ಎಪ್ರಿಲ್ 1, 2022ರ ಶುಕ್ರವಾರದ ಬೆಳಗು ರಮಾ ಅವರ ಪಾಲಿಗೆ ಎಂದಿನಂತೆಯೇ ಇತ್ತು. ಅಂದು  4:30ರ ಸುಮಾರಿಗೆ ಎಚ್ಚರಗೊಂಡು, ಹತ್ತಿರದ ಊರಿನ ಬಾವಿಯಿಂದ ನೀರು ತಂದು, ಬಟ್ಟೆ ಒಗೆದು, ಮನೆಯನ್ನು ಸ್ವಚ್ಛಗೊಳಿಸಿ, ನಂತರ ತನ್ನ ತಾಯಿಯೊಂದಿಗೆ ಕುಳಿತು ಕಂಜಿ ಸೇವಿಸಿದ್ದರು. ನಂತರ ತನ್ನ ಊರಿನಿಂದ 25 ಕಿಲೋಮೀಟರ್ ದೂರದಲ್ಲಿರುವ ದಿಂಡಿಗಲ್ ಜಿಲ್ಲೆಯ ವೇದಸಂದೂರು ತಾಲೂಕಿನ ನಾಚಿ ಅಪಾರೆಲ್ಸ್‌ ಸಂಸ್ಥೆಗೆ ಕೆಲಸಕ್ಕೆಂದು ತೆರಳಿದರು. ಆದರೆ ಅಂದು ಮಧ್ಯಾಹ್ನದ ವೇಳೆಗೆ, 27 ವರ್ಷದ ಯುವತಿ ಮತ್ತು ಆಕೆಯ ಸಹ ಕಾರ್ಮಿಕರು ತಮ್ಮ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಲೈಂಗಿಕ ಕಿರುಕುಳವನ್ನು ಕೊನೆಗೊಳಿಸಲು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ್ದ ಹೋರಾಟದಲ್ಲಿ ಜಯಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಅಸಾಧ್ಯವಾದುದನ್ನು ಸಾಧಿಸಿದ ಭಾವ ಮೂಡುತ್ತಿದೆ" ಎಂದು ದಿಂಡಿಗಲ್ ಒಪ್ಪಂದದ ಕುರಿತಾಗಿ ರಮ್ಯಾ ಹೇಳುತ್ತಾರೆ. ಆ ದಿನ ಈಸ್ಟ್‌ಮನ್ ಎಕ್ಸ್‌ಪೋರ್ಟ್ಸ್ ಗ್ಲೋಬಲ್ ಕ್ಲೋಥಿಂಗ್ (ತಿರುಪ್ಪೂರ್ ಮೂಲದ ನಾಚಿ ಅಪಾರೆಲ್‌ನ ಮೂಲ ಕಂಪನಿ) ಮತ್ತು ತಮಿಳುನಾಡು ಟೆಕ್ಸ್‌ಟೈಲ್ ಮತ್ತು ಕಾಮನ್ ಲೇಬರ್ ಯೂನಿಯನ್ (ಟಿಟಿಸಿಯು) - ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಈಸ್ಟ್‌ಮನ್ ಎಕ್ಸ್‌ಪೋರ್ಟ್ಸ್ ನಿರ್ವಹಿಸುತ್ತಿರುವ ಕಾರ್ಖಾನೆಗಳಲ್ಲಿ ಲಿಂಗಾಧಾರಿತ ಹಿಂಸಾಚಾರ ಮತ್ತು ಕಿರುಕುಳವನ್ನು ಕೊನೆಗೊಳಿಸಲು ಸಹಿ ಹಾಕಿತ್ತು.

ಈ ಮಹತ್ವದ ಒಪ್ಪಂದದ ಭಾಗವಾಗಿ, ಟಿಟಿಸಿಯು- ಈಸ್ಟ್‌ಮನ್ ಎಕ್ಸ್‌ಪೋರ್ಟ್ಸ್ ಒಪ್ಪಂದವನ್ನು ಬೆಂಬಲಿಸಲು ಮತ್ತು ಜಾರಿಗೊಳಿಸಲು ಬಹುರಾಷ್ಟ್ರೀಯ ಫ್ಯಾಷನ್ ಬ್ರಾಂಡ್ ಎಚ್‌&ಎಂ ಮೂಲಕ 'ಜಾರಿಗೊಳಿಸಬಹುದಾದ ಬ್ರಾಂಡ್ ಒಪ್ಪಂದ', ಅಥವಾ ಇಬಿಎಗೆ ಸಹಿ ಹಾಕಲಾಯಿತು. ಈಸ್ಟ್‌ಮನ್ ಎಕ್ಸ್‌ಪೋರ್ಟ್ಸ್ ನಾಚಿ ಅಪೆರಲ್ ಸ್ವೀಡನ್ ದೇಶದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಟ್ಟೆ ಕಂಪನಿಗಾಗಿ ಬಟ್ಟೆಗಳನ್ನು ಉತ್ಪಾದಿಸುತ್ತದೆ. ಎಚ್‌&ಎಂ ಸಹಿ ಮಾಡಿದ ಒಪ್ಪಂದವು ಫ್ಯಾಷನ್ ಉದ್ಯಮದಲ್ಲಿ ಲಿಂಗಾಧಾರಿತ ಹಿಂಸಾಚಾರವನ್ನು ನಿಭಾಯಿಸುವ ವಿಶ್ವದಾದ್ಯಂತ ಅಂತಹ ಎರಡನೇ ಉದ್ಯಮ ಒಪ್ಪಂದವಾಗಿದೆ.

ದಲಿತ ಮಹಿಳಾ ನೇತೃತ್ವದ ಜವಳಿ ಕಾರ್ಮಿಕರ ಟ್ರೇಡ್ ಯೂನಿಯನ್ ಟಿಟಿಸಿಯು ಸದಸ್ಯರಾಗಿರುವ ರಮಾ, ನಾಲ್ಕು ವರ್ಷಗಳಿಂದ ನಾಚಿ ಅಪೆರೆಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ. "ನಿರ್ವಹಣೆ ಮತ್ತು ಬ್ರ್ಯಾಂಡ್ [ಎಚ್&ಎಮ್] ದಲಿತ ಮಹಿಳಾ ಟ್ರೇಡ್ ಯೂನಿಯನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ" ಎಂದು ಅವರು ಹೇಳುತ್ತಾರೆ. "ಕೆಲವು ತಪ್ಪು ಕ್ರಮಗಳ ನಂತರ ಅವರು ಇದೀಗ ಸರಿಯಾದ ಹೆಜ್ಜೆಯನ್ನು ಇರಿಸಿದ್ದಾರೆ." ಯೂನಿಯನ್‌ನೊಂದಿಗೆ ಎಚ್&ಎಮ್‌  ಒಪ್ಪಂದವು ಭಾರತದಲ್ಲಿ ಸಹಿ ಮಾಡಿದ ಮೊದಲ ಇಬಿಎ. ಇದು ಕಾನೂನುಬದ್ಧವಾಗಿ ಬದ್ಧತೆಯ ಒಪ್ಪಂದವಾಗಿದ್ದು, ಪೂರೈಕೆದಾರರು ಟಿಟಿಸಿಯು ಒಕ್ಕೂಟಕ್ಕೆ ತನ್ನ ಬದ್ಧತೆಯನ್ನು ಉಲ್ಲಂಘಿಸಿದರೆ ಈಸ್ಟ್‌ಮನ್ ರಫ್ತುಗಳ ಮೇಲೆ ದಂಡವನ್ನು ವಿಧಿಸಲು ಎಚ್‌&ಎಮ್ ಬಾಧ್ಯತೆ ಹೊಂದಿರುತ್ತದೆ.

ಆದರೆ ಈಸ್ಟ್‌ಮ್ಯಾನ್‌ ಸಂಸ್ಥೆಯು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡಿದ್ದು ನಾಚಿ ಅಪಾರೆಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಜಯಶ್ರೀ ಕದಿರವೇಲ್ ಎನ್ನುವ 20 ವರ್ಷದ ದಲಿತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮತ್ತು ಆಕೆಯ ಕೊಲೆ ನಡೆದ ಒಂದು ವರ್ಷದ ನಂತರ. 2021ರಲ್ಲಿ ಕೊಲೆಯಾಗುವ ಮೊದಲು ಜಯಶ್ರೀ ತಾನು ಕೆಲಸ ಮಾಡುವ ಸಂಸ್ಥೆಯ ಮೇಲ್ವಿಚಾರಕನಿಂದ ತಿಂಗಳುಗಳ ಕಾಲ ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದರು. ಈತ ಪ್ರಬಲ ಜಾತಿಗೆ ಸೇರಿದವನಾಗಿದ್ದು, ಪ್ರಸ್ತುತ ಈ ಮೇಲ್ವಿಚಾರಕನ ಮೇಲೆ ಅಪರಾಧದ ಆರೋಪ ಹೊರಿಸಲಾಗಿದೆ.

ಜಯಶ್ರೀಯವರ ಹತ್ಯೆಯು ಭಾರತದ ಅತಿದೊಡ್ಡ ಬಟ್ಟೆ ತಯಾರಕರು ಮತ್ತು ರಫ್ತುದಾರರಲ್ಲಿ ಒಂದಾದ ಗಾರ್ಮೆಂಟ್ಸ್ ಕಾರ್ಖಾನೆ ಮತ್ತು ಅದರ ಮಾತೃಸಂಸ್ಥೆ ಈಸ್ಟ್‌ಮನ್ ಎಕ್ಸ್‌ಪೋರ್ಟ್ಸ್ ವಿರುದ್ಧ ಆಕ್ರೋಶವನ್ನು ಹುಟ್ಟುಹಾಕಿತು, ಇದು ಬಹುರಾಷ್ಟ್ರೀಯ ಬಟ್ಟೆ ಕಂಪನಿಗಳಾದ ಎಚ್&ಎಂ, ಗ್ಯಾಪ್ ಮತ್ತು ಪಿವಿಎಚ್‌ ಕಂಪನಿಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡುತ್ತದೆ. ಜಯಶ್ರೀಗೆ ನ್ಯಾಯ ದೊರಕಿಸುವ ಅಭಿಯಾನದ ಭಾಗವಾಗಿ , ಒಕ್ಕೂಟಗಳು, ಕಾರ್ಮಿಕ ಗುಂಪುಗಳು ಮತ್ತು ಮಹಿಳಾ ಸಂಘಟನೆಗಳ ಜಾಗತಿಕ ಒಕ್ಕೂಟವು ಫ್ಯಾಷನ್ ಬ್ರಾಂಡ್‌ಗಳು "ಶ್ರೀಮತಿ ಕದಿರವೇಲ್ ಅವರ ಕುಟುಂಬದ ವಿರುದ್ಧ ಈಸ್ಟ್‌ಮನ್ ಎಕ್ಸ್‌ಪೋರ್ಟ್ಸ್‌ನ ಹೆಚ್ಚುತ್ತಿರುವ ಬಲವಂತದ ಕ್ರಮಗಳ ಮೇಲೆ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿತ್ತು.

A protest by workers of Natchi Apparel in Dindigul, demanding justice for Jeyasre Kathiravel (file photo). More than 200 workers struggled for over a year to get the management to address gender- and caste-based harassment at the factory
PHOTO • Asia Floor Wage Alliance

ಜಯಶ್ರೀ ಕದಿರವೇಲ್ ಅವರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ದಿಂಡಿಗಲ್ಲಿನ ನಾಚಿ ಅಪಾರೆಲ್ ಕಾರ್ಮಿಕರಿಂದ ಪ್ರತಿಭಟನೆ(ಫೈಲ್ ಫೋಟೋ). ಕಾರ್ಖಾನೆಯಲ್ಲಿ ಲಿಂಗ ಮತ್ತು ಜಾತಿ ಆಧಾರಿತ ಕಿರುಕುಳ ಸಮಸ್ಯೆಯನ್ನು ಪರಿಹರಿಸುವಂತೆ ಆಡಳಿತ ಮಂಡಳಿಯನ್ನು ಒಪ್ಪಿಸಲು 200ಕ್ಕೂ ಹೆಚ್ಚು ಕಾರ್ಮಿಕರು ಒಂದು ವರ್ಷಕ್ಕೂ ಹೆಚ್ಚು ಕಾಲ ಹೆಣಗಾಡಿದರು

ಆದಾಗ್ಯೂ, ಜಯಶ್ರೀಯವರ ಪ್ರಕರಣ ಅಪರೂಪದ ಪ್ರಕರಣವಲ್ಲ. ನಾಚಿ ಅಪಾರೆಲ್‌ನ ಅನೇಕ ಮಹಿಳಾ ಕಾರ್ಮಿಕರು ಜಯಶ್ರೀಯವರ ಮರಣದ ನಂತರ ತಾವು ಕಿರುಕುಳಕ್ಕೊಳಗಾದ ಅನುಭವಗಳೊಂದಿಗೆ ಮುಂದೆ ಬಂದಿದ್ದಾರೆ. ಖುದ್ದಾಗಿ ಭೇಟಿಯಾಗಲು ಹಿಂಜರಿಯುತ್ತಿದ್ದ ಅವರಲ್ಲಿ ಕೆಲವರು ದೂರವಾಣಿ ಮೂಲಕ ಪರಿಯೊಂದಿಗೆ ಮಾತನಾಡಿದರು.

"[ಪುರುಷ] ಮೇಲ್ವಿಚಾರಕರು ನಿಯಮಿತವಾಗಿ ನಮ್ಮನ್ನು ಮೌಖಿಕವಾಗಿ ನಿಂದಿಸುತ್ತಿದ್ದರು. ನಾವು ಕೆಲಸಕ್ಕೆ ತಡವಾಗಿ ಬಂದರೆ ಅಥವಾ ಉತ್ಪಾದನಾ ಗುರಿಗಳನ್ನು ತಲುಪಲು ಸಾಧ್ಯವಾಗದಿದ್ದರೆ ಅವರು ನಮ್ಮ ಮೇಲೆ ಕಿರುಚಾಡುತ್ತಾರೆ ಮತ್ತು ತುಂಬಾ ಅಸಭ್ಯ ಮತ್ತು ಕೀಳುಮಟ್ಟದ ಅಪಮಾನಕರ ಶಬ್ಧಗಳನ್ನು ಬಳಸುತ್ತಾರೆ" ಎಂದು ಗಾರ್ಮೆಂಟ್ಸ್ ಉದ್ಯೋಗಿ ಕೋಸಲ(31) ಹೇಳುತ್ತಾರೆ. 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ, ದಲಿತ ಸಮುದಾಯದವರಾದ ಕೋಸಲ ಒಂದು ದಶಕದ ಹಿಂದೆ ಗಾರ್ಮೆಂಟ್ಸ್ ಉದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. "ದಲಿತ ಮಹಿಳಾ ಕಾರ್ಮಿಕರು ಮೇಲ್ವಿಚಾರಕರಿಂದ ಹೆಚ್ಚು ಕಿರುಕುಳಕ್ಕೆ ಒಳಗಾಗಿದ್ದರು - ಅವರು ಅವರನ್ನು 'ಎಮ್ಮೆಗಳು', 'ನಾಯಿಗಳು', 'ಕೋತಿಗಳು' ಎಂದು ಕರೆಯುತ್ತಿದ್ದರು, ನಾವು ಟಾರ್ಗೆಟ್ ತಲುಪದಿದ್ದರೆ, ಅವರ ಬಾಯಿಗೆ ಬಂದದ್ದನ್ನು ಅನ್ನುತ್ತಿದ್ದರು" ಎಂದು ಅವರು ಹೇಳುತ್ತಾರೆ. "ನಮ್ಮನ್ನು ಮುಟ್ಟಲು ಅಥವಾ ನಮ್ಮ ಉಡುಪುಗಳ ಬಗ್ಗೆ ಕಾಮೆಂಟ್ ಮಾಡಲು ಅಥವಾ ಮಹಿಳೆಯರ ದೇಹದ ಬಗ್ಗೆ ಅಶ್ಲೀಲ ತಮಾಷೆಗಳನ್ನು ಮಾಡಲು ಪ್ರಯತ್ನಿಸುವ ಮೇಲ್ವಿಚಾರಕರೂ ಇದ್ದರು."

ಪದವೀಧರೆಯಾದ ಲತಾ, ಮುಂದಿನ ಓದಿಗಾಗಿ ಸಾಕಷ್ಟು ಸಂಪಾದಿಸುವ ಆಸೆಯಿಂದ ಕಾರ್ಖಾನೆಗೆ ಸೇರಿದರು. (ಅವರು ಮತ್ತು ಇತರ ಗಾರ್ಮೆಂಟ್ ತಯಾರಕರಿಗೆ ಎಂಟು ಗಂಟೆಗಳ ಶಿಫ್ಟ್ ಒಂದರ ದುಡಿಮೆಗೆ ದಿನಕ್ಕೆ 310 ರೂ.ಗಳನ್ನು ಪಾವತಿಸಲಾಗುತ್ತದೆ.) ಆದರೆ ಕಾರ್ಖಾನೆಯ ಭಯಾನಕ ಪರಿಸ್ಥಿತಿಯಿಂದ ವಿಚಲಿತಳಾದರು. "ಪುರುಷ ವ್ಯವಸ್ಥಾಪಕರು, ಮೇಲ್ವಿಚಾರಕರು ಮತ್ತು ಮೆಕ್ಯಾನಿಕ್‌ಗಳು - ಅವರು ನಮ್ಮನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರು ಮತ್ತು ನಮಗೆ ದೂರು ಹೇಳಿಕೊಳ್ಳಲು ಯಾವ ವ್ಯವಸ್ಥೆಯೂ ಇರಲಿಲ್ಲ" ಎಂದು ಅವರು ಕಣ್ಣೀರು ಸುರಿಸುತ್ತಾ ಹೇಳುತ್ತಾರೆ.

"ಒಬ್ಬ ಮೆಕ್ಯಾನಿಕ್ ನಿಮ್ಮ ಟೈಲರಿಂಗ್ ಯಂತ್ರವನ್ನು ರಿಪೇರಿ ಮಾಡಲು ಬಂದಾಗ, ಅವನು ಮುಟ್ಟಲು ಪ್ರಯತ್ನಿಸುತ್ತಾನೆ ಅಥವಾ ಲೈಂಗಿಕ ಅನುಕೂಲಗಳನ್ನು ಕೇಳುತ್ತಾನೆ. ನೀವು ನಿರಾಕರಿಸಿದರೆ, ಅವನು ಯಂತ್ರವನ್ನು ಸಮಯಕ್ಕೆ ಸರಿಯಾಗಿ ರಿಪೇರಿ ಮಾಡುವುದಿಲ್ಲ ಮತ್ತು ಪ್ರೊಡಕ್ಷನ್‌ ಟಾರ್ಗೆಟ್ ತಲುಪಲು ಸಾಧ್ಯವಾಗುವುದಿಲ್ಲ - ಆಗ ಮೇಲ್ವಿಚಾರಕರು ಅಥವಾ ವ್ಯವಸ್ಥಾಪಕರು ಮೌಖಿಕವಾಗಿ ನಿಂದಿಸುತ್ತಾರೆ. ಕೆಲವೊಮ್ಮೆ, ಮೇಲ್ವಿಚಾರಕ ಮಹಿಳಾ ಕೆಲಸಗಾರ್ತಿಯ ಪಕ್ಕದಲ್ಲಿ ನಿಂತು ಅವನ ದೇಹವನ್ನು ಅವಳ ದೇಹಕ್ಕೆ ಉಜ್ಜುತ್ತಾನೆ," ಎಂದು 30 ಕಿಲೋಮೀಟರ್ ದೂರದ ಊರಿನಿಂದ ಕೆಲಸಕ್ಕೆ ಬರುವ ಲತಾ ಹೇಳುತ್ತಾರೆ.

ಪರಿಹಾರವನ್ನು ಪಡೆಯಲು ಮಹಿಳೆಯರಿಗೆ ಯಾವುದೇ ಮಾರ್ಗವಿರಲಿಲ್ಲ ಎಂದು ಲತಾ ವಿವರಿಸುತ್ತಾರೆ. "ಅವಳು ಯಾರಿಗೆ ದೂರು ಕೊಡಬಲ್ಲಳು? ಮೇಲ್ಜಾತಿಯ ಪುರುಷ ವ್ಯವಸ್ಥಾಪಕನ ವಿರುದ್ಧ ದನಿ ಎತ್ತಿದಾಗ ದಲಿತ ಮಹಿಳೆಯ ಮಾತುಗಳನ್ನು ಯಾರು ನಂಬುತ್ತಾರೆ?”

"ಅವಳು ಯಾರಿಗೆ ದೂರು ಕೊಡಬಲ್ಲಳು?" 42 ವರ್ಷದ ದಿವ್ಯಾ ರಾಗಿಣಿ ಇದೇ ಪ್ರಶ್ನೆಯನ್ನು ಎತ್ತುತ್ತಾರೆ. ಟಿಟಿಸಿಯುನ ರಾಜ್ಯ ಅಧ್ಯಕ್ಷರಾದ ಅವರು, ನಾಚಿ ಅಪಾರೆಲ್ಸ್‌ ಸಂಸ್ಥೆಯನ್ನು ಲಿಂಗಾಧಾರಿತ ಕಿರುಕುಳದಿಂದ ಮುಕ್ತಗೊಳಿಸುವ ಸುದೀರ್ಘ ಅಭಿಯಾನದ ನೇತೃತ್ವ ವಹಿಸಿದ್ದರು. ಜಯಶ್ರೀಯವರ ಸಾವಿಗೆ ಮುಂಚೆಯೇ, 2013ರಲ್ಲಿ ಸ್ವತಂತ್ರ ದಲಿತ ಮಹಿಳಾ ನೇತೃತ್ವದ ಟ್ರೇಡ್ ಯೂನಿಯನ್ ಆಗಿ ಸ್ಥಾಪಿಸಲಾದ ಟಿಟಿಸಿಯು ತಮಿಳುನಾಡಿನಲ್ಲಿ ಲಿಂಗಾಧಾರಿತ ಹಿಂಸಾಚಾರವನ್ನು ಕೊನೆಗೊಳಿಸಲು ಕಾರ್ಮಿಕರನ್ನು ಸಂಘಟಿಸುತ್ತಿತ್ತು. ಕೊಯಮತ್ತೂರು, ದಿಂಡಿಗಲ್, ಈರೋಡ್ ಮತ್ತು ತಿರುಪ್ಪೂರು ಗಾರ್ಮೆಂಟ್ ಹಬ್‌ಗಳು ಸೇರಿದಂತೆ 12 ಜಿಲ್ಲೆಗಳಲ್ಲಿ ಸುಮಾರು 11,000 ಕಾರ್ಮಿಕರನ್ನು ಕಾರ್ಮಿಕ ಒಕ್ಕೂಟವು ಪ್ರತಿನಿಧಿಸುತ್ತದೆ - 80 ಪ್ರತಿಶತದಷ್ಟು ಜವಳಿ ಮತ್ತು ಗಾರ್ಮೆಂಟ್ಸ್ ಉದ್ಯಮದಿಂದ ಬಂದವರು. ಇದು ವೇತನ ಕಳ್ಳತನ ಮತ್ತು ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಜಾತಿಯಾಧಾರಿತ ಹಿಂಸಾಚಾರದ ವಿರುದ್ಧವೂ ಹೋರಾಡುತ್ತದೆ.

Thivya Rakini, state president of the Dalit women-led Tamil Nadu Textile and Common Labour Union.
PHOTO • Asia Floor Wage Alliance
Thivya signing the Dindigul Agreement with Eastman Exports Global Clothing on behalf of TTCU
PHOTO • Asia Floor Wage Alliance

ಎಡ: ದಲಿತ ಮಹಿಳಾ ನೇತೃತ್ವದ ತಮಿಳುನಾಡು ಜವಳಿ ಮತ್ತು ಸಾಮಾನ್ಯ ಕಾರ್ಮಿಕ ಒಕ್ಕೂಟದ ರಾಜ್ಯ ಅಧ್ಯಕ್ಷೆ ದಿವ್ಯಾ ರಾಗಿಣಿ. ಬಲಕ್ಕೆ: ಟಿಟಿಸಿಯು ಪರವಾಗಿ ಈಸ್ಟ್‌ಮನ್ ಎಕ್ಸ್‌ಪೋರ್ಟ್ಸ್ ಗ್ಲೋಬಲ್ ಕ್ಲಾಥಿಂಗ್‌ ಸಂಸ್ಥೆಯೊಂದಿಗೆ ದಿಂಡಿಗಲ್ ಒಪ್ಪಂದಕ್ಕೆ ದಿವ್ಯಾ ಸಹಿ ಹಾಕಿದರು

"ಒಪ್ಪಂದಕ್ಕೆ ಮೊದಲು, ಕಾರ್ಖಾನೆಯಲ್ಲಿ [ನಾಚಿ] ಸರಿಯಾದ ಆಂತರಿಕ ದೂರು ಸಮಿತಿ [ಐಸಿಸಿ] ಇರಲಿಲ್ಲ" ಎಂದು ದಿವ್ಯಾ ಹೇಳುತ್ತಾರೆ. ಈಗಿರುವ ಐಸಿಸಿ ಮಹಿಳೆಯರ ನಡವಳಿಕೆಯನ್ನು ನಿಯಂತ್ರಿಸುತ್ತದೆ ಎಂದು 28 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯಿಂದ ಕೆಲಸಕ್ಕೆ ಬರುವ 26 ವರ್ಷದ ದಲಿತ ಕಾರ್ಮಿಕರಾದ ಮಿನಿ ಹೇಳುತ್ತಾರೆ. "ನಮ್ಮ ದೂರುಗಳನ್ನು ಪರಿಹರಿಸುವ ಬದಲು, ನಾವು ಹೇಗೆ ಉಡುಪು ಧರಿಸಬೇಕು ಅಥವಾ ಕುಳಿತುಕೊಳ್ಳಬೇಕು ಎಂದು ನಮಗೆ ತಿಳಿಸಲಾಯಿತು" ಎಂದು ಅವರು ಹೇಳುತ್ತಾರೆ. "ಬಾತ್‌ ರೂಮ್ ವಿರಾಮಗಳನ್ನು ತೆಗೆದುಕೊಳ್ಳುವುದರಿಂದ ನಮ್ಮನ್ನು ತಡೆಯಲಾಯಿತು, ಓವರ್‌ಟೈಮ್ ಕೆಲಸ ಮಾಡಲು ಒತ್ತಾಯಿಸಲಾಯಿತು ಮತ್ತು ನಮಗೆ ಅರ್ಹವಾದ ರಜೆಯನ್ನು ಬಳಸುವುದನ್ನು ತಡೆಯಲಾಯಿತು."

ಜಯಶ್ರೀ ಅವರ ಸಾವಿನ ನಂತರದ ತನ್ನ ಅಭಿಯಾನದಲ್ಲಿ, ಟಿಟಿಸಿಯು ಲೈಂಗಿಕ ಹಿಂಸಾಚಾರವನ್ನು ನಿಭಾಯಿಸಲು ಕ್ರಮಗಳನ್ನು ಕೋರಿದ್ದಲ್ಲದೆ, ಬಾತ್ರೂಮ್ ವಿರಾಮಗಳ ಕೊರತೆ ಮತ್ತು ಇತರ ವಿಷಯಗಳೊಂದಿಗೆ ಬಲವಂತದ ಓವರ್‌ಟೈಮ್ ಬಗ್ಗೆ ಕಳವಳ ವ್ಯಕ್ತಪಡಿಸಿತು.

"ಕಂಪನಿಯು ಒಕ್ಕೂಟಗಳ ವಿರುದ್ಧವಾಗಿತ್ತು, ಆದ್ದರಿಂದ ಹೆಚ್ಚಿನ ಕಾರ್ಮಿಕರು ತಮ್ಮ ಯೂನಿಯನ್ ಸದಸ್ಯತ್ವವನ್ನು ರಹಸ್ಯವಾಗಿಟ್ಟಿದ್ದರು" ಎಂದು ದಿವ್ಯಾ ಹೇಳುತ್ತಾರೆ. ಆದರೆ ಜಯಶ್ರೀಯವರ ಸಾವು ಒಂದು ಪ್ರಮುಖ ಅಂಶವಾಗಿತ್ತು. ಫ್ಯಾಕ್ಟರಿಯಿಂದ ಬೆದರಿಕೆಯನ್ನು ಎದುರಿಸಿದರೂ, ರಮಾ, ಲತಾ ಮತ್ತು ಮಿನಿಯಂತಹ ಕಾರ್ಮಿಕರು ಹೋರಾಟ ನಡೆಸಿದರು. ಸುಮಾರು 200 ಮಹಿಳೆಯರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪ್ರತಿಭಟನಾ ಜಾಥಾಗಳಲ್ಲಿ ಭಾಗವಹಿಸಿದ್ದರು. ಜಸ್ಟೀಸ್ ಫಾರ್ ಜಯಶ್ರೀ ಅಭಿಯಾನದ ಬಗ್ಗೆ ಗಮನ ಸೆಳೆಯಲು ಅನೇಕರು ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ತಮ್ಮ ಹೇಳಿಕೆಗಳನ್ನು ನೀಡಿದರು.

ಅಂತಿಮವಾಗಿ, ಟಿಟಿಸಿಯು, ಮತ್ತು ಅಂತರ ರಾಷ್ಟ್ರೀಯ ಫ್ಯಾಷನ್ ಪೂರೈಕೆ ಸರಪಳಿಗಳಲ್ಲಿ ಹಿಂಸಾಚಾರ ಮತ್ತು ಕಿರುಕುಳವನ್ನು ಪರಿಹರಿಸಲು ಅಭಿಯಾನಗಳನ್ನು ಮುನ್ನಡೆಸಿದ ಎರಡು ಸಂಸ್ಥೆಗಳು - ಏಷ್ಯಾ ಫ್ಲೋರ್ ವೇಜ್ ಅಲೈಯನ್ಸ್ (ಎಎಫ್‌ಡಬ್ಲ್ಯೂಎ) ಮತ್ತು ಗ್ಲೋಬಲ್ ಲೇಬರ್ ಜಸ್ಟಿಸ್-ಇಂಟರ್ನ್ಯಾಷನಲ್ ಲೇಬರ್ ರೈಟ್ಸ್ ಫೋರಂ (ಜಿಎಲ್‌ಜೆ-ಐಎಲ್ಆಎಆರ್‌ಎಫ್) - ಈ ವರ್ಷದ ಏಪ್ರಿಲ್ಲಿನಲ್ಲಿ ಎಚ್&ಎಂ ನೊಂದಿಗೆ ಜಾರಿಗೊಳಿಸಬಹುದಾದ ಬ್ರಾಂಡ್ ಒಪ್ಪಂದಕ್ಕೆ ಸಹಿ ಹಾಕಿದವು.

ಮೂರು ಸಂಘಟನೆಗಳ ಜಂಟಿ ಪತ್ರಿಕಾ ಪ್ರಕಟಣೆಯ ಪ್ರಕಾರ, ದಿಂಡಿಗಲ್ ಒಪ್ಪಂದವು ಭಾರತದಲ್ಲಿ ಜಾರಿಗೆ ತರಬಹುದಾದ ಮೊದಲ ಬ್ರಾಂಡ್ ಒಪ್ಪಂದವಾಗಿದೆ. ಇದು "ಬಟ್ಟೆ ಕಾರ್ಖಾನೆಗಳು ಮತ್ತು ಬಟ್ಟೆಗಳ ಬಳಕೆಗಾಗಿ ಬಟ್ಟೆ ಮತ್ತು ಜವಳಿಗಳನ್ನು ಉತ್ಪಾದಿಸುವ ಕಾರ್ಖಾನೆಗಳೆರಡನ್ನೂ ಒಳಗೊಂಡ ವಿಶ್ವದ ಮೊದಲ ಇಬಿಎ ಆಗಿದೆ."

ಸಹಿ ಹಾಕಿದ ಎಲ್ಲಾ ದೇಶಗಳು ಜಂಟಿಯಾಗಿ "ಲಿಂಗ, ಜಾತಿ ಅಥವಾ ವಲಸೆಯ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯವನ್ನು ತೊಡೆದುಹಾಕಲು; ಪಾರದರ್ಶಕತೆಯನ್ನು ಹೆಚ್ಚಿಸಲು; ಮತ್ತು ಗಾರ್ಮೆಂಟ್ಸ್ ಫ್ಯಾಕ್ಟರಿ ಪರಿಸರದಲ್ಲಿ ಪರಸ್ಪರ ಗೌರವದ ಸಂಸ್ಕೃತಿಯನ್ನು ಬೆಳೆಸುವುದಕ್ಕೆ ಒಪ್ಪಿ ಸಹಿ ಹಾಕಿವೆ."

The Dindigul Agreement pledges to end gender-based violence and harassment at the factories operated by Eastman Exports in Dindigul. ‘It is a testimony to what organised Dalit women workers can achieve,’ Thivya Rakini says
PHOTO • Antara Raman
The Dindigul Agreement pledges to end gender-based violence and harassment at the factories operated by Eastman Exports in Dindigul. ‘It is a testimony to what organised Dalit women workers can achieve,’ Thivya Rakini says
PHOTO • Antara Raman

ದಿಂಡಿಗಲ್ಲಿನಲ್ಲಿ ಈಸ್ಟ್‌ಮನ್ ಎಕ್ಸ್‌ಪೋರ್ಟ್ಸ್ ನಡೆಸುತ್ತಿರುವ ಕಾರ್ಖಾನೆಗಳಲ್ಲಿ ಲಿಂಗಾಧಾರಿತ ಹಿಂಸಾಚಾರ ಮತ್ತು ಕಿರುಕುಳವನ್ನು ಕೊನೆಗಾಣಿಸುವುದಾಗಿ ದಿಂಡಿಗಲ್ ಒಪ್ಪಂದವು ಪ್ರತಿಜ್ಞೆ ಮಾಡಿದೆ. 'ಸಂಘಟಿತ ದಲಿತ ಮಹಿಳಾ ಕಾರ್ಮಿಕರು ಏನನ್ನು ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ' ಎಂದು ದಿವ್ಯಾ ರಾಗಿಣಿ ಹೇಳುತ್ತಾರೆ

ಈ ಒಪ್ಪಂದವು ಜಾಗತಿಕ ಕಾರ್ಮಿಕ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತದೆ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಹಿಂಸೆ ಮತ್ತು ಕಿರುಕುಳ ಒಪ್ಪಂದವನ್ನು ಅನುಸರಿಸುತ್ತದೆ . ಇದು ದಲಿತ ಮಹಿಳಾ ಕಾರ್ಮಿಕರ ಹಕ್ಕುಗಳು, ಅವರ ಸಂಘಟನೆಯ ಸ್ವಾತಂತ್ರ್ಯ ಮತ್ತು ಒಕ್ಕೂಟಗಳನ್ನು ರಚಿಸುವ ಮತ್ತು ಸೇರುವ ಅವರ ಹಕ್ಕನ್ನು ರಕ್ಷಿಸುತ್ತದೆ. ಇದು ದೂರುಗಳನ್ನು ಸ್ವೀಕರಿಸಲು ಮತ್ತು ತನಿಖೆ ನಡೆಸಲು ಮತ್ತು ಪರಿಹಾರವನ್ನು ಶಿಫಾರಸು ಮಾಡಲು ಆಂತರಿಕ ದೂರುಗಳ ಸಮಿತಿಯನ್ನು ಬಲಪಡಿಸುತ್ತದೆ. ಮೌಲ್ಯಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸ್ವತಂತ್ರ ಮೌಲ್ಯಮಾಪಕರು ಅಗತ್ಯವಿರುತ್ತದೆ, ಮತ್ತು ಅನುಸರಣೆ ಮಾಡದಿರುವುದು ಎಚ್&‌ಎಮ್ ಸಂಸ್ಥೆಯ ಈಸ್ಟ್‌ಮನ್ ಎಕ್ಸ್‌ಪೋರ್ಟ್ಸ್ ಮೇಲೆ ವ್ಯವಹಾರದ ಪರಿಣಾಮಗಳನ್ನು ಬೀರುತ್ತದೆ.

ದಿಂಡಿಗಲ್ ಒಪ್ಪಂದವು ನಾಚಿ ಅಪಾರೆಲ್ಸ್ ಮತ್ತು ಈಸ್ಟ್ಮನ್ ಸ್ಪಿನ್ನಿಂಗ್ ಮಿಲ್ಸ್ (ದಿಂಡಿಗಲ್) ನ ಎಲ್ಲಾ ಕಾರ್ಮಿಕರನ್ನು ಒಳಗೊಳ್ಳುತ್ತದೆ, ಒಟ್ಟು 5,000ಕ್ಕೂ ಹೆಚ್ಚು ಕಾರ್ಮಿಕರನ್ನು ಒಳಗೊಳ್ಳುತ್ತದೆ. ಅವರಲ್ಲಿ ಬಹುತೇಕ ಎಲ್ಲರೂ ಮಹಿಳೆಯರಾಗಿದ್ದು, ಹೆಚ್ಚಿನವರು ದಲಿತರಾಗಿದ್ದಾರೆ. "ಈ ಒಪ್ಪಂದವು ಗಾರ್ಮೆಂಟ್ಸ್ ವಲಯದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸಬಹುದು. ಸಂಘಟಿತ ದಲಿತ ಮಹಿಳಾ ಕಾರ್ಮಿಕರು ಏನನ್ನು ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ" ಎಂದು ದಿವ್ಯಾ ಹೇಳುತ್ತಾರೆ.

"ನನಗೆ ಅಥವಾ ಜಯಶ್ರೀಯಂತಹ ನನ್ನ ಸಹೋದರಿಯರಿಗೆ ಏನಾಯಿತು ಎಂಬುದರ ಬಗ್ಗೆ ನಾನು ಇನ್ನು ಮುಂದೆ ದುಃಖಿಸಲು ಬಯಸುವುದಿಲ್ಲ" ಎಂದು 31 ವರ್ಷದ ಮಲ್ಲಿ ಹೇಳುತ್ತಾರೆ. "ನಾನು ಮುಂದೆ ನೋಡಬಯಸುತ್ತೇನೆ ಮತ್ತು ಜಯಶ್ರೀಗೆ ಆದಂತೆ ಇತರರಿಗೂ ಆಗದಂತೆ ಮಾಡಲು ನಾವು ಈ ಒಪ್ಪಂದವನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ಯೋಚಿಸಲು ಬಯಸುತ್ತೇನೆ."

ಪರಿಣಾಮಗಳು ಈಗಲೇ ಕಾಣುತ್ತಿವೆ. "ಒಪ್ಪಂದದ ನಂತರ ಕೆಲಸದ ಪರಿಸ್ಥಿತಿಗಳು ಸಾಕಷ್ಟು ಬದಲಾಗಿವೆ. ಸರಿಯಾದ ಬಾತ್‌ ರೂಮ್ ವಿರಾಮಗಳು ಮತ್ತು ಊಟದ ವಿರಾಮಗಳು ಸಿಗುತ್ತಿವೆ. ನಮಗೆ ರಜೆಯನ್ನು ನಿರಾಕರಿಸಲಾಗುವುದಿಲ್ಲ - ವಿಶೇಷವಾಗಿ ನಾವು ಅನಾರೋಗ್ಯದಿಂದ ಬಳಲುತ್ತಿದ್ದರೆ. ಯಾವುದೇ ಬಲವಂತದ ಓವರ್‌ಟೈಮ್ ಇಲ್ಲ. ಮೇಲ್ವಿಚಾರಕರು ಮಹಿಳಾ ಕಾರ್ಮಿಕರನ್ನು ನಿಂದಿಸುವುದಿಲ್ಲ. ಮಹಿಳಾ ದಿನ ಮತ್ತು ಪೊಂಗಲ್ ದಿನದಂದು ಅವರು ಕಾರ್ಮಿಕರಿಗೆ ಸಿಹಿತಿಂಡಿಗಳನ್ನು ಸಹ ನೀಡುತ್ತಿದ್ದಾರೆ" ಎಂದು ಲತಾ ಹೇಳುತ್ತಾರೆ.

ರಮಾ ಈಗ ಸಂತೋಷದಲ್ಲಿದ್ದಾರೆ. "ಪರಿಸ್ಥಿತಿ ಈಗ ಬದಲಾಗಿದೆ, ಮೇಲ್ವಿಚಾರಕರು ನಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. ಅವರು ಕಾರ್ಮಿಕರ ಹೋರಾಟದ ಉದ್ದಕ್ಕೂ ಪೂರ್ಣಕಾಲಿಕ ಕೆಲಸ ಮಾಡಿದರು, ಗಂಟೆಗೆ 90ಕ್ಕೂ ಹೆಚ್ಚು ಒಳ ಉಡುಪುಗಳನ್ನು ಹೊಲಿಯುತ್ತಿದ್ದರು. ಈ ಕೆಲಸವನ್ನು ಮಾಡುವುದರಿಂದ ಅವರು ಅನುಭವಿಸುವ ತೀವ್ರವಾದ ಬೆನ್ನುನೋವು ಸಹಿಸಲಸಾಧ್ಯ ಎಂದು ಅವರು ಹೇಳುತ್ತಾರೆ. "ಇದು ಈ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಇದನ್ನು ಸಹಿಸುವುದು ಅನಿವಾರ್ಯ."

ಸಂಜೆ ಮನೆಗೆ ಕರೆದೊಯ್ಯುವ ಬಸ್ಸಿಗಾಗಿ ಕಾಯುತ್ತಿದ್ದ ರಮಾ ಹೇಳುತ್ತಾರೆ, "ನಾವು ಕಾರ್ಮಿಕರಿಗಾಗಿ ಇನ್ನೂ ಹೆಚ್ಚಿನದನ್ನು ಮಾಡಬಲ್ಲೆವು."

ವರದಿಯ ಲ್ಲಿ ಸಂದರ್ಶಿಸಲಾದ ಗಾರ್ಮೆಂಟ್ಸ್ ಕಾರ್ಮಿಕರ ಹೆಸರುಗಳನ್ನು ಅವರ ಗೌಪ್ಯತೆಯನ್ನು ರಕ್ಷಿ ಸುವ ಸಲುವಾಗಿ ಬದಲಾಯಿಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Gokul G.K.

Gokul G.K. is a freelance journalist based in Thiruvananthapuram, Kerala.

Other stories by Gokul G.K.
Illustrations : Antara Raman

Antara Raman is an illustrator and website designer with an interest in social processes and mythological imagery. A graduate of the Srishti Institute of Art, Design and Technology, Bengaluru, she believes that the world of storytelling and illustration are symbiotic.

Other stories by Antara Raman
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru