ಹನುಮಂತ್ ಗುಂಜಲ್ ಅವರು ಶಹಜಹಾನ್ಪುರದ ಪ್ರತಿಭಟನಾ ಸ್ಥಳದಲ್ಲಿ ಮೂರು ದಿನಗಳನ್ನು ಕಳೆದ ನಂತರ ತಮ್ಮ ಊರಿಗೆ ಮರಳಿದರು, ಅಲ್ಲಿಂದ ಮರಳುವಾಗ ಅವರೊಂದಿಗೆ ಹಲವಾರು ಮರೆಯಲಾಗದ ನೆನಪುಗಳನ್ನು ಹೊತ್ತುತಂದರು.
ಡಿಸೆಂಬರ್ 25ರಂದು ಶಹಜಹಾನ್ಪುರ ತಲುಪಿದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದ್ವಾಡ್ ಗ್ರಾಮದ 41 ವರ್ಷದ ಭಿಲ್ ಬುಡಕಟ್ಟು ರೈತ "ಅಲ್ಲಿನ ರೈತರು ಅತ್ಯಂತ ಒಳ್ಳೆಯ ಆತಿಥ್ಯ ನೀಡುವ ಮನೋಭಾವ ಹೊಂದಿರುವವರು ಮತ್ತು ನಿಜವಾಗಿಯೂ ಒಳ್ಳೆಯವರು" ಎಂದು ಹೇಳುತ್ತಾರೆ. "ಅಗತ್ಯಕ್ಕೆಂದು ನಾವು ನಮ್ಮೊಂದಿಗೆ ಅಕ್ಕಿ ಮತ್ತು ಬೇಳೆಯನ್ನು ಕೊಂಡೊಯ್ದಿದ್ದೆವು. ಆದರೆ ನಮಗೆ ಅದನ್ನು ಬಳಸುವ ಪ್ರಮೇಯವೇ ಬರಲಿಲ್ಲ. ಅವರು ನಮಗೆ ತುಪ್ಪದಿಂದ ಕೂಡಿದ ರುಚಿಯಾದ ಆಹಾರ ಬಡಿಸಿದರು. ಅವರು ಮುಕ್ತ ಆದರತೆಯಿಂದ ನಮ್ಮನ್ನು ಸ್ವಾಗತಿಸಿದರು."
ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಲು ನಾಸಿಕ್‌ನಿಂದ ಒಂದು ಗುಂಪಿನ ವಾಹನಗಳು ಡಿಸೆಂಬರ್ 21ರಂದು ದೆಹಲಿಗೆ ತೆರಳಿದವು. ಸುಮಾರು 1,400 ಕಿಲೋಮೀಟರ್ ದೂರದಲ್ಲಿರುವ ರಾಜಧಾನಿ ದೆಹಲಿಯ ಹೊರವಲಯಕ್ಕೆ ಸುಮಾರು 1,000 ರೈತರು ತಲುಪಲು ಐದು ದಿನಗಳು ಬೇಕಾಯಿತು. ಜಾಥಾ ಅಂತ್ಯಗೊಂಡ ಶಹಜಹಾನ್ಪುರ್, ರಾಜಸ್ಥಾನ-ಹರಿಯಾಣ ಗಡಿಯಲ್ಲಿ ದೆಹಲಿಯಿಂದ ದಕ್ಷಿಣಕ್ಕೆ 120 ಕಿ.ಮೀ ದೂರದಲ್ಲಿದೆ. ಇದು ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳಲ್ಲಿ ಒಂದಾಗಿದೆ, ಇಲ್ಲಿ ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಸಾವಿರಾರು ರೈತರು ನವೆಂಬರ್ 26ರಿಂದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
. ಈ ರೈತರು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತರಲಾಯಿತು. ಕಾನೂನುಗಳು ಹೀಗಿವೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.ದೆಹಲಿ ಮತ್ತು ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳಲ್ಲಿನ ಅನೇಕ ರೈತರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಜಮೀನುಗಳನ್ನು ಹೊಂದಿದ್ದಾರೆ, ಅವರಲ್ಲಿ ಹಲವರು ನಾಲ್ಕು ಚಕ್ರಗಳ ವಾಹನಗಳನ್ನು ಹೊಂದಿದ್ದಾರೆ. ತಮ್ಮಲ್ಲಿ 2024ರ ಸಾರ್ವತ್ರಿಕ ಚುನಾವಣೆಯವರೆಗೆ ಪ್ರತಿಭಟನೆಯನ್ನು ಮುಂದುವರಿಸಬಲ್ಲಷ್ಟು ಸಂಪನ್ಮೂಲಗಳಿವೆ ಎಂದು ಅವರು ಹೇಳುತ್ತಾರೆ.
ಮಹಾರಾಷ್ಟ್ರದ ರೈತರಲ್ಲಿ ಹೆಚ್ಚಿನವರು ಆದಿವಾಸಿ ಸಮುದಾಯದವರು, ಅವರಲ್ಲಿ ಬಹುತೇಕ ರೈತರು ಸಣ್ಣ ಜಮೀನುಗಳು ಮತ್ತು ವಿರಳ ಸಂಪನ್ಮೂಲಗಳನ್ನು ಹೊಂದಿದ್ದಾರೆ, ಇದು ಅಸಾಮಾನ್ಯವಾಗಿ ಕಾಣುತ್ತಿತ್ತು. ಆದರೆ, ಪಾಲ್ಘರ್ ಜಿಲ್ಲೆಯ ವಿಕ್ರಮಗಢ ತಾಲ್ಲೂಕಿನಿಂದ ಬಂದ ವಾರ್ಲಿ ಸಮುದಾಯದ 45 ವರ್ಷದ ರೈತ ಸುರೇಶ್ ವರ್ತಾ (ಮೇಲಿನ ಕವರ್ ಫೋಟೋದಲ್ಲಿರುವವರು), "ಉತ್ತರದ ರಾಜ್ಯಗಳ ಆಚೆಗಿನ ರೈತರು ಸಹ ಕೃಷಿ ಕಾನೂನುಗಳಿಗೆ ವಿರುದ್ಧವಾಗಿದ್ದಾರೆಂದು ನಾವು ತೋರಿಸಲು ಬಯಸುತ್ತೇವೆ, ಮತ್ತು ಇದು ಶ್ರೀಮಂತ ಮತ್ತು ಬಡ ರೈತ ಇಬ್ಬರ ಮೇಲೂ ಪರಿಣಾಮ ಬೀರುತ್ತದೆ." ಎನ್ನುತ್ತಾರೆ.
ಈ ಕಾನೂನುಗಳು ದೊಡ್ಡ ಸಂಸ್ಥೆಗಳಿಗೆ ರೈತರು ಮತ್ತು ಕೃಷಿಯ ಮೇಲೆ ಹೆಚ್ಚಿನ ಹಕ್ಕುಗಳನ್ನು ನೀಡುತ್ತಿರುವುದರಿಂದ ಎಲ್ಲಾ ರೈತರು ಈ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ಹಾನಿಕಾರಕವೆನ್ನುವ ಅಭಿಪ್ರಾಯದಿಂದ ನೋಡುತ್ತಿದ್ದಾರೆ. ಈ ಕಾನೂನುಗಳು ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಸರ್ಕಾರಿ ಖರೀದಿ ಇತ್ಯಾದಿಗಳನ್ನು ಒಳಗೊಂಡಂತೆ ಬೆಂಬಲದ ಮುಖ್ಯ ರೂಪಗಳನ್ನು ದುರ್ಬಲಗೊಳಿಸುತ್ತವೆ.
ಮಹಾರಾಷ್ಟ್ರದ ರೈತರು ತಮ್ಮ ಉತ್ತರದ ಸಹವರ್ತಿಗಳಿಗಾಗಿ ಔಷಧಿಗಳ ಪೆಟ್ಟಿಗೆಗಳನ್ನು ಒಳಗೊಂಡಂತೆ ಬೆಂಬಲ ಸಾಮಾಗ್ರಿಗಳನ್ನು ಸಹ ಅವರೊಂದಿಗೆ ಕೊಂಡು ಹೋಗಿದ್ದರು. ಆದರೆ ಶಹಜಹಾನ್ಪುರದ ಪ್ರತಿಭಟನಾಕಾರರ ಬಳಿ ವೈದ್ಯಕೀಯ ಸಾಮಗ್ರಿಗಳ ಕೊರತೆಯೂ ಇದ್ದಿರಲಿಲ್ಲ.
ಅಹ್ಮದ್‌ನಗರ ಜಿಲ್ಲೆಯ ಸಂಗಮ್ನರ್ ತಾಲ್ಲೂಕಿನ ಶಿಂಡೋಡಿ ಗ್ರಾಮದ ಭಿಲ್ ಆದಿವಾಸಿ ರೈತ ಮಹಿಳೆ 57 ವರ್ಷದ ಮಥುರಾ ಬಾರ್ಡೆ, “ನಾನು ಈ ರೀತಿಯ ಪ್ರತಿಭಟನೆಯನ್ನು ನೋಡಿಲ್ಲ, ಅಲ್ಲಿ ಪ್ರತಿಭಟನಾಕಾರರಿಗೆ ಎಲ್ಲಾ ಸೌಲಭ್ಯಗಳಿವೆ. ಅವರು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು. ಪ್ರತಿಭಟನಾ ಸ್ಥಳವನ್ನು ತಲುಪಿದ ನಂತರ, ನಮ್ಮನ್ನು ಕಾಜು, ಬಾದಾಮಿ, ಖೀರ್‌ನೊಂದಿಗೆ ಸ್ವಾಗತಿಸಲಾಯಿತು, ಮತ್ತು ಇನ್ನೂ ಅನೇಕ ವಸ್ತುಗಳಿದ್ದವು. ನಾವು ಇಂತಹ ವಸ್ತುಗಳನ್ನು ಖರೀದಿಸುವ ಮೊದಲು ಎರಡು ಬಾರಿ ಯೋಚಿಸುತ್ತೇವೆ. ಅವರು ಸ್ನಾನ ಮಾಡಲು ಬಿಸಿನೀರನ್ನು ಒದಗಿಸಿದರು. ಅವರು ನಮಗೆ ದಪ್ಪ ಹೊದಿಕೆಗಳನ್ನು ನೀಡಿದರು. ನಮ್ಮ ಕಂಬಳಿಗಳು ಹರಿದಿದ್ದರಿಂದ ಅವುಗಳು ನಮಗೆ ಹೆಚ್ಚು ಅಗತ್ಯವಾಗಿದ್ದವು.” ಎಂದು ಹೇಳಿದರು.
ಮಾರ್ಚ್ 2018ರಲ್ಲಿ ನಡೆದ ರೈತರ ಲಾಂಗ್‌ಮಾರ್ಚ್‌ನಲ್ಲಿ ಭಾಗವಹಿಸಿದ್ದ ಮಥುರಾ ತಾಯ್, ಎರಡು ಪ್ರತಿಭಟನೆಗಳನ್ನು ಹೋಲಿಸದಿರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. "ಆ ಮೆರವಣಿಗೆಯಲ್ಲಿ ನಾವು ನಮ್ಮೊಂದಿಗೆ ತಂದ ಆಹಾರವನ್ನು ನಾವು ಎಷ್ಟು ಎಚ್ಚರಿಕೆಯಿಂದ ಬಳಸಿದ್ದೇವೆಂದು ನನಗೆ ನೆನಪಿದೆ" ಎಂದು ಅವರು ಹೇಳುತ್ತಾರೆ. “ನಾವು ಏಳು ದಿನಗಳಲ್ಲಿ ನಾಸಿಕ್‌ನಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ಸಾಗಿದ್ದೆವು. ಆ ಸಮಯದಲ್ಲಿ ನಮ್ಮಆಹಾರದ ದಾಸ್ತಾನು ಅಷ್ಟು ದಿನಗಳವರೆಗೆ ಸಾಕಾಗುತ್ತದೆಯೆನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕಾಗಿತ್ತು. ಇಲ್ಲಿ ಪ್ರತಿಭಟನಾಕಾರರಿಗೆ ಆಹಾರಕ್ಕಾಗಿ ಲಂಗರ್‌ಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ನಾವು ಬಯಸಿದಷ್ಟು ತಿನ್ನಬಹುದು."ಶಹಜಹಾನ್ಪುರದ ರೈತರಲ್ಲಿ ಐಕಮತ್ಯವು ವರ್ಗ ತಾರತಮ್ಯಕ್ಕಿಂತ ಮೇಲಿತ್ತು, ಆದರೆ ದೆಹಲಿ-ಗಡಿಯಲ್ಲಿ ಈ ಪ್ರತಿಭಟನೆಯನ್ನು ಉತ್ತಮವಾಗಿ ಸಂಘಟಿತವಾಗಿ ಮತ್ತು ಬಲವಾಗಿರಿಸಿರುವುದು ಈ ತಾಣಗಳಲ್ಲಿ ಇಲ್ಲದವರ ಬೆಂಬಲ.
2018ರ ಲಾಂಗ್ ಮಾರ್ಚ್ ಅನ್ನು ಆಯೋಜಿಸಿದ ಕೃಷಿ ನಾಯಕರಲ್ಲಿ ಒಬ್ಬರಾದ ಅಜಿತ್ ನವಾಲೆ ಈ ವ್ಯತ್ಯಾಸವನ್ನು ಗಮನಿಸಿದರು: "ಲಾಂಗ್ ಮಾರ್ಚ್ ಏಳು ದಿನಗಳ ಕಾಲ ನಡೆಯಿತು" ಎಂದು ಅವರು ಹೇಳುತ್ತಾರೆ. “ನಾವು ಮೊದಲ ಐದು ದಿನಗಳ ಕಾಲ ಇರುವ ಸಂಪನ್ಮೂಲಗಳೊಂದಿಗೆ ಹೋರಾಡಿದೆವು. ಆರನೇ ದಿನ ನಾವು ಮುಂಬಯಿಯ ಹೊರವಲಯವನ್ನು ತಲುಪಿದಾಗ, ಕೃಷಿಯೇತರ ಸಮುದಾಯಗಳು ಆಹಾರ, ನೀರು, ಹಣ್ಣುಗಳು, ಬಿಸ್ಕತ್ತು, ಚಪ್ಪಲಿ ಇತ್ಯಾದಿಗಳೊಂದಿಗೆ ನಮ್ಮ ಸಹಾಯಕ್ಕೆ ಬಂದವು."
ಅಖಿಲ ಭಾರತ ಕಿಸಾನ್ ಸಭೆಯ ಪ್ರಧಾನ ಕಾರ್ಯದರ್ಶಿಯಾಗಿರುವ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಮಾರ್ಕ್ಸ್‌ವಾದಿ) ಮತ್ತು ರೈತರ ಬೆಂಗಾವಲು ಶಹಜಹಾನ್ಪುರಕ್ಕೆ ಕರೆದೊಯ್ಯುವವರಲ್ಲಿ ಒಬ್ಬರಾದ ನವಾಲೆ, “ಯಾವುದೇ ಪ್ರತಿಭಟನೆಯ ಸುಸ್ಥಿರತೆಯು ಸಮಾಜವು ಅದನ್ನು ಬೆಂಬಲಿಸುತ್ತದೆಯೋ ಇಲ್ಲವೋ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ದೆಹಲಿಯ ಪ್ರತಿಭಟನೆಯ ವಿಷಯದಲ್ಲೂ ಅದೇ ಆಗುತ್ತಿದೆ. ಅಲ್ಲಿನ ಇಡೀ ಸಮಾಜ ರೈತರೊಂದಿಗೆ ನಿಂತಿದೆ. ಈಗ ಅದು ಕೇವಲ ರೈತ ಪ್ರತಿಭಟನೆಯಾಗಿ ಉಳಿದಿಲ್ಲ"
ಶಹಜಹಾನ್ಪುರದಲ್ಲಿ ಕ್ಯಾಂಪಿಂಗ್ ಮಾಡಿದ ಮೊದಲ ರಾತ್ರಿಯಲ್ಲಿ, ಕೆಲವು ಆಟೋರಿಕ್ಷಾ ಚಾಲಕರು ಕಂಬಳಿ, ಬೆಚ್ಚಗಿನ ಬಟ್ಟೆ, ಮಂಕಿ ಕ್ಯಾಪ್ ಮತ್ತು ಇತರ ವಸ್ತುಗಳನ್ನು ಹೊತ್ತು ಪ್ರತಿಭಟನಾ ಸ್ಥಳಕ್ಕೆ ಬಂದರು ಎಂದು ಇನ್ನಷ್ಟು ವಿವರದೊಂದಿಗೆ ನವಾಲೆ ಹೇಳುತ್ತಾರೆ. "ದೆಹಲಿಯ ಸಿಖ್ ಸಮುದಾಯವು ಮಹಾರಾಷ್ಟ್ರದ ರೈತರು ಶಹಜಹಾನ್ಪುರಕ್ಕೆ ಬರುತ್ತಿದ್ದಾರೆಂದು ತಿಳಿದ ನಂತರ ಹಣವನ್ನು ಸಂಗ್ರಹಿಸಿ ಈ ವಸ್ತುಗಳನ್ನು ಖರೀದಿಸಿ ಅವುಗಳನ್ನು ಇಲ್ಲಿಗೆ ಕಳುಹಿಸಿದರು."
ಇದೆಲ್ಲವೂ ಹನುಮಂತ ಗುಂಜಲ್ ಅವರ ಸ್ಮರಣೀಯ ಅನುಭವವನ್ನು ಹೆಚ್ಚಿಸುತ್ತದೆ. "ನಾವು [ನಮ್ಮ ಹಳ್ಳಿಗಳಿಗೆ] ಹಿಂತಿರುಗಿದ್ದೇವೆ ಮತ್ತು ಅಲ್ಲಿನ ಜನರ ಕುರಿತು ಬಹಳ ಸಕಾರಾತ್ಮಕ ಭಾವನೆ ಹೊಂದಿದ್ದೇವೆ" ಎಂದು ಅವರು ಹೇಳುತ್ತಾರೆ.
ಅನುವಾದ: ಶಂಕರ ಎನ್. ಕೆಂಚನೂರು