“ಸರಕಾರ ತನ್ನ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸುತ್ತೇನೆ…”

ಹಾಗಿದ್ದರು ಅಪ್ರತಿಮ ಫೈರ್ ಬ್ರಾಂಡ್ ಸ್ವಾತಂತ್ರ್ಯ ಹೋರಾಟಗಾರ್ತಿ, ವರ್ಚಸ್ವಿ ನಾಯಕಿ, ರೈತರು, ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರ ಅದಮ್ಯ ವಕೀಲರಾದ ಹೌಸಾಬಾಯಿ ಪಾಟೀಲ್. ಮೇಲಿನ ಮಾತುಗಳು ನವೆಂಬರ್ 2018ರಲ್ಲಿ ಸಂಸತ್ತಿನೆಡೆಗೆ ಹೊರಟಿದ್ದ ರೈತರ ದೈತ್ಯ ಮೆರವಣಿಗೆಯ ಪರವಾಗಿ ಅವರು ಕಳುಹಿಸಿದ ವೀಡಿಯೊ ಸಂದೇಶದ ಭಾಗವಾಗಿದ್ದವು.

"ರೈತರು ತಮ್ಮ ಬೆಳೆಗಳಿಗೆ ಉತ್ತಮ ಬೆಲೆಯನ್ನು ಪಡೆಯಬೇಕು," ಎಂದು ಅವರು ವೀಡಿಯೊದಲ್ಲಿ ಗುಡುಗಿದ್ದರು. "ನ್ಯಾಯವನ್ನು ಪಡೆಯಲು, ನಾನು ಸ್ವತಃ ಅಲ್ಲಿಗೆ ಬರುತ್ತೇನೆ" ಮತ್ತು ಮೆರವಣಿಗೆಯಲ್ಲಿ ಸೇರುತ್ತೇನೆ ಎಂದು ಅವರು ಪ್ರತಿಭಟನಾಕಾರರಿಗೆ ಹೇಳಿದ್ದರು. ಅವರಿಗೆ ಆಗ ಹತ್ತಿರ ಹತ್ತಿರ 93 ವರ್ಷವಾಗಿತ್ತು. ಜೊತೆಗೆ ಅವರ ಆರೋಗ್ಯವೂ ಅಷ್ಟೇನೂ ಸ್ವಸ್ಥವಾಗಿರಲಿಲ್ಲ. ಆದರೆ ಅದರ ಕುರಿತು ಅವರಿಗೆ ಚಿಂತೆಯೇ ಇರಲಿಲ್ಲ. "ಮಲಗಬೇಡಿ, ಎಚ್ಚೆತ್ತುಕೊಂಡು ಬಡವರಿಗಾಗಿ ಕೆಲಸ ಮಾಡಿ" ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಸದಾ ಎಚ್ಚರ ಮತ್ತು ಜಾಗೃತ ಸ್ಥಿತಿಯಲ್ಲಿರುತ್ತಿದ್ದ ಹೌಸಾಬಾಯಿ ತನ್ನ 95ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 23, 2021ರಂದು,  ಸಾಂಗ್ಲಿಯಲ್ಲಿ ಚಿರನಿದ್ರೆಗೆ ಜಾರಿದರು. ಇನ್ನು ಅವರ ನೆನಪುಗಳು ನನ್ನನ್ನು ಸದಾ ಕಾಡಲಿವೆ.

1943 ಮತ್ತು 1946ರ ನಡುವೆ ಹೌಸಾಬಾಯಿ (ಹೆಚ್ಚಾಗಿ ಹೌಸಾತಾಯ್ ಎಂದು ಕರೆಯಲ್ಪಡುತ್ತಾರೆ; 'ತಾಯ್' ಎಂಬುದು ಮರಾಠಿಯಲ್ಲಿ ಹಿರಿಯಕ್ಕ ಎಂದು ಗೌರವಪೂರ್ವಕವಾಗಿ ಕರೆಯಲು ಬಳಸುವ ಪದ) ಬ್ರಿಟಿಷ್ ರೈಲುಗಳ ಮೇಲೆ ದಾಳಿ ಮಾಡಿದ, ಪೊಲೀಸ್ ಶಸ್ತ್ರಾಗಾರಗಳನ್ನು ಲೂಟಿ ಮಾಡಿದ ಮತ್ತು ಬ್ರಿಟಿಷ್ ರಾಜ್ ಆಡಳಿತದ ಉದ್ದೇಶಗಳಿಗಾಗಿ ಮತ್ತು ನ್ಯಾಯಾಲಯಗಳಾಗಿ ಬಳಸುತ್ತಿದ್ದ ಡಾಕ್ ಬಂಗಲೆಗಳಿಗೆ ಬೆಂಕಿ ಹಚ್ಚಿದ ಕ್ರಾಂತಿಕಾರಿಗಳ ತಂಡಗಳ ಭಾಗವಾಗಿದ್ದರು. ಅವರು 1943ರಲ್ಲಿ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಘೋಷಿಸಿದ ಸತಾರಾದ ಪ್ರತಿ ಸರ್ಕಾರ್ ಅಥವಾ ತಾತ್ಕಾಲಿಕ, ಭೂಗತ ಸರ್ಕಾರದ ಸಶಸ್ತ್ರ ವಿಭಾಗವಾಗಿ ಸೇವೆ ಸಲ್ಲಿಸಿದ ಕ್ರಾಂತಿಕಾರಿ ಗುಂಪಾದ ತೂಫಾನ್ ಸೇನಾ ('ಸುಂಟರಗಾಳಿ ಸೇನೆ')ಯೊಂದಿಗೆ ಕೆಲಸ ಮಾಡಿದ್ದರು.

1944ರಲ್ಲಿ, ಆಗ ಗೋವಾದಲ್ಲಿ ಪೋರ್ಚುಗೀಸರ ಆಡಳಿತವಿದ್ದ ಕಾಲದಲ್ಲಿ ಅವರು ಅಲ್ಲಿನ ಭೂಗತ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ತನ್ನ ಸಹ ಹೋರಾಟಗಾರರು ಈಜುತ್ತಾ ನದಿ ದಾಟುವಾಗ ಇವರು ಮರದ ಪೆಟ್ಟಿಗೆಯೊಂದರ ಮೇಲೆ ಕುಳಿತು ಮಾಂಡೋವಿ ನದಿಯನ್ನು ದಾಟಿದ್ದರು. ಇಷ್ಟೆಲ್ಲ ಸಾಹಸಗಳ ನಡುವೆಯೂ ಅವರು ಯಾವಾಗಲೂ "ನಾನು ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ವಹಿಸಿದ ಪಾತ್ರ ಸಣ್ಣದು... ಅಂತಹ ಬಹಳ ದೊಡ್ಡ ಕೆಲಸವೇನೂ ಮಾಡಿಲ್ಲ" ಎಂದು ಅವರು ಹೇಳಿಕೊಳ್ಳುತ್ತಿದ್ದರು. ಅವರ ಕುರಿತು ಇನ್ನಷ್ಟು ತಿಳಿಯಲು ದಯವಿಟ್ಟು ನನ್ನ ನೆಚ್ಚಿನ ಲೇಖನಗಳಲ್ಲಿ ಒಂದಾದ ʼಹೌಸಾಬಾಯಿಯ ಕಥೆಯಾಗದ ವೀರಗಾಥೆ ʼ ಎನ್ನುವ ಲೇಖನವನ್ನು ಓದಿ.

ಹೌಸಾಬಾಯಿ ಬ್ರಿಟಿಷ್ ರೈಲುಗಳ ಮೇಲೆ ದಾಳಿ ಮಾಡಿ, ಪೊಲೀಸ್ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ ಮತ್ತು ಡಾಕ್ ಬಂಗಲೆಗಳಿಗೆ ಬೆಂಕಿ ಹಚ್ಚಿದ ಕ್ರಾಂತಿಕಾರಿ ತಂಡಗಳ ಭಾಗವಾಗಿದ್ದರು

ವೀಡಿಯೋ ನೋಡಿ: 'ಸರಕಾರ ನಿದ್ರೆಯಿಂದ ಏಳಬೇಕೆಂದು ಆಗ್ರಹಿಸುತ್ತೇನೆ'

ಅವರು ನಿರ್ಗಮಿಸಿದ ದಿನವೇ ನಾನು ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಅವರ ಕುರಿತು ಮಾತನಾಡಿದ್ದೆ. ಒಂದು ತಲೆಮಾರಿನವರು ಭಾರತದ ಸ್ವಾತಂತ್ರ್ಯ ಹೋರಾಟದ ನಿಜವಾದ ಹೀರೋಗಳನ್ನು ಕಸಿದುಕೊಂಡರು. ಇಂದು ಆ ವೇದಿಕೆಯಲ್ಲಿ ಮೆರೆಯುತ್ತಿರುವ ವಂಚಕರಿಗಿಂತಲೂ ದೇಶಭಕ್ತಿ ಮತ್ತು ಭಾರತೀಯ ರಾಷ್ಟ್ರೀಯತೆಯ ಬಗ್ಗೆ ಮಾತನಾಡಲು ಈ ಹೋರಾಟಗಾರರು ಹೆಚ್ಚು ಅರ್ಹತೆ ಹೊಂದಿದ್ದರು. ಇದು ಭಾರತೀಯರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಬಿಡುಗಡೆ ಮಾಡುವ ಅಗತ್ಯದಿಂದ ಒಗ್ಗೂಡಿಸಲ್ಪಡುವ ದೇಶಭಕ್ತಿಯಾಗಿತ್ತು, ದೇಶಭಕ್ತಿ ಜನರನ್ನು ಧರ್ಮ ಅಥವಾ ಜಾತಿಯ ಆಧಾರದ ಮೇಲೆ ವಿಭಜಿಸಬಾರದು. ಇವರ ದೇಶಭಕ್ತಿಯು, ಜಾತ್ಯತೀತ ಮನೋಭಾವವು ಭರವಸೆಯ ಸಿದ್ಧಾಂತಗಳೊಂದಿಗೆ ಬೆಸೆದುಕೊಂಡಿದೆ ಮತ್ತು ದ್ವೇಷದೊಂದಿಗಲ್ಲ. ಇವರು ಸ್ವಾತಂತ್ರ್ಯದ ಕಾಲಾಳುಗಳು, ಮತಾಂಧರಲ್ಲ.

ಅವರೊಂದಿಗಿನ ಪರಿಯ ಸಂದರ್ಶನವನ್ನು ನಾನು ಎಂದಿಗೂ ಮರೆಯುವುದಿಲ್ಲ, ಅದರ ಕೊನೆಯಲ್ಲಿ ಅವರು ನಮ್ಮನ್ನು ಕೇಳಿದ್ದರು: "ಹಾಗಾದರೆ ಈಗ ನನ್ನನ್ನು ನಿಮ್ಮೊಡನೆ ಕರೆದೊಯ್ಯುತ್ತೀರಾ?"

“ಆದರೆ ಎಲ್ಲಿಗೆ, ಹೌಸಾತಾಯಿ?”

“ʼಪರಿʼಯಲ್ಲಿ ನಿಮ್ಮೆಲ್ಲರ ಜೊತೆ ಕೆಲಸ ಮಾಡಲು” ಎಂದು ನಗುತ್ತಾ ಉತ್ತರಿಸಿದ್ದರು.

ನಾನು ʼFoot-soldiers of Freedom: the last heroes of India’s struggle for independenceʼ. ಎಂಬ ಪುಸ್ತಕವನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ(ದ್ದೆ)ದ್ದೇನೆ. ಹೌಸಾತಾಯ್‌ ಅವರ ವಿಸ್ಮಯಕಾರಿ ಕಥೆಯು ಅದರ ಮುಖ್ಯ ಅಧ್ಯಾಯಗಳಲ್ಲಿ ಒಂದಾಗಿದೆ - ಅದನ್ನು ಓದಲು ನಮ್ಮೊಂದಿಗೆ ಅವರು ಇರುವುದಿಲ್ಲ ಎನ್ನುವುದಕ್ಕಿಂತ ದೊಡ್ಡ ನೋವಿನ ಸಂಗತಿ ಇನ್ನೊಂದಿಲ್ಲ.

ಅನುವಾದ: ಶಂಕರ ಎನ್. ಕೆಂಚನೂರು

P. Sainath
psainath@gmail.com

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru