ಒಂದು ಹದವಾದ ಬಿಸಿಲುಳ್ಳ ದಿನದಂದು 39 ವರ್ಷದ ಸುನೀತಾ ರಾಣಿ ಸುಮಾರು 30ರಷ್ಟಿದ್ದ ಮಹಿಳೆಯರ ಗುಂಪಿನೊಂದಿಗೆ ಮಾತನಾಡುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಂದ ಹೊರಬಂದು ಅವರ ಹಕ್ಕುಗಳಿಗಾಗಿ ಅನಿರ್ದಿಷ್ಟ ಕಾಲದ ಧರಣಿಗೆ ಕುಳಿತುಕೊಳ್ಳುವಂತೆ ಸಲಹೆ ನೀಡುತ್ತಾರೆ. "ಕಾಮ್‌ ಪಕ್ಕಾ, ನೌಕ್ರಿ ಕಚ್ಚಿ" (ಕೆಲಸದ ಭದ್ರತೆ, ಖಚಿತ ವೇತನ) ಸುನೀತಾ ಕೂಗುತ್ತಾರೆ. "ನಹಿ ಚಲೇಗಿ, ನಹಿ ಚಲೇಗಿ" (ಇದು ಮುಂದುವರಿಯಲು ಸಾಧ್ಯವಿಲ್ಲ, ಇದು ಮುಂದುವರಿಯಲು ಸಾಧ್ಯವಿಲ್ಲ)! ಎಂದು ಉಳಿದ ಮಹಿಳೆಯರು ಒಕ್ಕೊರಲಿನಿಂದ ಘೋಷಣೆ ಕೂಗುತ್ತಿದ್ದರು.

ದೆಹಲಿ-ಹರಿಯಾಣ ಹೆದ್ದಾರಿಯಲ್ಲಿರುವ ಸೋನಿಪತ್‌ ಪಟ್ಟಣದ ಸಿವಿಲ್‌ ಆಸ್ಪತ್ರೆಯ ಆವರಣದಲ್ಲಿನ ಹುಲ್ಲುಹಾಸಿನ ಮೇಲೆ, ಜಮಖಾನ ಹಾಸಿ ಕುಳಿತಿರುವ ಕೆಂಪು ಬಣ್ಣದ ಬಟ್ಟೆ ಧರಿಸಿದ ಮಹಿಳೆಯರೊಂದಿಗೆ (ಹರಿಯಾಣದಲ್ಲಿ ಅವರ ಸಮವಸ್ತ್ರ) ಸುನೀತಾ ಅವರೆಲ್ಲರಿಗೂ ತಿಳಿದಿರುವ ಅವರ ಕಷ್ಟಗಳನ್ನು ಪಟ್ಟಿ ಮಾಡುತ್ತಿದ್ದಾರೆ.

ಈ ಎಲ್ಲ ಮಹಿಳೆಯರೂ ಆಶಾ ಕಾರ್ಯಕರ್ತೆಯರು. ಇವರು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಮಿಕರು. ದೇಶದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ (ಎನ್‌.ಆರ್‌.ಎಚ್‌.ಎಮ್‌.)ನ ಕಾಲಾಳುಗಳು. ಇದು ಭಾರತದ ಗ್ರಾಮೀಣ ಜನಸ‍ಂಖ್ಯೆಯನ್ನು ದೇಶದ ಆರೋಗ್ಯ ವ್ಯವಸ್ಥೆಗೆ ಸಂಪರ್ಕಿಸುವ ನಿರ್ಣಾಯಕ ಕೊಂಡಿಯಾಗಿದೆ. ದೇಶಾದ್ಯಂತ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಾರೆ. ಜೊತೆಗೆ ಇವರು ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಗಳಿಗೆ ಲಭ್ಯವಿರುವ ಮೊದಲ ಆರೋಗ್ಯ ಸೇವಕರಾಗಿದ್ದಾರೆ.

ಪೌಷ್ಠಿಕಾಂಶ, ನೈರ್ಮಲ್ಯ ಮತ್ತು ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿಯನ್ನು ಪ್ರಸಾರ ಮಾಡುವುದರಿಂದ ಹಿಡಿದು ಕ್ಷಯರೋಗಿಗಳ ಚಿಕಿತ್ಸೆಯ ಮೇಲೆ ಕಣ್ಣಿಡುವುದು, ಆರೋಗ್ಯ ಸೂಚಕಗಳ ದಾಖಲೆಯನ್ನು ನಿರ್ವಹಿಸುವುದನ್ನು ಸೇರಿಸಿ ಹನ್ನೆರಡು ಪ್ರಾಥಮಿಕ ಜವಾಬ್ದಾರಿಗಳು ಮತ್ತು 60ಕ್ಕೂ ಹೆಚ್ಚು ಉಪ ಜವಾಬ್ದಾರಿಗಳನ್ನು ಅವರು ನಿರ್ವಹಿಸುವ ಅಗತ್ಯವಿದೆ.

ಅವರು ಇಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ. ಸುನೀತಾ ಹೇಳುತ್ತಾರೆ "ನಾವು ನಿಜವಾಗಿ ಯಾವ ಟ್ರೈನಿಂಗ್‌ ಪಡೆದಿದ್ದೇವೋ, ಅದೇ ಹಿಂದೆ ಉಳಿದುಹೋಗಿದೆ. ನಮಗೆ ತಾಯಂದಿರು ಮತ್ತು ನವಜಾತ ಶಿಶುವಿನ ಆರೋಗ್ಯ ಅಂಕಿಅಂಶಗಳನ್ನು ಸುಧಾರಿಸಲು ತರಬೇತಿ ನೀಡಲಾಗಿದೆ." ಸುನೀತಾ ಸೋನಿಪತ್‌ ಜಿಲ್ಲೆಯ ನಾಥುಪುರ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದು, 2,953 ಜನಸಂಖ್ಯೆಯ ಆರೋಗ್ಯ ಸಂಬಂಧಿ ವಿಷಯಗಳನ್ನು ನೋಡಿಕೊಳ್ಳುವ ಮೂವರಲ್ಲಿ ಇವರೂ ಒಬ್ಬರು.

ASHA workers from Sonipat district on an indefinite strike in March; they demanded job security, better pay and a lighter workload
PHOTO • Pallavi Prasad

ಮಾರ್ಚ್‌ ತಿಂಗಳಿನಲ್ಲಿ ಅನಿರ್ದಿಷ್ಟ ಸಮಯದ ಮುಷ್ಕರದಲ್ಲಿ ತೊಡಗಿರುವ ಸೋನಿಪತ್ ಜಿಲ್ಲೆಯ ಆಶಾ ಕಾರ್ಯಕರ್ತೆಯರು. ಅವರು ಉದ್ಯೋಗ ಭದ್ರತೆ, ಉತ್ತಮ ವೇತನ ಮತ್ತು ಕೆಲಸದ ಹೊರೆಯನ್ನು ಕಡಿಮೆಗೊಳಿಸುವಂತೆ ಒತ್ತಾಯಿಸಿದರು

ಪ್ರಸವ ಪೂರ್ವ‌ ಮತ್ತು ನಂತರದ ಆರೈಕೆಯ ಹೊರತಾಗಿ ಆಶಾ ಕಾರ್ಮಿಕರು ಸಮುದಾಯ ಕಾರ್ಯಕರ್ತರೂ ಆಗಿದ್ದು, ಅವರು ಸರ್ಕಾರದ ಕುಟುಂಬ ಯೋಜನೆ ನೀತಿಗಳು, ಗರ್ಭನಿರೋಧಕ ಮತ್ತು ಗರ್ಭಧಾರಣೆಯ ಅಂತರದ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಶಿಶು ಮರಣದ ಪ್ರಮಾಣವು 2006ರಲ್ಲಿ 1,000 ಜೀವಂತ ಜನನಗಳಿಗೆ 57 ಇತ್ತು. ಆಶಾ ಕಾರ್ಯಕ್ರಮ ಪ್ರಾರಂಭಿಸಿದ ನಂತರ ಈ ಸಂಖ್ಯೆ 2017ರಲ್ಲಿ 33ಕ್ಕೆ ತಲುಪಿದೆ. ಇದರಲ್ಲಿ ಆಶಾ ಕಾರ್ಯಕರ್ತೆಯರ ಶ್ರಮದ ಪಾಲು ದೊಡ್ಡದು. 2005-06ರಿಂದ 2015-16ರ ನಡುವೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಪ್ರಸವ ಪೂರ್ವ ಆರೈಕೆ ಭೇಟಿಯು ಶೇಕಡಾ 37 ರಿಂದ 51 ಕ್ಕೆ ಏರಿದೆ ಮತ್ತು ಸಾಂಸ್ಥಿಕ ಹೆರಿಗೆಗಳು ಶೇಕಡಾ 39ರಿಂದ 79ಕ್ಕೆ ಏರಿವೆ.

"ನಾವು ಮಾಡಿದ ಮತ್ತು ಮಾಡಬಹುದಾದ ಉತ್ತಮ ಕೆಲಸದ ಹೊರತಾಗಿಯೂ, ನಾವು ಒಂದರ ನಂತರ ಒಂದು ಸಮೀಕ್ಷೆ ಭರ್ತಿ ಮಾಡುವುದರಲ್ಲೇ ಕಳೆದುಹೋಗುತ್ತಿದ್ದೇವೆ", ಎಂದು ಸುನೀತಾ ಹೇಳುತ್ತಾರೆ.

"ಪ್ರತಿ ದಿನವೂ ನಾವು ಹೊಸ ವರದಿ ಸಲ್ಲಿಸಬೇಕಾಗಿದೆ", ಎಂದು ಜಖೌಲಿ ಗ್ರಾಮದಲ್ಲಿ ನೆಲೆಸಿರುವ ಆಶಾ ಕಾರ್ಯಕರ್ತೆ 42 ವರ್ಷದ ನೀತು (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. "ಒಂದು ದಿನ ಎ.ಎನ್‌.ಎಮ್ (ಆಕ್ಸಿಲರಿ ನರ್ಸ್‌ ಮಿಡ್‌ವೈಫ್) ನಮಗೆ ಪ್ರಸವ ಪೂರ್ವ ಆರೈಕೆ ಅಗತ್ಯವಿರುವ ಮಹಿಳೆಯರ ಸಮೀಕ್ಷೆ ಮಾಡುವಂತೆ ಹೇಳುತ್ತಾರೆ. ಮರುದಿನ ನಾವು ಸಾಂಸ್ಥಿಕ ಹೆರಿಗೆಯ ವಿವರಗಳನ್ನು ಸಂಖ್ಯೆಯನ್ನು ಸಂಗ್ರಹಿಸುತ್ತೇವೆ. ಅದರ ಮರುದಿನ ನಾವು ಎಲ್ಲರ ರಕ್ತದೊತ್ತಡವನ್ನು ದಾಖಲಿಸಬೇಕು (ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿ). ಅದರ ಮರುದಿನವೇ ಚುನಾವಣಾ ಆಯೋಗಕ್ಕಾಗಿ ಬೂತ್ ಮಟ್ಟದ ಅಧಿಕಾರಿಯ ಸಮೀಕ್ಷೆಯನ್ನು ಮಾಡಲು ನಮಗೆ ಹೇಳಲಾಗಿದೆ. ಇದು ಎಂದಿಗೂ ಮುಗಿಯುವುದೇ ಇಲ್ಲ."

ಈ ಕೆಲಸಕ್ಕೆ 2006ರಲ್ಲಿ ಸೇರಿದಾಗಿನಿಂದ ಇದುವರೆಗೆ ಕನಿಷ್ಟ 700 ವಾರಗಳಷ್ಟು ಕಾಲ ತಮ್ಮನ್ನು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನೀತು ಅಂದಾಜಿಸುತ್ತಾರೆ. ಅನಾರೋಗ್ಯದ ಸಮಯದಲ್ಲಿ ಮತ್ತು ಹಬ್ಬಗಳಲ್ಲಿ ಮಾತ್ರ ಇವರು ರಜೆಯ ಸೌಲಭ್ಯವನ್ನು ಅನುಭವಿಸಿದ್ದಾರೆ. 8,259 ಜನರಿರುವ ತನ್ನ ಹಳ್ಳಿಯಲ್ಲಿ ಒಂಬತ್ತು ಆಶಾ ಕಾರ್ಯಕರ್ತೆಯರು ಇದ್ದರೂ ಅವರು ಬಹಳ ದಣಿದಿರುವುದನ್ನು ಕಾಣಬಹುದಿತ್ತು. ರಕ್ತಹೀನತೆಯ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಮುಗಿಸಿ ಒಂದು ಗಂಟೆ ತಡವಾಗಿ ಮುಷ್ಕರದ ಸ್ಥಳವನ್ನು ತಲುಪಿದ್ದರು. ಆಶಾ ಕಾರ್ಯಕರ್ತೆಯರನ್ನು ಹಳ್ಳಿಯಲ್ಲಿರುವ ಉತ್ತಮ ಮನೆಗಳಿಂದ ಸಂಖ್ಯೆಯನ್ನು ಎಣಿಸುವುದರಿಂದ ಹಿಡಿದು ಸಮುದಾಯದಲ್ಲಿರುವ ಹಸು, ಎಮ್ಮೆಗಳನ್ನು ಎಣಿಸುವ ತನಕ ಯಾವ ಕೆಲಸಕ್ಕೆ ಕರೆಯಲಾಗುತ್ತದೆಯೆಂದು ಹೇಳಲು ಸಾಧ್ಯವಿಲ್ಲ.

"ನಾನು ಆಶಾ ಕಾರ್ಮಿಕಳಾಗಿ ಸೇರಿದ ಈ ಮೂರು ವರ್ಷಗಳಲ್ಲಿ ಎಂದರೆ 2017ರಿಂದ ಇಲ್ಲಿಯವರೆಗೆ ನನ್ನ ಕೆಲಸದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಮತ್ತು ಅವು ಬಹುತೇಕ ಕಾಗದ ಪತ್ರಗಳ ಕೆಲಸವಾಗಿದೆ", ಎಂದು ಮುಷ್ಕರದಲ್ಲಿ ಭಾಗವಹಿಸಲು ಬಂದಿರುವ ಆಶಾ ಕಾರ್ಯಕರ್ತೆ ಛಾವಿ ಕಶ್ಯಪ್‌ ಹೇಳುತ್ತಾರೆ. ಇವರ ಮನೆ ಸಿವಿಲ್‌ ಆಸ್ಪತ್ರೆಯಿಂದ ಎಂಟು ಕಿಲೋಮೀಟರ್ ದೂರದ ಬಹಾಲ್‌ಘರ್‌ನಲ್ಲಿದೆ. "ಸರಕಾರ ನಮ್ಮ ಮೇಲೆ ಹೇರುವ ಪ್ರತಿ ಸರ್ವೆಯನ್ನು ಮುಗಿಸಿ, ನಮ್ಮ ನಿಜವಾದ ಕೆಲಸವನ್ನು ಮಾಡಬೇಕಿದೆ."
'We don’t even have time to sit on a hartal,' says Sunita Rani; at meetings, she notes down (right) the problems faced by co-workers
PHOTO • Pallavi Prasad
'We don’t even have time to sit on a hartal,' says Sunita Rani; at meetings, she notes down (right) the problems faced by co-workers
PHOTO • Pallavi Prasad

'ನಮಗೆ ಹರತಾಳದಲ್ಲಿ ಕುಳಿತುಕೊಳ್ಳಲು ಸಹ ಸಮಯವಿಲ್ಲ', ಎಂದು ಸುನೀತಾ ರಾಣಿ ಹೇಳುತ್ತಾರೆ; (ಬಲ ಚಿತ್ರ) ಸಭೆಗಳಲ್ಲಿ, ಸಹೋದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಬರೆದುಕೊಳ್ಳುತ್ತಿರುವುದು

ಛಾವಿ ಕಶ್ಯಪ್‌ ಮದುವೆಯಾಗಿ 15 ವರ್ಷಗಳಾಗಿದ್ದರೂ ಮನೆಯಿಂದ ಒಬ್ಬರೇ ಹೊರಗೆ ಹೋಗಿರಲಿಲ್ಲ. ಆಸ್ಪತ್ರೆಗೂ ಜೊತೆಯಿಲ್ಲದೆ ಹೋಗಿರಲಿಲ್ಲ. 2016ರಲ್ಲಿ ಆಶಾ ಫೆಸಿಲಿಟೇಟರ್ ಅವರ ಹಳ್ಳಿಯಲ್ಲಿ ಆಶಾ ಕಾರ್ಮಿಕರ ಕರ್ತವ್ಯಗಳನ್ನು ತಿಳಿಸುವ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾಗ ಛಾವಿ ಕೂಡ ಅದರಲ್ಲಿ ಸೇರಿಕೊಳ್ಳಬಯಸಿದ್ದರು. ಈ ಕಾರ್ಯಗಾರದ ನಂತರ ಫೆಸಿಲಿಟೇಟರ್‌ಗಳು 18 ರಿಂದ 45 ವರ್ಷದೊಳಗಿನ ಮೂವರು ವಿವಾಹಿತ ಮಹಿಳೆಯರ ಹೆಸರನ್ನು ಶಾರ್ಟ್‌ ಲಿಸ್ಟ್‌ ಮಾಡುತ್ತಾರೆ. ಅವರು ಕನಿಷ್ಠ ಎಂಟನೇ ತರಗತಿ ಓದಿರಬೇಕು ಮತ್ತು ಸಮುದಾಯ ಆರೋಗ್ಯ ಸ್ವಯಂಸೇವಕರಾಗಿ ಕೆಲಸ ಮಾಡಲು ಆಸಕ್ತಿ ಹೊಂದಿರಬೇಕು.

ಛಾವಿ ಆಸಕ್ತಿ ಮತ್ತು ಅರ್ಹತೆ ಎರಡನ್ನೂ ಹೊಂದಿದ್ದರು. ಆದರೆ ಅವರ ಪತಿ ಕೆಲಸಕ್ಕೆ ಸೇರುವುದು ಬೇಡವೆಂದರು. ಆವರ ಪತಿ ಬಹಾಲ್‌ಘರ್‌ನ ಇಂದಿರಾ ಕಾಲೋನಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸಿಂಗ್ ಸಿಬ್ಬಂದಿ ತಂಡದಲ್ಲಿದ್ದಾರೆ ಮತ್ತು ವಾರದಲ್ಲಿ ಎರಡು ದಿನ ನೈಟ್ ಶಿಫ್ಟ್ ಕೆಲಸ ಮಾಡುತ್ತಾರೆ. ನಮಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕೆಲಸದಲ್ಲಿರುವಾಗ ಅವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಬಗ್ಗೆ ನನ್ನ ಪತಿಗೆ ಆತಂಕವಿತ್ತು”, ಎಂದು ಛಾವಿ ಹೇಳುತ್ತಾರೆ. ಕೆಲವು ತಿಂಗಳುಗಳ ನಂತರ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿದಾಗ ಕೆಲಸಕ್ಕೆ ಸೇರುವಂತೆ ಪತಿ ಹೇಳಿದರು. ಛಾವಿ ಮುಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿದರು ಮತ್ತು ಶೀಘ್ರದಲ್ಲೇ ಗ್ರಾಮಸಭೆಯು ಬಹಾಲ್‌ಘರ್‌ ಗ್ರಾಮದ 4,196 ನಿವಾಸಿಗಳಿಗಾಗಿ ಇರುವ ಐದು ಆಶಾ ಕಾರ್ಮಿಕರಲ್ಲಿ ಇವರೂ ಒಬ್ಬರೆಂದು ಧೃಡಪಡಿಸಿತು.

"ದಂಪತಿಗಳಾದ ನಾವು ಒಂದು ನಿಯಮವನ್ನು ಹೊಂದಿದ್ದೇವೆ. ಅವರು ನೈಟ್‌ಶಿಫ್ಟ್‌ನಲ್ಲಿದ್ದಾಗ ಮಹಿಳೆಗೆ ಹೆರಿಗೆ ನೋವು ಬಂದು ನನಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕರೆ ಬಂದರೆ ನಾನು ಮಕ್ಕಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಆಗ ನಾನು ಆಂಬ್ಯುಲೆನ್ಸ್‌ಗೆ ಕರೆ ಮಾಡುತ್ತೇನೆ ಅಥವಾ ಇನ್ನೊಬ್ಬ ಆಶಾ ಕಾರ್ಮಿಕರನ್ನು ಹೋಗುವಂತೆ ಕೇಳಿಕೊಳ್ಳುತ್ತೇನೆ", ಎಂದು ಛಾವಿ ಹೇಳುತ್ತಾರೆ.

ದಿನ ತುಂಬಿದ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಆಶಾ ಕಾರ್ಮಿಕರು ಪ್ರತಿವಾರ ಸಂಭಾಳಿಸುವ ಅನೇಕ ಕೆಲಸಗಳ ಪೈಕಿ ಒಂದಾಗಿದೆ. "ಕಳೆದ ವಾರ, ನನಗೆ ಅವಧಿ ತುಂಬಿದ ಮಹಿಳೆಯೊಬ್ಬರಿಂದ ಹೆರಿಗೆ ನೋವು ಬಂದಿರುವುದಾಗಿ ಕರೆ ಬಂದಿತು. ನನಗೆ ಆಸ್ಪತ್ರೆಗೆ ಹೋಗುವ ಇಚ್ಛೆಯಿತ್ತು ಆದರೆ ವಹಿಸಿದ್ದ ಕೆಲಸದ ಕಾರಣದಿಂದ ಹೋಗಲಾಗಲಿಲ್ಲ." ಎಂದು ಸೋನಿಪತ್‌ನ ರೈ ತಹಸೀಲ್‌ನ, ಬಾದ್‌ ಖಲ್ಸಾ ಗ್ರಾಮದ ಆಶಾ ಕಾರ್ಯಕರ್ತೆ ಶೀತಲ್‌ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. "ಅದೇ ವಾರ, ಆಯುಷ್ಮಾನ್ ಶಿಬಿರವನ್ನು ನಡೆಸಲು ನನ್ನನ್ನು ಕೇಳಲಾಯಿತು", ಎಂದು 32 ವರ್ಷದ ಶೀತಲ್ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಉಲ್ಲೇಖಿಸಿ ಹೇಳುತ್ತಾರೆ. ಸರ್ಕಾರದ ಆರೋಗ್ಯ ಯೋಜನೆಗೆ ಅರ್ಹರಾಗಿರುವ ತನ್ನ ಹಳ್ಳಿಯ ಪ್ರತಿಯೊಬ್ಬರ ಫಾರ್ಮ್‌ ಮತ್ತು ದಾಖಲೆ ತುಂಬಿದ ಚೀಲದೊಂದಿಗೆ ಆಕೆ ಶಿಬಿರದಲ್ಲಿ ಸಿಲುಕಿಕೊಂಡಿದ್ದರು. ಇತರ ಎಲ್ಲ ಕೆಲಸಗಳಿಗಿಂತ ಆದ್ಯತೆಯಾಗಿ ಆಯುಷ್ಮಾನ್ ಯೋಜನೆಯ ಕೆಲಸ ಮಾಡುವಂತೆ ಎ.ಎನ್‌.ಎಮ್‌ ಆದೇಶ ನೀಡಿದ್ದರು.

“ಈ (ಗರ್ಭಿಣಿ) ಮಹಿಳೆ ಮದುವೆಯಾಗಿ ಎರಡು ವರ್ಷಗಳ ಹಿಂದೆ ಗ್ರಾಮಕ್ಕೆ ಬಂದಾಗಿನಿಂದ ನಾನು ಅವಳೊಂದಿಗೆ ವಿಶ್ವಾಸ ಬೆಳೆಸಲು ಶ್ರಮಿಸಿದ್ದೆ. ನಾನು ಅವಳೊಂದಿಗೆ ಇದ್ದೆ - ಮಗುವನ್ನು ಹೊಂದಲು ಎರಡು ವರ್ಷ ಕಾಯಬೇಕೆಂದು ಅವಳ ಮತ್ತು ಅವಳ ಪತಿಗೆ ಮನವರಿಕೆ ಮಾಡಿಕೊಟ್ಟು ಕುಟುಂಬ ಯೋಜನೆ ಬಗ್ಗೆ ಅವರಿಗೆ ತಿಳಿಸಿ ಹೇಳಿದ್ದೆ ಮತ್ತು ಅವರಿಗೆ ಕೌನ್ಸೆಲ್‌ ಮಾಡಲು ಬಿಡುವಂತೆ ಅವರ ಅತ್ತೆಯನ್ನೂ ನಾನು ಮನವೊಲಿಸಿದ್ದೆ. ಈ ಹೊತ್ತು ನಾನು ಅಲ್ಲಿ ಇರಬೇಕಿತ್ತು”, ಎಂದು ಶೀತಲ್ ಹೇಳುತ್ತಾರೆ.

ಬದಲಿಗೆ ಆತಂಕದಲ್ಲಿದ್ದ ಕುಟುಂಬವನ್ನು ಸಮಾಧಾನಗೊಳಿಸಲು ಆಕೆ ಅರ್ಧಘಂಟೆಯ ಸಮಯವನ್ನು ಫೋನ್‌ ನಲ್ಲಿ ಕಳೆದರು. ಆ ಕುಟುಂಬಕ್ಕೆ ಆಕೆಯಿಲ್ಲದೆ ಹೋಗಲು ಇಷ್ಟವಿರಲಿಲ್ಲ. ಕೊನೆಗೆ ಆಕೆಯು ಅವರಿಗೆ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿದರು. "ಹೀಗಾದಾಗ ನಾವು ಊರಿನಲ್ಲಿ ಬೆಳೆಸಿಕೊಂಡು ಬಂದಿರುವ ನಂಬಿಕೆಯ ಚಕ್ರ ದಿಕ್ಕು ತಪ್ಪುತ್ತದೆ", ಎಂದು ಸುನೀತಾ ರಾಣಿ ಹೇಳುತ್ತಾರೆ.

'In just three years, since I became an ASHA in 2017, my work has increased three-fold', says Chhavi Kashyap
PHOTO • Pallavi Prasad

'ಕೇವಲ ಮೂರು ವರ್ಷಗಳಲ್ಲಿ, ಎಂದರೆ ನಾನು 2017ರಲ್ಲಿ ಆಶಾ ಕಾರ್ಮಿಕಳಾದ ನಂತರ, ನನ್ನ ಕೆಲಸವು ಮೂರು ಪಟ್ಟು ಹೆಚ್ಚಾಗಿದೆ', ಎಂದು ಛಾವಿ ಕಶ್ಯಪ್ ಹೇಳುತ್ತಾರೆ

ಕೊನೆಗೂ ಆಶಾ ಕಾರ್ಮಿಕರು ತಮ್ಮ ಕೆಲಸವನ್ನು ಮಾಡಲು ಹೊರಟರೆ ಸಾಮಾನ್ಯವಾಗಿ ಅವರ ಒಂದು ಕೈ ಕಟ್ಟಿದಂತಹ ಪರಿಸ್ಥಿತಿಯಿರುತ್ತದೆ. ಹೆಚ್ಚಾಗಿ ಔಷಧಿ ಕಿಟ್‌ಗಳು ಲಭ್ಯವಿರುವುದಿಲ್ಲ. ಅಥವಾ ಪ್ಯಾರಾಸಿಟಮಾಲ್‌ ಮಾತ್ರೆಗಳು, ಓ.ಆರ್‌.ಎಸ್,‌ ಗರ್ಭಿಣಿ ಮಹಿಳೆಯರಿಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಮಾತ್ರೆಗಳು, ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು ಮತ್ತು ಗರ್ಭಧಾರಣೆ ಪರೀಕ್ಷೆಯ ಕಿಟ್‌ಗಳಂತಹ ಕಡ್ಡಾಯ ವಸ್ತುಗಳು ಇರುವುದಿಲ್ಲ. “ನಮಗೆ ಏನನ್ನೂ ನೀಡಲಾಗಿರುವುದಿಲ್ಲ. ತಲೆನೋವಿನ ಔಷಧಿಗಳನ್ನು ಸಹ ನೀಡಲಾಗುವುದಿಲ್ಲ. ಪ್ರತಿ ಮನೆಯ ಅವಶ್ಯಕತೆಗಳ ಬಗ್ಗೆ ನಾವು ನೋಟ್ ಮಾಡುತ್ತೇವೆ, ಯಾರು ಯಾವ ರೀತಿಯ ಗರ್ಭನಿರೋಧಕವನ್ನು ತೆಗೆದುಕೊಳ್ಳುತ್ತಾರೆಂದು ತಿಳಿದುಕೊಂಡು, ನಂತರ ಅದನ್ನು ನಮಗೆ ನೀಡುವಂತೆ ಎ.ಎನ್‌.ಎಂ.ಗೆ ವಿನಂತಿಸುತ್ತೇವೆ”, ಎಂದು ಸುನೀತಾ ಹೇಳುತ್ತಾರೆ. ಸೋನಿಪತ್ ಜಿಲ್ಲೆಯ 1,045 ಆಶಾ ಕಾರ್ಮಿಕರಿಗೆ ಕೇವಲ 485 ಔಷಧಿ ಕಿಟ್‌ಗಳನ್ನು ಮಾತ್ರ ನೀಡಲಾಗಿದೆ.

ಆಗಾಗ್ಗೆ, ಆಶಾ ಕಾರ್ಮಿಕರು ತಮ್ಮ ಸಮುದಾಯದ ಸದಸ್ಯರಿದ್ದಲ್ಲಿಗೆ ಬರಿಗೈಯಲ್ಲಿ ಹೋಗುತ್ತಾರೆ. “ಕೆಲವೊಮ್ಮೆ ಅವರು ನಮಗೆ ಕಬ್ಬಿಣದಂಶದ ಮಾತ್ರೆಗಳನ್ನು ನೀಡುತ್ತಾರೆ ಆದರೆ ಕ್ಯಾಲ್ಸಿಯಂ ಮಾತ್ರೆ ನೀಡುವುದಿಲ್ಲ. ಇವುಗಳನ್ನು ಗರ್ಭಿಣಿಯರು ಒಟ್ಟಾಗಿ ತೆಗೆದುಕೊಳ್ಳಬೇಕು. ಕೆಲವೊಮ್ಮೆ ಅವರು ನಮಗೆ ಗರ್ಭಿಣಿ ಮಹಿಳೆಗೆಂದು ಕೇವಲ 10 ಮಾತ್ರೆಗಳನ್ನು ಮಾತ್ರ ನೀಡುತ್ತಾರೆ. ಅದು 10 ದಿನಗಳಲ್ಲಿ ಮುಗಿಯುತ್ತದೆ. ಮಹಿಳೆ ನಮ್ಮ ಬಳಿಗೆ ಬಂದಾಗ, ನಮ್ಮ ಬಳಿ ಅವಳಿಗೆ ನೀಡಲು ಏನೂ ಇರುವುದಿಲ್ಲ”, ಛಾವಿ ವಿವರಿಸುತ್ತಾರೆ.

ಕೆಲವೊಮ್ಮೆ ಅವರಿಗೆ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ನೀಡಲಾಗುತ್ತದೆ. "ಯಾವುದೇ ಪೂರೈಕೆಯಿಲ್ಲದ ತಿಂಗಳುಗಳ ನಂತರ, ಮಾಲಾ-ಎನ್ (ಸಂಯೋಜಿತ ಹಾರ್ಮೋನ್ ಓರಲ್ ಗರ್ಭನಿರೋಧಕ ಮಾತ್ರೆ) ಅವಧಿ ಮುಗಿಯುವ ದಿನಾಂಕದ ಒಂದು ತಿಂಗಳ ಮೊದಲು‌ ನಮಗೆ ನೀಡಲಾಗುತ್ತದೆ. ಅವುಗಳನ್ನು ಸಾಧ್ಯವಾದಷ್ಟು ಬೇಗ ವಿತರಿಸುವ ಆದೇಶದೊಂದಿಗೆ ನಾವು ಅವುಗಳನ್ನು ಪಡೆಯುತ್ತೇವೆ", ಎಂದು ಸುನೀತಾ ಹೇಳುತ್ತಾರೆ. ಆಶಾ ಕಾರ್ಮಿಕರು ಶ್ರದ್ಧೆಯಿಂದ ದಾಖಲಿಸಿದ ಮಾಲಾ-ಎನ್ ಬಳಸುವ ಮಹಿಳೆಯರ ಪ್ರತಿಕ್ರಿಯೆಯನ್ನು ವಿರಳವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಮುಷ್ಕರ ದಿನದಂದು ಮಧ್ಯಾಹ್ನದ ಹೊತ್ತಿಗೆ 50 ಆಶಾ ಕಾರ್ಮಿಕರು ಪ್ರತಿಭಟನೆಗಾಗಿ ಸ್ಥಳದಲ್ಲಿ ಸೇರಿದ್ದರು. ಆಸ್ಪತ್ರೆಯ ಹೊರರೋಗಿ ವಿಭಾಗದ ಪಕ್ಕದ ಅಂಗಡಿಯಿಂದ ಚಹಾವನ್ನು ತರಿಸಲಾಯಿತು. ಇದಕ್ಕೆ ಯಾರು ಪಾವತಿಸುತ್ತಿದ್ದಾರೆ ಎಂದು ಒಬ್ಬರು ಕೇಳಿದಾಗ, ನಾನು ಆರು ತಿಂಗಳಿನಿಂದ ಸಂಬಳ ಪಡೆಯದ ಕಾರಣ ನಾನಂತೂ ಅಲ್ಲ ಎಂದು ತಮಾಷೆ ಮಾಡಿದರು. ಎನ್‌.ಆರ್‌.ಎಚ್‌.ಎಮ್‌. ನ 2005ರ ನೀತಿಯ ಪ್ರಕಾರ ಆಶಾ ಕಾರ್ಮಿಕರು ʼಸ್ವಯಂಸೇವಕರುʼ. ಅವರು ಪೂರ್ಣಗೊಳಿಸುವ ಕೆಲಸವನ್ನು ಆಧರಿಸಿ ಅವರಿಗೆ ಸಂಬಳ ಪಾವತಿ ಮಾಡಲಾಗುತ್ತದೆ. ಆಶಾ ಕಾರ್ಮಿಕರಿಗೆ ನಿಯೋಜಿಸಲಾದ ಹಲವಾರು ಕಾರ್ಯಗಳಲ್ಲಿ ಐದನ್ನು ಮಾತ್ರ ʼನಿಯಮಿತ ಮತ್ತು ಆವರ್ತಿತʼ ಎಂದು ವರ್ಗೀಕರಿಸಲಾಗಿದೆ. 2018ರ ಅಕ್ಟೋಬರ್‌ನಲ್ಲಿ ಸರಕಾರವು ಇವುಗಳಿಗಾಗಿ ಒಟ್ಟು ಮಾಸಿಕ 2,000 ನೀಡಲು ಒಪ್ಪಿಕೊಂಡಿದೆ. ಆದರೆ ಅದನ್ನೂ ಅಪರೂಪಕ್ಕೆ ಸರಿಯಾದ ಸಮಯಕ್ಕೆ ನೀಡಲಾಗುತ್ತಿಲ್ಲ.

ಇದರಾಚೆಗೆ ಪೂರ್ಣಗೊಳಿಸಿದ ಪ್ರತಿಕಾರ್ಯಕ್ಕೆ ಆಶಾ ಕಾರ್ಮಿಕರಿಗೆ ಪಾವತಿಸಲಾಗುತ್ತದೆ. ಅವರು ಕ್ಷಯರೋಗಿಗಳಿಗೆ ಔಷಧ - ನಿರೋಧಕವನ್ನು ಆರರಿಂದ ಒಂಬತ್ತು ತಿಂಗಳ ಅವಧಿಯವರೆಗೆ ನೀಡಲು 5,000 ರೂ, ಓ.ಆರ್‌.ಎಸ್‌ ಪ್ಯಾಕೆಟ್‌ ವಿತರಣೆಗೆ 1 ರೂಪಾಯಿ ನೀಡಲಾಗುತ್ತದೆ. ಕುಟುಂಬ ಯೋಜನೆಯ ಇನ್ಸೆಂಟಿವ್‌ ಕೂಡ ಆಶಾ ಕಾರ್ಮಿಕರಿಗೆ ನೀಡಲಾಗುತ್ತದೆ. ಟ್ಯೂಬೆಕ್ಟಮಿ ಅಥವಾ ಸಂತಾನಹರಣ ಚಿಕಿತ್ಸೆಗೆ ಎ.ಎಸ್‌.ಎ.ಎ.ಗಳು ರೂ. 200-300, ಆದರೆ ಒಂದು ಪ್ಯಾಕೇಟ್‌ ಕಾಂಡೊಮ್, ಗರ್ಭನಿರೋಧಕ ಮಾತ್ರೆಗಳನ್ನು‌ ನೀಡಿದರೆ ಒಂದು ರೂಪಾಯಿ ನೀಡಲಾಗುತ್ತದೆ. ಸಾಮಾನ್ಯ ಕುಟುಂಬ ಯೋಜನೆ ಸಮಾಲೋಚನೆಗೆ ಯಾವುದೇ ಪಾವತಿ ಇರುವುದಿಲ್ಲ ಆದರೆ ಇದು ಆಶಾ ಕಾರ್ಮಿಕರಿಗೆ ಮಾಡಲೇಬೇಕಾದ, ಬೇಸರದ ಮತ್ತು ಸಮಯ ತೆಗೆದುಕೊಳ್ಳುವ ಕೆಲಸವಾಗಿದೆ.

Sunita Rani (centre) with other ASHA facilitators.'The government should recognise us officially as employees', she says
PHOTO • Pallavi Prasad

ಇತರ ಆಶಾ ಫೆಸಿಲಿಟೇಟರುಗಳೊಂದಿಗೆ ಸುನೀತಾ ರಾಣಿ (ನಡುವೆ). 'ಸರ್ಕಾರ ನಮ್ಮನ್ನು ಅಧಿಕೃತವಾಗಿ ನೌಕರರೆಂದು ಗುರುತಿಸಬೇಕು', ಎಂದು ಅವರು ಹೇಳುತ್ತಾರೆ

ಹಲವು ರಾಷ್ಟ್ರವ್ಯಾಪಿ ಮತ್ತು ಪ್ರಾದೇಶಿಕ ಮುಷ್ಕರಗಳ ನಂತರ, ವಿವಿಧ ರಾಜ್ಯಗಳು ತಮ್ಮ ಆಶಾ ಕಾರ್ಮಿಕರಿಗೆ ನಿಗದಿತ ಮಾಸಿಕ ಸ್ಟೈಫಂಡ್ ಪಾವತಿಸಲು ಪ್ರಾರಂಭಿಸಿವೆ. ದೇಶಾದ್ಯಂತ ಇದರ ಮೊತ್ತದಲ್ಲಿ ವ್ಯತ್ಯಾಸಗಳಿವೆ. ರೂ. 4,000 ಕರ್ನಾಟಕದಲ್ಲಿದ್ದರೆ ಆಂಧ್ರಪ್ರದೇಶದಲ್ಲಿ 10,000 ರೂಪಾಯಿಗಳಿವೆ; ಹರಿಯಾಣದಲ್ಲಿ ಜನವರಿ 2018 ರಿಂದ, ಪ್ರತಿ ಆಶಾ ಕಾರ್ಯಕರ್ತೆ, ರಾಜ್ಯ ಸರ್ಕಾರದಿಂದ ಸ್ಟೈಫಂಡ್ ಆಗಿ 4,000 ರೂಪಾಯಿಗಳನ್ನು ಪಡೆಯುತ್ತಿದ್ದಾರೆ.

“ಎನ್‌.ಆರ್‌.ಹೆಚ್‌.ಎಂ ನೀತಿಯ ಪ್ರಕಾರ, ಆಶಾ ಕಾರ್ಮಿಕರು ದಿನಕ್ಕೆ ಮೂರರಿಂದ ನಾಲ್ಕು ಗಂಟೆ, ವಾರದಲ್ಲಿ ನಾಲ್ಕರಿಂದ ಐದು ದಿನ ಕೆಲಸ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಯಾರಿಗೂ ಅವರು ಕೊನೆಯದಾಗಿ ರಜೆ ತೆಗೆದುಕೊಂಡ ಸಮಯ ನೆನಪಿಲ್ಲ ಮತ್ತು ನಮಗೆ ಆರ್ಥಿಕವಾಗಿ ಹೇಗೆ ಬೆಂಬಲ ನೀಡಲಾಗುತ್ತದೆ?”, ಚರ್ಚೆಗೆ ಎಳೆಯುತ್ತಾ ಸುನೀತಾ ಜೋರಾಗಿ ಕೇಳುತ್ತಾರೆ. ಹಲವಾರು ಮಹಿಳೆಯರು ಮಾತನಾಡುತ್ತಾರೆ. ಕೆಲವರಿಗೆ ಸೆಪ್ಟೆಂಬರ್ 2019ರಿಂದ ರಾಜ್ಯ ಸರ್ಕಾರದಿಂದ ಮಾಸಿಕ ಸ್ಟೈಫಂಡ್ ಪಾವತಿಸಲಾಗಿಲ್ಲ. ಉಳಿದವರು ಎಂಟು ತಿಂಗಳಿನಿಂದ ತಮ್ಮ ಕಾರ್ಯಾಧಾರಿತ ಪ್ರೋತ್ಸಾಹ ಧನವನ್ನು ಸ್ವೀಕರಿಸಿಲ್ಲ.

ಅದಾಗ್ಯೂ ಅವರಲ್ಲಿ ಸಾಕಷ್ಟು ಜನರಿಗೆ ಎಷ್ಟು ಹಣ ಬರಬೇಕೆಂಬ ಮಾಹಿತಿ ಕೂಡ ಇಲ್ಲ. "ಹಣವು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹೀಗೆ ಎರಡು ವಿಭಿನ್ನ ಮೂಲಗಳಿಂದ ಬರುತ್ತದೆ. ಅದೂ ಯಾವ್ಯಾವುದೋ ಪ್ರಮಾಣದಲ್ಲಿ ಬರುತ್ತದೆ. ಹೀಗಾಗಿ ಹಣ ಎಲ್ಲಿಂದ ಬಂತು ಮತ್ತು ಇನ್ನೆಷ್ಟು ಬರಬೇಕು ಇವೆಲ್ಲವನ್ನು ತಿಳಿದುಕೊಳ್ಳುವುದು ಬಹಳ ಕಷ್ಟ", ಎಂದು ನೀತು ಹೇಳುತ್ತಾರೆ. ಈ ರೀತಿಯ ಪಾವತಿಯಿಂದಾಗಿ ವೈಯಕ್ತಿಕ ತೊಂದರೆಗಳಾಗುತ್ತಿವೆ. ಸಾಕಷ್ಟು ಕಾರ್ಮಿಕರು ದಿನದ ಬಹುತೇಕ ಸಮಯ ಕೆಲಸದಲ್ಲಿ ಕಳೆದರೂ ಸಂಬಳ ಇಲ್ಲದ ಬಗ್ಗೆ ಮನೆಯಲ್ಲಿ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ಕೆಲವರು ಕುಟುಂಬದ ಒತ್ತಡದಿಂದಾಗಿ ಕೆಲಸವನ್ನೇ ಬಿಡುತ್ತಿದ್ದಾರೆ.

ಇದಲ್ಲದೆ ಆಶಾ ಕಾರ್ಮಿಕರು ಕೆಲವೊಮ್ಮೆ ಮಾಹಿತಿಯನ್ನು ಸಂಗ್ರಹಿಸಲು ಹೋಗುವಾಗ, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ವಿವಿಧ ಉಪಕೇಂದ್ರಗಳಿಗೆ ಹೋಗುವಾಗ ತಮ್ಮದೇ ಕೈಯಿಂದ 100-250 ರೂಗಳ ತನಕ ವ್ಯಯ ಮಾಡಬೇಕಾಗುತ್ತದೆ. “ನಾವು ಹಳ್ಳಿಗಳಲ್ಲಿ ಕುಟುಂಬ ಯೋಜನೆ ಸಭೆಗಳಿಗೆ ಹೋದಾಗ ಅಲ್ಲಿ ಬಿಸಿಲು ಮತ್ತು ಸೆಕೆ ಇರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ನಾವು ಕುಡಿಯಲು ಮತ್ತು ತಿನ್ನಲು ತಂಪಾದ ಏನನ್ನಾದರೂ ವ್ಯವಸ್ಥೆ ಮಾಡಬೇಕೆಂದು ನಿರೀಕ್ಷಿಸುತ್ತಾರೆ. ಇದಕ್ಕಾಗಿ ನಾವು ನಮ್ಮ ಕೈಯಿಂದ 400-500 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ನಾವು ಇದನ್ನು ಮಾಡದಿದ್ದರೆ ಮಹಿಳೆಯರು ಬರುವುದಿಲ್ಲ”, ಎಂದು ಶೀತಲ್ ಹೇಳುತ್ತಾರೆ.

ಎರಡೂವರೆ ಗಂಟೆಗಳ ಕಾಲದ ಮುಷ್ಕರದಲ್ಲಿ ಅವರ ಬೇಡಿಕೆಗಳು ಸ್ಪಷ್ಟವಾಗಿವೆ: ಆಶಾ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಸರ್ಕಾರದೊಂದಿಗೆ ಜೋಡಿಸಲಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಗಳಿಗೆ ಅರ್ಹರಾಗಿರುವ ಆರೋಗ್ಯ ಕಾರ್ಡ್; ಅವರು ಪಿಂಚಣಿಗೆ ಅರ್ಹರು ಎಂದು ಖಚಿತಪಡಿಸುವುದು; ಸಣ್ಣ ಕಾಲಮ್‌ಗಳನ್ನು ಹೊಂದಿರುವ ಎರಡು ಪುಟಗಳ ಅಸ್ತವ್ಯಸ್ತ ಹಾಳೆಯ ಬದಲು ಅವರ ಕಾರ್ಯಗಳಿಗಾಗಿ ಪ್ರತ್ಯೇಕ ಪ್ರೊ ಫಾರ್ಮಾಗಳು; ಕಾರ್ಯಕರ್ತೆಯರ ಮನೆಯಲ್ಲಿ ಕಾಂಡೋಮ್ ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸಂಗ್ರಹಿಸಲು ಒಪ್ಪುವುದಿಲ್ಲವಾದ್ದರಿಂದ ಉಪಕೇಂದ್ರದಲ್ಲಿ ಕಪಾಟನ್ನು ಒದಗಿಸಬೇಕು. ಹೋಲಿಗೆ ಮೂರು ದಿನ ಬಾಕಿಯಿದ್ದಾಗ ನೀತು ಅವರ ಮಗ ಕಾಂಡೊಮ್‌ ತೋರಿಸಿ ನನಗೆ ಬಲೂನ್‌ ಕೊಡು ಎಂದು ಹಠ ಹಿಡಿದಿದ್ದನು.

ಮತ್ತು ಮುಖ್ಯವಾಗಿ, ಆಶಾ ಕಾರ್ಮಿಕರು ತಮ್ಮ ಕೆಲಸವನ್ನು ಗೌರವಿಸಬೇಕು ಮತ್ತು ಮಾನ್ಯತೆಯಿಂದ ಪರಿಗಣಿಸಬೇಕು ಎಂದು ಆಗ್ರಹಿಸುತ್ತಾರೆ.
Many ASHAs have lost track of how much they are owed. Anita (second from left), from Kakroi village, is still waiting for her dues
PHOTO • Pallavi Prasad

ಅನೇಕ ಆಶಾ ಕಾರ್ಮಿಕರಿಗೆ ಎಷ್ಟು ಹಣ ಬರಬೇಕು ಎನ್ನುವ ಮಾಹಿತಿಯೇ ಇಲ್ಲ. ಕಾಕ್ರೊಯ್ ಗ್ರಾಮದ ಅನಿತಾ (ಎಡದಿಂದ ಎರಡನೆಯವರು) ಇನ್ನೂ ಬರಬೇಕಾಗಿರುವ ತನ್ನ ಬಾಕಿಗಾಗಿ ಕಾಯುತ್ತಿದ್ದಾರೆ

"ಜಿಲ್ಲೆಯ ಅನೇಕ ಆಸ್ಪತ್ರೆಗಳಲ್ಲಿನ ಹೆರಿಗೆ ಕೊಠಡಿಗಳಲ್ಲಿ, 'ಆಶಾಗಳಿಗೆ ಪ್ರವೇಶವಿಲ್ಲ' ಎಂದು ಹೇಳುವ ಒಂದು ಫಲಕವನ್ನು ನೀವು ನೋಡಬಹುದು. ನಾವು ಮಧ್ಯರಾತ್ರಿಯಲ್ಲಿ ಹೆರಿಗೆಗೆಂದು ಮಹಿಳೆಯರೊಂದಿಗೆ ಹೋಗುತ್ತೇವೆ. ಆ ಮಹಿಳೆಯರು ಹೆದರಿರುತ್ತಾರೆ ಮತ್ತು ನಮ್ಮಲ್ಲಿ ಸಾಕಷ್ಟು ನಂಬಿಕೆಯಿರಿಸಿರುತ್ತಾರೆ. ಅದಕ್ಕಾಗಿ ನಮ್ಮನ್ನು ಅವರೊಂದಿಗೆ ಇರುವಂತೆ ಕೇಳಿಕೊಳ್ಳುತ್ತಾರೆ. ಆದರೆ ಆಸ್ಪತ್ರೆಯ ಸಿಬ್ಬಂದಿ 'ಚಲೋ ಅಬ್ ನಿಕ್ಲೊ ಯಹಾನ್ ಸೆ (ಈಗ ಇಲ್ಲಿಂದ ಹೊರಡಿʼ) ಎಂದು ನಮ್ಮನ್ನು ಅಲ್ಲಿಂದ ಕಳಿಸುತ್ತಾರೆ. ನಾವು ಅವರಿಗಿಂತ ಕಡಿಮೆಯೆನ್ನುವಂತೆ ಸಿಬ್ಬಂದಿ ನಮ್ಮನ್ನು ನಡೆಸಿಕೊಳ್ಳುತ್ತಾರೆ. ಅನೇಕ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಿರೀಕ್ಷಣಾ ಕೋಣೆ ಇಲ್ಲದಿದ್ದರೂ ಸಹ, ಅನೇಕ ಆಶಾ ಕಾರ್ಮಿಕರು ದಂಪತಿ ಅಥವಾ ಕುಟುಂಬದೊಂದಿಗೆ ರಾತ್ರಿಯಿಡೀ ಉಳಿಯುತ್ತಾರೆ."

ಆಗ ಸುಮಾರು ಮಧ್ಯಾಹ್ನದ 3 ಗಂಟೆಯಾಗಿತ್ತು. ಮಹಿಳೆಯರು ಗಡಿಬಿಡಿ ಮಾಡಲು ಪ್ರಾರಂಭಿಸಿದರು. ಅವರು ಕೆಲಸಕ್ಕೆ ಮರಳಬೇಕಿತ್ತು. ಸುನೀತಾ ಮುಗಿಸಲು ಹೊರಟರು. “ಸರ್ಕಾರ ನಮ್ಮನ್ನು ಅಧಿಕೃತವಾಗಿ ನೌಕರರೆಂದು ಗುರುತಿಸಬೇಕು, ಸ್ವಯಂಸೇವಕರಾಗಿಯಲ್ಲ. ಸಮೀಕ್ಷೆಗಳ ಹೊರೆಯನ್ನು ತೆಗೆದುಹಾಕಬೇಕು. ಆಗ ನಾವು ನಮ್ಮ ಕೆಲಸವನ್ನು ಮಾಡಬಹುದು. ಜೊತೆಗೆ ನಮಗೆ ಬರಬೇಕಿರುವ ಬಾಕಿಯನ್ನು ಪಾವತಿಸಬೇಕು”, ಎಂದು ಹೇಳಿದರು.

ಈ ಹೊತ್ತಿಗೆ ಹಲವು ಕಾರ್ಯಕರ್ತೆಯರು ಹೊರಡಲು ಅನುವಾಗುತ್ತಿದ್ದರು. “ಕಾಮ್ ಪಕ್ಕಾ, ನೌಕ್ರಿ ಕಚ್ಚಿ,”  "ನಹಿ ಚಲೆಗಿ, ನಹಿ ಚಲೆಗಿ," ಎಂದು ಸುನೀತಾ ಕೊನೆಯ ಬಾರಿ ಘೋಷಣೆ ಕೂಗಿದರು. "ನಮ್ಮ ಹಕ್ಕುಗಳಿಗಾಗಿ ಹರತಾಳ್ [ಮುಷ್ಕರ] ಕುಳಿತುಕೊಳ್ಳಲು ಸಹ ನಮಗೆ ಸಮಯವಿಲ್ಲ. ಶಿಬಿರಗಳು ಮತ್ತು ನಮ್ಮ ಸಮೀಕ್ಷೆಗಳ ನಡುವೆ ನಮ್ಮ ಮುಷ್ಕರಗಳನ್ನು ನಾವು ನಿಗದಿಪಡಿಸಬೇಕು!", ತನ್ನ ದೈನಂದಿನ ಮನೆ ಭೇಟಿಗಳನ್ನು ಪ್ರಾರಂಭಿಸಲು ಮತ್ತೊಮ್ಮೆ ಸಿದ್ಧವಾಗುತ್ತಾ, ತನ್ನ ದುಪಟ್ಟಾವನ್ನು ತನ್ನ ತಲೆಯ ಮೇಲೆ ಹೊದೆಯುತ್ತಾ ಶೀತಲ್ ನಗುವಿನೊಂದಿಗೆ ಹೇಳುತ್ತಾರೆ.

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Anubha Bhonsle is a 2015 PARI fellow, an independent journalist, an ICFJ Knight Fellow, and the author of 'Mother, Where’s My Country?', a book about the troubled history of Manipur and the impact of the Armed Forces Special Powers Act.

Other stories by Anubha Bhonsle
Pallavi Prasad

Pallavi Prasad is a Mumbai-based independent journalist, a Young India Fellow and a graduate in English Literature from Lady Shri Ram College. She writes on gender, culture and health.

Other stories by Pallavi Prasad
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor : Hutokshi Doctor
Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru