್ನುತ್ತಾರೆ ಪುಷ್ಪಾ. ಲಾಕ್‌ಡೌನ್ ನಂತರ 2021ರ ಮೇ ತಿಂಗಳ ವರೆಗೂ ಅಂಗನವಾಡಿ ಕೇಂದ್ರಗಳು ಮತ್ತೆ ಕಾರ್ಯ ಆರಂಭಿಸಿವೆಯೇ ಎನ್ನುವುದರ ಬಗ್ಗೆ ಇಲ್ಲಿಯ ಮಹಿಳೆಯರಿಗೆ ಮಾಹಿತಿ ಇಲ್ಲ.
5ನೇ ತರಗತಿಯ ನಂತರ ಶಾಲೆ ತೊರೆದ ಕಿಶನ್ ಇದ್ದಕ್ಕಿದ್ದಂತೆ ಗೆಳೆಯನೊಂದಿಗೆ ಸೂರತ್‌ನಲ್ಲಿ ಕೆಲಸ ಮಾಡಲು ಹೊರಟು ಹೋದ, ಹದಿಹರೆಯದ ಮಕ್ಕಳನ್ನು ನಿಯಂತ್ರಿಸುವುದು ಹೇಗೆ ಎಂಬ ವಿಷಯದಲ್ಲಿ ಕುಟುಂದಬಲ್ಲಿ ಒಮ್ಮತದ ತೀರ್ಮಾನದ ಬಗ್ಗೆ ಪುಷ್ಪಾಗೆ ನಿಯಂತ್ರಣವಿರಲಿಲ್ಲ.”ಆದರೆ ನಾನು ಯುವಕರನ್ನು ನನ್ನ ನಿಯಂತ್ರಣದಲ್ಲಿರಿಸಲು ನಿರ್ಧಾರಗಳನ್ನು ಕೈಗೊಳ್ಳಲು ಯತ್ನಿಸುವೆ,” ಎನ್ನುತ್ತಾರೆ ಪುಷ್ಪಾ.
ಸದ್ಯ ಕಾರ್ಡಾದಲ್ಲಿ ಕೆಲಸ ಮಾಡುತ್ತಿರುವ ವಯಸ್ಸಿಗರಲ್ಲಿ ಅವರ ಪತಿ ನಾತುರಾಮ್ ಏಕೈಕ ಪುರುಷ. 2020ರ ಬೇಸಿಗೆಯ ಲಾಕ್‌ಡೌನ್ ಸಂದರ್ಭದಲ್ಲಿ ಮಿತಿ ಮೀರಿದ ವಲಸೆ ಕಾರ್ಮಿಕರು ಸೂರತ್ ಪೊಲೀಸರೊಂದಿಗೆ ಜಗಳ ಕಾಯ್ದರು, ಆತ ಕಾರ್ಡಾದ ಸುತ್ತಮುತ್ತ ಕೆಲಸ ಹುಡುಕಿದರೂ ಅದೃಷ್ಟ ಕೈಗೂಡಲಿಲ್ಲ.
ಗೋಪ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಪ್ರಯೋಜನದ ಬಗ್ಗೆ ಪುಷ್ಪಾಗೆ ತಿಳಿಸಿದರು. ಶಸ್ತ್ರ ಚಿಕಿತ್ಸೆಯ ನಂತರ ಆರೈಕೆಯ ಕೊರತೆಯಿಂದ ಉದ್ಭವಿಸಬಹುದಾದ ವೈದ್ಯಕೀಯ ಸಮಸ್ಯೆಗಳ ಬಗ್ಗೆ ಮಹಿಳೆಯರು ಕೇಳಿರಲಿಲ್ಲ. (ಗಾಯದ ನಂಜು ಅಥವಾ ಸೋಕು, ಕರುಳಿನಲ್ಲಿ ಕಂಡುಬರುವ ಅಡಚಣೆ ಅಥವಾ ಕರುಳಿಗೆ ಆಗಬಹುದಾದ ಇತರ ಹಾನಿಗಳು ಮತ್ತು ಮೂತ್ರಕೋಶಕ್ಕೆ ಆಗು ಹಾನಿಯು ಸೇರಿದಂತೆ) ಅಥವಾ ಈ ಮಾದರಿಯಲ್ಲಿ ಸಂತಾನಹರಣ ವೈಫಲ್ಯದ ಸಾಧ್ಯತೆಯ ಬಗ್ಗೆ ಅರಿವಿರುವುದಿಲ್ಲ. ಜನಸಂಖ್ಯೆಯನ್ನು ನಿಯಂತ್ರಿಸಲು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಗೋಪ್ಲಿಗೆ ಅರ್ಥವಾಗಲಿಲ್ಲ. “ಇದು ಚಿಂತಿದುವುದನ್ನು ಕೊನೆಗಾಣಿಸಿದೆ,” ಎಂದು ಅವರು ಹೇಳಿದರು.
ಪುಷ್ಪಾ ಕೂಡ ಮೂರು ಮಕ್ಕಳನ್ನು ಮನೆಯಲ್ಲೇ ಪಡೆದವರು; ನಾದಿನಿ ಅಥವಾ ಸಮುದಾಯದ ಹಿರಿಯ ಮಹಿಳೆಯಾಗಿರುವ ಅವರು, ದಾರವನ್ನು ತುಂಡು ಮಾಡಿ, ತುದಿಯನ್ನು ಕಟ್ಟಿ ಮಣಿಕಟ್ಟಿನಲ್ಲಿ ಧರಿಸಿರುತ್ತಾರೆ, ಇದಕ್ಕೆ ಲಚ್ಚಾ ಧಾಗ್ ಎನ್ನುವರು. ಹಿಂದೂಗಳು ನೂಲಿನ ಎಳೆಯನ್ನು ಮಣಿಕಟ್ಟಿನಲ್ಲಿ ಧರಿಸುವುದು ಸಾಮಾನ್ಯ.
ಯುವ ಗಾಮೆಟಿ ಮಹಿಳೆಯರು ಅಪಾಯದಿಂದ ಕೂಡಿದ ಮನೆ ಹೆರಿಗೆಯನ್ನು ಬಯಸುವುದಿಲ್ಲ ಎನ್ನುತ್ತಾ ಗೋಪ್ಲಿ. ಅವರ ಏಕೈಕ ಸೊಸೆ ಗರ್ಭಿಣಿ. “ಅವಳ ಆರೋಗ್ಯಕ್ಕೆ ಅಥವಾ ನಮ್ಮ ಮೊಮ್ಮಕ್ಕಳ ಆರೋಗ್ಯದ ವಿಷಯದಲ್ಲಿ ನಾವು ಯಾವುದೇ ಅಪಾಯವನ್ನು ತರಬಯಸುವುದಿಲ್ಲ,”
ತಾಯಿಯಾಗಲಿರುವ 18 ವರ್ಷದ ಸೊಸೆ ಈಗ ತಾಯಿಯ ಮನೆಯಲ್ಲಿದ್ದಾರೆ. ಅರಾವಳಿ ಪರ್ವತ ಪ್ರದೇಶದ ಎತ್ತರದಲ್ಲಿರುವ ಗ್ರಾಮ ಅದು. ತುರ್ತು ಪರಿಸ್ಥಿತಿಯಲ್ಲಿ ಸ್ಥಳಾಂತರಿಸಲು ಕಷ್ಟವಾಗುತ್ತದೆ. “ಹೆರಿಗೆಯ ಸಮಬ ಬಂದಾಗ ನಾವು ಆಕೆಯನ್ನು ಇಲ್ಲಿಗೆ ತರುತ್ತೇವೆ, ಇಬ್ಬರು ಅಥವಾ ಮೂವರು ಮಹಿಳೆಯರು ಟೆಂಪೋದಲ್ಲಿ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ.,” ಸ್ಥಳೀಯರ ಪ್ರಯಾಣಕ್ಕಾಗಿ ಮೂರು ಚಕ್ರದ ವಾಹನವೇ ಗೋಪ್ಲಿ ಹೇಳುವ ಟೆಂಪೋ.
“ಏನೇ ಇರಲಿ ಇಂದಿನ ಯುವತಿಯರು ನೋವು ಬಯಸುವುದಿಲ್ಲ,” ಎಂದು ಗೋಪ್ಲಿ ನಕ್ಕರು, ಅಲ್ಲಿ ಸುತ್ತುವರಿದ ನೆರಹೊರೆಯವರು ಮತ್ತು ಸಂಬಂಧಿಕರು ಸಮ್ಮತಿ ಸೂಚಿಸಿ ನಗುವನ್ನು ಮುಂದುವರಿಸಿದರು.
ಈ ಮನೆಗಳ ಸಮೂಹದಲ್ಲಿನ ಇನ್ನೂ ಇಬ್ಬರು ಅಥವಾ ಮೂವರು ಮಹಿಳೆಯರೂ ಸಹ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದರು, ಆದರೆ ಮಹಿಳೆಯರು ಅದನ್ನು ಚರ್ಚಿಸಲು ತುಂಬಾ ನಾಚಿಕೆಪಡುತ್ತಾರೆ. ಆಧುನಿಕ ಗರ್ಭನಿರೋಧಕದ ಬೇರೆ ಯಾವುದೇ ರೂಪವನ್ನು ಸಾಮಾನ್ಯವಾಗಿ ಬಳಸಲಾಗುವುದಿಲ್ಲ, 'ಆದರೆ ಬಹುಶಃ ಕಿರಿಯ ಮಹಿಳೆಯರು ಬುದ್ಧಿವಂತರಾಗಿರಬಹುದು,' ಎಂದು ಗೋಪ್ಲಿ ಹೇಳುತ್ತಾರೆ
ಹತ್ತಿರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರವೆಂದರೆ 10 ಕಿಮೀ ದೂರದಲ್ಲಿರುವ ನಂದೇಶ್ಮಾ ಗ್ರಾಮದಲ್ಲಿದೆ. ಗರ್ಭ ಧರಿಸಿರುವುದು ಖಚಿತವಾದ ಕೂಡಲೇ ಕಾರ್ಡಾ ಗ್ರಾಮದ ಯುವ ಮಹಿಳೆಯರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಸರು ನೋಂದಾಯಿಸುತ್ತಿದ್ದರು. ಅವರು ಅಲ್ಲಿಗೆ ಪರೀಕ್ಷೆಗಾಗಿ ಹೋಗುತ್ತಿದ್ದರು, ಆರೋಗ್ಯ ಕಾರ್ಯಕರ್ತೆಯರು ಗ್ರಾಮಕ್ಕೆ ಭೇಟಿ ನೀಡಿದಾಗ ನೀಡುವ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವಿರುವ ಪೂರಕಗಳನ್ನು ವಿತರಿಸಿದಾಗ ಸ್ವೀಕರಿಸುತ್ತಾರೆ.
“ಕೆಲವೊಮ್ಮೆ ಕಾರ್ಡಾ ಮಹಿಳೆಯರು ಗೋಗುಂಡಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುಂಪಾಗಿ ಹೋಗುತ್ತಾರೆ,” ಎಂದು ಗ್ರಾಮದಲ್ಲಿ ನೆಲೆಸಿರುವ ರಜಪೂತ ಜಾತಿಗೆ ಸೇರಿದ ಬಾಂಬ್ರಿಬಾಯಿ ಕಲುಸಿಂಘ್ ಹೇಳುತ್ತಾರೆ. ತಮ್ಮ ಆರೋಗ್ಯ ಕುರಿತು ಸ್ವತಂತ್ರವಾಗಿ ತೀರ್ಮನ ಕೈಗೊಳ್ಳವ ಅಗತ್ಯವು ಗಾಮೆಟಿ ಮಹಿಳೆಯರ ಬದುಕನ್ನೇ ಬದಲಾಯಿಸಿದೆ. ಇದಕ್ಕೂ ಮುನ್ನ ಅವರು ಜೊತೆಯಲ್ಲಿ ಪುರುಷರು ಇಲ್ಲದೆ ಇರುತ್ತದ್ದರೆ ಗ್ರಾಮದಿಂದ ಹೊರನಡೆಯುತ್ತಿದ್ದುದು ಬಹಳ ಅಪರೂಪಕ್ಕೆ ಎಂದರು.
ಬೃಹತ್ ಪ್ರಮಾಣದಲ್ಲಿ ಪುರುಷರು ಕೆಲಸಕ್ಕಾಗಿ ವಲಸೆ ಹೋಗುತ್ತಿರುವುದರಿಂದ ಊರಿನಲ್ಲೇ ಉಳಿದ ಮಹಿಳೆಯರು ಸ್ವಾವಲಂಬನೆಯ ಬದುಕನ್ನು ಕಂಡುಕೊಂಡರು ಎನ್ನುತ್ತಾರೆ ಗಾಮೆಟಿ ಪುರುಷರು ಸೇರಿದಂತೆ ವಲಸೆ ಕಾರ್ಮಿಕರಿಗಾಗಿ ಕೆಲಸ ಮಾಡುತ್ತಿರುವ ಆಜೀವಿಕಾ ಬ್ಯೂರೋದ ಉದೈಪುರ ಘಟಕದ ಸಮುದಾಯ ಸಂಘಟಕಿ ಕಲ್ಪನಾ ಜೋಷಿ. “ಅವರಿಗೆ ಈಗ ಅಂಬುಲೆನ್ಸ್‌ಗೆ ಕರೆ ಮಾಡುವುದು ಹೇಗೆ ಎಂಬುದು ಗೊತ್ತು. ಅನೇಕರು ತಾವಾಗಿಯೇ ಆಸ್ಪತ್ರೆಗೆ ಹೋಗುತ್ತಾರೆ. ಆರೋಗ್ಯ ಕಾರ್ಯಕರ್ತೆಯರು ಮತ್ತು ಎನ್‌ಜಿಒ ಪ್ರತಿನಿಧಿಗಳೊಂದಿಗೆ ಮುಚ್ಚುಮರೆಇಲ್ಲದೆ ಮಾತನಾಡುತ್ತಾರೆ,” ಎಂದು ಅವರು ತಿಳಿಸಿದರು. “ಒಂದು ದಶಕದ ಹಿಂದೆ ಎಲ್ಲವೂ ಭಿನ್ನವಾಗಿತ್ತು,” ಹಿಂದೆ ಗಂಡಸರು ಸೂರತ್‌ನಿಂದ ಮನೆಗೆ ಬರುವ ವರೆಗೂ ವೈದ್ಯಕೀಯ ಅಗತ್ಯಗಳನ್ನು ಮುಂದಕ್ಕೆ ಹಾಕಬೇಕಾಗಿತ್ತು,” ಎಂದವರು ಹೇಳಿದರು.
ಈ ಮನೆಗಳ ಸಮೂಹದಲ್ಲಿನ ಇನ್ನೂ ಇಬ್ಬರು ಅಥವಾ ಮೂವರು ಮಹಿಳೆಯರೂ ಸಹ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದರು, ಆದರೆ ಮಹಿಳೆಯರು ಅದನ್ನು ಚರ್ಚಿಸಲು ತುಂಬಾ ನಾಚಿಕೆಪಡುತ್ತಾರೆ. ಆಧುನಿಕ ಗರ್ಭನಿರೋಧಕದ ಬೇರೆ ಯಾವುದೇ ರೂಪವನ್ನು ಸಾಮಾನ್ಯವಾಗಿ ಬಳಸಲಾಗುವುದಿಲ್ಲ, 'ಆದರೆ ಬಹುಶಃ ಕಿರಿಯ ಮಹಿಳೆಯರು ಬುದ್ಧಿವಂತರಾಗಿರಬಹುದು,' ಎಂದು ಗೋಪ್ಲಿ ಹೇಳುತ್ತಾರೆ. ಅವರ ಸೊಸೆ ಗರ್ಭಿಣಿಯಾಗುವ ಸುಮಾರು ಒಂದು ವರ್ಷದ ಮೊದಲು ಮದುವೆಯಾಗಿದ್ದಳು.
*****
ಕಾರ್ಡಾದಿಂದ 15 ಕಿಮೀ ಗೂ ಕಡಿಮೆ ದೂರದಲ್ಲಿರುವ ಗ್ರಾಮವೊಂದರಲ್ಲಿ ಪಾರ್ವತಿ ಮೇಘ್ವಾಲ್ (ಹೆಸರು ಬದಲಾಯಿಸಲಾಗಿದೆ) ಅವರ ಪ್ರಕಾರ ವಲಸೆ ಕಾರ್ಮಿಕರ ಪತ್ನಿಯರು ಯಾವಾಗಲೂ ಒತ್ತಡದಲ್ಲಿರುತ್ತಾರೆ. ಅವರ ಪತಿ ಗುಜರಾತಿನ ಮೆಹಸನಾದಲ್ಲಿ ಜೀರಿಗೆ ಪ್ಯಾಕಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಪ ಅವಧಿಗಾಗಿ ಅವರು ಪತಿಯೊಂದಿಗೆ ಮೆಹಸನಾದಲ್ಲಿ ಚಹಾದ ಅಂಗಡಿ ನಡೆಸುತ್ತಿದ್ದರು, ಆದರೆ ಮೂವರು ಮಕ್ಕಳ ಶಿಕ್ಷಣಕ್ಕಾಗಿ ಉದೈಪುರಕ್ಕೆ ಮರಳಬೇಕಾಯಿತು.
2018ರಲ್ಲಿ ಪತಿ ಊರಿನಿಂದ ಹೊರಗೆ ಇದ್ದಾಗ ಅವರು ರಸ್ತೆ ಅಪಘಾತಕ್ಕೊಳಗಾದರು. ಹಣೆಗೆ ಮೊಳೆ ತಗಲಿ ಗಾಯಗೊಂಡ ಕಾರಣ ಆಸ್ಪತ್ರೆಗೆ ದಾಖಲಾಗಾಬೇಕಾಯಿತು. ಗಾಯ ಗುಣವಾದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ನಂತರ ಎರಡು ವರ್ಷಗಳ ಕಾಲ ಪತ್ತೆ ಹಚ್ಚಲಾಗದ ಮಾನಸಿಕ ಕಾಯಿಲೆಯಿಂದ ಬಳಲಿದರು.
“ನಾನು ಯಾವಗಲೂ ನನ್ನ ಪತಿ, ಮಕ್ಕಳು, ಹಣ ಇವುಗಳ ಬಗ್ಗೆಯೇ ಚಿಂತೆ ಮಾಡುತ್ತಿದ್ದೆ, ಮತ್ತು ನಂತರ ಅಪಘಾತ ಸಂಭವಿಸಿತು,” ಎಂದರು. ಅವರು ಕ್ಯಾಟಟಾನಿಕ್ ಎಪಿಸೋಡ್ ಎಂಬ ಮಾನಸಿಕ ರೋಗದಿಂದ ಬಳಲುತ್ತಿದ್ದು, ತೀವ್ರವಾಗಿ ದುಃಖಕ್ಕೆ ಒಳಗಾಗುತ್ತಿದ್ದರು. “ನಾನು ಅರಚುವುದನ್ನು ಮತ್ತು ಮಾಡುತ್ತಿರುವುದನ್ನು ನೋಡಿ ಎಲ್ಲರೂ ಗಾಬರಿಗೊಳ್ಳುತ್ತಿದ್ದರು. ಇಡೀ ಗ್ರಾಮದಲ್ಲಿ ಯಾರೂ ನನ್ನ ಹತ್ತಿರಕ್ಕೆ ಬರುತ್ತಿರಲಿಲ್ಲ. ನಾನು ನನ್ನಲ್ಲಿದ್ದ ಎಲ್ಲ ವೈದ್ಯಕೀಯ ರಶೀದಿಗಳನ್ನು ಹರಿದು ಹಾಕಿದ್ದೆ, ನಾನು ನೋಟುಗಳನ್ನು ಹರಿದುಹಾಕಿದೆ, ನನ್ನ ಬಟ್ಟೆಗಳನ್ನೂ ಹರಿದುಹಾಕಿದೆ….” ಆ ವಸ್ತುಗಳನ್ನು ತಾನು ಏನು ಮಾಡಿದೆ ಎಂಬುದು ಆಕೆಗೆ ಈಗ ಗೊತ್ತು, ತನ್ನ ಮಾನಸಿಕ ರೋಗದ ಬಗ್ಗೆ ಅವರು ಈಗ ನಾಚಿಕೊಳ್ಳುತ್ತಿದ್ದಾರೆ.
“ನಂತರ ಲಾಕ್‌ಡೌನ್ ಸಂಭವಿಸಿತು. ಮತ್ತೆ ಎಲ್ಲವೂ ಕತ್ತಲಾಯಿತು.” ಎಂದು ಅವರು ಹೇಳಿದರು. “ನನಗೆ ಮತ್ತೊಮ್ಮೆ ಮಾನಸಿಕ ಆಘಾತ ಕಂಡ ಹಾಗಾಯಿತು,” ಅವರ ಪತಿ ಮೆಹಸನಾದಿಂದ 275 ಕಿಮೀ ದೂರದಿಂದ ಮನೆಗೆ ತಲುಪಬೇಕಾಯಿತು. ಈ ತಳಮಳ ಪಾರ್ವತಿಯನ್ನು ಮತ್ತೆ ಸಂಕಷ್ಟಕ್ಕೆ ಈಡುಮಾಡಿತು. ಅವರ ಕಿರಿಯ ಮಗ ಕೂಡ ದೂರದ ಉದಯಪುರದಲ್ಲಿದ್ದು, ಹೊಟೇಲೊಂದರಲ್ಲಿ ರೊಟ್ಟಿ ತಯಾರಿಸುತ್ತಿದ್ದಾನೆ.
ಮೇಘ್ವಾಲ್ ದಲಿತ ಸಮುದಾಯ, ವಲಸೆ ಕಾರ್ಮಿಕರು ಗ್ರಾಮಗಳಲ್ಲಿ ಬಿಟ್ಟು ಹೋದ ಪರಿಶಿಷ್ಠ ಜಾತಿಯ ಮಹಿಳೆಯರು ತಮ್ಮ ಜೀವನೋಪಾಯಕ್ಕಾಗಿ ಗ್ರಾಮದಲ್ಲಿ ಕಠಿಣ ಶ್ರಮ ವಹಿಸುತ್ತಿದ್ದಾರೆ ಎಂದು ಪಾರ್ವತಿ ಹೇಳಿದರು. “ದಲಿತ ಮಹಿಳೆಯರು ಮಾನಸಿಕ ಕಾಯಿಲೆ ಅಥವಾ ಮಾನಸಿಕ ಕಾಯಿಲೆಯ ಇತಿಹಾಸ ಹೇಗಿರುತ್ತದೆ ಎಂಬುದನ್ನು ನೀವು ಊಹಿಸಬಲ್ಲಿರಾ?”
ಪಾರ್ವತಿಯವರು ಅಂಗನವಾಡಿ ಕಾರ್ಯಕರ್ತೆಯಾಗಿ ಮತ್ತು ಸಹಾಯಕಿಯಾಗಿ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಅಪಘಾತದ ನಂತರ ಮತ್ತು ಅವರ ಮಾನಸಿಕ ಆರೋಗ್ಯ ಹದಗೆಟ್ಟ ನಂತರ ಕೆಲಸವನ್ನು ಉಳಿಸಿಕೊಳ್ಳುವುದು ಕಠಿಣವಾಯಿತು.
2020ರಲ್ಲಿ ಲಾಕ್‌ಡೌನ್ ತೆರವುಗೊಳಿಸಿದ ನಂತರ ಅವರು ತನ್ನ ಪತಿಗೆ ಕೆಲಸಕ್ಕಾಗಿ ಮತ್ತೆ ವಲಸೆ ಹೋಗಲು ಅವಕಾಶ ನೀಡುವುದಿಲ್ಲವೆಂದು ಹೇಳಿದರು. ಕುಟುಂಬದ ಸದಸ್ಯರು ಮತ್ತು ಸಹಕಾರಿ ಸಂಘದಿಂದ ಸಾಲ ಪಡೆದು ಗ್ರಾಮದಲ್ಲಿ ಸಣ್ಣ ಕಿರಾಣಿ ಅಂಗಡಿ ಸ್ಥಾಪಿಸಿದರು. ಅವರ ಪತಿ ಗ್ರಾಮದ ಸುತ್ತಮುತ್ತ ದಿನಗೂಲಿ ಕೆಲಸವನ್ನು ಹುಡುಕಲು ಆರಂಭಿಸಿದರು. “ವಲಸೆ ಕಾರ್ಮಿಕನ ಪತ್ನಿಯಾಗಿಯೇ ಉಳಿಯಲು ನನಗೆ ಇಷ್ಟವಿಲ್ಲ,” ಎಂದು ಹೇಳಿದ ಅವರು, “ಅದೊಂದು ಅತೀವ ಮಾನಸಿಕ ಆಘಾತ,” ಎಂದರು.
ಇತ್ತ ಕಾರ್ಡಾದಲ್ಲಿ ಪುರುಷರ ನೆರವು ಇಲ್ಲದೆ ಸ್ವಂತವಾಗಿ ಬದುಕನ್ನು ಕಟ್ಟಿಕೊಳ್ಳುವುದು ಕಷ್ಟ ಎಂಬುದು ಅಲ್ಲಿಯ ಮಹಿಳೆಯರಿಗೆ ಮನದಟ್ಟಾಯಿತು. ಗಾಮೆಟಿ ಮಹಿಳೆಯರಿಗೆ ಸಿಗುತ್ತಿದ್ದ ಒಂದೇ ಒಂದು ಕೆಲಸವೆಂದರೆ ಅದು ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನೆರೆಗಾ) ಮಾತ್ರ, ಕಾರ್ಡಾದ ಹೊರವಲಯದಲ್ಲಿರುವ ಮಹಿಳೆಯರು 2021ರಲ್ಲಿ 100 ದಿನಗಳ ಕೆಲಸವನ್ನು ಪೂರ್ಣಗೊಳಿಸಿದ್ದರು, ಅಷ್ಟರಲ್ಲೇ ಮಳೆಗಾಲ ಆರಂಭಗೊಂಡಿತು.
“ನಮಗೆ ಪ್ರತಿ ವರ್ಷ 200 ದಿನಗಳ ಕೆಲಸ ಬೇಕು,” ಎನ್ನುತ್ತಾರೆ ಗೋಪ್ಲಿ, ಈಗ ಮಹಿಳೆಯರು ತರಕಾರಿಗಳನ್ನು ಬೆಳೆಯಲು ಪ್ರಯತ್ನಿಸುತ್ತಿದ್ದು ಅದನ್ನು ಹತ್ತಿರದ ಮಾರುಕಟ್ಟೆಯಲ್ಲಿ ಮಾರಬಹುದು ಎಂದ ಅವರು, ಪುರುಷರ ಜೊತೆ ಚರ್ಷಿಸದೆ ಅವರು ಮತ್ತೊಂದು ತೀರ್ಮಾನವನ್ನು ಕೈಗೊಳ್ಳುತ್ತಾರೆ, "ಏನೇ ಇರಲಿ ನಮಗೆ ತಿನ್ನಲು ಪೌಷ್ಠಿಕ ಆಹಾರ ಬೇಕು, ಹೌದಲ್ಲವೇ?”
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org. ಈ ವಿಳಾಸಕ್ಕೆ ಕಳುಹಿಸಿ
ಅನುವಾದ: ಸೋಮಶೇಖರ ಪಡುಕರೆ