ಬಾಗಲಕೋಟೆ-ಬೆಳಗಾವಿ ರಸ್ತೆಯಲ್ಲಿ ಎಸ್.ಬಂಡೇಪ್ಪ ಒಂದು ಮಧ್ಯಾಹ್ನ ಕುರಿಗಳ ಹಿಂಡಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ನಾನು ಅವರನ್ನು ಭೇಟಿಯಾದೆ. ಅವರು ತನ್ನ ಕುರಿಗಳೊಂದಿಗೆ ಸ್ವಲ್ಪ ಕಾಲ ತಂಗಲು ಕೃಷಿಭೂಮಿಯ ಹುಡುಕಾಟದಲ್ಲಿದ್ದರು. "ನನ್ನ ಕುರಿಗಳಿಂದ ಉತ್ಪತ್ತಿಯಾಗುವ ಗೊಬ್ಬರಕ್ಕಾಗಿ ಉತ್ತಮ ಮೊತ್ತವನ್ನು ನೀಡುವ ಭೂಮಾಲೀಕರನ್ನು ಹುಡುಕುವುದು ನಮ್ಮ ಕೆಲಸವಾಗಿದೆ" ಎಂದು ಅವರು ಹೇಳಿದರು. ಅದು ಚಳಿಗಾಲ, ಕುರುಬ ಸಮುದಾಯದ ಕುರಿ ಪಾಲಕರು ಅಕ್ಟೋಬರ್-ನವೆಂಬರ್ ತಿರುಗಾಟದಲ್ಲಿದ್ದರು, ಆದರೆ ಕೃಷಿ ಕೆಲಸಗಳು ಕಡಿಮೆಯಾಗಿವೆ.
ಅಂದಿನಿಂದ ಮಾರ್ಚ್-ಏಪ್ರಿಲ್ ತನಕ, ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಲಾಗಿರುವ ಕರ್ನಾಟಕದ ಕುರಿಗಾಹಿ ಕುರುಬರು, ಎರಡು ಅಥವಾ ಮೂರು ಕುಟುಂಬಗಳ ಗುಂಪುಗಳಲ್ಲಿ ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತಾರೆ, ಸಾಮಾನ್ಯವಾಗಿ ಒಂದೇ ಮಾರ್ಗಗಳಲ್ಲಿ, ಒಟ್ಟು 600ರಿಂದ 800 ಕಿಲೋಮೀಟರ್ ದೂರವನ್ನು ಕ್ರಮಿಸುತ್ತಾರೆ ಎಂದು ಅವರು ಅಂದಾಜಿಸುತ್ತಾರೆ. ಅವರ ಕುರಿ ಮತ್ತು ಮೇಕೆಗಳು ಪಾಳು ಬಿದ್ದ ಹೊಲಗಳಲ್ಲಿ ಮೇಯುತ್ತವೆ, ಮತ್ತು ಕುರುಬರು ರೈತರಿಂದ ಕುರಿಗಳ ಗೊಬ್ಬರಕ್ಕಾಗಿ ಸಾಧಾರಣ ಮೊತ್ತವನ್ನು ಪಡೆಯುತ್ತಾರೆ. ಹೊಲದಲ್ಲಿ ಕುರಿಗಳೊಡನೆ ವಾಸ್ತವ್ಯಕ್ಕಾಗಿ ಒಳ್ಳೆಯ ರೈತರು ಗರಿಷ್ಠ 1,000ರೂ ನೀಡುತ್ತಾರೆಂದು ಎಂದು ಬಂಡೆಪ್ಪ ಹೇಳುತ್ತಾರೆ. ನಂತರ ಅವರು ಮುಂದಿನ ಸ್ಥಳಕ್ಕೆ ಹೋಗಿ ಅಲ್ಲಿ ಸುತ್ತಮುತ್ತಲಿನ ಹೊಲಗಳನ್ನು ಹುಡುಕುತ್ತಾರೆ. ಹಿಂದೆ, ಅವರು ಆಹಾರ ಧಾನ್ಯಗಳು, ಬೆಲ್ಲ ಮತ್ತು ಬಟ್ಟೆಗಳಂತಹ ಸರಕುಗಳನ್ನು ಸಹ ಪಡೆಯುತ್ತಿದ್ದರು, ಆದರೆ ಈಗೀಗ ರೈತರೊಂದಿಗೆ ಸಂವಹನ ನಡೆಸುವುದು ಕಷ್ಟಕರವಾಗುತ್ತಿದೆ ಎಂದು ಅವರು ಹೇಳುತ್ತಾರೆ.
ನೀಲಪ್ಪ ಚಚ್ಡಿ ಹೇಳುವಂತೆ, "ನಮ್ಮ ಪ್ರಾಣಿಗಳು ಮತ್ತು ಮಕ್ಕಳೊಂದಿಗೆ ಭೂಮಾಲೀಕರ ಭೂಮಿಯಲ್ಲಿ ವಾಸಿಸುವುದು ಸುಲಭವಲ್ಲ." ನಾನು ಅವರನ್ನು ಬೆಳಗಾವಿ (ಈಗ ಬೆಳಗಾವಿ) ಜಿಲ್ಲೆಯ ಬೈಲಹೊಂಗಲ-ಮುನವಳ್ಳಿ ರಸ್ತೆಯ ಬಳಿಯ ಜಮೀನಿನಲ್ಲಿ ಭೇಟಿಯಾದೆ, ಅಲ್ಲಿ ಅವರು ಹಿಂಡನ್ನು ನಿಯಂತ್ರಿಸಲು ಹಗ್ಗದಿಂದ ಬೇಲಿ ಗಡಿಗಳನ್ನು ನಿರ್ಮಿಸುತ್ತಿದ್ದರು.
ಆದರೆ ಕುರುಬರು ಎದುರಿಸುತ್ತಿರುವ ಸಮಸ್ಯೆ ಇದೊಂದೆ ಅಲ್ಲ. ಕಳೆದ ಎರಡು ದಶಕಗಳಲ್ಲಿ, ದಕ್ಷಿಣ-ಮಧ್ಯ ಭಾರತದ ಡೆಕ್ಕನ್ ಪ್ರದೇಶದ ಒರಟಾದ ಭೂಪ್ರದೇಶದಲ್ಲಿ ಸಂತಾನೋತ್ಪತ್ತಿ ಮಾಡಿದ ತಮ್ಮ ಕುರಿಗಳ ಉಣ್ಣೆಯ ಬೇಡಿಕೆ ಕುಸಿಯುತ್ತಿದೆ. ಗಟ್ಟಿಮುಟ್ಟಾದ ದಖ್ಖನಿ ಕುರಿಗಳು ಭೂಮಿಯ ಅರೆ ಶುಷ್ಕ ವಾತಾವರಣವನ್ನು ತಡೆದುಕೊಳ್ಳಬಲ್ಲವು. ಕುರುಬರ ಸಂಪಾದನೆಯ ಪ್ರಮುಖ ಭಾಗವು ಸ್ಥಳೀಯವಾಗಿ ಕಂಬಳಿ (ಮತ್ತು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಗೊಂಗಾಡಿ ಅಥವಾ ಗೊಂಗಾಲಿ) ಎಂದು ಕರೆಯಲ್ಪಡುವ ಒರಟಾದ ಕಪ್ಪು ಉಣ್ಣೆ ಕಂಬಳಿಗಳಿಗೆ ಉಣ್ಣೆಯನ್ನು ಪೂರೈಸುವುದರಿಂದ ಬರುತ್ತಿತ್ತು. ಇದರೊಂದಿಗೆ ಹೊಲಗಳಲ್ಲಿ ಕುರಿ ಮೇಯಲು ಬಿಟ್ಟಿದ್ದಕ್ಕಾಗಿ ಬರುತ್ತಿದ್ದ ಹಣವು ಅವರ ಪೂರಕ ಆದಾಯವಾಗಿತ್ತು. ಸುಲಭವಾಗಿ ಮತ್ತು ಸ್ಥಳೀಯವಾಗಿ ಲಭ್ಯವಿರುವ ನಾರಿನಂತೆ, ಉಣ್ಣೆ ತುಲನಾತ್ಮಕವಾಗಿ ಅಗ್ಗವಾಗಿತ್ತು ಮತ್ತು ಬೇಡಿಕೆಯಲ್ಲಿತ್ತು.
ಖರೀದಿದಾರರಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ದಾದಿಭಾವಿ ಸಲಾಪುರ ಎಂಬ ಗ್ರಾಮದ ನೇಕಾರರು ಕೂಡ ಸೇರಿದ್ದರು. ಅನೇಕ ನೇಕಾರರು ಸಮುದಾಯದ ಉಪ ಗುಂಪಾದ ಕುರುಬರು ಕೂಡ ಹೌದು. (ಕುರುಬರು ಶಾಶ್ವತ ಮನೆಗಳು ಮತ್ತು ಊರುಗಳನ್ನು ಸಹ ಹೊಂದಿದ್ದಾರೆ, ಮತ್ತು ಕುರಿಗಾಹಿಗಳು, ನೇಕಾರರು, ಕೃಷಿಕರು ಮತ್ತು ಇತ್ಯಾದಿ ವಿವಿಧ ಉಪಗುಂಪುಗಳು ಸಹ ಇವೆ). ಅವರು ಹೆಣೆದ ಕಂಬಳಿಗಳು ಒಂದು ಕಾಲದಲ್ಲಿ ದೇಶದ ಸಶಸ್ತ್ರ ಪಡೆಗಳಲ್ಲಿ ಜನಪ್ರಿಯವಾಗಿದ್ದವು, ಆದರೆ ಈಗ ಹೆಚ್ಚಿನ ಬೇಡಿಕೆಯಲ್ಲಿಲ್ಲ. "ಅವರು ಈಗ ಸ್ಲೀಪಿಂಗ್ ಬ್ಯಾಗ್ ಗಳನ್ನು ಬಳಸುತ್ತಾರೆ" ಎಂದು ದಾದಿಭಾವಿ ಸಾಲಾಪುರದಲ್ಲಿ ಪಿಟ್ ಲೂಮ್ ಹೊಂದಿರುವ ನೇಕಾರ ಪಿ. ಈಶ್ವರಪ್ಪ ವಿವರಿಸುತ್ತಾರೆ, ಅಲ್ಲಿ ಸಾಂಪ್ರದಾಯಿಕ ಕಪ್ಪು ಉಣ್ಣೆ ಕಂಬಳಿಗಳನ್ನು ಈಗಲೂ ಉತ್ಪಾದಿಸಲಾಗುತ್ತದೆ.
"ಮಿಶ್ರಿತ ಸಿಂಥೆಟಿಕ್ ಬಟ್ಟೆಗಳು ಮತ್ತು ಇತರ ಬಗೆಯ ಉಣ್ಣೆ ಸೇರಿದಂತೆ ಅಗ್ಗದ ಪರ್ಯಾಯಗಳ ಕಾರಣದಿಂದಾಗಿ ಡೆಕ್ಕನ್ ಉಣ್ಣೆಯ ಬೇಡಿಕೆ ಕೂಡ ಕ್ಷೀಣಿಸುತ್ತಿದೆ, ಇದು ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಪ್ರವಾಹವನ್ನು ತಂದಿದೆ" ದಾದಿಭಾವಿ ಸಾಲಾಪುರದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದಲ್ಲಿ ಅಂಗಡಿ ನಡೆಸುತ್ತಿರುವ ಅಂಗಡಿಮಾಲೀಕ ದಿನೇಶ್ ಸೇಠ್


ಎಡಕ್ಕೆ: ಪ್ರಮುಖ ರಸ್ತೆಗಳಲ್ಲಿ (ಚಿತ್ರದಲ್ಲಿರುವುದು, ಬಾಗಲಕೋಟೆ-ಬೆಳಗಾವಿ ರಸ್ತೆ) ನಡೆಯುವುದು ಸುಲಭವಲ್ಲ, ಮತ್ತು ಪ್ರಾಣಿಗಳು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತವೆ ಅಥವಾ ಗಾಯಗೊಳ್ಳುತ್ತವೆ. ಬಲಕ್ಕೆ: ಒರಟಾದ ಭೂಪ್ರದೇಶದಿಂದಾಗಿ 'ರಸ್ತೆಯಾಚೆಗಿನ' ವಲಸೆಗೆ ಅದರದೇ ಆದ ತೊಂದರೆಗಳಿವೆ. ಕುರಿಗಾಹಿಗಳು ಹೊಲದ ರೈತನೊಂದಿಗೆ ಮೇಯಿಸುವುದು ಮತ್ತು ಗೊಬ್ಬರದ ಒಪ್ಪಂದವನ್ನು ಹೊಂದಿಲ್ಲದಿದ್ದರೆ ಅಂತಹ ಹೊಲಗಳಲ್ಲಿ ಅವರು ಸಂಚರಿಸುವಂತಿಲ್ಲ
ಎರಡು ದಶಕಗಳ ಹಿಂದೆ ಈ ಕಂಬಳಿ, ರಗ್ಗುಗಳ ಬೇಡಿಕೆ ದೃಢವಾಗಿದ್ದಾಗ ನೇಕಾರರು ಕುರುಬರಿಂದ ಕಚ್ಚಾ ಉಣ್ಣೆಯನ್ನು ಕಿಲೋಗ್ರಾಂಗೆ 30ರಿಂದ 40 ರೂ.ಗೆ ಖರೀದಿಸುತ್ತಿದ್ದರು. ಈಗ ಅವರು ಅದನ್ನು ಸುಮಾರು 8-10ರೂ.ಗಳಿಗೆ ಖರೀದಿಸುತ್ತಾರೆ. ಸಿದ್ಧ ಕಂಬಳಿಗಳನ್ನು ಸ್ಥಳೀಯ ಅಂಗಡಿಗಳಿಗೆ 600ರಿಂದ 800 ರೂ.ಗಳವರೆಗೆ ಮಾರಾಟ ಮಾಡಲಾಗುತ್ತದೆ, ಸಣ್ಣ ಗಾತ್ರದ ರಗ್ಗುಗಳು 200-300 ರೂ.ಗಳಿಗೆ ಮಾರಾಟವಾಗುತ್ತವೆ. ಆದರೆ ಈ ಆದಾಯವು ಕುರಿಗಾಹಿಗಳಿಗೆ ಹೆಚ್ಚು ವ್ಯತ್ಯಾಸಗೊಳ್ಳುತ್ತದೆ. ನನ್ನ ಸಂಭಾಷಣೆಗಳ ಅಂದಾಜಿನ ಪ್ರಕಾರ, ಸುಮಾರು 100 ಕುರಿಗಳನ್ನು ಹೊಂದಿರುವ ಕುಟುಂಬವು ಉಣ್ಣೆ, ಗೊಬ್ಬರ ಮತ್ತು ಪ್ರಾಣಿಗಳನ್ನು ಮಾರಾಟ ಮಾಡುವುದು ಸೇರಿದಂತೆ ವಿವಿಧ ಮೂಲಗಳಿಂದ ಇಡೀ ವರ್ಷದಲ್ಲಿ ಸುಮಾರು ರೂ. 70,000ದಿಂದ ರೂ. 80,000 ಗಳಿಸುತ್ತದೆ.
ಉಣ್ಣೆಯಿಂದ ಸ್ಥಿರವಾದ ಆದಾಯವನ್ನು ಪಡೆಯುವ ಪ್ರಯತ್ನದಲ್ಲಿ, ದಾದಿಬಾವಿ ಸಲಾಪುರ ಮತ್ತು ಇತರ ಹಳ್ಳಿಗಳ ಹಲವಾರು ಕುಟುಂಬಗಳ ಮಹಿಳೆಯರು, ಈಗಲೂ ನೂಲು ನೂಲುವ ಮತ್ತು ನೇಯ್ಗೆ ಮಾಡುವ ಕೆಲಸ ಮಾಡುತ್ತಾ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಅವರ ಸಮುದಾಯದ ಪುರುಷರು ಈಗ ಹೆಚ್ಚಾಗಿ ಕೃಷಿ ಕೆಲಸಗಳತ್ತ ಗಮನ ಹರಿಸುತ್ತಾರೆ.
ಮತ್ತು ಬದುಕು ನಡೆಸುವ ಸಲುವಾಗಿ ಕುರುಬರು ಕೂಡ ಸುಧಾರಿಸುತ್ತಿದ್ದಾರೆ. ಬೆಳಗಾವಿಯ ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ್ ಬ್ಲಾಕ್‌ನಲ್ಲಿರುವ ಮೇಕಲ್ ಮರಡಿ ಗ್ರಾಮದಲ್ಲಿ, ದೈಹಿಕವಾಗಿ ಅಂಗವಿಕಲರಾದ ಕುರುಬಾ ನೇಕಾರರಾದ ದಸ್ತಗೀರ್ ಜಮ್ದಾರ್ ಅವರು ಬ್ಯಾಗ್ ಮತ್ತು ರಗ್ಗುಗಳನ್ನು ತಯಾರಿಸಲು ಸೆಣಬಿನ, ಚರ್ಮ ಮತ್ತು ಉಣ್ಣೆಯ ಉತ್ಪನ್ನಗಳ ತಯಾರಿಕೆಯೊಂದಿಗೆ ತಮ್ಮ ವ್ಯವಹಾರವನ್ನು ಸುಧಾರಿಸಲು ಪ್ರಾರಂಭಿಸಿದ್ದಾರೆ. “ಈ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದು. ಕೆಲವೊಮ್ಮೆ, ಬೆಂಗಳೂರಿನ ಚಿಲ್ಲರೆ ವ್ಯಾಪಾರಿಗಳು ಬಂದು ಸಣ್ಣ ಆದೇಶಗಳನ್ನು ನೀಡುತ್ತಾರೆ, ಆದರೆ ಬೇಡಿಕೆ ಅನಿಶ್ಚಿತವಾಗಿರುತ್ತದೆ,” ಎಂದು ಅವರು ಹೇಳುತ್ತಾರೆ.
ಕೆಲವು ಕುರಿಗಾಹಿಗಳಿಗೆ, ತಮ್ಮ ಪ್ರಾಣಿಗಳನ್ನು ಮಾಂಸ ಮತ್ತು ಹಾಲಿಗೆ ಮಾರಾಟ ಮಾಡುವ ಮೂಲಕ ಜೀವನೋಪಾಯಕ್ಕೆ ಒತ್ತು ನೀಡಲಾಗಿದೆ. ರಾಜ್ಯ ಸರ್ಕಾರವು (ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ) ದಖನಿ ಹೊರತುಪಡಿಸಿ ಇತರ ಕುರಿಗಳ ತಳಿಗಳನ್ನು ಉತ್ತೇಜಿಸುವುದರೊಂದಿಗೆ, ಉಣ್ಣೆಗಿಂತ ಹೆಚ್ಚಿನ ಮಾಂಸವನ್ನು ಉತ್ಪಾದಿಸಬಲ್ಲ ಕೆಂಪು ನೆಲ್ಲೂರು, ಯೆಲ್ಗು ಮತ್ತು ಮ್ಯಾಡ್ಗ್ಯಾಲ್, ಕೆಲವು ಕುರುಬಾಗಳು ಸಹ ಈ ತಳಿಗಳನ್ನು ಹೆಚ್ಚಾಗಿ ಇಡುತ್ತಿವೆ. ಗಂಡು ಕುರಿಮರಿ ಮಾಂಸವು ಉದ್ಯಮದಲ್ಲಿ ಉತ್ತಮ ಸಂಪಾದನೆಯನ್ನು ತರುತ್ತದೆ. ಕೆಲವೊಮ್ಮೆ ರೂ. 8,000ವರೆಗೆ ದೊರೆಯುತ್ತದೆ. ತುಮಕೂರು ಜಿಲ್ಲೆಯ ಸಿರಾ ಪಟ್ಟಣದ ಕುರಿ ಮಾರುಕಟ್ಟೆಯಲ್ಲಿ 2019ರ ಫೆಬ್ರವರಿಯಲ್ಲಿ ಕುರುಬ ಕುರಿಗಾಹಿ ಪಿ.ನಾಗಪ್ಪ ಅವರು ಮೂರು ತಿಂಗಳ ಆರೋಗ್ಯವಂತ ಕುರಿ ಮರಿ ಮಾರಾಟ ಮಾಡಿ 6,000 ರೂ. ಗಳಿಸಿದ್ದರು. ಮತ್ತು ಈ ಪ್ರದೇಶದಲ್ಲಿ ಬೆಳೆಯುತ್ತಿರುವ ಮೇಕೆ ಹಾಲಿನ ಉದ್ಯಮದೊಂದಿಗೆ, ಕೆಲವು ದಖನಿ ಕುರಿ ಮಾಲೀಕರು ಹಾಲಿಗಾಗಿ ಆಡುಗಳನ್ನು ಸಾಕುವತ್ತ ಗಮನ ಹರಿಸಿದ್ದಾರೆ.
ಎರಡು ದಶಕಗಳಿಂದ ಕರ್ನಾಟಕದ ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿರುವ ಸ್ಥಳೀಯ ಪಶುವೈದ್ಯರೊಬ್ಬರು, ತಮ್ಮ ಜಾನುವಾರುಗಳು ಆರೋಗ್ಯಕರವಾಗಿ ಕಾಣುವುದನ್ನು ಖಚಿತಪಡಿಸಿಕೊಳ್ಳಲು, ಕೆಲವು ಕುರುಬರು ಈಗ ಅವುಗಳಿಗೆ ಉದಾರವಾಗಿ ಔಷಧೋಪಚಾರ ಮಾಡುತ್ತಾರೆ, ಆಗಾಗ್ಗೆ ಪಶುವೈದ್ಯರನ್ನು ಸಂಪರ್ಕಿಸದೆ ಅನರ್ಹ ವಿತರಕರಿಂದ ಔಷಧಿಗಳನ್ನು ಖರೀದಿಸುತ್ತಾರೆ ಎಂದು ಹೇಳಿದರು.
ಇತ್ತ ಬಾಗಲಕೋಟೆ-ಬೆಳಗಾವಿ ರಸ್ತೆಯಲ್ಲಿ ಎಸ್.ಬಂಡೆಪ್ಪ ಅನುಕೂಲಕರ ಕೃಷಿಭೂಮಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಸುಮಾರು ಒಂದು ದಶಕದ ಹಿಂದಿನಿಂದ, ಉತ್ತರ ಕರ್ನಾಟಕದ ಅನೇಕ ರೈತರು ಸಾವಯವ ಪದ್ಧತಿಗಳಿಂದ ವಿಮುಖರಾಗಿ ರಾಸಾಯನಿಕ ಗೊಬ್ಬರಗಳಿಗೆ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ, ವರ್ಷದ ಉಳಿದ ದಿನಗಳಲ್ಲಿ ಹೆಚ್ಚಿನ ಕೃಷಿ ಕೆಲಸಗಳನ್ನು ಹುಡುಕಲು ಪ್ರಯತ್ನಿಸುವ ಬಂಡೆಪ್ಪ ಮತ್ತು ಇತರ ಕುರುಬರಿಗೆ ಗೊಬ್ಬರವೂ ಸಹ ಈಗ ಜೀವನೋಪಾಯದ ಸ್ಥಿರ ಆದಾಯ ಮೂಲವಲ್ಲ.
ಮತ್ತು ರೈತರು ಮತ್ತು ಕುರಿಗಾಹಿಗಳ ನಡುವಿನ ಸಾಂಪ್ರದಾಯಿಕ ಸಹಜೀವನವು ಅವನತಿಯ ಹಾದಿಯಲ್ಲಿರುವುದರಿಂದ, ಕೆಲವು ಕುರುಬರು ತಮ್ಮ ಹಿಂಡುಗಳು ಮತ್ತು ವಸ್ತುಗಳೊಂದಿಗೆ ಹೆಚ್ಚಿನ ದೂರಗಳಿಗೆ ವಲಸೆ ಹೋಗುತ್ತಿದ್ದಾರೆ - ಇತ್ತೀಚಿನ ದಿನಗಳಲ್ಲಿ ಅವರ ವಲಸೆ ಸ್ನೇಹಪರ ರೈತರು ಮತ್ತು ಸಮತಟ್ಟಾದ ಭೂಮಿಯನ್ನು ಹುಡುಕುವ ಕಷ್ಟಕರವಾದ ಪ್ರಯಾಣವಾಗಿ ಮಾರ್ಪಟ್ಟಿದೆ.


ಎಡ: ಕೆಲವು ಕುಟುಂಬಗಳು ತಮ್ಮ ಇಡೀ ಜಗತ್ತನ್ನು ವಲಸೆ ಹೋಗುವಾಗ ಸಾಗಿಸಲೆಂದು ವಾಹನಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಅವರ ವಸ್ತುಗಳೆಂದರೆ, ಮಕ್ಕಳು, ಕುರಿ ಮತ್ತು ಮೇಕೆಗಳು. ಕುದುರೆಗಳಂತಹ ದೊಡ್ಡ ಪ್ರಾಣಿಗಳನ್ನು ಕಾಲ್ನಡಿಗೆಯಲ್ಲಿ ಪ್ರತ್ಯೇಕವಾಗಿ ಹೊಸ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಬಲ: ಕೆಲವು ಕುಟುಂಬಗಳು ಈಗಲೂ ಎತ್ತಿನ ಗಾಡಿಗಳಲ್ಲಿ ಪ್ರಯಾಣಿಸುತ್ತವೆ. ಇದು ಬೆಳಗಾವಿ ಜಿಲ್ಲೆಯ ಪರಸ್ಗಢ ಬ್ಲಾಕ್‌ನ ಚಚಡಿ ಗ್ರಾಮದ ಸಮೀಪದಲ್ಲಿದೆ.

ಒಮ್ಮೊಮ್ಮೆ, ಎರಡು ಅಥವಾ ಹೆಚ್ಚು ಕುಟುಂಬಗಳು ತಮ್ಮ ಹಿಂಡುಗಳನ್ನು ನೋಡಿಕೊಳ್ಳುವ ಜವಾಬ್ದಾರಿಗಳನ್ನು ವಿಭಜಿಸಿಕೊಳ್ಳುತ್ತವೆ. ಅವರು ವಿಸ್ತೃತ ಕುಟುಂಬವಾಗಿ ವಾಸಿಸುತ್ತಾರೆ ಮತ್ತು ದೀಪಾವಳಿಯ ನಂತರ (ಅಕ್ಟೋಬರ್-ನವೆಂಬರ್ ನಲ್ಲಿ) ಒಟ್ಟಿಗೆ ವಲಸೆ ಹೋಗುತ್ತಾರೆ ನಂತರ ವಸಂತಕಾಲದ ವೇಳೆಗೆ (ಮಾರ್ಚ್-ಏಪ್ರಿಲ್) ತಮ್ಮ ಹಳ್ಳಿಗಳಿಗೆ ಮರಳುತ್ತಾರೆ

ವಿಜಯ್ (5) ಮತ್ತು ನಾಗರಾಜು (8) ಒಂದು ಗುಂಪಿನಲ್ಲಿರುವಾಗಲೂ ಕುರಿಗಳನ್ನು ಸುಲಭವಾಗಿ ಗುರುತಿಸಬಹುದು. 'ಇದು ನನ್ನ ಉತ್ತಮ ಸ್ನೇಹಿತ', ಎಂದು ನಾಗರಾಜು ನಗುತ್ತಾನೆ


ಎಡಕ್ಕೆ: ಯುವ ವಿಜಯ್ ಮತ್ತು ನಾಗರಾಜು ತಮ್ಮ ಕುದುರೆಯೊಂದಿಗೆ (ಪ್ರಾಣಿಗಳನ್ನು ಭಾರವಾದ ಹೊರೆಗಳನ್ನು ಸಾಗಿಸಲು ಬಳಸಲಾಗುತ್ತದೆ), ಅವರ ತಂದೆ ನೀಲಪ್ಪ ಚಚ್ಡಿ ಅವರೊಂದಿಗೆ. ಬಲ: ರಸ್ತೆಯಲ್ಲಿ ದಿನಗಳ ನಂತರ ದೊರೆತ ಹೊಸ ಸ್ಥಳದಲ್ಲಿ ಮನೆಯನ್ನು ನಿರ್ಮಿಸುವುದು ಒಂದು ಪ್ರಮುಖ ಕಾರ್ಯವಾಗಿದೆ. ಮಕ್ಕಳೂ ಸಹಾಯ ಮಾಡುತ್ತಾರೆ. ವಿಜಯ್ ಕೇವಲ ಐದು ವರ್ಷದವನು, ಆದರೆ ಸಂತೋಷದಿಂದ ಕೆಲಸಗಳಲ್ಲಿ ಭಾಗವಹಿಸುತ್ತಾನೆ


ಎಡಕ್ಕೆ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ-ಮುನವಳ್ಳಿ ರಸ್ತೆಯ ಜಮೀನಿನಲ್ಲಿ ದನಗಾಹಿಯೊಂದಿಗೆ ಕುರುಬರು. ಗೊಬ್ಬರವನ್ನು ಸಂಗ್ರಹಿಸುವ ಈ ಪರಿಸರ ಸ್ನೇಹಿ ವಿಧಾನವು ಈಗ ಅವನತಿಯಲ್ಲಿದೆ, ಅನೇಕ ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಬಲಕ್ಕೆ: ದಾರಿಯಲ್ಲಿ ಕೃಷಿ ನಿಲುಗಡೆಯಲ್ಲಿ, ಕುರುಬ ಕುರಿಗಾಹಿ ಗಾಯತ್ರಿ ವಿಮಲಾ ತನ್ನ ಅಂಬೆಗಾಲಿಡುವ ಮಗುವಿಗೆ ಆಹಾರವನ್ನು ಬೇಯಿಸುತ್ತಿರುವುದು, ಅಲ್ಲೇ ಮೇಯುತ್ತಿರುವ ಕುರಿಗಳನ್ನೂ ನೋಡಿಕೊಳ್ಳುತ್ತಿದ್ದಾರೆ. ಹಗ್ಗದ ಆವರಣಗಳು ತಮ್ಮ ಹೊಸ 'ಮನೆ'ಯೊಳಗೆ ಹಿಂಡುಗಳನ್ನು ಹೊಂದಿರುತ್ತವೆ. ವಲಸೆ ಮಾರ್ಗದಲ್ಲಿ ಎಲ್ಲಿ ನಿಲ್ಲಬೇಕೆಂದು ನಿರ್ಧರಿಸುವಾಗ ನೀರಿನ ಮೂಲವೂ ಮುಖ್ಯವಾಗಿರುತ್ತದೆ

ಮುಂದಿನ ನಿಲುಗಡೆಗೆ ಹೋಗುವ ಸಮಯ ಬಂದಾಗ, ಸಣ್ಣ ಪ್ರಾಣಿಗಳನ್ನು ನಿಯಂತ್ರಣದಲ್ಲಿಡುವುದು ಮಕ್ಕಳನ್ನು ನಿಯಂತ್ರಣದಲ್ಲಿಡುವಷ್ಟೇ ಕಷ್ಟ.


ಎಡಕ್ಕೆ: ವಲಸೆಯ ಸಮಯದಲ್ಲಿ, ಗಾಯಗೊಂಡ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ - ಇಲ್ಲಿ, ಗಾಯಗೊಂಡ ಮೇಕೆ ವ್ಯಾನಿನ ಮುಂಭಾಗದ ಪ್ರಯಾಣಿಕರ ಸೀಟನ್ನು ಆಕ್ರಮಿಸಿತ್ತು. ಬಲ: ಕುರುಬರು ತಮ್ಮ ಪ್ರಾಣಿಗಳನ್ನು, ವಿಶೇಷವಾಗಿ ಕುದುರೆಯನ್ನು ಗೌರವಿಸುತ್ತಾರೆ; ಅಲಖನೂರು ಗ್ರಾಮದಲ್ಲಿ, ಕುರುಬನೊಬ್ಬ ಪ್ರಾಣಿಯ ಮುಂದೆ ತಲೆಬಾಗುತ್ತಿರುವುದು

ಕೆಲವು ಹಳ್ಳಿಗಳಲ್ಲಿ, ಮಹಿಳೆಯರು ಒಟ್ಟಾಗಿ ದಖ್ಖನಿ ಉಣ್ಣೆಯಿಂದ ಉತ್ತಮ ಆದಾಯವನ್ನು ಉತ್ಪಾದಿಸಲು 'ಸ್ವಸಹಾಯ ಗುಂಪುಗಳನ್ನು' ರಚಿಸಿದ್ದಾರೆ. ದಾದಿಭಾವಿ ಸಲಾಪುರದಲ್ಲಿ, ಶಾಂತವ್ವ ಬೇವೂರ್ ಚರಕ ತಿರುಗಿಸುತ್ತಿರುವುದು, ಸಾವಿತ್ರಿ ಉಣ್ಣೆಯನ್ನು ಸಂಸ್ಕರಿಸುತ್ತಿದ್ದಾರೆ, ಜೊತೆಗೆ ಲಮ್ಮಾಸ್ ಬೇವೂರ್ ಚರಕ ತಿರುಗಿಸುವ ಸರದಿಗಾಗಿ ಕಾಯುತ್ತಿದ್ದಾರೆ

ಸಾಂಪ್ರದಾಯಿಕವಾಗಿ ದಖ್ಖನಿ ಕಂಬಳಿ ನೇಯ್ಗೆಗೆ ಪಿಟ್ ಮಗ್ಗಗಳನ್ನು ಬಳಸಲಾಗುತ್ತದೆ. ಪಿ ಈಶ್ವರಪ್ಪ ಮತ್ತು ಅವರ ಮಗ ಬೀರೇಂದ್ರ ಮಗ್ಗದಲ್ಲಿ, ಮೂರು ತಲೆಮಾರುಗಳಲ್ಲಿ ಕಿರಿಯವನಾದ ನಾರಾಯಣ್ ಜೊತೆ


ಎಡ: ಮೇಕಲ್‌ಮರ್ಡಿ ಗ್ರಾಮದಲ್ಲಿ, ಆದಾಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದಸ್ತಗೀರ್ ಜಮ್ದಾರ್ ಅವರು ಸೆಣಬು, ಚರ್ಮ ಮತ್ತು ಉಣ್ಣೆಯಿಂದ ಚೀಲಗಳು ಮತ್ತು ಇತರ ವಸ್ತುಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ. ಬಲ: ದಿನೇಶ್ ಸೇಠ್, ಅಂಗಡಿ ವ್ಯವಸ್ಥಾಪಕ, ಕಂಬಳಿಗಳ ಗುಣಮಟ್ಟವನ್ನು ಪರಿಶೀಲಿಸುತ್ತಿದ್ದಾರೆ. ಅಂಗಡಿಗಳಲ್ಲಿ ಇಂತಹ ಕಂಬಳಿಗಳ ಸರಾಸರಿ ಬೆಲೆ 800ರಿಂದ 1,500 ರೂ, ಮತ್ತು ಸಣ್ಣ ರಗ್ಗುಗಳ ಬೆಲೆ 400ರಿಂದ 600 ರೂ ಇರುತ್ತದೆ. ಆದರೆ ದಖ್ಖನಿ ಉಣ್ಣೆಯ ಬೇಡಿಕೆ ನಿರಂತರವಾಗಿ ಕಡಿಮೆಯಾಗುತ್ತಿದೆ.

ತಮ್ಮ ಪ್ರಾಣಿಗಳು ಜಾನುವಾರು ಮಾರುಕಟ್ಟೆಯಲ್ಲಿ ಆರೋಗ್ಯಕರವಾಗಿ ಕಾಣುವುದನ್ನು ಖಚಿತಪಡಿಸಿಕೊಳ್ಳಲು, ಕೆಲವು ಕುರುಬರು ಈಗ ಅವುಗಳಿಗೆ ಉದಾರವಾಗಿ ಔಷಧೋಪಚಾರ ಮಾಡುತ್ತಾರೆ. ಮೈಲಾರ ಬಂಡೆಪ್ಪಅವರಂತಹ ಕುರಿಗಾಹಿಗಳು ಆಗಾಗ್ಗೆ ಸರಿಯಾದ ಪಶುವೈದ್ಯಕೀಯ ಸಲಹೆಯಿಲ್ಲದೆ ತಮ್ಮ ಜಾನುವಾರುಗಳಿಗೆ ಔಷಧಿ ನೀಡಲು ಪ್ರಾರಂಭಿಸಿದ್ದಾರೆ (ಜಂತುಹುಳು ನಿರೋಧಕ ಮತ್ತು ಪ್ರತಿಜೀವಕಗಳು)

ಕಾಕಾ ನಾಗಪ್ಪ ಕೆಲವು ಜಾನುವಾರುಗಳನ್ನು ಮಾರಾಟ ಮಾಡುವ ಭರವಸೆಯೊಂದಿಗೆ ತನ್ನ ಹಿಂಡನ್ನು ಸಿರಾದಲ್ಲಿ ಮಾರುಕಟ್ಟೆಗೆ ಕರೆದೊಯ್ಯುತ್ತಿರುವುದು. ರಾಜ್ಯ ಸರ್ಕಾರವು ದಖನಿ ಹೊರತುಪಡಿಸಿ ಇತರ ಕುರಿಗಳ ತಳಿಗಳನ್ನು ಉತ್ತೇಜಿಸುವುದರಿಂದ, ಕೆಲವು ಕುರುಬರು ಈ ತಳಿಗಳನ್ನು ಹೆಚ್ಚಾಗಿ ಸಾಕಲು ಪ್ರಾರಂಭಿಸಿದ್ದಾರೆ. ಗಂಡು ಕುರಿಮರಿ ಮಾಂಸ ಉದ್ಯಮದಲ್ಲಿ ಅತಿ ಹೆಚ್ಚಿನ ಮೊತ್ತವನ್ನು ಪಡೆಯುತ್ತದೆ

ಜಾನುವಾರುಗಳನ್ನು ಟ್ರಕ್ ಗೆ ಲೋಡ್ ಮಾಡಲಾಗುತ್ತಿದೆ, ಇವುಗಳನ್ನು ತುಮಕೂರು ಜಿಲ್ಲೆಯ ಸಿರಾ ಪಟ್ಟಣದ ಮಂಗಳವಾರದ ಕುರಿ-ಮೇಕೆ ಮಾರುಕಟ್ಟೆಗೆ ಕೊಂಡೊಯ್ಯಲಾಗುವುದು
ಅನುವಾದ: ಶಂಕರ ಎನ್. ಕೆಂಚನೂರು