ಲಡಾಖಿನ ಸುರು ಕಣಿವೆಯ ಹಳ್ಳಿಗಳು ಬೇಸಿಗೆಯ ತಿಂಗಳುಗಳಲ್ಲಿ ಜೀವತುಂಬಿಕೊಳ್ಳುತ್ತವೆ. ಸೊಂಪಾದ ಹಸಿರು ಗದ್ದೆಗಳ ಮೂಲಕ ತೊರೆಗಳು ಜುಳುಜುಳು ಎನ್ನುತ್ತ ಹರಿಯುತ್ತವೆ, ಕಾಡು ಹೂಗಳು ಅರಳಿ ನಿಲ್ಲುತ್ತವೆ ಮತ್ತು ಹಿಮಾಚ್ಛಾದಿತ ಪರ್ವತಗಳು ಸುತ್ತಲೂ ಕಾಣುತ್ತವೆ. ಹಗಲಿನ ಆಕಾಶವು ಸುಂದರ ನೀಲಿ ಬಣ್ಣದಲ್ಲಿದ್ದರೆ, ರಾತ್ರಿ ಆಕಾಶದಲ್ಲಿ ನೀವು ಕ್ಷೀರಪಥವನ್ನು ಕಾಣಬಹುದು.
ಕಾರ್ಗಿಲ್ ಜಿಲ್ಲೆಯ ಈ ಕಣಿವೆಯ ಪರಿಸರದೊಡನೆ ಇಲ್ಲಿಯ ಮಕ್ಕಳು ಹಂಚಿಕೊಳ್ಳುವ ಸಂಬಂಧವು ಬಹಳ ಸಂವೇದನಾಶೀಲವಾದದ್ದು. 2021ರಲ್ಲಿ ತಾಯ್ ಸುರು ಗ್ರಾಮದಲ್ಲಿ ತೆಗೆದ ಈ ಫೋಟೋಗಳಲ್ಲಿ, ಇಲ್ಲಿನ ಹೆಣ್ಣುಮಕ್ಕಳು ಬೇಸಿಗೆಯಲ್ಲಿ ಹೂಗಳನ್ನು ಸಂಗ್ರಹಿಸುವುದು, ಚಳಿಗಾಲದಲ್ಲಿ ಹಿಮದೊಡನೆ ಆಡುವುದು ಮತ್ತು ತೊರೆಗಳಲ್ಲಿ ಜಿಗಿಯುವುದನ್ನು ಕಾಣಬಹುದು. ಬಾರ್ಲಿ ಹೊಲಗಳಲ್ಲಿ ಆಡುವುದು ಇಲ್ಲಿನ ಮಕ್ಕಳ ಬೇಸಿಗೆಯ ನೆಚ್ಚಿನ ಚಟುವಟಿಕೆಯಾಗಿದೆ.
ಕಾರ್ಗಿಲ್ ಬಹಳ ದೂರದಲ್ಲಿದೆ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಏಕೈಕ ಜಿಲ್ಲೆಯಾದ ಲೇಹ್‌ನ ಜನಪ್ರಿಯ ಪ್ರವಾಸಿ ತಾಣದಿಂದ ಬಹಳ ದೂರದಲ್ಲಿದೆ.
ಹೆಚ್ಚಿನ ಸಂದರ್ಭದಲ್ಲಿ, ಅನೇಕ ಜನರು ಕಾರ್ಗಿಲ್ ಕಾಶ್ಮೀರ ಕಣಿವೆಯಲ್ಲಿರಬೇಕೆಂದು ಗೊಂದಲಕ್ಕೊಳಗಾಗುತ್ತಾರೆ, ಆದರೆ ಅದು ಅಲ್ಲಿಲ್ಲ. ಮತ್ತು ಕಾಶ್ಮೀರದಂತೆ ಇಲ್ಲಿ ಸುನ್ನಿ ಮುಸ್ಲಿಮರು ಬಹುಸಂಖ್ಯಾತರಲ್ಲ. ಇಲ್ಲಿನ ಬಹುಸಂಖ್ಯಾತರ ನಂಬಿಕೆ ಶಿಯಾ ಪಂಥವಾಗಿದೆ.
ಕಾರ್ಗಿಲ್ ಪಟ್ಟಣದಿಂದ ದಕ್ಷಿಣಕ್ಕೆ 70 ಕಿಲೋಮೀಟರ್ ದೂರದಲ್ಲಿರುವ ತಾಯ್ ಸುರುವನ್ನು ಸುರು ಕಣಿವೆಯ ಶಿಯಾ ಮುಸ್ಲಿಮರು ಪ್ರಮುಖ ಧಾರ್ಮಿಕ ಕೇಂದ್ರವೆಂದು ಪರಿಗಣಿಸುತ್ತಾರೆ. ಇಲ್ಲಿನ ಜನರಿಗೆ, ಇಸ್ಲಾಮಿಕ್ ಹೊಸ ವರ್ಷದ ಮೊದಲ ತಿಂಗಳು ಮೊಹರಂ - ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರಿಗೆ ಸಂಬಂಧಿಸಿದಂತೆ ತೀವ್ರ ಶೋಕದ ಸಮಯವಾಗಿದೆ. CE 680ರ ಅಕ್ಟೋಬರ್ 10ರಂದು ಕರ್ಬಲಾ ಕದನದಲ್ಲಿ (ಆಧುನಿಕ ಇರಾನಿನಲ್ಲಿ) 72 ಸಹಚರರೊಂದಿಗೆ ಅವರನ್ನು ಕೊಲ್ಲಲಾಯಿತು.
ಮೊಹರಂ ಸಮಯದಲ್ಲಿ ನಡೆದ ಘಟನೆಯನ್ನು ನೆನಪಿಸುವ ಆಚರಣೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಭಾಗವಹಿಸುತ್ತಾರೆ. ಜುಲೂಸ್ ಅಥವಾ ದಸ್ತ ಎಂದು ಕರೆಯಲ್ಪಡುವ ಮೆರವಣಿಗೆಗಳನ್ನು ಹಲವಾರು ದಿನಗಳವರೆಗೆ ನಡೆಸಲಾಗುತ್ತದೆ. ಇವುಗಳಲ್ಲಿ ಅತಿ ದೊಡ್ಡದು ಮೊಹರಂನ ಹತ್ತನೇ ದಿನವಾದ ಅಶುರಾದಲ್ಲಿ ಹುಸೈನ್ ಮತ್ತು ಅವನ ಪರಿವಾರವನ್ನು ಕರ್ಬಲಾದಲ್ಲಿ ಹತ್ಯಾಕಾಂಡಕ್ಕೆ ಒಳಪಡಿಸಿದ ಸಂದರ್ಭದ ನೆನಪಿನಲ್ಲಿ. ಕೆಲವು ಪುರುಷರು ಸರಪಳಿಗಳು ಮತ್ತು ಬ್ಲೇಡುಗಳಿಂದ ಸ್ವಯಂ-ಹೊಡೆದುಕೊಳ್ಳುವ (ಖಮಾ ಜಾನಿ) ಆಚರಣೆಯನ್ನು ಆಚರಿಸುತ್ತಾರೆ, ಮತ್ತು ಪ್ರತಿಯೊಬ್ಬರೂ ತಮ್ಮ ಎದೆಗಳನ್ನು (ಸೀನಾ ಜಾನಿ) ಹೊಡೆದುಕೊಳ್ಳುತ್ತಾರೆ.

ಸುರು ಕಣಿವೆಯ ಕಾರ್ಗಿಲ್ ಪಟ್ಟಣದಿಂದ ದಕ್ಷಿಣಕ್ಕೆ 70 ಕಿಲೋಮೀಟರ್ ದೂರದಲ್ಲಿರುವ ತಾಯ್ ಸುರು ಗ್ರಾಮವು ಸುಮಾರು 600 ಜನರಿಗೆ ನೆಲೆಯಾಗಿದೆ. ಇದು ಕಾರ್ಗಿಲ್ ಜಿಲ್ಲೆಯ ತೈಫ್ಸುರು ತಹಸಿಲ್‌ನ ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ
ಆಶುರಾದ ಹಿಂದಿನ ರಾತ್ರಿ, ಮಹಿಳೆಯರು ಮಸೀದಿಯಿಂದ ಇಮಾಂಬರಾ (ಸಭಾಂಗಣ)ವರೆಗೆ ಮೆರವಣಿಗೆ ನಡೆಸುತ್ತಾರೆ, ಮಾರ್ಸಿಯಾ ಮತ್ತು ನೋಹಾ (ಶೋಕ ಮತ್ತು ಗೋಳಾಟಗಳು) ಪಠಿಸುತ್ತಾರೆ. (ಈ ವರ್ಷ ಆಗಸ್ಟ್ 8-9ರಂದು ಆಶುರಾ ಬರುತ್ತದೆ.)
ಹುಸೈನ್ ಮತ್ತು ಇತರರ ಪ್ರತಿರೋಧ ಮತ್ತು ತ್ಯಾಗವನ್ನು ಸ್ಮರಿಸಲು ಮೊಹರಂ ಸಮಯದಲ್ಲಿ ಇಮಾಂಬರಾದಲ್ಲಿ ದಿನಕ್ಕೆರಡು ಬಾರಿ ನಡೆಯುವ ಮಜ್ಲಿಸ್ (ಧಾರ್ಮಿಕ ಸಭೆ)ಗಾಗಿ ಎಲ್ಲರೂ ಸೇರುತ್ತಾರೆ. ಸಭಾಂಗಣದ ಪ್ರತ್ಯೇಕ ಸ್ಥಳಗಳಲ್ಲಿ ಕುಳಿತು, ಪುರುಷರು (ಮತ್ತು ಹುಡುಗರು) ಮತ್ತು ಮಹಿಳೆಯರು ಆಘಾ (ಧಾರ್ಮಿಕ ಮುಖ್ಯಸ್ಥರು) ಕರ್ಬಾಲಾ ಯುದ್ಧ ಮತ್ತು ಸಂಬಂಧಿತ ಘಟನೆಗಳ ಪ್ರಸಂಗಗಳನ್ನು ವಿವರಿಸುತ್ತಾರೆ.
ಆದರೆ ಸಭಾಂಗಣದ ಮೇಲಿನ ನೆಲದ ಮೇಲೆ ಹುಡುಗಿಯರಿಗಾಗಿ ನಿರ್ಮಿಸಿರುವ ಜಾಲರಿ ಬಾಲ್ಕನಿ ಇದೆ. ಈ ಸ್ಥಳವು ಅವರಿಗೆ ಕೆಳಗಿನ ವಿದ್ಯಮಾನಗಳ ಅನುಕೂಲಕರ ನೋಟವನ್ನು ನೀಡುತ್ತದೆ. 'ಪಿಂಜ್ರಾ' ಅಥವಾ ಪಂಜರ ಎಂದು ಕರೆಯಲ್ಪಡುವ ಈ ಪದವು ಬಂಧನ ಮತ್ತು ಉಸಿರುಗಟ್ಟುವಿಕೆಯ ಪ್ರಜ್ಞೆಯನ್ನು ಪ್ರಚೋದಿಸುತ್ತದೆ. ಆದಾಗ್ಯೂ, ಹುಡುಗಿಯರಿಗೆ, ಸ್ಥಳವು ಸ್ವಾತಂತ್ರ್ಯ ಮತ್ತು ಆಟಕ್ಕೆ ಸ್ಥಳವನ್ನು ನೀಡುತ್ತದೆ.
ಇಮಾಂಬರಾದಲ್ಲಿ ದುಃಖವು ಹೆಚ್ಚು ಸ್ಪಷ್ಟವಾದಾಗ, ಮನಸ್ಥಿತಿಯು ಇದ್ದಕ್ಕಿದ್ದಂತೆ ಬದಲಾಗುತ್ತದೆ ಮತ್ತು ಹುಡುಗಿಯರು ತಮ್ಮ ತಲೆಗಳನ್ನು ಕೆಳಗಿಳಿಸಿ ಅಳುತ್ತಾರೆ - ಆದರೆ ಸ್ವಲ್ಪ ಸಮಯ ಮಾತ್ರ.
ಮೊಹರಂ ಶೋಕಾಚರಣೆಯ ತಿಂಗಳಾಗಿದ್ದರೂ, ಮಕ್ಕಳ ಜಗತ್ತಿನಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಮತ್ತು ತಡರಾತ್ರಿಯವರೆಗೆ ಗಂಟೆಗಳ ಕಾಲ ಒಟ್ಟಿಗೆ ಕಳೆಯಲು ಅವರಿಗೆ ಸಿಗುವ ಅವಕಾಶವಾಗಿದೆ. ಕೆಲವು ಹುಡುಗರು ಖಮಾ ಜಾನಿ ಮಾಡಿದರೆ, ಈ ಆಚರಣೆಯನ್ನು ಹುಡುಗಿಯರಿಗೆ ನಿಷೇಧಿಸಲಾಗಿದೆ. ಉಳಿದವರೆಲ್ಲರೂ ಮಾಡುವುದಕ್ಕೆ ಹುಡುಗಿಯರು ಹೆಚ್ಚಾಗಿ ಸಾಕ್ಷಿಯಾಗುತ್ತಾರೆ.
ಆಗಾಗ್ಗೆ, ಮೊಹರಂ ಆಚರಣೆಯ ವರ್ಣನೆಗಳು ಪುರುಷರು ಖಮಾ ಜಾನಿಯಲ್ಲಿ ಚೆಲ್ಲುವ ರಕ್ತದ ಮೇಲೆ ಕೇಂದ್ರೀಕರಿಸುತ್ತವೆ. ಆದರೆ ದುಃಖಿಸುವ ಇನ್ನೊಂದು ಮಾರ್ಗವೂ ಇದೆ, ಮಹಿಳೆಯರ ಮಾರ್ಗ. ಅದು ಗಂಭೀರ ಮತ್ತು ದುಃಖಭರಿತ.

ಜನ್ನತ್ ಬಾರ್ಲಿ ಹೊಲಗಳಲ್ಲಿ ಆಡುತ್ತಿರುವುದು, ಇದು ತಾಯ್ ಸುರುವಿನ ಮಕ್ಕಳ ನೆಚ್ಚಿನ ಬೇಸಿಗೆಯ ಚಟುವಟಿಕೆ

ಜನ್ನತ್ ( ಎಡಕ್ಕೆ) ಮತ್ತು ಆರ್ಚೋ ಫಾತಿಮಾ ಬೇಸಿಗೆಯಲ್ಲಿ ಹೊಲಗಳಲ್ಲಿ ಬೆಳೆಯುವ ಕಾಡು ಹೂವುಗಳ ಹಾಸಿಗೆಯ ಮೇಲೆ ಕುಳಿತಿರುವುದು

ಇಲ್ಲಿ ಬೆಳಗುಗಳನ್ನು ಶಾಲೆಯಲ್ಲಿ ಕಳೆಯಲಾಗುತ್ತದೆ, ಮತ್ತು ಸಂಜೆಗಳನ್ನು ಆಟ ಮತ್ತು ಮನೆಕೆಲಸದಲ್ಲಿ ಕಳೆಯಲಾಗುತ್ತದೆ. ವಾರಾಂತ್ಯಗಳಲ್ಲಿ, ಪಿಕ್ನಿಕ್ಕುಗಳು ಕೂಡಾ ಇರುತ್ತವೆ. ಇಲ್ಲಿ, 11 ವರ್ಷದ ಮೊಹದಿಸ ಪಿಕ್ನಿಕ್ ಹೋಗುವಾಗ ಹೊಳೆಯಲ್ಲಿ ಆಡುತ್ತಿದ್ದಾಳೆ

ಲಡಾಖ್ ನ ಸುರು ಕಣಿವೆಯ ತಾಯ್ ಸುರು ಎಂಬಲ್ಲಿ ಇಬ್ಬರು ಹುಡುಗಿಯರು ಬಂಡೆಯನ್ನು ಏರುತ್ತಿರುವುದು. ಕಣಿವೆಯ ಮಕ್ಕಳು ತಮ್ಮ ಪರಿಸರದೊಂದಿಗೆ ಸಂವೇದನಾಶೀಲವಾದ ಸಂಬಂಧವನ್ನು ಹೊಂದಿರುತ್ತಾರೆ

ಆಗಸ್ಟ್ 2021 ರಲ್ಲಿ ಮೊಹರಂ ಸಮಯದಲ್ಲಿ ಇಮಾಂಬರಾಗೆ ಹೊರಡುವ ಮೊದಲು ಹಾಜಿರಾ ಮತ್ತು 10 ಮತ್ತು 11 ವರ್ಷದ ಜಹ್ರಾ ಬತುಲ್, ಹಾಜಿರಾ ಅವರ ಮನೆಯಲ್ಲಿ ಒಟ್ಟಿಗೆ ಅಧ್ಯಯನ ಮಾಡುತ್ತಿರುವುದು

ಆಗಸ್ಟ್ 16, 2021ರಂದು ಇಮಾಂಬರಾ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಪುರುಷರು ಸೀನಾ ಜಾನಿ (ಧಾರ್ಮಿಕವಾಗಿ ಎದೆ ಬಡಿದುಕೊಳ್ಳುವುದು) ಮಾಡುತ್ತಿರುವುದು. ಕಪ್ಪು ಬಟ್ಟೆಯು ಸಭಾಂಗಣವನ್ನು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಥಳಗಳಾಗಿ ವಿಂಗಡಿಸುತ್ತದೆ

ಹುಡುಗಿಯರು ಮೇಲಿನ ಮಹಡಿಯ ಜಾಲರಿ ಬಾಲ್ಕನಿಯಾದ ಪಿಂಜ್ರಾದಿಂದ ಸಭಾಂಗಣಕ್ಕೆ ಇಣುಕಿ ನೋಡುತ್ತಿರುವುದು. ಸಭಾಂಗಣದ ಆಚರಣೆಗಳಿಂದ ದೂರವಿರುವ ಸ್ಥಳವು ಅವರಿಗೆ ಸ್ವಾತಂತ್ರ್ಯ ಮತ್ತು ಆಟಕ್ಕೆ ಸ್ಥಳವನ್ನು ನೀಡುತ್ತದೆ

ಆಗಸ್ಟ್ 2021 ರಲ್ಲಿ ಒಂದು ರಾತ್ರಿ ಮೊಹರಂ ಕೂಟದ ಸಮಯದಲ್ಲಿ ಸ್ನೇಹಿತರು ಪಿಂಜ್ರಾದಲ್ಲಿ ಸಮಯ ಕಳೆಯುತ್ತಿರುವುದು

ಸ್ನೇಹಿತರು ಒಟ್ಟಾಗಿ ಗುಳ್ಳೆಗಳನ್ನು ಊದುತ್ತಿರುವುದು

12 ಮತ್ತು 10 ವರ್ಷ ವಯಸ್ಸಿನ ಮಕ್ಕಳಿಬ್ಬರು ವೀಡಿಯೊ ಗೇಮಿನಲ್ಲಿ ಮಗ್ನರಾಗಿದ್ದರು. ತಾಯ್ ಸುರುವಿನ ಮಕ್ಕಳು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಅಂಟಿಕೊಂಡಿದ್ದಾರೆ, ಆದರೆ ಇಂಟರ್ನೆಟ್ ಹಳ್ಳಿಯ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ

ಇಮಾಂಬರಾದ ಗೋಡೆಗಳನ್ನು ಹತ್ತುವುದು; ಸಿಕ್ಕಿಬಿದ್ದರೆ ಬೈಗುಳಗಳು ಕಾದಿರುತ್ತವೆ

ಇಮಾಂಬರಾದ ಹೊರಗೆ, ದೊಡ್ಡವರ ದೃಷ್ಟಿಯಿಂದ ತಪ್ಪಿಸಿಕೊಂಡು ಹೊರಗೆ ಆಡುವಾಗ ಹುಡುಗಿಯೊಬ್ಬಳು ವಿಜಯದ ಸಂಕೇತವನ್ನು ತೋರಿಸುತ್ತಿರುವುದು

ಆಶುರಾ ರಾತ್ರಿ ಪುರುಷರು ಪ್ರತ್ಯೇಕವಾದ ಮೆರವಣಿಗೆ ಕೈಗೊಂಡ ನಂತರ ಮಹಿಳೆಯರು ನೋಹಾ ಪಠಿಸುವುದನ್ನು ಮಕ್ಕಳು ನೋಡುತ್ತಿರುವುದು. ಇಸ್ಲಾಮಿಕ್ ವರ್ಷದ ಮೊಹರಂ ತಿಂಗಳ 10 ನೇ ದಿನದಂದು ನಡೆಯುವ ಈ ಆಚರಣೆಯು ಕರ್ಬಲಾ ಕದನದಲ್ಲಿ ನಡೆದ ಇಮಾಮ್ ಹುಸೇನ್ ಅವರ ಹತ್ಯೆಯ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತದೆ

ಆಗಸ್ಟ್ 19, 2021 ರಂದು ಆಶುರಾ ದಿನದಂದು ಪ್ರಾಂತಿ ಗ್ರಾಮದಿಂದ ತಾಯ್ ಸುರು ಕಡೆಗೆ ಸಾಗುತ್ತಿರುವ ಮಹಿಳೆಯರ ಮೆರವಣಿಗೆ

ಆಗಸ್ಟ್ 2021 ರಲ್ಲಿ ಅಶುರಾ ದಿನದಂದು ಪುರುಷರ ಜೂಲೂಸ್

ಹುಡುಗಿಯರು ಪುರುಷರ ಮೆರವಣಿಗೆಯನ್ನು ಸೇರಿಕೊಳ್ಳಲು ಪ್ರಯತ್ನಿಸುತ್ತಿರುವುದು

ತಾಯ್ ಸುರುವಿನ ಹುಡುಗಿಯರ ಒಂದು ಗುಂಪು ಮಾರ್ಸಿಯಾ ( ಶೋಕ) ಪಠಿಸುತ್ತಿರುವುದು ಮತ್ತು ಅಶುರಾ ದಿನ ಸೀನಾ ಜಾನಿ ( ಧಾರ್ಮಿಕವಾಗಿ ಎದೆ ಬಡಿಸುಕೊಳ್ಳುವುದು) ಪ್ರದರ್ಶಿಸುತ್ತಿರುವುದು

ಇಮಾಮ್ ಹುಸೇನ್ ಅವರ ಸಹೋದರಿ ಝೈನಾಬ್ ಕರ್ಬಾಲಾಗೆ ಪ್ರಯಾಣಿಸಿದ ಪಲ್ಲಕ್ಕಿಯನ್ನು ಪ್ರತಿನಿಧಿಸುವ ಜಂಪನ್ ಅನ್ನು ಹಳ್ಳಿಯ ಬಯಲು ಮೈದಾನಕ್ಕೆ ಒಯ್ಯುವುದರೊಂದಿಗೆ ಅಶುರಾ ಕೊನೆಗೊಳ್ಳುತ್ತದೆ. ಈ ನೆಲವು ಖತ್ಲ್- ಎ- ಗಾಹ್ ಅನ್ನು ಸಂಕೇತಿಸುತ್ತದೆ, ಅದು ಹುಸೇನ್ ಮತ್ತು ಅವರ ಸಂಗಡಿಗರು ಯಾಜಿದ್, ಉಮಯ್ಯದ್ ಖಲೀಫನ ಆಳ್ವಿಕೆಯನ್ನು ಪ್ರತಿರೋಧಿಸಿದ್ದಕ್ಕಾಗಿ ಕೊಲ್ಲಲ್ಪಟ್ಟ ಯುದ್ಧಭೂಮಿ

ಖತ್ಲ್- ಎ- ಗಾಹ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಹುಡುಗಿಯರು

ಅಶುರಾ ದಿನದಂದು ಖತ್ಲ್- ಎ- ಗಾಹ್ ನಲ್ಲಿ ಕರ್ಬಲಾ ಯುದ್ಧದ ಪುನರಾವರ್ತನೆಗಾಗಿ ಇಡೀ ಗ್ರಾಮವು ಒಟ್ಟುಗೂಡುತ್ತದೆ

ಆಗಸ್ಟ್ 2021 ರಲ್ಲಿ ಅಶುರಾ ನಂತರ ತಾಯ್ ಸುರುವಿನಲ್ಲಿ ಜೂಲೂಸ್

ಇಮಾಮ್ ಹುಸೇನ್ ಅವರ ಶವಪೆಟ್ಟಿಗೆಯ ಪ್ರತಿರೂಪವಾದ ತಬೂತ್ ಅನ್ನು ಅಶುರಾ ನಂತರ ಒಂದೆರಡು ದಿನಗಳಾದ ಮೇಲೆ ಹಳ್ಳಿಯ ಮೂಲಕ ಸಾಗಿಸುತ್ತಿರುವುದರಿಂದ ತಾಯ್ ಸುರುವಿನ ಮಹಿಳೆಯರು ದುಃಖಿಸುತ್ತಿರುವುದು

2021 ರ ಸೆಪ್ಟೆಂಬರ್ ತಿಂಗಳಿನಲ್ಲಿ ತಾಯ್ ಸುರುವಿನ ಸಮುದಾಯವು ಜೂಲೂಸ್ ನಂತರ ಒಟ್ಟಿಗೆ ಪ್ರಾರ್ಥಿಸುತ್ತದೆ. ಮೊಹರಂನ ನಂತರದ ತಿಂಗಳಾದ ಸಫರ್ ಮಾಸದವರೆಗೂ ಕರ್ಬಲಾ ಹುತಾತ್ಮರಿಗಾಗಿ ಶೋಕಾಚರಣೆ ಮುಂದುವರಿಯುತ್ತದೆ
ಅನುವಾದ: ಶಂಕರ. ಎನ್. ಕೆಂಚನೂರು