“ಸಾತ್‌ ಬಾರಾಹ್‌ ಇಲ್ಲದೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ” ಇದು 55- ವರ್ಷದ ಶಶಿಕಲಾ ಗಾಯಕ್‌ವಾಡ್‌ ಅವರ ಮಾತು. ಅವರು ರೈತ ಹೋರಾಟ ನಡೆಯುತ್ತಿದ್ದ ದಕ್ಷಿಣ ಮುಂಬೈನ ಆಝಾದ್‌ ಮೈದಾನದಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು.

ಅವರ ಪಕ್ಕದಲ್ಲಿ ಕಿತ್ತಳೆ ಮತ್ತು ಕೆಂಪು ಬಣ್ಣದ ರಗ್ಗು ಹಾಸಿದ ನೆಲದ ಮೇಲೆ 65 ವರ್ಷದ ಅರುಣಬಾಯಿ ಸೊನಾವಣೆ ಕುಳಿತಿದ್ದರು. ಜನವರಿ 25-26ರಂದು ಶೆತ್ಕರಿ ಕಾಮಗಾರ್‌ ಮೋರ್ಚಾ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೆಂದು ಇಬ್ಬರೂ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಚಿಮನಾಪುರ ಗ್ರಾಮದಿಂದ ಮುಂಬೈಗೆ ಬಂದಿದ್ದರು.

2006ರ ಅರಣ್ಯ ಹಕ್ಕುಗಳ ಕಾಯ್ದೆ ಯಡಿ ತಮಗೆ ಭೂಮಿಯ ಹಕ್ಕನ್ನು ನೀಡಬೇಕು ಮತ್ತು ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಹೋರಾಟ ಮಾಡಲು ಇಬ್ಬರೂ ಇಲ್ಲಿ ಸೇರಿದ್ದರು. ಭಿಲ್ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಅರುಣಬಾಯಿ ಮತ್ತು ಶಶಿಕಲಾ ಕನ್ನಡ್ ತಾಲೂಕಿನಲ್ಲಿರುವ ಅವರ ಗ್ರಾಮದಲ್ಲಿ, ಕೃಷಿ ಕೂಲಿಯೇ ಅವರ ಜೀವನೋಪಾಯದ ಮೂಲವಾಗಿದೆ. ಕೆಲಸಗಳು ಲಭ್ಯವಿರುವ ದಿನಗಳಲ್ಲಿ 150-200 ರೂ. ದಿನಗೂಲಿ ಸಂಪಾದಿಸುತ್ತಾರೆ. "ನಮಗೆ ನಿಮ್ಮಂತೆ ತಿಂಗಳಿಗೆ ಇಷ್ಟೇ ಸಂಪಾದನೆಯಾಗುತ್ತದೆಯೆಂದು ಹೇಳಲು ಸಾಧ್ಯವಿಲ್ಲ" ಎಂದು ಅರುಣಬಾಯಿ ನನ್ನೊಂದಿಗೆ ಹೇಳಿದರು.

ಇಬ್ಬರೂ ತಮ್ಮ ಮೂರು ಎಕರೆ ಜಾಗದಲ್ಲಿ ಜೋಳ ಮತ್ತು ಜೋವರ್ (ಹುಲ್ಲುಜೋಳ) ಬೆಳೆಯುತ್ತಾರೆ. ಅವರು ಬೆಳೆಯುವ 10-12 ಕ್ವಿಂಟಾಲ್‌ ಜೋಳವನ್ನು‌ ಕ್ವಿಂಟಾಲ್‌ಗೆ 1000ದಂತೆ ಮಾರುತ್ತಾರೆ. ಜೋವರ್‌ ಅನ್ನು ತಮ್ಮ ಕುಟುಂಬದ ಬಳಕೆಗಾಗಿ ಇಟ್ಟುಕೊಳ್ಳುತ್ತಾರೆ. ಹೊಲಗಳಿಗೆ ಬೇಲಿಯಿದ್ದರೂ ಕಾಡುಹಂದಿಗಳು, ನೀಲಗಾಯ್‌ಗಳು ಮತ್ತು ಕೋತಿಗಳು ಹೊಲದೊಳಗೆ ನುಗ್ಗಿ ಬೆಳೆ ನಾಶ ಮಾಡುತ್ತವೆ. "ಹೊಲ ಇರುವವರು ರಾತ್ರಿಯಿಡೀ [ಬೆಳೆಗಳನ್ನು ಕಾಪಾಡಲು] ಎದ್ದಿರಲೇಬೇಕು" ಎಂದು ಅರುಣಬಾಯಿ ಹೇಳುತ್ತಾರೆ.

ಶಶಿಕಲಾ ಮತ್ತು ಅರುಣಬಾಯಿ ಬೇಸಾಯ ಮಾಡುವ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು. "ಸಾತ್‌ ಬಾರಾಹ್ (ಏಳು ಹನ್ನೆರಡು) [ಭೂಮಿಯ ಮಾಲೀಕತ್ವದ ದಾಖಲೆ] ಇಲ್ಲದೆ ನಾವು [ಕೃಷಿ‌ ಸಂಬಂಧಿ] ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ" ಎಂದು ಶಶಿಕಲಾ ಹೇಳಿದರು. “ಅರಣ್ಯ ಇಲಾಖೆಯ ಜನರು ಕೂಡ ನಮಗೆ ಕಿರುಕುಳ ನೀಡುತ್ತಲೇ ಇರುತ್ತಾರೆ. ಅವರು ನಮಗೆ ಇಲ್ಲಿ ಕೃಷಿ ಮಾಡಬೇಡಿ, ಅಲ್ಲಿ ನಿಮ್ಮ ಮನೆಯನ್ನು ನಿರ್ಮಿಸಬೇಡಿ, ನೀವು ಟ್ರ್ಯಾಕ್ಟರ್ ತಂದರೆ ನಾವು ನಿಮ್ಮ ಮೇಲೆ ದಂಡ ವಿಧಿಸುತ್ತೇವೆ ಎಂದು ಹೆದರಿಸುತ್ತಾರೆ."

ದೆಹಲಿ ಗಡಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲವಾಗಿ ಶಶಿಕಲಾ ಮತ್ತು ಅರುಣಾ ಬಾಯಿ ಆಝಾದ್‌ ಮೈದಾನಕ್ಕೆ ಬಂದಿದ್ದಾರೆ. ರೈತರು ವಿರೋಧಿಸುತ್ತಿರುವ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕೃಷಿ ಕಾನೂನುಗಳನ್ನು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20 ರ ಹೊತ್ತಿಗೆ ಕಾಯಿದೆಗಳನ್ನಾಗಿ ಪರಿಚಯಿಸಲಾಯಿತು.
'There will be more pressure if more of us come [to protest]', says Arunabai Sonawane (right), with Shashikala Gaikwad at the Azad Maidan farm sit-in
PHOTO • Riya Behl

'ಹೆಚ್ಚಿನ ಸಂಖ್ಯೆಯಲ್ಲಿ ಜನರು [ಪ್ರತಿಭಟಿಸಲು] ಬಂದರೆ, ಹೆಚ್ಚಿನ ಒತ್ತಡ ಉಂಟಾಗುತ್ತದೆ' ಎಂದು ಶಶಿಕಲಾ ಗಾಯಕ್‌ವಾಡ್ ಜೊತೆಗೆ ಆಜಾದ್ ಮೈದಾನದ ಧರಣಿಯಲ್ಲಿ ಕುಳಿತಿದ್ದ ಅರುಣಬಾಯಿ ಸೊನಾವಣೆ ಹೇಳಿದರು (ಬಲ)

ರೈತರು ಈ ಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಶಶಿಕಲಾ ಮತ್ತು ಅರುಣಬಾಯಿಗೆ ಇತರ ಸಮಸ್ಯೆಗಳೂ ಇವೆ. ಸುಮಾರು ಹತ್ತು ವರ್ಷಗಳ ಹಿಂದೆ ಅವರ ಗಂಡಂದಿರು ಕ್ಷಯರೋಗದಿಂದ ಸಾವನ್ನಪ್ಪಿದರು. ಆದರೆ ಇಬ್ಬರೂ ಇದುವರೆಗೆ ವಿಧವೆ ಪಿಂಚಣಿ ಸೌಲಭ್ಯ ಪಡೆದಿಲ್ಲ. ಶಶಿಕಲಾ ತನ್ನ ಇಬ್ಬರು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಕುಟುಂಬದ ಎಲ್ಲಾ ಐವರು ಸದಸ್ಯರೂ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಾರೆ ಜೊತೆಗೆ ಇನ್ನೊಬ್ಬರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾರೆ.

"ನಮ್ಮಲ್ಲಿ ಆರು ಮಂದಿ [ವಿಧವೆಯರು] [ಕನ್ನಡ ತಾಲೂಕು] ತಹಶೀಲ್ದಾರರ ಕಚೇರಿಗೆ [ಪಿಂಚಣಿ] ಅರ್ಜಿಗಳೊಂದಿಗೆ ಹೋಗಿದ್ದೆವು" ಎಂದು ಅರುಣಬಾಯಿ ಸುಮಾರು ಎರಡು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡರು. "ನನಗೆ ಇಬ್ಬರು ವಯಸ್ಕ ಗಂಡು ಮಕ್ಕಳಿರುವುದರಿಂದ ಪಿಂಚಣಿ ಸಿಗುವುದಿಲ್ಲ ಎಂದು ಅವರು ಹೇಳಿದರು."

ಅರುಣಬಾಯಿ ತನ್ನ ಇಬ್ಬರು ಗಂಡು ಮಕ್ಕಳು, ಅವರ ಹೆಂಡತಿಯರು ಮತ್ತು ಎಂಟು ಮೊಮ್ಮಕ್ಕಳ 13 ಸದಸ್ಯರಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಕೆಯ ಕುಟುಂಬದ ಐದೂ ವಯಸ್ಕರು ರೈತರು ಮತ್ತು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಮತ್ತು ಕೆಲವೊಮ್ಮೆ ಚಿಮನಾಪುರದಲ್ಲಿರುವ ಸಣ್ಣ ಕೊಳದಿಂದ ಮೀನುಗಳನ್ನು ಹಿಡಿದು ಬಳಸುತ್ತಾರೆ.

"ನಾಳೆ ನನ್ನ ಹಿರಿಯಣ್ಣನ ಮಗನ ವಿವಾಹವಿದೆ, ಆದರೆ ನಾನು ಇಲ್ಲಿಗೆ ಬಂದಿದ್ದೇನೆ - ಏನಾಗುತ್ತಿದೆಯೆನ್ನುವುದನ್ನು ಕೇಳಲು ಮತ್ತು ತಿಳಿಯಲು" ಎಂದು ಅರುಣಬಾಯಿ ಆ ದಿನ ಮುಂಬಯಿಯ ಆಜಾದ್ ಮೈದಾನದಲ್ಲಿ ದೃಢವಾಗಿ ಹೇಳಿದರು. “ನಮ್ಮಲ್ಲಿ ಹೆಚ್ಚು ಜನರು [ಪ್ರತಿಭಟಿಸಲು] ಬಂದರೆ ಹೆಚ್ಚಿನ ಒತ್ತಡವಿರುತ್ತದೆ. ಆ ಕಾರಣಕ್ಕಾಗಿಯೇ ನಾವು ಇಲ್ಲಿದ್ದೇವೆ."

ಅನುವಾದ: ಶಂಕರ ಎನ್. ಕೆಂಚನೂರು

Riya Behl

Riya Behl is a journalist and photographer with the People’s Archive of Rural India (PARI). As Content Editor at PARI Education, she works with students to document the lives of people from marginalised communities.

Other stories by Riya Behl
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru