ಹೊಳೆಯುವ ಹಸಿರು ಸೀರೆಯೊಂದನ್ನು ಕೈಗಿಟ್ಟು "ದಯವಿಟ್ಟು ಚಿತೆಗೆ ಬೆಂಕಿಯಿಡುವ ಮೊದಲು ಈ ಸೀರೆಯನ್ನು ಶವದ ಮೇಲೆ ಇರಿಸಿ" ಎಂದು ಸತ್ತ ಮಹಿಳೆಯ ಸಂಬಂಧಿಕರೊಬ್ಬರು ಸಂದೀಪನ್‌ ವಾಳ್ವೆ ಅವರ ಬಳಿ ವಿನಂತಿಸಿದರು. ಸಂದೀಪನ್‌ ಅವರಿಗೆ ಇಂತಹ ವಿನಂತಿಗಳು ಹೊಸದಲ್ಲ. ಅವರು ಆ ಮಹಿಳೆಯ ವಿನಂತಿಯಂತೆ ಅದನ್ನು ನಡೆಸಿಕೊಟ್ಟರು.

ಮಹಾರಾಷ್ಟ್ರದ ಉಸ್ಮಾನಾಬಾದ್ ನಗರದ ಶ್ಮಶಾನದಲ್ಲಿ 15 ಶವಗಳು ಅಂತ್ಯಕ್ರಿಯೆಗಾಗಿ ಸಾಲಿನಲ್ಲಿ ಕಾಯುತ್ತಿದ್ದವು. ಆ ಸಾಲಿನಲ್ಲಿ ವಾ‍ಳ್ವೆಯವರು ಮೊದಲಿಗೆ ತಮಗೆ ಶವ ಸಂಸ್ಕಾರದ ಸಹಾಯಕ್ಕಾಗಿ ನಿಗದಿಪಡಿಸಲಾದ ಶವವನ್ನು ಹುಡುಕಿಕೊಂಡರು. ನಂತರ ಪಿಪಿಇ ಕಿಟ್ ಮತ್ತು ಕೈಗವಸು ಧರಿಸಿ, ಸೀರೆಯನ್ನು ದೇಹದ ಮೇಲೆ ಎಷ್ಟು ಸಾಧ್ಯವೋ ಅಷ್ಟು ಕಾಳಜಿಯಿಂದ ಇರಿಸಿ, ಗಾಳಿಯಾಡದ ಬಿಳಿ ಬಾಡಿ-ಬ್ಯಾಗ್‌ನಲ್ಲಿ ಶವವನ್ನು ಕಟ್ಟಿದರು. "ತಾವೂ ವೈರಸ್ ಸೋಂಕಿಗೆ ಒಳಗಾಗಬಹುದೆಂದು ಅವರ ಸಂಬಂಧಿಕರು ಹೆದರಿದ್ದರು" ಎಂದು ಅವರು ಹೇಳುತ್ತಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಕೋವಿಡ್‌ ಪಿಡುಗು ಪ್ರಾರಂಭವಾದಾಗಿನಿಂದ ಉಸ್ಮಾನಾಬಾದ್‌ ನಗರ ಪರಿಷತ್ತಿನ ಉದ್ಯೋಗಿಯಾದ ವಾಳ್ವೆ (45) ಕೋವಿಡ್ -19 ಸೋಂಕಿತರ ಶವಗಳನ್ನು ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಅವರು ಈವರೆಗೆ 100ಕ್ಕೂ ಹೆಚ್ಚು ಅಂತ್ಯಕ್ರಿಯೆಗಳನ್ನು ಪೂರೈಸಿದ್ದಾರೆ. ಕೊರೋನಾದ ಎರಡನೇ ಅಲೆಯು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ವರ್ಷಕ್ಕಿಂತ  ಹೆಚ್ಚು ಹಾನಿಯುಂಟುಮಾಡಿದೆ. ಈ ವರ್ಷದ ಏಪ್ರಿಲ್ ಆರಂಭದಿಂದ ಸುಮಾರು 15-20 ಮೃತ ದೇಹಗಳನ್ನು ಪ್ರತಿದಿನ ಶವಾಗಾರಕ್ಕೆ ತರಲಾಗುತ್ತಿದೆಯೆಂದು ಅವರು ಹೇಳುತ್ತಾರೆ. ಇದು ವಾಳ್ವೆ ಮತ್ತು ಅವರ ಸಹೋದ್ಯೋಗಿಗಳ ಮೇಲೆ ಒತ್ತಡವನ್ನುಂಟುಮಾಡುತ್ತಿದೆ ಮತ್ತು ಜನರಲ್ಲಿ ಭೀತಿಯನ್ನು ಹುಟ್ಟಿಸುತ್ತಿದೆ.

ವಾಳ್ವೆ ಹೇಳುತ್ತಾರೆ, "ವೈರಸ್ ಭಯವು ಕೆಲವು ಜನರು ತಮ್ಮ ಕುಟುಂಬ ಸದಸ್ಯರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಮಾಡಿಸುತ್ತಿದೆ. ಹೀಗಾಗಿ ಸತ್ತ ವ್ಯಕ್ತಿಯನ್ನು ಸುಡುವ ಮೊದಲು ಕೆಲವು ಪ್ರಾಥಮಿಕ ವಿಧಿಗಳನ್ನು ನೆರವೇರಿಸುವಂತೆ ಅವರು ನಮ್ಮನ್ನು ವಿನಂತಿಸುತ್ತಾರೆ. ಇದು ಸಂಕಷ್ಟದ ಸಮಯ. ಸತ್ತವರ ಪ್ರೀತಿಪಾತ್ರರ ಅನುಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಯುವುದು ಹೃದಯ ವಿದ್ರಾವಕವಾದುದು. ಆದರೆ ಸತ್ತಿರುವವರಿಗೆ ಅವರ ಅಂತಿಮ ವಿಧಿಗಳನ್ನು ಹೇಗೆ ನಡೆಸಲಾಯಿತು ಎಂದು ತಿಳಿಯುವುದಿಲ್ಲ ಎನ್ನುವದು ಸಮಾಧಾನಕರ ವಿಷಯವಾಗಿದೆ."

Every day since the start of April, 15-20 bodies are being brought to the crematorium in Osmanabad town
PHOTO • Parth M.N.
Every day since the start of April, 15-20 bodies are being brought to the crematorium in Osmanabad town
PHOTO • Parth M.N.

ಏಪ್ರಿಲ್ ಆರಂಭದಿಂದ ಪ್ರತಿದಿನ ಪ್ರತಿದಿನ 15-20 ಶವಗಳನ್ನು ಉಸ್ಮಾನಾಬಾದ್ ಪಟ್ಟಣದ ಶವಾಗಾರಕ್ಕೆ ತರಲಾಗುತ್ತಿದೆ

ಭಯದ ಹೊರತಾಗಿ, ಹಲವು ನಿರ್ಬಂಧಗಳಿಂದಾಗಿ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ‌ ಕೋವಿಡ್-19ರ ಎರಡನೇ ಅಲೆಯಲ್ಲಿ ಸೋಂಕು ಮತ್ತು ಸಾವಿನ ಅಂಕಿ ಅಂಶಗಳ ಏರಿಕೆಯಿಂದಾಗಿ, ಸಾಮಾನ್ಯವಾಗಿ ಶವಸಂಸ್ಕಾರದ ಸಮಯದಲ್ಲಿ ಒಬ್ಬ ಸಂಬಂಧಿಯ ಉಪಸ್ಥಿತಿಗೆ ಮಾತ್ರ ಅನುಮತಿಸಲಾಗುತ್ತದೆ. ಉಳಿದವರಿಗೆ ತಮ್ಮ ಪ್ರಿಯರಿಗೆ ಕೊನೆಯ ವಿದಾಯ ಹೇಳುವ ಅವಕಾಶ ಸಿಗುವುದಿಲ್ಲ. ದೈಹಿಕ ಅಂತರವನ್ನು ಕಾಪಾಡಿಕೊಂಡು ಪರಸ್ಪರ ಸಮಾಧಾನಪಡಿಸುವ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಗೆ ಅವರು ಒಳಗಾಗಿದ್ದಾರೆ. ಈ ಸಮಯದಲ್ಲಿ ತಮ್ಮ ಸಂಬಂಧಿಕರ ಮರಣದ ನಂತರ, ಅಂತಿಮ ವಿಧಿಗಳನ್ನು ಗೌರವದಿಂದ ಮಾಡುವುದು ಅನೇಕ ಜನರಿಗೆ ಸವಾಲಾಗಿ ಪರಿಣಮಿಸಿತು.

ತನ್ನ ತಂದೆಯ ದೇಹವನ್ನು ಗುರುತಿಸಲೆಂದು ಸುನಿಲ್ ಬಡೂರ್ಕರ್ ಶವಾಗಾರವನ್ನು ಪ್ರವೇಶಿಸಿದಾಗ, ದೇಹವು ಆಗಲೇ ಕೊಳೆಯಲು ಪ್ರಾರಂಭಿಸಿತ್ತು. "ಅಸಹನೀಯ ವಾಸನೆ ಬರುತ್ತಿತ್ತು" ಎಂದು ಉಸ್ಮಾನಾಬಾದ್‌ನ 58 ವರ್ಷದ ನಿವೃತ್ತ ಜಿಲ್ಲಾ ಪರಿಷತ್ ಅಧಿಕಾರಿ ಹೇಳುತ್ತಾರೆ. ನನ್ನ ತಂದೆಯ ದೇಹವನ್ನು ಬಹಳಷ್ಟು ಮೃತ ದೇಹಗಳೊಂದಿಗೆ ಇರಿಸಲಾಗಿತ್ತು, ಮತ್ತು ಅವುಗಳಲ್ಲಿ ಕೆಲವು ಕೊಳೆಯಲು ಪ್ರಾರಂಭಗೊಂಡಿದ್ದವು."

ಕರೋನಾ ಸೋಂಕಿಗೆ ಒಳಗಾದ ಸುನಿಲ್ ಅವರ 81 ವರ್ಷದ ತಂದೆ ಮನೋಹರ್ ಅವರನ್ನು ಏಪ್ರಿಲ್ 12ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅದರ ಒಂದು ದಿನದ ನಂತರ ನಿಧನರಾದರು. ಸುನಿಲ್ ವಿವರಿಸುತ್ತಾ, “ಆ ದಿನ, ನಗರದಲ್ಲಿ ಅನೇಕ ಜನರು ಸಾವನ್ನಪ್ಪಿದರು. ಎಲ್ಲವೂ ತುಂಬಾ ಗೋಜಲಾಗಿತ್ತು, ಕೋವಿಡ್‌ ರೋಗಿ ಸತ್ತಾಗ, 24 ಗಂಟೆಗಳ ನಂತರವೇ ನಾವು ಅವರ ಅಂತಿಮ ವಿಧಿಗಳ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಾಧ್ಯ. ನನ್ನ ತಂದೆಯಂತೆ ಕೋವಿಡ್ ರೋಗಿಯು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, ಮೃತ ದೇಹವನ್ನು ಉಸ್ಮಾನಾಬಾದ್‌ನ ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗುತ್ತದೆ, ಅಲ್ಲಿ ನಾವು ಶವವನ್ನು ಗುರುತಿಸಬೇಕಿರುತ್ತದೆ.ಇದರ ನಂತರ, ಶವಗಳನ್ನು ಆಂಬ್ಯುಲೆನ್ಸ್‌ ಒಂದರಲ್ಲಿ ತುಂಬಿಸಿ ಅಲ್ಲಿಂದ ಶ್ಮಶಾನಕ್ಕೆ ಕಳಿಸಲಾಗುತ್ತದೆ."

ಸ್ಮಶಾನದಲ್ಲಿ 15-20 ಚಿತೆಗಳನ್ನು ಸಾಲಾಗಿ ಸಿದ್ಧಗೊಳಿಸಿ ಇಟ್ಟಿರಲಾಗುತ್ತದೆ. ಅದರ ಮೇಲೆ ಕಾರ್ಮಿಕರು ಶವಗಳನ್ನು ಒಂದೊಂದಾಗಿ ಇರಿಸಿ ಒಮ್ಮಲೇ ಬೆಂಕಿ ಹಚ್ಚುತ್ತಾರೆ. "ಈ ರೀತಿಯ ಸಾವಿನಲ್ಲಿ ಶವಕ್ಕೆ ಸಿಗಬೇಕಾದ ಯಾವ ಮರ್ಯಾದೆಯೂ ಸಿಗುವುದಿಲ್ಲ" ಎನ್ನುತ್ತಾರೆ ಬಡೂರ್ಕರ್.‌

ಉಸ್ಮಾನಾಬಾದ್‌ನಲ್ಲಿ ಈವರೆಗೆ 1,250ಕ್ಕೂ ಹೆಚ್ಚು ಜನರು ಕೋವಿಡ್ -19 ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಅಂದಾಜಿಸಿದೆ ಮತ್ತು 2020ರ ಮಾರ್ಚ್‌ನಿಂದ 56,000 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಜಿಲ್ಲೆಯಾದ ಉಸ್ಮಾನಾಬಾದ್ ಹಲವಾರು ವರ್ಷಗಳಿಂದ ಗ್ರಾಮೀಣ ಸಂಕಷ್ಟ, ತೀವ್ರ ನೀರಿನ ಕೊರತೆ ಮತ್ತು ರೈತ ಆತ್ಮಹತ್ಯೆಗಳೊಂದಿಗೆ ಹೋರಾಡುತ್ತಿದೆ. ಈ ಕೃಷಿ ಪ್ರಧಾನ  ಪ್ರದೇಶದಲ್ಲಿ, ಕೊರೋನದ ಈ ಎರಡನೆಯ ಮತ್ತು ಮಾರಕ ಅಲೆಯು ಈಗಾಗಲೇ ಸಾಲದಲ್ಲಿರುವ ಈ ಜನರಿಗೆ ಕೈಯಲ್ಲಿರುವ ಚೂರುಪಾರು ಹಣವನ್ನೂ ಆರೋಗ್ಯ ಸೇವೆಗಳಿಗೆ ಖರ್ಚು ಮಾಡುವಂತೆ ಮಾಡಿದೆ.

Family members sometimes skip a deceased relative's funeral out of fear of the virus; they ask municipal workers to conduct the basic cremation rituals
PHOTO • Parth M.N.
Family members sometimes skip a deceased relative's funeral out of fear of the virus; they ask municipal workers to conduct the basic cremation rituals
PHOTO • Parth M.N.

ವೈರಸ್ ಭಯದಿಂದಾಗಿ ಅಂತಿಮ ವಿಧಿಗಳಿಗೆ ಹಾಜರಾಗಲು ಅನೇಕ ಬಾರಿ ಕುಟುಂಬದ ಸದಸ್ಯರು ಹಿಂದೇಟು ಹಾಕುತ್ತಾರೆ; ಅವರು ಪುರಸಭೆ ಕಾರ್ಮಿಕರನ್ನು ಪ್ರಾಥಮಿಕ ಧಾರ್ಮಿಕ ಅಂತ್ಯ ವಿಧಿಗಳನ್ನು ನಡೆಸಲು ಕೇಳಿಕೊಳ್ಳುತ್ತಾರೆ

ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಕುಟುಂಬ ಸದಸ್ಯರು ಮೃತ ದೇಹವನ್ನು ಪಡೆಯಲು ಮುಂದೆ ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಸೋಂಕಿಗೆ ಒಳಗಾಗುವ ಭಯ, ಒಂದು ವೇಳೆ ಸೋಂಕಿಗೆ ಒಳಗಾದಲ್ಲಿ ಅವರು ಸಾಲದ ಸುಳಿಯಲ್ಲಿ ಸಿಕ್ಕು ನರಳಬೇಕಾಗುತ್ತದೆ.

ಆದಾಗ್ಯೂ, ಕೆಲವರು ಸಹಾಯ ಮಾಡಲು ತಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಉಸ್ಮಾನಾಬಾದ್‌ನ ಕೆಲವು ಮುಸ್ಲಿಂ ಕಾರ್ಯಕರ್ತರು ಹೋದವರನ್ನು ಗೌರವದಿಂದ ಕಳಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಅಂತಹ 8-10 ಸ್ವಯಂಸೇವಕರಲ್ಲಿ ಒಬ್ಬರಾದ 34 ವರ್ಷದ ಬಿಲಾಲ್ ತಂಬೋಲಿ, "ನಾವು ಎರಡನೇ ಅಲೆಯ ಸಮಯದಲ್ಲಿ 40ಕ್ಕೂ ಹೆಚ್ಚು ಜನರ ಅಂತಿಮ ಸಂಸ್ಕಾರ ನಡೆಸಿದ್ದೇವೆ" ಎಂದು ಹೇಳುತ್ತಾರೆ. ಮತ್ತು ಕೊರೋನಾ ಪ್ರಾರಂಭಗೊಂಡಾಗಿನಿಂದ 100ಕ್ಕೂ ಹೆಚ್ಚು ಜನರ ಅಂತಿಮ ಸಂಸ್ಕಾರ ನಡೆಸಿದ್ದಾರೆ. "ಆಸ್ಪತ್ರೆ ನಮಗೆ ಮಾಹಿತಿ ನೀಡುತ್ತದೆ. ನಂತರ ನಾವು ಮುಂದುವರೆಯುತ್ತೇವೆ. ಮೃತರು ಮುಸ್ಲಿಂ ಕುಟುಂಬಕ್ಕೆ ಸೇರಿದವರಾಗಿದ್ದರೆ, ನಾವು ಮುಸ್ಲಿಮರು ಮಾಡುವ ಆಚರಣೆಗಳನ್ನು ಕೈಗೊಳ್ಳುತ್ತೇವೆ. ವ್ಯಕ್ತಿಯು ಹಿಂದೂ ಆಗಿದ್ದರೆ ಹಿಂದೂ ಆಚರಣೆಗಳನ್ನು ನಡೆಸುತ್ತೇವೆ. ಇದು ಸಾವಿನಲ್ಲಿ ಒಂದಿಷ್ಟು ಘನತೆಯನ್ನು ಕಾಪಾಡುವ ಒಂದು ಪ್ರಯತ್ನ.”

ಬಿಲಾಲ್‌ ತನ್ನ ಗುಂಪಿನ ಪ್ರಯತ್ನಗಳಿಗೆ ಪ್ರಚಾರ ಪಡೆದಂತಾಗುತ್ತದೆಯೇನೋ ಎನ್ನುವ ಆತಂಕದಲ್ಲಿದ್ದರು. ಅವರ ಪ್ರಕಾರ ಇಂತಹ ಕೆಲಸಗಳಿಂದ ಪ್ರಚಾರ ಪಡೆಯುವುದು ತಪ್ಪು. ಅವಿವಾಹಿತರಾದ ಬಿಲಾಲ್‌ ಅವರಿಗೆ ತಾನು ಮಾಡುತ್ತಿರುವ ಕೆಲಸದಲ್ಲಿರುವ ಅಪಾಯಗಳ ಅರಿವಿದೆ. "ನನಗೆ ನನ್ನ ಕುಟುಂಬದ ಆರೋಗ್ಯದ ಕುರಿತು ಭಯವಿದೆ" ಬಿಲಾಲ್ ಹೇಳುತ್ತಾರೆ. "ನನಗೆ ಸೋಕು ತಗುಲಿದಲ್ಲಿ ನನಗೆ ಆ ಕುರಿತು ಯಾವುದೇ ಬೇಸರವಿಲ್ಲ. ಆದರೆ ನಾನು ನನ್ನ ಪೋಷಕರು, ಸಹೋದರ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದೇನೆ. ನಮ್ಮ ಮನೆ ದೈಹಿಕ ಅಂತರವನ್ನು ಕಾಪಾಡುವಷ್ಟು ದೊಡ್ಡದಾಗಿಲ್ಲ. ನಾನು ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಮತ್ತು ಪ್ರತಿ ಅಂತ್ಯಕ್ರಿಯೆಯ ಮೊದಲು ಮೌನ ಪ್ರಾರ್ಥನೆ ಸಲ್ಲಿಸುತ್ತೇನೆ."

ಕುಟುಂಬಗಳು ಹೇಳುವಂತೆ, ಕೋವಿಡ್ ಕಾಲದಲ್ಲಿನ ಅಂತ್ಯಕ್ರಿಯೆಗಳ ಸ್ವರೂಪದಿಂದಾಗಿ, ಅದರ ನಿಯಮಗಳಿಂದಾಗಿ ಅವರಿಗೆ ಅದನ್ನು ನಿರ್ವಹಿಸುವುದು ಬಹಳ ಕಷ್ಟ. "ಸಾವೆನ್ನುವುದು ಕುಟುಂಬವೊಂದರಲ್ಲಿ ನಡೆಯುವ ನೋವಿನ ಘಟನೆ" ಎಂದು ಉಸ್ಮಾನಾಬಾದ್ ಪಟ್ಟಣದ ಹೊರವಲಯದ ರೈತರಾದ 36 ವರ್ಷದ ದೀಪಾಲಿ ಯಾದವ್ ಹೇಳುತ್ತಾರೆ. "ಇದನ್ನು ಒಂದು ಕುಟುಂಬವಾಗಿ ಒಟ್ಟಾಗಿ ಸೇರಿ ಪೂರೈಸುತ್ತೀರಿ. ಜನರು ಬಂದು ನಿಮಗೆ ಸಾಂತ್ವಾನವನ್ನು ಹೇಳುತ್ತಾರೆ. ನೀವು ಪರಸ್ಪರ ಸ್ಥೈರ್ಯ ಪಡೆದುಕೊಳ್ಳುತ್ತೀರಿ. ಈಗ ಅದ್ಯಾವುದೂ ಸಾಧ್ಯವಿಲ್ಲ."

Left: Bilal Tamboli (in yellow shirt) and his group of volunteers conduct funerals of unclaimed bodies. Centre and right: Dipali and Arvind Yadav say there was no time to grieve when Arvind's parents died
PHOTO • Parth M.N.
Left: Bilal Tamboli (in yellow shirt) and his group of volunteers conduct funerals of unclaimed bodies. Centre and right: Dipali and Arvind Yadav say there was no time to grieve when Arvind's parents died
PHOTO • Parth M.N.
Left: Bilal Tamboli (in yellow shirt) and his group of volunteers conduct funerals of unclaimed bodies. Centre and right: Dipali and Arvind Yadav say there was no time to grieve when Arvind's parents died
PHOTO • Parth M.N.

ಎಡ: ಬಿಲಾಲ್ ತಂಬೋಲಿ (ಹಳದಿ ಅಂಗಿಯಲ್ಲಿ) ಮತ್ತು ಅವರ ಸ್ವಯಂಸೇವಕರ ಗುಂಪು ಸಂಬಂಧಿಕರು ನಿರಾಕರಿಸಿದ ದೇಹಗಳ ಅಂತಿಮ ಸಂಸ್ಕಾರವನ್ನು ಮಾಡುತ್ತಾರೆ. ಮಧ್ಯ ಮತ್ತು ಬಲ: ಅರವಿಂದ್ ಅವರ ಹೆತ್ತವರ ನಿಧನಕ್ಕೆ ಸಂತಾಪ ಸೂಚಿಸುವ ಅವಕಾಶವೂ ಸಿಗಲಿಲ್ಲ ಎಂದು ದೀಪಾಲಿ ಮತ್ತು ಅರವಿಂದ್ ಯಾದವ್ ಹೇಳುತ್ತಾರೆ

ಏಪ್ರಿಲ್ ಮೂರನೇ ವಾರದಲ್ಲಿ, ದೀಪಾಲಿಯ ಅತ್ತೆ ಮತ್ತು ಮಾವ 24 ಗಂಟೆಗಳ ಅಂತರದಲ್ಲಿ ಮರಣಹೊಂದಿದಾಗ, ದೀಪಾಲಿಯವರ ಇಡೀ ಕುಟುಂಬವು ಕೋವಿಡ್ -19 ಸೋಂಕಿಗೆ ಒಳಗಾಗಿತ್ತು. ಅವರು ಹೇಳುತ್ತಾರೆ, "ನನ್ನ ಪತಿ ಆಸ್ಪತ್ರೆಯಲ್ಲಿದ್ದರು. ನಮ್ಮ ಮೂವರು ಮಕ್ಕಳು ಮನೆಯಲ್ಲಿದ್ದರು. ನಾನು ಇನ್ನೊಂದು ಕೋಣೆಯಲ್ಲಿದ್ದೆ. ಎಲ್ಲವೂ ಬಹಳ ವಿಚಿತ್ರವಾಗಿತ್ತು. ಒಂದೆಡೆ, ಇಬ್ಬರು ಕುಟುಂಬ ಸದಸ್ಯರ ನಷ್ಟವನ್ನು ನಾನು ಅರಗಿಸಿಕೊಳ್ಳುತ್ತಿದ್ದೆ. ಮತ್ತೊಂದೆಡೆ, ನಾನು ನನ್ನ ಗಂಡನ ಬಗ್ಗೆ ಚಿಂತೆ ಮಾಡುತ್ತಿದ್ದೆ. ಆ ಕೋಣೆಯಲ್ಲಿ ಏಕಾಂಗಿಯಾಗಿ ಕುಳಿತು, ಹುಚ್ಚು ಹಿಡಿದಂತೆ ಭಾಸವಾಗುತ್ತಿತ್ತು."

ದೀಪಾಲಿಯ ಪತಿ ಕೂಡ ಕೃಷಿಕ. ಅರವಿಂದ್ ಅವರು ತಮ್ಮ ಹೆತ್ತವರನ್ನು ಅವರ ಕೊನೆಯ ದಿನಗಳಲ್ಲಿ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸುತ್ತಾರೆ. ಅವರು ಹೇಳುತ್ತಾರೆ, “ನನ್ನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರೂ, ನಾನು ಪಿಪಿಇ ಕಿಟ್ ಧರಿಸಿ ಸ್ಮಶಾನಕ್ಕೆ ಹೋಗಿ ಅವರನ್ನು ಸುಡುವುದನ್ನು ನೋಡಿದೆ. ಅದಷ್ಟೇ ಅಂದಿನ ಮಟ್ಟಿಗೆ ನನಗೆ ಸಾಧ್ಯವಾಗಿದ್ದು."

45 ರ ಹರೆಯದ ಅರವಿಂದ್, ತಮ್ಮ ಹೆತ್ತವರ ಸಾವಿಗೆ ದುಃಖಿಸಲು ಕುಟುಂಬಕ್ಕೆ ಸಮಯವಿರಲಿಲ್ಲ ಎಂದು ಹೇಳುತ್ತಾರೆ. "ಮೃತ ದೇಹವನ್ನು ಗುರುತಿಸುವುದು, ಸ್ಮಶಾನಕ್ಕೆ ಕೊಂಡೊಯ್ಯುವುದು ಮತ್ತು ನಂತರ ಅಂತ್ಯಕ್ರಿಯೆಯ ಎಲ್ಲಾ ನಿಯಮಗಳನ್ನು ಅನುಸರಿಸುವುದು ಇದರಲ್ಲೇ ಸಮಯ ಮುಗಿದು ಹೋಗುತ್ತದೆ" ಎಂದು ಅವರು ಹೇಳುತ್ತಾರೆ.

"ಅಂತ್ಯಕ್ರಿಯೆಗಳು ತೀರಾ ಯಾಂತ್ರಿಕ ಕ್ರಿಯೆಯಾಗಿ ಬದಲಾಗಿವೆ. ನಿಮಗೆ ಶೋಕಿಸಲು ಸಮಯ ಸಿಗುವುದಿಲ್ಲ. ದುಃಖವನ್ನು ವ್ಯಕ್ತಪಡಿಸುವಂತಿಲ್ಲ. ನಿಮ್ಮವರ ದೇಹಗಳು ಉರಿಯಲು ಪ್ರಾರಂಭಿಸಿದ ಕ್ಷಣವೇ ನಿಮ್ಮನ್ನು ಅಲ್ಲಿಂದ ಹೊರಡುವಂತೆ ಸೂಚಿಸಲಾಗುತ್ತದೆ. ಯಾಕೆಂದರೆ ಅಲ್ಲಿ ತಮ್ಮ ಸರದಿಗಾಗಿ ಇನ್ನಷ್ಟು ಹೆಣಗಳು ಕಾಯುತ್ತಿರುತ್ತವೆ.”

ಅರವಿಂದ್ ಅವರ ತಾಯಿ ಆಶಾ, 67, ಏಪ್ರಿಲ್ 16ರಂದು ನಿಧನರಾದರು. ಅವರ ತಂದೆ ವಸಂತ್, 80, ಮರುದಿನ ನಿಧನರಾದರು. ಸ್ಮಶಾನದ ಕೆಲಸಗಾರರು ಸೌಜನ್ಯದ ನಡೆಯಾಗಿ ಪತಿ ಪತ್ನಿಯಿಬ್ಬರ ಚಿತೆಯನ್ನು ಪಕ್ಕ-ಪಕ್ಕದಲ್ಲೇ ತಯಾರಿಸಿದರು. "ಆ ದಿನ ನನಗೆ ದೊರೆತ ಏಕೈಕ ಸಮಾಧಾನವೆಂದರೆ ಇದು" ಎಂದು ಅವರು ಹೇಳುತ್ತಾರೆ. “ನನ್ನ ಹೆತ್ತವರು ಸದಾ ಜೊತೆಯಲ್ಲಿದ್ದರು ಸಾವಿನಲ್ಲೂ ಒಂದಾದರು. ಇಬ್ಬರೂ ಒಟ್ಟಿಗೆ ನಿರ್ಗಮಿಸಿದ್ದರಿಂದಾಗಿ ಅವರಿಬ್ಬರ ಆತ್ಮಕ್ಕೂ ಶಾಂತಿ ದೊರೆತಿರಬಹುದು.”

ಅನುವಾದ : ಶಂಕರ ಎನ್ . ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru