ಮನ್ಸೂರ್‌ ಆಲಮ್‌ ಶೇಖ್‌ ಅವರು ಬೆಳಗಿನ 5.30ಕ್ಕೆ ಎದ್ದು ದಕ್ಷಿಣ ಮುಂಬೈ ನಗರದ ಭೂಲೇಶ್ವರದ ಚಕ್ರವ್ಯೂಹದಂತಹ ಗಲ್ಲಿಯ ಮೂಲಕ ತಮ್ಮ ಕೆಲಸಕ್ಕೆ ಹೊರಡುತ್ತಾರೆ. ಚೌಕುಳಿ ಲುಂಗಿ ತೊಟ್ಟ ಅವರು ತಮ್ಮ 500 ಲೀಟರ್‌ ನೀರು ಹಿಡಿಸುವ ಲೋಹದ ತಳ್ಳುಗಾಡಿಯನ್ನು ಕೊವ್ಸಾಜಿ ಪಟೇಲ್‌ ಕೆರೆಯತ್ತ ತಳ್ಳಲು ಆರಂಭಿಸುತ್ತಾರೆ. ಈ ಪ್ರದೇಶವು ಅವರ ಮನೆಯಿಂದ ಸುಮಾರು ಒಂದು ಕಿಲೋಮೀಟರ್‌ ದೂರದಲ್ಲಿದೆ. ಮಿರ್ಝಾ ಗಾಲಿಬ್‌ ಮಾರ್ಕೆಟಿನ ದೂಧ್‌ ಬಝಾರಿನ ಬಳಿಯಿರುವ ಸಾರ್ವಜನಿಕ ಶೌಚಾಲಯದ ಮೂಲೆಯಲ್ಲಿದೆ. ಕೆರೆಯಿಂದ ಮರಳಿ ಬರುವ ಅವರು ಶೌಚಾಲಯದ ಬಳಿ ತಮ್ಮ ಗಾಡಿ ನಿಲ್ಲಿಸಲಿಕ್ಕೆ ಜಾಗವನ್ನು ಹುಡುಕಿಕೊಂಡು ತನ್ನ ಗ್ರಾಹಕರಿಗೆ ನೀರು ಹಂಚಲು ಆರಂಭಿಸುತ್ತಾರೆ.

50 ವರ್ಷದವಾರದ ಮನ್ಸೂರ್‌, ಈ ಕೆಲಸ ಮಾಡುವ ಮೂಲಕ ತಮ್ಮ ಬದುಕು ದೂಡಲು ಗಳಿಸುವ ಕೆಲವೇ ಭಿಸ್ಟಿಗಳಲ್ಲಿ ಒಬ್ಬರು. ಇವರು ಕಳೆದ ನಾಲ್ಕು ದಶಕಗಳಿಂದ ಐತಿಹಾಸಿಕ ಮುಂಬೈಯ ಈ ಭಾಗದ ಜನರಿಗೆ ಕುಡಿಯಲು,ಸ್ವಚ್ಛತೆ, ಮತ್ತು ತೊಳೆಯುವ ಉದ್ದೇಶಗಳಿಗಾಗಿ ನೀರನ್ನು ಪೂರೈಸುತ್ತಿದ್ದಾರೆ. ಇತ್ತೀಚೆಗೆ ಕೊವಿಡ್‌ - 19 ಭಿಸ್ಟಿಗಳ ಕೆಲಸಕ್ಕೆ ಅಡ್ಡಿಪಡಿಸುವವರೆಗೂ, ಮನ್ಸೂರ್‌ ಭೂಲೇಶ್ವರದ  ಮುಷಾಕ್‌ ವಾಲಾಗಳಲ್ಲಿ ಒಬ್ಬರಾಗಿದ್ದರು. ಮುಷಾಕ್‌ ಎನ್ನುವುದು (ಮುಷಾಖ್‌ ಎಂದು ಕೂಡಾ ಕರೆಯಲಾಗುತ್ತದೆ) 30 ಲೀಟರ್‌ ನೀರು ಹಿಡಿಸುವ ಚರ್ಮದ ಚೀಲ.

ಆದರೆ ಮುಷಾಕ್‌ ಮೂಲಕ ಮಾಡಲಾಗುತ್ತಿದ್ದ ನೀರು ಸರಬರಾಜು “ಈಗ ಕೇವಲ ನೆನಪು”, ಎನ್ನುತ್ತಾರೆ ಮನ್ಸೂರ್.‌ ಅವರು 2021ರಿಂದ ಪ್ಲಾಸ್ಟಿಕ್‌ ಬಕೆಟ್‌ ಬಳಸಲು ಆರಂಭಿಸಿದ್ದಾರೆ. “ಹಿರಿಯ ಭಿಸ್ಟಿಗಳು ಈಗ ತಮ್ಮ ಊರುಗಳಿಗೆ ಮರಳಿದ್ದಾರೆ. ಕಿರಿಯರು ಬೇರೆ ಕೆಲಸಗಳನ್ನು ನೋಡಿಕೊಳ್ಳಬೇಕಿದೆ,” ಎನ್ನುತ್ತಾರವರು. ಈ ಭಿಸ್ಟಿ ಕೆಲಸವು ಉತ್ತರ ಭಾರತದ ಮುಸ್ಲಿಮ್‌ ಸಮುದಾಯದ ಸಾಂಪ್ರದಾಯಿಕ ವೃತ್ತಿಯ ಪಳೆಯುಳಿಕೆಯಾಗಿದೆ. ʼಭಿಸ್ಟಿʼ ಎನ್ನುವುದು ಪರ್ಷಿಯನ್‌ ಪದ ಮತ್ತು ಇದರ ಅರ್ಥ ನೀರು ಒಯ್ಯುವವನು ಎಂದು. ಈ ಸಮುದಾಯವನ್ನು ಸಖ್ಖಾ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಅರಬಿಕ್‌ ಭಾಷೆಯಲ್ಲಿ ಇದಕ್ಕೆ ʼನೀರು ತರುವವʼ ʼಬಟ್ಟಲು ತರುವವʼ ಎನ್ನುವ ಅರ್ಥಗಳಿವೆ. ಭಿಸ್ಟಿ ಸಮುದಯಾವನ್ನು ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ,ದೆಹಲಿ, ಮಧ್ಯಪ್ರದೇಶ, ಮತ್ತು ಗುಜರಾತಿನಲ್ಲಿ(ಇಲ್ಲಿ ಈ ಸಮುದಾಯವನ್ನು ಪಖಾಲಿ ಎಂದು ಗುರುತಿಸಲಾಗುತ್ತದೆ.) ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಗುರುತಿಸಲಾಗಿದೆ (ಒಬಿಸಿ).

PHOTO • Aslam Saiyad

ಮನ್ಸೂರ್‌ ಆಲಮ್‌ ಶೇಖ್‌ (ಗುಲಾಬಿ ಬಣ್ಣದ ಅಂಗಿಯಲ್ಲಿರುವವರು) ಅವರಿಗೆ ಸಿಪಿ ಕೆರೆಯಿಂದ ಭೂಲೇಶ್ವರಕ್ಕೆ ತನ್ನ ನೀರು ತುಂಬಿದ ಲೋಹದ ಗಾಡಿಯನ್ನು ತಳ್ಳಿಕೊಂಡು ಬರಲು ಯಾರದ್ದಾದರೂ ಸಹಾಯ ಬೇಕಾಗುತ್ತದೆ. ಗಾಡಿಯ ಮೇಲ್ಬಾಗದಲ್ಲಿ ಅವರ ಮಶಾಕ್‌ ಕಾಣುತ್ತಿದೆ

“ಒಂದು ಕಾಲದಲ್ಲಿ ಭಿಸ್ಟಿಗಳು ನೀರು ಸರಬರಾಜು ವ್ಯವಹಾರವನ್ನು ಆಳಿದ್ದರು. ಮುಂಬೈನ ಹಲವೆಡೆ ಅವರ ಈ ರೀತಿಯ ಗಾಡಿಗಳಿದ್ದವು,” ಎನ್ನುತ್ತಾರೆ ಮನ್ಸೂರ್.‌ “ಸುಮಾರು 80 – 10 ಜನರನ್ನು ಗಾಡಿಯೊಂದಕ್ಕೆ ಸರಬರಾಜು ಕೆಲಸಗಾರರನ್ನಾಗಿ ನೇಮಿಸಿಕೊಳ್ಳಲಾಗುತ್ತಿತ್ತು.” ಆದರೆ ಯಾವಾಗ ಹಳೇ ಮುಂಬಯಿ ಪ್ರದೇಶದಲ್ಲಿ ಈ ಲಾಭದಾಯಕ ವೃತ್ತಿ ಕುಸಿಯತೊಡಗಿತೊ ಆಗ ಭಿಸ್ಟಿಗಳು  ಬೇರೆ ಕೆಲಸಗಳೆಡೆಗೆ ಸಾಗತೊಡಗಿದರು. ಉತ್ತರ ಪ್ರದೇಶ ಮತ್ತು ಬಿಹಾರಗಳಿಂದ ಬಂದ ಮಲಸೆಗಾರರು ನಿಧಾನವಾಗಿ ಸ್ಥಳೀಯರ ಕೆಲಸವನ್ನು ಪಡೆಯತೊಡಗಿದರು ಎನ್ನುತ್ತಾರವರು.

1980ರ ದಶಕದಲ್ಲಿ ಮನ್ಸೂರ್‌ ಬಿಹಾರದ ಕಥಿಹಾರ್‌ ಜಿಲ್ಲೆಯ ಗಛ್‌ ರಸೂಲ್‌ಪುರ್‌ ಎನ್ನುವ ಊರಿನಿಂದ ಮುಂಬಯಿಗೆ ಬಂದರು. ಈ ಕೆಲಸಕ್ಕೆ ಸೇರುವ ಮೊದಲು ಅವರು ಕೆಲವು ತಿಂಗಳ ಕಾಲ ವಡಾಪಾವ್‌ ವ್ಯಾಪಾರವನ್ನು ಮಾಡಿದ್ದರು. ಅವರು ಹುಟ್ಟಿನಿಂದ ಭಿಸ್ಟ್‌ ಅಲ್ಲವಾದರೂ ಭೂಲೇಶ್ವರದ ಭೆಂಡಿ ಬಜಾರ್‌ ಮತ್ತು ಡೊಂಗ್ರಿ ಪ್ರದೇಶಗಳಲ್ಲಿ ನೀರು ಸರಬರಾಜು ಆರಂಭಿಸಿದರು.

“ಆಗ ನನ್ನನ್ನು ರಾಜಸ್ಥಾನ ಮೂಲದ ಭಿಸ್ಟಿ ಮಮ್ತಾಜ್‌ ಎನ್ನುವವರು ಕೆಲಸಕ್ಕೆ ನೇಮಿಸಿಕೊಂಡಿದ್ದರು,” ಎನ್ನುತ್ತಾರೆ ಮನ್ಸೂರ್.‌ “ಅವರ ಬಳಿ ಒಟ್ಟು ನಾಲ್ಕು ಗಾಡಿಗಳಿದ್ದವು. ಪ್ರತಿಯೊಂದನ್ನೂ ಬೇರೆ ಬೇರೆ ಮೊಹಲ್ಲಾಗಳಲ್ಲಿ ನಿಲ್ಲಿಸಿ ಅಲ್ಲಿಂದ 7 – 8 ಜನರು ಮಶಾಕ್‌ ಬಳಸಿ ನೀರು ಸರಬರಾಜು ಮಾಡುತ್ತಿದ್ದರು.”

PHOTO • Aslam Saiyad

ಕೊವಿಡ್ ‌ - 19 ಲಾಕ್ ಡೌನ್ ಗಳ ನಂತರ ಮನ್ಸೂರ್ ಮಶಾಕ್ ಬದಲು ಬಕೆಟ್ ಬಳಸಬೇಕಾದ ಅನಿವಾರ್ಯತೆಯನ್ನು ಎದುರಿಸಿದರು

ಮುಮ್ತಾಜ್‌ ಅವರೊಂದಿಗೆ 5 ವರ್ಷಗಳ ಕೆಲಸ ಮಾಡಿದ ನಂತರ, ಮನ್ಸೂರ್‌ ಗಾಡಿಯೊಂದನ್ನು ಬಾಡಿಗೆಗೆ ಪಡೆದು ಸ್ವತಃ ತಾನೇ ನೀರು ಸರಬರಾಜು ಮಾಡತೊಡಗಿದರು. “ಇತ್ತೀಚೆಗೆ, ಅಂದರೆ 20 ವರ್ಷದ ಕೆಳಗೂ ನಮಗೆ ಸಾಕಷ್ಟು ಕೆಲಸವಿತ್ತು. ಈಗ ಅದರ 25 ಶೇಕಡಾ ಕೂಡಾ ಕೆಲಸವಿಲ್ಲ. ಪ್ಲಾಸ್ಟಿಕ್‌ ಬಾಟಲುಗಳಲ್ಲಿ ನೀರಿನ ಮಾರಾಟ ಆರಂಭಗೊಂಡ ನಂತರ ನಮ್ಮ ವ್ಯಾಪಾರ ಕುಸಿಯತೊಡಗಿತು,” ಎನ್ನುತ್ತಾರೆ ಮನ್ಸೂರ್.‌ 1991ರ ಉದಾರೀಕರಣ ನೀತಿಯ ನಂತರ ಬಾಟಲಿ ನೀರಿನ ವ್ಯಾಪಾರ ಚುರುಕುಗೊಂಡಿತು. ಇದು ಭೂಲೇಶ್ವರದ ಭಿಸ್ಟಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿತು. 1999ರಿಂದ 2004ರ ಅವಧಿಯಲ್ಲಿ ಭಾರತದಲ್ಲಿ ಬಾಟಲಿ ನೀರಿನ ವ್ಯವಹಾರ ಮೂರುಪಟ್ಟು ಹೆಚ್ಚಾಗಿದೆ . 2002ರಲ್ಲಿ ಈ ಉದ್ಯಮದ ಅಂದಾಜು ವ್ಯವಹಾರ 1,000 ಕೋಟಿ.

ಉದಾರೀಕರಣವು ಅನೇಕ ಸಂಗತಿಗಳನ್ನು ಬದಲಾಯಿಸಿತು - ಮಾಲ್ ಗಳು ಸಣ್ಣ ಅಂಗಡಿಗಳನ್ನು ಬದಲಾಯಿಸಿದವು, ಎತ್ತರದ ಕಟ್ಟಡಗಳು ಚಾಳ್‌ ಗಳನ್ನು ಆಕ್ರಮಿಸಿಕೊಂಡವು, ಮತ್ತು ಟ್ಯಾಂಕರುಗಳು ಮೋಟಾರ್‌ ಆಳವಡಿಸಿದ ಪೈಪಿನಿಂದ ನೀರನ್ನು ಪೂರೈಸಲು ಪ್ರಾರಂಭಿಸಿದವು. ವಸತಿ ಕಟ್ಟಡಗಳಿಂದ ನೀರಿನ ಬೇಡಿಕೆ ಕ್ರಮೇಣ ಕ್ಷೀಣಿಸಿತು, ಮತ್ತು ಅಂಗಡಿಗಳು ಮತ್ತು ವರ್ಕ್‌ಶಾಪ್‌ಗಳಂತಹ ಸಣ್ಣ ವಾಣಿಜ್ಯ ಸಂಸ್ಥೆಗಳು ಮಾತ್ರ ಮಶಾಕ್‌ವಾಲಾಗಳ ಮೇಲೆ ಅವಲಂಬಿತವಾಗಿದ್ದವು. "ಕಟ್ಟಡಗಳಲ್ಲಿ ವಾಸಿಸುವವರು ಟ್ಯಾಂಕರುಗಳಿಂದ ನೀರನ್ನು ಆರ್ಡರ್ ಮಾಡಿ ತರಿಸಲು ಪ್ರಾರಂಭಿಸಿದರು. ಜನರು ನೀರಿಗಾಗಿ ಪೈಪ್ ಲೈನುಗಳನ್ನು ಸಹ ಅಳವಡಿಸಿಕೊಂಡರು. ಮತ್ತು ಈಗ, ಮದುವೆಗಳಲ್ಲಿ ಬಾಟಲಿ ನೀರನ್ನು ನೀಡುವುದು ಅಭ್ಯಾಸವಾಗಿದೆ, ಆದರೆ ಮೊದಲು ನೀರನ್ನು ನಾವು ಪೂರೈಸುತ್ತಿದ್ದೆವು", ಎಂದು ಮನ್ಸೂರ್ ಹೇಳುತ್ತಾರೆ.

ಮಹಾಮಾರಿ ಆರಂಭಕ್ಕೂ ಮೊದಲು ಮನ್ಸೂರ್‌ ಒಂದು ಮಶಾಕ್‌ ನೀರಿಗೆ (30 ಲೀಟರ್)‌ 15 ರೂಪಾಯಿ ಗಳಿಸುತ್ತಿದ್ದರು. ಪ್ರಸ್ತುತ, 15 ಲೀಟರ್‌ ಅಳತೆಯ ಒಂದು ಬಕೆಟ್‌ ನೀರಿಗೆ 10 ರೂ. ಗಳಿಸುತ್ತಾರೆ. ಅವರ ಗಾಡಿಗೆ ತಿಂಗಳೊಂದಕ್ಕೆ 170 ರೂ. ಬಾಡಿಗೆ ನೀಡುತ್ತಾರೆ. ಮತ್ತು ಅದರ ಮೂಲವನ್ನು ಅವಲಂಬಿಸಿ ದಿನವೊಂದಕ್ಕೆ ನೀರಿಗಾಗಿ ರೂ.50ರಿಂದ 80ರ ತನಕ ವ್ಯಯಿಸುತ್ತಾರೆ. ಬಾವಿಗಳಿರುವ ಸುತ್ತಲಿನ ಶಾಲೆಗಳು ಮತ್ತು ದೇವಸ್ಥಾನಗಳು ಭಿಸ್ಟಿಗಳಿಗೆ ನೀರನ್ನು ಮಾರುತ್ತಾರೆ. “ಮೊದಲೆಲ್ಲ ತಿಂಗಳಿಗೆ 10,000-15,000 ರೂಪಾಯಿಗಳಷ್ಟು ಉಳಿಯುತ್ತಿತ್ತು, ಆದರೆ ಈಗೀಗ 4,000-5,000 ಉಳಿಸುವುದು ಕೂಡಾ ಕಷ್ಟ ಆಗಿದೆ,” ಎನ್ನುತ್ತಾ ತಮ್ಮ ಹಿಂದಿನ ಒಳ್ಳೆಯ ದಿನಗಳಿಗೆ ಈಗಿನ ದಿನಗಳನ್ನು ಹೋಲಿಸುತ್ತಾರೆ ಮನ್ಸೂರ್.‌

PHOTO • Aslam Saiyad

ಎಲ್ಲೆಡೆಗೂ ನೀರು ತಲುಪಿಸಿದ ನಂತರ ( ಡಿಸೆಂಬರ್ ‌ 2020 ರಲ್ಲಿ ), ತಾನು ಯಾರಿಗಾದರೂ ನೀರು ತಲುಪಿಸುವುದನ್ನು ತಪ್ಪಿಸಿದ್ದೇನೆಯೇ ಎಂದು ಫೋನಿನಲ್ಲಿ ನೋಡುತ್ತಿರುವುದು . ಅವರು ಖಾಯಂ ಗಿರಾಕಿಗಳನ್ನು ಹೊಂದಿದ್ದು , ದಿನವೊಂದಕ್ಕೆ 10 – 30 ಆರ್ಡರ್ ಗಳನ್ನು ಪಡೆಯುತ್ತಾರೆ . ಕೆಲವರು ಖುದ್ದು ಭೇಟಿಯಾಗಿ ಬೇಡಿಕೆಯಿಟ್ಟರೆ ಕೆಲವರು ಫೋನ್ ಮೂಲಕ ತಲುಪುತ್ತಾರೆ

ಅವರ ವ್ಯಾಪಾರದ ಪಾಲುದಾರ, 50 ವರ್ಷದ ಆಲಂ (ಅವರು ತಮ್ಮ ಮೊದಲ ಹೆಸರನ್ನು ಮಾತ್ರ ಬಳಸುತ್ತಾರೆ) ಸಹ ಬಿಹಾರದ ಅವರ ಹಳ್ಳಿಯವರು. ಆಲಂ ಮತ್ತು ಮನ್ಸೂರ್ ಮುಂಬೈಯಲ್ಲಿ 3-6 ತಿಂಗಳು ಕೆಲಸ ಮಾಡುತ್ತಾರೆ ಮತ್ತು ಉಳಿದ ಸಮಯವನ್ನು ತಮ್ಮ ಕುಟುಂಬಗಳೊಂದಿಗೆ ಹಳ್ಳಿಯಲ್ಲಿ ಕಳೆಯುತ್ತಾರೆ. ಊರಿನಲ್ಲಿ, ಅವರು ತಮ್ಮ ಹೊಲಗಳನ್ನು ನೋಡಿಕೊಳ್ಳುತ್ತಾರೆ ಅಥವಾ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.

2020ರ ಮಾರ್ಚಿಯಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಿದ್ದ ಸಮಯದಲ್ಲಿ, ಜೂನ್ 2020ರವರೆಗೆ ವಿಸ್ತರಿಸಿದ ಸಮಯದಲ್ಲಿ , ಮಶಾಕ್‌ವಾಲಾಗಳು ಭೂಲೇಶ್ವರದಲ್ಲಿ ಕೇವಲ ಕೆಲವೇ ಕೆಲವು ಗ್ರಾಹಕರನ್ನು ಹೊಂದಿದ್ದರು - ಈ ಪ್ರದೇಶದ ಸಣ್ಣ ವ್ಯಾಪಾರ ಸಂಸ್ಥೆಗಳ ಸಹಾಯಕ ಸಿಬ್ಬಂದಿಗಳು ಹಗಲಿನಲ್ಲಿ ಕೆಲಸ ಮಾಡಿ ರಾತ್ರಿ ವೇಳೆ ಫುಟ್ಪಾತ್‌ ಮೇಲೆ ಮಲಗುತ್ತಿದ್ದರು. ಆದರೆ ಅನೇಕ ಅಂಗಡಿಗಳು ಮುಚ್ಚಿದ್ದವು ಮತ್ತು ಅವುಗಳ ಕೆಲಸಗಾರರು ಮನೆಗೆ ಮರಳಿದ್ದರು. ಆದ್ದರಿಂದ ಮನ್ಸೂರ್ ತನ್ನ ಐದು ಮಕ್ಕಳಿಗೆ‌ ದುಡಿಮೆಯಿಲ್ಲದೆ ಮನೆಯಲ್ಲಿಯೇ ಇದ್ದು ಹಣ ಕಳುಹಿಸಬೇಕಿತ್ತು, ಆದರೆ ಅವರಿಗೆ ತನ್ನ ಕುಟುಂಬಕ್ಕೆ ಬೇಕಾಗುವಷ್ಟು ಹಣವನ್ನು ಕಳುಹಿಸಲು ಸಾಕಷ್ಟು ಸಂಪಾದಿಸಲು ಸಾಧ್ಯವಾಗಲಿಲ್ಲ. ಅವರು 2021ರ ಆರಂಭದಲ್ಲಿ ನಗರದ ಹಾಜಿ ಅಲಿ ಪ್ರದೇಶದ ಕಟ್ಟಡ ಪುನರ್ನಿರ್ಮಾಣ ಸ್ಥಳದಲ್ಲಿ ದಿನಕ್ಕೆ 600 ರೂ. ಕೂಲಿಗೆ ಗಾರೆ ಮೇಸ್ತ್ರಿಗೆ ಸಹಾಯಕನಾಗಿ ಕೆಲಸ ಪ್ರಾರಂಭಿಸಿದರು,

2021ರ ಮಾರ್ಚಿಯಲ್ಲಿ ತನ್ನ ಊರಾದ ಗಛ್‌ ರಸೂಲ್‌ಪುರಕ್ಕೆ ತೆರಳಿದರು. ಅಲ್ಲಿ ದಿನವೊಂದಕ್ಕೆ 200 ರೂಪಾಯಿಗಳ ಕೂಲಿಗೆ ಕೃಷಿ ಕಾರ್ಮಿಕನಾಗಿ ದುಡಿದ ಅವರು, ತಾನು ದುಡಿದ ಹಣದಿಂದ ತಮ್ಮ ಮನೆಯನ್ನು ರಿಪೇರಿ ಮಾಡಿಸಿದರು. ನಾಲ್ಕು ತಿಂಗಳು ಊರಲ್ಲಿ ಕಳೆದು ಮತ್ತೆ ಮುಂಬಯಿಗೆ ಮರಳಿದ ಅವರು ಮತ್ತೆ ಮಶಾಕ್‌ ವಾಲಾ ಆಗಿ ಕೆಲಸ ಆರಂಭಿಸಿದರು. ಈ ಬಾರಿ ನಲ್‌ ಬಜಾರ್‌ ಪ್ರದೇಶದಲ್ಲಿ ತನ್ನ ವ್ಯವಹಾರವನ್ನು ಆರಂಭಿಸಿದರು. ಆದರೆ ಅವರ ಮಶಾಖ್‌ ಬ್ಯಾಗನ್ನು ರಿಪೇರಿ ಮಾಡಿಸಬೇಕಾದ ಅವಶ್ಯಕತೆಯಿತ್ತು. ಇದಕ್ಕಾಗಿ ಅವರು ಯೂನಸ್‌ ಶೇಖ್‌ ಅವರನ್ನು ಹುಡುಕಿ ಹೊರಟರು. ಮಶಾಕ್‌ ಚೀಲಗಳಿಗೆ ಎರಡು ತಿಂಗಳಿಗೊಮ್ಮೆ ರಿಪೇರಿಯ ಅಗತ್ಯವಿರುತ್ತದೆ.

PHOTO • Aslam Saiyad

2021ರ ಜನವರಿಯಲ್ಲಿ ಮುಂಬೈನ ಭೆಂಡಿ ಬಜಾರ್ ಪ್ರದೇಶದಲ್ಲಿ ಯೂನುಸ್ ಶೇಖ್ ಮಶಾಕ್ ಚೀಲವನ್ನು ದುರಸ್ತಿಗೊಳಿಸುತ್ತಿರುವುದು . ಕೆಲವು ತಿಂಗಳುಗಳ ನಂತರ ಅವರು ಬಹ್ರೈಚ್ ಜಿಲ್ಲೆಯ ತನ್ನ ಮನೆಗೆ ಮರಳಿದರು

60ರಿಂದ 70 ವರ್ಷ ವಯಸ್ಸಿನ ಯೂನಸ್ ತನ್ನ ಜೀವನೋಪಾಯಕ್ಕಾಗಿ ಭಿಂಡಿ ಮಾರುಕಟ್ಟೆಯಲ್ಲಿ ಮಶಾಕ್‌ಗಳನ್ನು ತಯಾರಿಸುವುದು ಮತ್ತು ದುರಸ್ತಿ ಮಾಡುವ ಕೆಲಸ ಮಾಡುತ್ತಾರೆ. ಮಾರ್ಚ್ 2020ರಲ್ಲಿ ಲಾಕ್‌ಡೌನ್‌ ಹೇರಿದ ನಾಲ್ಕು ತಿಂಗಳ ನಂತರ ಯೂನಸ್ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ತನ್ನ ಮನೆಗೆ ಮರಳಿದರು. ಅದೇ ವರ್ಷದ ಡಿಸೆಂಬರ್‌ನಲ್ಲಿ ಅವರು ಮತ್ತೆ ಮುಂಬೈಗೆ ಮರಳಿದರು, ಆದರೆ ಅವರಿಗೆ ಯಾವುದೇ ವಿಶೇಷ ಕೆಲಸ ಇರಲಿಲ್ಲ. ಅವರ ಪ್ರದೇಶದಲ್ಲಿ ಕೇವಲ 10 ಕಾರ್ಮಿಕರು ಮಾತ್ರವೇ ಉಳಿದಿದ್ದರು ಮತ್ತು ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ನಂತರ, ಅವರ ಕೆಲಸಕ್ಕೆ ಬಹಳ ಕಡಿಮೆ ಹಣವನ್ನು ನೀಡಲಾಗುತ್ತಿತ್ತು. ಹತಾಶತೆಯ ನಡುವೆ, ಅವರು 2021ರ ಆರಂಭದಲ್ಲಿ ಶಾಶ್ವತವಾಗಿ ಬಹ್ರೈಚ್‌ಗೆ ಮರಳಿದರು. ಈಗ ತನಗೆ ಮಶಾಕ್ ಸರಿಪಡಿಸುವ ಕೆಲಸ ಮಾಡುವ ಶಕ್ತಿ ಇಲ್ಲ ಎನ್ನುತ್ತಾರೆ.‌

35ರ ಹರೆಯದ ಬಾಬು ನಯ್ಯರ್ ಪ್ರಕಾರ ಮಶಾಕ್‌ ಬಳಕೆ ಇನ್ನು ನೆನಪು ಮಾತ್ರ. "ನಾನು ಅದನ್ನು ಎಸೆದಿದ್ದೇನೆ, ಏಕೆಂದರೆ ಅದನ್ನು ಇನ್ನು ಮುಂದೆ ದುರಸ್ತಿ ಮಾಡಿಸಲು ಸಾಧ್ಯವಿಲ್ಲ." ಈಗ ಭೆಂಡಿ ಬಜಾರ್‌ನ ನವಾಬ್ ಅಯಾಜ್ ಮಸೀದಿಯ ಸುತ್ತಮುತ್ತಲಿನ ಅಂಗಡಿಗಳಿಗೆ ನೀರು ಹಾಕಲು ಅವರು ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಬಳಸುತ್ತಾರೆ. "ಆರು ತಿಂಗಳ ಹಿಂದೆ 5-6 ಜನರು ಮಶಾಕ್ ಬಳಸುತ್ತಿದ್ದರು. ಆದರೆ ಯೂನಸ್ ಹೋದ ನಂತರ ಎಲ್ಲರೂ ಬಕೆಟ್ ಅಥವಾ ಹಂಡಾ‌ (ಅಲ್ಯೂಮಿನಿಯಮ್‌ ಬಿಂದಿಗೆ) ಬಳಸುತ್ತಿದ್ದಾರೆ" ಎಂದು ಬಾಬು ಹೇಳಿದರು.

ತನ್ನ ಚರ್ಮದ ಚೀಲವನ್ನು ರಿಪೇರಿ ಮಾಡಲು ಯಾರೊಬ್ಬರೂ ಸಿಗದೆ, ಮನ್ಸೂರ್ ಕೂಡ ಪ್ಲಾಸ್ಟಿಕ್ ಬಕೆಟ್ಗಳನ್ನು ಬಳಸಬೇಕಾಯಿತು. “ಯೂನಸ್‌ ಊರಿಗೆ ಹೋದ ನಂತರ ಮಶಾಕ್ ರಿಪೇರಿ ಮಾಡುವವರೇ ಇಲ್ಲ” ಎಂದು ಮನ್ಸೂರ್ ಸ್ಪಷ್ಟಪಡಿಸಿದರು. ಬಕೆಟ್ ನೀರು ಹೊತ್ತು ಮೆಟ್ಟಿಲು ಹತ್ತುವುದು ಬಹಳ ಕಷ್ಟ. ಮಶಾಕ್ ಇದ್ದಾಗ ಈ ಕೆಲಸ ಸುಲಭವಿತ್ತು. ‌ ಏಕೆಂದರೆ ಅದನ್ನು ಭುಜದ ಮೇಲೆ ಸಾಗಿಸಬಹುದು ಮತ್ತು ಹೆಚ್ಚು ನೀರನ್ನು ಸಾಗಿಸಬಹುದು. “ಭಿಸ್ಟಿಯಾಗಿ ಇದು ನಮ್ಮ ಕೆಲಸಗಳ ಕೊನೆಯ ಹಂತವಾಗಿದೆ, ಇದರಲ್ಲಿ ಹಣವಿಲ್ಲ, ಮೋಟಾರ್ ಪೈಪ್‌ಗಳು ನಮ್ಮ ಕೆಲಸವನ್ನು ಕಿತ್ತುಕೊಂಡಿವೆ” ಎಂದು ಬಾಬು ಅಂದಾಜಿಸುತ್ತಾರೆ.

PHOTO • Aslam Saiyad

ಭೂಲೇಶ್ವರದ ಸಿ . ಪಿ . ಟ್ಯಾಂಕ್ ಪ್ರದೇಶದಲ್ಲಿರುವ ಚಂದರಾಂಜಿ ಹೈಸ್ಕೂಲಿನಲ್ಲಿ ಮನ್ಸೂರ್ ತನ್ನ ಗಾಡಿಗೆ ನೀರು ತುಂಬಿಸುತ್ತಿರುವುದು . ಇಲ್ಲಿನ ಬಾವಿಗಳನ್ನು ಹೊಂದಿರುವ ದೇವಾಲಯಗಳು ಮತ್ತು ಶಾಲೆಗಳು ಭಿಸ್ಟಿಗಳಿಗೆ ನೀರನ್ನು ಮಾರಾಟ ಮಾಡುತ್ತವೆ


PHOTO • Aslam Saiyad

ದೂಧ್ ಬಜಾರ್ ಬಳಿ ಮನ್ಸೂರ್ ತನ್ನ ಗಾಡಿಯಿಂದ ಡೆಲಿವರಿ ಪಾಯಿಂಟ್ ಒಂದರ ಬಳಿ ನೀರು ತುಂಬಿಸಿಕೊಳ್ಳುತ್ತಿರುವುದು . ಇದು 2020 ಡಿಸೆಂಬರ್ ಸಮಯ . ಆಗಿನ್ನೂ ಅವರು ಮಶಾಕ್ ಬಳಸುತ್ತಿದ್ದರು . ಅವರು ಮಶಾಕ್ ಚೀಲವನ್ನು ಅಡಿಭಾಗದ ಬೆಂಬಲಕ್ಕಾಗಿ ಕಾರಿನ ಟಯರ್ ಒಂದರ ಮೇಲಿರಿಸುತ್ತಾರೆ . ನಂತರ ಅದರ ಬಾಯಿಯಯನ್ನು ಹಿಡಿದುಕೊಂಡು ಅದು ತುಂಬುವ ತನಕ ಕಾಯುತ್ತಾರೆ


PHOTO • Aslam Saiyad

ಮಶಾಕ್‌ ಚೀಲವನ್ನು ಹೆಗಲಿಗೆ ನೇತುಹಾಕಿಕೊಳ್ಳಲಾಗುತ್ತದೆ. ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಅದರ ಬಾಯಿಯನ್ನು ಒಂದು ಕೈಯಿಂದ ಹಿಡಿದುಕೊಳ್ಳಲಾಗುತ್ತದೆ


PHOTO • Aslam Saiyad

ಭೂಲೇಶ್ವರದಲ್ಲಿ ಸಣ್ಣ ಸಣ್ಣ ವ್ಯಾಪಾರಸ್ಥರು ಮಶಾಕ್ ವಾಲಾಗಳಿಂದ ನೀರನ್ನು ತರಿಸಿಕೊಳ್ಳುತ್ತಾರೆ . ಚಿತ್ರದಲ್ಲಿ ಮನ್ಸೂರ್ ಅವರು ನಲ್ ಬಜಾರಿನಲ್ಲಿನ ಅಂಗಡಿಯೊಂದಕ್ಕೆ ನೀರನ್ನು ತಲುಪಿಸುತ್ತಿದ್ದಾರೆ . ಅವರಿಗೆ ಕಟ್ಟಡ ನಿರ್ಮಾಣ ಸ್ಥಳಗಳಿಂದಲೂ ನೀರಿಗಾಗಿ ಬೇಡಿಕೆ ಬರುತ್ತದೆ


PHOTO • Aslam Saiyad

ನಲ್‌ ಬಜಾರಿನ ಒಂದು ಶಿಥಿಲಗೊಂಡಿರುವ ಮೂರಂತಸ್ಥಿನ ವಸತಿ ಕಟ್ಟಡದ ಮರದ ಮೆಟ್ಟಿಲುಗಳನ್ನು ಹತ್ತುತ್ತಿರುವ ಮನ್ಸೂರ್.‌ ಇಲ್ಲಿ ಅವರು ಎರಡನೇ ಮಹಡಿಯಲ್ಲಿರುವ ವ್ಯಕ್ತಿಯೊಬ್ಬರಿಗೆ 60 ಲೀಟರ್‌ ನೀರನ್ನು ತಲುಪಿಸಬೇಕಿದೆ. ಇದಕ್ಕಾಗಿ ಅವರು ಎರಡು ಮೂರು ಬಾರಿ ಮೆಟ್ಟಿಲುಗಳನ್ನು ಹತ್ತಿಳಿಯಬೇಕಾಗುತ್ತದೆ


PHOTO • Aslam Saiyad

ದೂಧ್ ಬಜಾರಿನಲ್ಲಿ ಗಾಡಿಯನ್ನು ತಳ್ಳುವುದು ಮತ್ತು ನೀರನ್ನು ಹಂಚುವುದರಿಂದ ಒಂದಷ್ಟು ವಿಶ್ರಾಂತಿ ಪಡೆಯುತ್ತಿರುವ ಮನ್ಸೂರ್ ಮತ್ತು ರಜಾಕ್


PHOTO • Aslam Saiyad

ಬೆಳಿಗ್ಗೆ ಕಠಿಣ ಪರಿಶ್ರಮದ ನಂತರ ಮಧ್ಯಾಹ್ನದ ಕಿರುನಿದ್ರೆ . 2020 ರಲ್ಲಿ , ಮನ್ಸೂರ್ ಅವರ ' ಮನೆ ' ದೂಧ್ ಬಜಾರಿನಲ್ಲಿ ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿನ ತೆರೆದ ಸ್ಥಳವಾಗಿತ್ತು . ಅವರು ಬೆಳಿಗ್ಗೆ 5 ರಿಂದ 11 ರವರೆಗೆ ಕೆಲಸ ಮಾಡುತ್ತಾರೆ , ಮಧ್ಯಾಹ್ನ ಊಟ ಮತ್ತು ಸ್ವಲ್ಪ ನಿದ್ರೆಯ ನಂತರ ನಂತರ ಮತ್ತೆ 1 ರಿಂದ 5 ರವರೆಗೆ ಕೆಲಸ ಮಾಡುತ್ತಾರೆ


PHOTO • Aslam Saiyad

ಭಿಸ್ಟಿ ವ್ಯಾಪಾರದಲ್ಲಿ ಮಂಜೂರ್ ಅವರ ಪಾಲುದಾರರಾದ ಆಲಂ , ನಲ್ ಬಜಾರಿನಲ್ಲಿರುವ ತಮ್ಮ ರಸ್ತೆ ಬದಿಯ ಅಂಗಡಿಯಲ್ಲಿ ಮಾರಾಟಗಾರರಿಗೆ ನೀರು ಪೂರೈಸುತ್ತಿರುವುದು . ಪ್ರತಿ 3-6 ತಿಂಗಳಿಗೊಮ್ಮೆ , ಬಿಹಾರದಲ್ಲಿನ ತನ್ನ ಕುಟುಂಬವನ್ನು ಭೇಟಿ ಮಾಡಲು ಹೋದಾಗ ಆಲಂ ಮನ್ಸೂರ್‌ ಅವರ ಕೆಲಸವನ್ನು ವಹಿಸಿಕೊಳ್ಳುತ್ತಾರೆ


PHOTO • Aslam Saiyad

2021 ಜನವರಿಯಲ್ಲಿ ನಲ್ ಬಜಾರಿನಲ್ಲಿ ಕಾರ್ಮಿಕನೊಬ್ಬರಿಗೆ ಆಲಂ ತನ್ನ ಮಶಾಕ್‌ ಬಳಸಿ ನೀರನ್ನು ಪೂರೈಸುತ್ತಿರುವುದು


PHOTO • Aslam Saiyad

ಬಾಬು ನಯ್ಯರ್ ಅವರು ಭೆಂಡಿ ಬಜಾರಿನ ನವಾಬ್ ಅಯಾಜ್ ಮಸೀದಿಯ ಬಳಿ ತಮ್ಮ ಮಶಾಕ್‌ ಬಳಸಿ ಅಂಗಡಿಗೆ ನೀರು ಹಾಕುತ್ತಿದ್ದಾರೆ . ಅವರು ಪ್ರದೇಶದಲ್ಲಿ ಭಿಸ್ಟಿಯಾಗಿ ಕೆಲಸ ಮಾಡುತ್ತಾರೆ . ಹಲವಾರು ಅಂಗಡಿ ಮಾಲೀಕರು ತಮ್ಮ ಅಂಗಡಿಯ ಮುಂಭಾಗದ ಪ್ರದೇಶವನ್ನು ಸ್ವಚ್ಛಗೊಳಿಸಲು ಭಿಸ್ಟಿಗಳನ್ನು ಕರೆಯುತ್ತಾರೆ . ಬಾಬು , ಆಲಂ ಮತ್ತು ಮಂಜೂರ್ ಎಲ್ಲರೂ ಬಿಹಾರದ ಕಥಿಹಾರ್ ಜಿಲ್ಲೆಯ ಗಚ್ ರಸೂಲ್ಪುರ್ ಎಂಬ ಒಂದೇ ಹಳ್ಳಿಯಿಂದ ಬಂದವರು .


PHOTO • Aslam Saiyad

ಬಾಬು 2021 ಜನವರಿಯಲ್ಲಿ ಯೂನುಸ್ ಶೇಖ್ ( ಎಡಕ್ಕೆ ) ಅವರಿಗೆ ತನ್ನ ಮಶಾಕ್ ಅನ್ನು ತೋರಿಸುತ್ತಿರುವುದು . ಮಶಾಕ್ ಮೂರು ರಂಧ್ರಗಳನ್ನು ಹೊಂದಿತ್ತು ಮತ್ತು ದುರಸ್ತಿಯ ಅಗತ್ಯವಿತ್ತು . ಯೂನುಸ್ ಕೆಲಸಕ್ಕಾಗಿ 120 ರೂಪಾಯಿಗಳನ್ನು ಪಾವತಿಸುವಂತೆ ಕೇಳಿದರು , ಆದರೆ ಬಾಬು ಕೇವಲ 50 ರೂಪಾಯಿಗಳನ್ನು ಮಾತ್ರ ನೀಡಲು ಸಾಧ್ಯವಾಯಿತು


PHOTO • Aslam Saiyad

ಭೆಂಡಿ ಬಜಾರ್ ನವಾಬ್ ಅಯಾಜ್ ಮಸೀದಿಯ ಬಳಿಯ ಕಟ್ಟಡದ ಪ್ರವೇಶದ್ವಾರದಲ್ಲಿ ಕುಳಿತು , ಬಾಬುವಿನ ಮಶಾಕ್ ರಿಪೇರಿ ಕೆಲಸ ಮಾಡುತ್ತಿರುವ ಯೂನುಸ್


PHOTO • Aslam Saiyad

ಐದು ಅಡಿ ಉದ್ದದ ಮಶಾಕ್ ಅನ್ನು ರಿಪೇರಿ ಮಾಡಿದ ನಂತರ ಯೂನುಸ್ ಅದನ್ನು ಹಿಡಿದುಕೊಂಡಿರುವುದು . ಫೋಟೋ ತೆಗೆದ ಒಂದೆರಡು ತಿಂಗಳ ನಂತರ , ಅವರು ಬಹ್ರೈಚ್ ಎನ್ನುವಲ್ಲಿರುವ ತನ್ನ ಮನೆಗೆ ಮರಳಿದರು ಪುನಃ ಅವರು ಹಿಂತಿರುಗಲಿಲ್ಲ . ಮುಂಬೈಯಲ್ಲಿ ಅವರ ಆದಾಯವು ಕ್ಷೀಣಿಸುತ್ತಿತ್ತು , ಮತ್ತು ಇನ್ನು ಮುಂದೆ ಮಶಾಕ್ ಗಳನ್ನು ತಯಾರಿಸಲು ಮತ್ತು ಸರಿಪಡಿಸಲು ತನಗೆ ಶಕ್ತಿ ಇಲ್ಲ ಎಂದು ಅವರು ಹೇಳಿದರು


PHOTO • Aslam Saiyad

ಬಾಬು ಈಗ ತನ್ನ ಗ್ರಾಹಕರಿಗೆ ನೀರನ್ನು ತಲುಪಿಸಲು ಪ್ಲಾಸ್ಟಿಕ್ ಕ್ಯಾನುಗಳನ್ನು ಬಳಸುತ್ತಾರೆ


PHOTO • Aslam Saiyad

ತನ್ನ ಮಶಾಕ್ ರಿಪೇರಿ ಮಾಡಲು ಬೇರೆ ಯಾರೂ ಇಲ್ಲದ ಕಾರಣ ಯೂನಸ್ ಹೋದ ನಂತರ ಮನ್ಸೂರ್ ಪ್ಲಾಸ್ಟಿಕ್ ಬಕೆಟ್ ಬಳಸಲು ಆರಂಭಿಸಿದರು . ಇಲ್ಲಿ , ಜನವರಿ 2022 ರಲ್ಲಿ , ಅವರು ಹಗಲಿನಲ್ಲಿ ನಲ್ ಬಜಾರಿನ ಸಣ್ಣ ಅಂಗಡಿಗಳಲ್ಲಿ ಕೆಲಸ ಮಾಡುವ ಮತ್ತು ರಾತ್ರಿಯಲ್ಲಿ ಬೀದಿಗಳಲ್ಲಿ ವಾಸಿಸುವ ಕಾರ್ಮಿಕರಿಗೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ


PHOTO • Aslam Saiyad

ನೀರನ್ನು ತಲುಪಿಸಿದ ನಂತರ , ಮನ್ಸೂರ್ ಬಕೆಟುಗಳನ್ನು ಮರಳಿ ತುಂಬಿಸಲು ತನ್ನ ಗಾಡಿಗೆ ಮರಳುತ್ತಿದ್ದಾರೆ


PHOTO • Aslam Saiyad

ವಿದ್ಯುತ್ ಮೋಟರ್ ಸಹಾಯದಿಂದ ನೇರವಾಗಿ ಕಟ್ಟಡಗಳಿಗೆ ನೀರನ್ನು ಪೂರೈಸುವ ಮೂಲಕ ಭಿಸ್ಟಿಗಳ ಕೆಲಸವನ್ನು ಟ್ಯಾಂಕರುಗಳು ವಹಿಸಿಕೊಂಡಿವೆ


PHOTO • Aslam Saiyad

ನಲ್ ಬಜಾರಿನಲ್ಲಿ ಮಾರಾಟಕ್ಕಿಡಲಾಗಿರುವ ಪ್ಲಾಸ್ಟಿಕ್ ಡ್ರಮ್ಮುಗಳು . ಇವು ಈಗ ಭಿಸ್ಟಿಗಳ ನಡುವೆ ಜನಪ್ರಿಯವಾಗುತ್ತಿವೆ . ಅವರು ತಮ್ಮ ಲೋಹದ ಗಾಡಿಯ ಬದಲು ಇವುಗಳನ್ನು ಬಳಸತೊಡಗಿದ್ದಾರೆ


PHOTO • Aslam Saiyad

ನೀರು ತಲುಪಿಸಿದ ನಂತರ ತನ್ನ ಮಶಾಕ್ ಜೊತೆ ನಿಂತಿರುವ ಮನ್ಸೂರ್ ಆಲಮ್ ಶೇಖ್ ಅವರ ಒಂದು ಹಳೆಯ ಫೋಟೊ . ʼ ಮಶಾಕ್ ಬಳಸಿ ನೀರು ತಲುಪಿಸುವ ಸಂಸ್ಕೃತಿ ಈಗ ಬಹುತೇಕ ಸತ್ತು ಹೋಗಿದೆ ʼ


ಅನುವಾದ: ಶಂಕರ. ಎನ್. ಕೆಂಚನೂರು

Photos and Text : Aslam Saiyad

Aslam Saiyad teaches photography and photojournalism in Mumbai, and is co-founder of ‘Hallu Hallu’ heritage walks. His photography series entitled ‘The Last Bhishtis’ was first exhibited in March 2021 at Confluence, a virtual exhibition on water stories of Mumbai, supported by Living Waters Museum. He is currently presenting the photos as a bioscope show in Mumbai.

Other stories by Aslam Saiyad
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru