“ಆ ಸಂಜೆ ನನಗೆ ನೀರು ಒಡೆದಾಗ ತೀವ್ರ ನೋವಿನಿಂದ ಬಳಲುತ್ತಿದ್ದೆ. ಹೊರಗೆ ಕಳೆದ ಮೂರು ದಿನಗಳಿಂದ ಹಿಮ ಬೀಳುತ್ತಿತ್ತು. ಹೀಗೆ ಹಿಮ ಬೀಳುವಾಗ ಇಲ್ಲಿ ಹಲವು ದಿನಗಳವರೆಗೆ ಬಿಸಿಲು ಬರುವುದಿಲ್ಲ. ಬಿಸಿಲು ಬಾರದೆ ಹೋದರೆ ನಮ್ಮ ಬಳಿಯಿರುವ ಸೌರ ಫಲಕಗಳು ಚಾರ್ಜ್ ಆಗುವುದಿಲ್ಲ.” ಇದು ಜಮ್ಮು ಮತ್ತು ಕಾಶ್ಮೀರದ ಬಂಡೀಪುರ ಜಿಲ್ಲೆಯ ವಜೀರಿಥಾಲ್ ಗ್ರಾಮದ 22 ವರ್ಷದ ಶಮೀನಾ ಬೇಗಂ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ ಕುರಿತು ವಿವರಿಸುತ್ತಿರುವುದು.ಈ ಊರಿನಲ್ಲಿ ಸೂರ್ಯ ಹಲವು ದಿನಗಳವರೆಗೆ ಕಾಣಿಸಿಕೊಳ್ಳುವುದಿಲ್ಲ ಅಥವಾ ಸಾಕಷ್ಟು ಬೆಳಕನ್ನು ನೀಡುವುದಿಲ್ಲ. ಆದರೆ ಇಲ್ಲಿನ ಜನರ ಪಾಲಿಗೆ ಸೂರ್ಯನೇ ಶಕ್ತಿಯ ಮೂಲ. ಸೂರ್ಯನಿಲ್ಲದೆ ಇಲ್ಲಿನ ಸೌರ ವಿದ್ಯುತ್ ಫಲಕಗಳು ಚಾರ್ಜ್ ಆಗುವುದಿಲ್ಲ.
“ನಮ್ಮ ಮನೆ ಒಂದು ಸೀಮೆಎಣ್ಣೆ ಬುಡ್ಡಿ ದೀಪದ ಹೊರತಾಗಿ ಪೂರ್ತಿ ಕತ್ತಲೆಯಾಗಿತ್ತು. ಕೊನೆಗೆ ಅಕ್ಕಪಕ್ಕದ ಮನೆಯ ಬಹಳಷ್ಟು ಜನರು ಅಂದು ನಮ್ಮ ಮನೆಗೆ ತಮ್ಮ ಮನೆಯ ದೀಪಗಳೊಡನೆ ಬಂದರು. ಐದು ಪ್ರಕಾಶಮಾನವಾದ ಹಳದಿ ಜ್ವಾಲೆಗಳು ಕೋಣೆಯನ್ನು ಬೆಳಗಿಸಿದವು, ಅಲ್ಲಿ ನನ್ನ ತಾಯಿ ಹೇಗೋ ರಶೀದಾಗೆ ಜನ್ಮ ನೀಡಲು ನನಗೆ ಸಹಾಯ ಮಾಡಿದರು." ಅದು ಏಪ್ರಿಲ್ 2022ರ ಒಂದು ರಾತ್ರಿಯಾಗಿತ್ತು.
ವಜೀರಿಥಾಲ್ ಬಡುಗಮ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ಯಂತ ಸುಂದರವಾದ ಹಳ್ಳಿಗಳಲ್ಲಿ ಒಂದಾಗಿದೆ. ಇಲ್ಲಿಗೆ ಶ್ರೀನಗರದಿಂದ 10 ಗಂಟೆಗಳ ಪ್ರಯಾಣ, ಆ ಪ್ರಯಾಣದ ಭಾಗವಾಗಿ ರಜ್ದಾನ್ ಪಾಸ್‌ನಿಂದ ಗುರೇಜ್ ಕಣಿವೆಯ ಮೂಲಕ ನಾಲ್ಕೂವರೆ ಗಂಟೆಗಳ ಕಚ್ಚಾ ದಾರಿಗಳು, ಅರ್ಧ ಡಜನ್ ಚೆಕ್ ಪೋಸ್ಟುಗಳು ಮತ್ತು ಅಂತಿಮ 10 ನಿಮಿಷಗಳ ನಡಿಗೆಯನ್ನು ಒಳಗೊಂಡಿದೆ. ಇಷ್ಟನ್ನು ದಾಟಿ ಬಂದರೆ ಶಮೀನಾ ಅವರ ಮನೆಯನ್ನು ತಲುಪಬಹುದು. ಇಲ್ಲಿಗಿರುವುದು ಅದೊಂದೇ ದಾರಿ.
ಗಡಿ ನಿಯಂತ್ರಣ ರೇಖೆಯಿಂದ ಕೆಲವೇ ಮೈಲಿ ದೂರದಲ್ಲಿರುವ ಗುರೇಜ್ ಕಣಿವೆಯ ಈ ಗ್ರಾಮದಲ್ಲಿನ 24 ಕುಟುಂಬಗಳ ಮನೆಗಳನ್ನು ದೇವದಾರು ಮರದಿಂದ ತಯಾರಿಸಲಾಗಿದೆ ಮತ್ತು ಥರ್ಮಲ್ ಇನ್ಸುಲೇಶನ್ ಸಲುವಾಗಿ ಒಳಬದಿಗೆ ಮಣ್ಣು ಲೇಪಿಸಲಾಗುತ್ತದೆ. ಹಳೆಯ ಯಾಕ್ ಕೊಂಬುಗಳು, ಕೆಲವೊಮ್ಮೆ ಮೂಲ ರೂಪದ, ಕೆಲವೊಮ್ಮೆ ಹಸಿರು ಬಣ್ಣ ಬಳಿಯಲಾದ ಮರದ ಪ್ರತಿಕೃತಿ, ಇಲ್ಲಿನ ಮನೆಗಳ ಮುಖ್ಯ ಬಾಗಿಲುಗಳನ್ನು ಅಲಂಕರಿಸುತ್ತವೆ. ಬಹುತೇಕ ಎಲ್ಲಾ ಕಿಟಕಿಗಳು ಗಡಿಯ ಇನ್ನೊಂದು ಬದಿಯಲ್ಲಿರುವ ದೃಶ್ಯಗಳಿಗೆ ತೆರೆದಿವೆ.
ಶಮೀನಾ ತನ್ನ ಮನೆಯ ಹೊರಗಿನ ಸೌದೆ ರಾಶಿಯ ಮೇಲೆ ಕುಳಿತು ತನ್ನ ಇಬ್ಬರು ಮಕ್ಕಳಾದ ಎರಡು ವರ್ಷದ ಫರ್ಹಾಜ್ ಮತ್ತು ನಾಲ್ಕು ತಿಂಗಳ ರಶೀದಾ (ಹೆಸರುಗಳನ್ನು ಬದಲಾಯಿಸಲಾಗಿದೆ) ಸಂಜೆಯ ಸೂರ್ಯನ ಕೊನೆಯ ರಶ್ಮಿಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದರು. "ನನ್ನಂತಹ ಬಾಣಂತಿಯರಿಗೆ ಪ್ರತಿದಿನ ನಮ್ಮ ನವಜಾತ ಶಿಶುಗಳೊಂದಿಗೆ ಬೆಳಿಗ್ಗೆ ಮತ್ತು ಸಂಜೆಗಳಲ್ಲಿ ಬೆಚ್ಚಗಿನ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು ಎಂದು ನನ್ನ ತಾಯಿ ಹೇಳುತ್ತಾರೆ," ಎಂದು ಅವರು ಹೇಳುತ್ತಾರೆ. ಆಗಿನ್ನೂ ಆಗಸ್ಟ್ ತಿಂಗಳು ನಡೆಯುತ್ತಿತ್ತಷ್ಟೇ. ಹಿಮ ಇನ್ನೂ ಅಲ್ಲಿನ ಕಣಿವೆಗಳನ್ನು ಆಕ್ರಮಿಸಿಕೊಂಡಿರಲಿಲ್ಲವಾದರೂ, ಮೋಡ ಕವಿದ ದಿನಗಳು, ಸಾಂದರ್ಭಿಕ ಮಳೆ ಮತ್ತು ಸೂರ್ಯನಿಲ್ಲದ ದಿನಗಳು ಹಾಗೂ ವಿದ್ಯುತ್ ಕೊರತೆ ಅವರನ್ನು ಕಾಡತೊಡಗಿದ್ದವು.
"ಕೇವಲ ಎರಡು ವರ್ಷಗಳ ಹಿಂದೆ, 2020ರಲ್ಲಿ ನಾವು ಬ್ಲಾಕ್ ಕಚೇರಿಯ ಮೂಲಕ ಸೌರ ಫಲಕಗಳನ್ನು ಪಡೆದಿದ್ದೇವೆ. ಅಲ್ಲಿಯವರೆಗೆ, ಬ್ಯಾಟರಿ ಚಾಲಿತ ದೀಪಗಳು ಮತ್ತು ಲಾಟೀನುಗಳನ್ನು ಮಾತ್ರ ಹೊಂದಿದ್ದೆವು. ಆದರೆ ಇವು [ಸೌರ ಫಲಕಗಳು] ಕೂಡಾ ನಮ್ಮ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ," ಎಂದು ವಜೀರಿಥಾಲ್ ನಿವಾಸಿಯಾದ 29 ವರ್ಷದ ಮೊಹಮ್ಮದ್ ಅಮೀನ್ ಹೇಳುತ್ತಾರೆ.
"ಬಡುಗಾಮ್ ಬ್ಲಾಕಿನ ಇತರ ಗ್ರಾಮಗಳು ಜನರೇಟರ್ಗಳ ಮೂಲಕ ಏಳು ಗಂಟೆಗಳ ಕಾಲ ವಿದ್ಯುತ್ ಪಡೆಯುತ್ತವೆ, ಮತ್ತು ಇಲ್ಲಿ ನಾವು 12 ವೋಲ್ಟ್ ಬ್ಯಾಟರಿಯನ್ನು ಹೊಂದಿದ್ದೇವೆ, ಅದು ಸೌರ ಫಲಕಗಳಿಂದ ಚಾಲಿತವಾಗಿದೆ. ಇದು ನಮಗೆ ಎರಡು ಬಲ್ಬ್‌ಗಳನ್ನು ಚಲಾಯಿಸಲು ಸಹಾಯ ಮಾಡುತ್ತದೆ ಮತ್ತು ಪ್ರತಿ ಮನೆಯಲ್ಲಿ ಗರಿಷ್ಠ ಎರಡು ದಿನಗಳವರೆಗೆ ಒಂದೆರಡು ಫೋನುಗಳನ್ನು ಚಾರ್ಜ್ ಮಾಡುತ್ತದೆ. ಇದರರ್ಥ, ಸತತ ಎರಡು ದಿನಗಳಿಗಿಂತ ಹೆಚ್ಚು ಕಾಲ ಮಳೆ ಅಥವಾ ಹಿಮ ಬಿದ್ದರೆ, ಸೂರ್ಯನ ಬೆಳಕು ಇರುವುದಿಲ್ಲ - ಮತ್ತು ನಮ್ಮ ಪಾಲಿಗೆ [ವಿದ್ಯುತ್] ಬೆಳಕು ಇರುವುದಿಲ್ಲ," ಎಂದು ಅಮೀನ್ ಹೇಳುತ್ತಾರೆ.
ಇಲ್ಲಿ ಆರು ತಿಂಗಳ ಸುದೀರ್ಘ ಚಳಿಗಾಲದಲ್ಲಿ ಹಿಮಪಾತವು ತೀವ್ರವಾಗಿರುತ್ತದೆ, ಮತ್ತು ಅಕ್ಟೋಬರ್ ಮತ್ತು ಏಪ್ರಿಲ್ ನಡುವೆ 123 ಕಿಲೋಮೀಟರ್ ದೂರದಲ್ಲಿರುವ ಗಂದೇರ್‌ಬಾಲ್ ಮತ್ತು ಸುಮಾರು 108 ಕಿಲೋಮೀಟರ್ ದೂರದಲ್ಲಿರುವ ಶ್ರೀನಗರದ ಜಿಲ್ಲೆಗಳಿಗೆ ಕುಟುಂಬಗಳು ವಲಸೆ ಹೋಗಬೇಕಾಗುತ್ತದೆ. ಶಮೀನಾರ ನೆರೆಮನೆಯ ಅಫ್ರೀನ್ ಬೇಗಂ ಅದನ್ನು ನನಗೆ ಸ್ಪಷ್ಟವಾಗಿ ಹೇಳಿದರು: "ನಾವು ಅಕ್ಟೋಬರ್ ಮಧ್ಯ ಅಥವಾ ಅಂತ್ಯದ ವೇಳೆಗೆ ಗ್ರಾಮವನ್ನು ತೊರೆಯಲು ಪ್ರಾರಂಭಿಸುತ್ತೇವೆ. ನವೆಂಬರ್ ತಿಂಗಳಿನಿಂದ ಇಲ್ಲಿ ಬದುಕುಳಿಯುವುದು ಕಷ್ಟವಾಗುತ್ತದೆ. ನೀವು ನಿಂತಿರುವ ಸ್ಥಳದಲ್ಲಿ ಇಲ್ಲಿಯವರೆಗೂ ಹಿಮದಿಂದ ಆವೃತವಾಗಿರುತ್ತದೆ," ಎಂದು ಅವರು ನನ್ನ ತಲೆಯ ಕಡೆಗೆ ತೋರಿಸುತ್ತಾ ಹೇಳಿದರು.
ಇಲ್ಲಿ ಬೀಳುವ ಹಿಮವು ಇಲ್ಲಿನ ಕುಟುಂಬಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಹೊಸ ಸ್ಥಳಕ್ಕೆ ಪ್ರಯಾಣಿಸುವುದು ಮತ್ತು ಚಳಿಗಾಲದ ನಂತರ ಮನೆಗೆ ಮರಳುವುದನ್ನು ಅನಿವಾರ್ಯವಾಗಿಸುತ್ತದೆ. “ಕೆಲವರು ಅಲ್ಲಿ [ಗಂದೇರ್‌ಬಾಲ್ ಅಥವಾ ಶ್ರೀನಗರ] ತಮ್ಮ ಸಂಬಂಧಿಕರನ್ನು ಹೊಂದಿದ್ದಾರೆ, ಆದರೆ ಇತರರು ಆರು ತಿಂಗಳವರೆಗೆ ಸ್ಥಳವನ್ನು ಬಾಡಿಗೆಗೆ ಪಡೆಯುತ್ತಾರೆ," ಎಂದು ಶಮೀನಾ ಹೇಳುತ್ತಾರೆ, ಕಾಶ್ಮೀರಿಗಳು ಬೆಚ್ಚಗಿರಲು ಸಹಾಯ ಮಾಡುವ ಉದ್ದವಾದ ಉಣ್ಣೆಯ ಉಡುಪನ್ನು ಧರಿಸುತ್ತಾರೆ. "ಇಲ್ಲಿ 10 ಅಡಿಯಷ್ಟು ಹಿಮವನ್ನು ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ. ವರ್ಷದ ಆ ಸಮಯ ಬಾರದ ಹೊರತು ನಾವು ಹಳ್ಳಿಯಿಂದ ಹೊರಗೆ ಹೋಗುವುದೇ ಇಲ್ಲ."
ಶಮೀನಾ ಅವರ 25 ವರ್ಷದ ಪತಿ ಗುಲಾಮ್ ಮೂಸಾ ಖಾನ್ ದಿನಗೂಲಿ ಕಾರ್ಮಿಕ. ಚಳಿಗಾಲದಲ್ಲಿ ಅವರು ಆಗಾಗ್ಗೆ ಕೆಲಸವಿಲ್ಲದೆ ಖಾಲಿ ಇರುತ್ತಾರೆ. "ನಾವು ಇಲ್ಲಿ ವಜೀರಿಥಾಲ್‌ನಲ್ಲಿದ್ದಾಗ, ಅವರು ಬಾದುಗಂ ಬಳಿ ಮತ್ತು ಕೆಲವೊಮ್ಮೆ ಬಂಡಿಪೋರಾ ಪಟ್ಟಣದಲ್ಲಿ ಕೆಲಸ ಮಾಡುತ್ತಾರೆ. ಹೆಚ್ಚಾಗಿ ರಸ್ತೆ ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡುತ್ತಾರೆ, ಆದರೆ ಕೆಲವೊಮ್ಮೆ ನಿರ್ಮಾಣ ಸ್ಥಳಗಳಲ್ಲಿಯೂ ಕೆಲಸ ಮಾಡುತ್ತಾರೆ. ಕೆಲಸ ಸಿಕ್ಕ ದಿನ, ದಿನಕ್ಕೆ ಸುಮಾರು 500 ರೂಪಾಯಿಗಳನ್ನು ಗಳಿಸುತ್ತಾರೆ. ಆದರೆ ತಿಂಗಳಿಗೆ ಸರಾಸರಿ ಐದಾರು ದಿನಗಳು, ಮಳೆಯ ಕಾರಣದಿಂದಾಗಿ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ," ಎಂದು ಶಮೀನಾ ಹೇಳುತ್ತಾರೆ. ಕೆಲಸವನ್ನು ಅವಲಂಬಿಸಿ, ಗುಲಾಮ್ ಮೂಸಾ ತಿಂಗಳಿಗೆ ಸುಮಾರು 10,000 ರೂ.ಗಳನ್ನು ಗಳಿಸುತ್ತಾರೆಂದು ಅವರು ಹೇಳುತ್ತಾರೆ.
"ಆದರೆ ನಾವು ಗಂದೇರಬಾಲದಲ್ಲಿರುವಾಗ, ಅವರು ಆಟೋರಿಕ್ಷಾ ಬಾಡಿಗೆಗೆ ತೆಗೆದುಕೊಂಡು ಶ್ರೀನಗರದಲ್ಲಿ ಓಡಿಸುತ್ತಾರೆ. ಅಲ್ಲಿ ಚಳಿಗಾಲವು ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕೆಲಸವೂ ಹೆಚ್ಚುಕಡಿಮೆ ಅದೇ ಮೊತ್ತವನ್ನು [ತಿಂಗಳಿಗೆ 10,000 ರೂ.ಗಳು] ತರುತ್ತದೆ, ಆದರೆ ಅಲ್ಲಿ ಏನನ್ನೂ ಉಳಿಸಲು ಸಾಧ್ಯವಾಗುವುದಿಲ್ಲ," ಎಂದು ಅವರು ಹೇಳುತ್ತಾರೆ. ವಜೀರಿಥಾಲ್‌ನಲ್ಲಿರುವ ಸಾರಿಗೆ ಸೌಲಭ್ಯಗಳಿಗಿಂತ ಗಂದೇರಬಾಲ್ ಪ್ರದೇಶಲ್ಲಿನ ಸಾರಿಗೆ ಸೌಲಭ್ಯಗಳು ಉತ್ತಮವಾಗಿವೆ.
“ನಮ್ಮ ಮಕ್ಕಳು ಅಲ್ಲಿಯೇ [ಗಂದೇರ್‌ಬಾಲ್‌ನಲ್ಲಿ] ಉಳಿಯಬಯಸುತ್ತಾರೆ,” ಎಂದು ಶಮೀನಾ ಹೇಳುತ್ತಾರೆ. “ಅಲ್ಲಿ ಅವರಿಗೆ ವಿಧವಿಧವಾದ ಊಟ ಸಿಗುತ್ತದೆ. ಜೊತೆಗೆ ವಿದ್ಯುತ್ ಸಮಸ್ಯೆಯೂ ಇರುವುದಿಲ್ಲ. ಆದರೆ ಅಲ್ಲಿ ಮನೆಗೆ ಬಾಡಿಗೆ ಕಟ್ಟಬೇಕಾಗುತ್ತದೆ. ಅಲ್ಲಿನ ಖರ್ಚಿಗಾಗಿ ನಾವು ಇಲ್ಲಿರುವಾಗ ಹಣ ಉಳಿಸುತ್ತಲೇ ಇರುತ್ತೇವೆ.” ಇಲ್ಲಿ ಅಮೀನಾರಿಗೆ ಮನೆ ಸ್ವಂತವಿದೆ ಜೊತೆಗೆ ಕೈತೋಟ ಮಾಡಿಕೊಂಡು ತರಕಾರಿಗಳನ್ನು ಅಲ್ಲೇ ಬೆಳೆದುಕೊಳ್ಳುತ್ತಾರೆ. ಗಂದೇರಬಾಲ್‌ನಲ್ಲಿ ಅವರಿಗೆ ಮನೆಯ ದಿನಸಿ ಖರ್ಚು ಹೆಚ್ಚಿರುತ್ತದೆ ಅಲ್ಲದೆ ಮನೆ ಬಾಡಿಗೆಯಾಗಿ ತಿಂಗಳಿಗೆ ,000 ರಿಂದ 3,500 ರೂ.ಗಳವರೆಗೆ ಖರ್ಚಾಗುತ್ತದೆ.
"ಖಂಡಿತವಾಗಿಯೂ ಅಲ್ಲಿನ ಮನೆಗಳು ನಮ್ಮ ಇಲ್ಲಿನ ಮನೆಗಳಷ್ಟು ದೊಡ್ಡದಾಗಿಲ್ಲ, ಆದರೆ ಆಸ್ಪತ್ರೆಗಳು ಉತ್ತಮವಾಗಿವೆ ಮತ್ತು ರಸ್ತೆಗಳು ಇನ್ನೂ ಉತ್ತಮವಾಗಿವೆ. ಎಲ್ಲವೂ ಅಲ್ಲಿ ಲಭ್ಯವಿದೆ ಆದರೆ ಅದಕ್ಕಾಗಿ ನಾವು ಬೆಲೆ ತೆರಬೇಕು. ಮತ್ತು ಎಷ್ಟೇ ಆದರೂ, ಅದು ನಮ್ಮ ಮನೆಯಲ್ಲ," ಎಂದು ಶಮೀನಾ ಪರಿಯೊಡನೆ ಮಾತನಾಡುತ್ತಾ ಹೇಳುತ್ತಾರೆ. ಈ ಖರ್ಚುಗಳ ಕಾರಣದಿಂದಲೇ ಶಮೀನಾ ಅವರ ಮೊದಲ ಗರ್ಭಧಾರಣೆಯ ಕೊನೆಯ ತ್ರೈಮಾಸಿಕದಲ್ಲಿ, ರಾಷ್ಟ್ರವ್ಯಾಪಿ ಲಾಕ್ಡೌನ್ ಮಧ್ಯದಲ್ಲಿ ಕುಟುಂಬವು ವಜೀರ್‌ಥಾಲ್‌ಗೆ ಹಿಂತಿರುಗಬೇಕಾಯಿತು.
"ಮಾರ್ಚ್ 2020ರಲ್ಲಿ ಲಾಕ್ಡೌನ್ ಘೋಷಿಸಿದ ಸಂದರ್ಭದಲ್ಲಿ ನಾನು ಫರ್ಹಾಜ್ನ ಏಳು ತಿಂಗಳ ಗರ್ಭಿಣಿಯಾಗಿದ್ದೆ. ಅವನು ಸಾಂಕ್ರಾಮಿಕ ಪಿಡುಗಿನ ಕಾಲದ ಉತ್ಪನ್ನ," ಎಂದು ಶಮೀನಾ ಮುಗುಳ್ನಕ್ಕರು. "ಏಪ್ರಿಲ್ ಎರಡನೇ ವಾರದಲ್ಲಿ, ನಾವು ಒಂದು ವಾಹನವನ್ನು ಬಾಡಿಗೆಗೆ ಪಡೆದು ಮನೆಗೆ ಬಂದೆವು, ಏಕೆಂದರೆ ಗಂದೇರಬಾಲ್‌ನಲ್ಲಿ ಯಾವುದೇ ಆದಾಯವಿಲ್ಲದೆ ಬದುಕುವುದು ಬಹಳ ಕಷ್ಟವಾಗುತ್ತಿತ್ತು, ಮತ್ತು ಆಹಾರ ಮತ್ತು ಬಾಡಿಗೆಗೆ ಖರ್ಚು ಮಾಡಬೇಕಾಗಿತ್ತು," ಎಂದು ಅವರು ನೆನಪಿಸಿಕೊಳ್ಳುತ್ತಾರೆ.
“ಆಗ ಅಲ್ಲಿಗೆ ಪ್ರವಾಸಿಗರೇ ಬರುತ್ತಿರಲಿಲ್ಲ. ನನ್ನ ಗಂಡನಿಗೆ ಒಂದು ರೂಪಾಯಿ ಕೂಡಾ ಸಂಪಾದನೆಯಿರಲಿಲ್ಲ. ನನ್ನ ಔಷಧಿ ಮತ್ತು ಮನೆ ದಿನಸಿ ಸಾಮಾಗ್ರಿಗಳಿಗಾಗಿ ಸಂಬಂಧಿಕರಿಂದ ಒಂದೆರಡು ಬಾರಿ ಸಾಲ ಪಡೆಯಬೇಕಾಯಿತು. ಹೇಗೋ ಅದನ್ನು ನಂತರ ವಾಪಸ್ ಮಾಡಿದೆವು. ನಮ್ಮ ಮನೆಯ ಓನರ್ ಬಳಿ ಸ್ವಂತ ವಾಹನವಿತ್ತು. ಅವರು ನಮ್ಮ ಸ್ಥಿತಿ ನೋಡಿ ಗಾಡಿಗೆ ಇಂಧನ ಹಾಕಿಸಿಕೊಂಡು ಊರಿಗೆ ಹೋಗಲು ಅನುಮತಿಸಿದರು. ಜೊತೆಗೆ 1,000 ಸಾವಿರ ರೂಪಾಯಿ ಹಣವನ್ನೂ ನೀಡಿದ್ದೆವು. ಈ ರೀತಿಯಾಗಿ ನಾವು ಮನೆ ತಲುಪಿದೆವು.”
ಆದರೆ ವಜೀರ್‌ಥಾಲ್‌ನಲ್ಲಿ ವಿದ್ಯುತ್ತಿನ ಸಮಸ್ಯೆಯೊಂದೇ ಅಲ್ಲ. ಆ ಊರಿನ ಸುತ್ತಮುತ್ತಲಿನ ಕಳಪೆ ರಸ್ತೆಗಳು ಮತ್ತು ಮತ್ತು ಆರೋಗ್ಯ ರಕ್ಷಣಾ ಸೌಲಭ್ಯಗಳ ಕೊರತೆಯೂ ಸಮಸ್ಯೆಗಳೇ. ವಜೀರಿಥಾಲ್ಊರಿನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಇದೆ ಆದರೆ ಭರ್ತಿಯಾಗದ ವೈದ್ಯಕೀಯ ಸಿಬ್ಬಂದಿಯ ಖಾಲಿ ಹುದ್ದೆಗಳಿಂದಾಗಿ ಸಾಮಾನ್ಯ ಹೆರಿಗೆಗಳನ್ನು ಸಹ ನಿರ್ವಹಿಸಲು ಇದು ಅಸಮರ್ಪಕವಾಗಿದೆ.
"ಬಡುಗಮ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇವಲ ಒಬ್ಬ ನರ್ಸ್ ಇದ್ದಾರೆ. ಅವರು ಹೆರಿಗೆಗಳನ್ನು ಎಲ್ಲಿ ಮಾಡುತ್ತಾರೆ?" ಎಂದು ವಜೀರಿಥಾಲ್‌ನ ಅಂಗನವಾಡಿ ಕಾರ್ಯಕರ್ತೆ 54 ವರ್ಷದ ರಾಜಾ ಬೇಗಂ ಕೇಳುತ್ತಾರೆ. "ಅದು ತುರ್ತು ಪರಿಸ್ಥಿತಿಯೇ ಆಗಿರಲಿ, ಗರ್ಭಪಾತವಾಗಿರಲಿ, ಅವರೆಲ್ಲರೂ ನೇರವಾಗಿ ಗುರೆಜ್ ಬಳಿಗೆ ಹೋಗಬೇಕು. ಮತ್ತು ಶಸ್ತ್ರಚಿಕಿತ್ಸೆ ನಡೆಯಬೇಕಿದ್ದರೆ, ಅವರು ಶ್ರೀನಗರದ ಲಾಲ್ ದೇಡ್ ಆಸ್ಪತ್ರೆಗೆ ಹೋಗಬೇಕು. ಇದು ಗುರೆಜ್‌ನಿಂದ ಸುಮಾರು 125 ಕಿಲೋಮೀಟರ್ ದೂರದಲ್ಲಿದೆ ಮತ್ತು ಕಠಿಣ ಹವಾಮಾನದಲ್ಲಿ ಇಲ್ಲಿಗೆ ತಲುಪಲು ಒಂಬತ್ತು ಗಂಟೆಗಳಷ್ಟು ಸಮಯ ತೆಗೆದುಕೊಳ್ಳಬಹುದು," ಎಂದು ಅವರು ಹೇಳುತ್ತಾರೆ.
ಗುರೆಜ್ ಪಿಎಚ್‌ಸಿಗೆ ಹೋಗುವ ರಸ್ತೆಗಳು ಕೆಟ್ಟಿವೆ ಎಂದು ಶಮೀನಾ ಹೇಳುತ್ತಾರೆ. "ಆಸ್ಪತ್ರೆಗೆ ಹೋಗಿ ಅಲ್ಲಿಂದ ಹಿಂದಿರುಗಲು ತಲಾ ಎರಡು ಗಂಟೆಗಳು ಬೇಕಾಗುತ್ತದೆ," ಎಂದು ಶಮೀನಾ 2020ರಲ್ಲಿ ಗರ್ಭಧಾರಣೆ ಸಮಯದಲ್ಲಿನ ತನ್ನ ಅನುಭವವನ್ನು ವಿವರಿಸುತ್ತಾ ಹೇಳುತ್ತಾರೆ. "ಆಮೇಲೆ ನನಗೆ ಆಸ್ಪತ್ರೆಯಲ್ಲಿ [ಸಿಎಚ್‌ಸಿ] ಚಿಕಿತ್ಸೆ ನೀಡಿದ ರೀತಿ! ಮಗುವಿಗೆ ಜನ್ಮ ನೀಡಲು ನನಗೆ ಸಹಾಯ ಮಾಡಿದವರು ಓರ್ವ ಸಫಾಯಿ ಕರ್ಮಿ. ಹೆರಿಗೆಯ ಸಮಯದಲ್ಲಿ ಅಥವಾ ಹೆರಿಗೆಯ ನಂತರ ಒಮ್ಮೆಯೂ ವೈದ್ಯರು ನನ್ನನ್ನು ಪರೀಕ್ಷಿಸಲು ಬರಲಿಲ್ಲ."
ಗುರೇಜ್‌ನ ಪಿಎಚ್‌ಸಿ ಮತ್ತು ಸಿಎಚ್‌ಸಿ ಎರಡೂ ವೈದ್ಯರು, ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರು ಸೇರಿದಂತೆ ವೈದ್ಯಕೀಯ ಅಧಿಕಾರಿಗಳು ಮತ್ತು ತಜ್ಞರ ಗಂಭೀರ ಕೊರತೆಯಿಂದ ದೀರ್ಘಕಾಲದಿಂದ ಪೀಡಿತವಾಗಿವೆ. ರಾಜ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವು ಪ್ರಥಮ ಚಿಕಿತ್ಸೆ ಮತ್ತು ಎಕ್ಸ್-ರೇ ಸೌಲಭ್ಯಗಳನ್ನು ಮಾತ್ರ ಒದಗಿಸುತ್ತದೆ ಎಂದು ರಜಾ ಬೇಗಂ ಹೇಳುತ್ತಾರೆ. ಅದರಾಚೆಗಿನ ಎಲ್ಲದಕ್ಕೂ, ರೋಗಿಯನ್ನು 32 ಕಿಲೋಮೀಟರ್ ದೂರದಲ್ಲಿರುವ ಗುರೆಜ್ ನಲ್ಲಿರುವ ಸಿಎಚ್‌ಸಿಗೆ ಉಲ್ಲೇಖಿಸಲಾಗುತ್ತದೆ.
ಆದರೆ ಗುರೆಜ್‌ನ ಸಿಎಚ್‌ಸಿ ಸ್ಥಿತಿ ಶೋಚನೀಯವಾಗಿದೆ. ಬ್ಲಾಕ್ ವೈದ್ಯಾಧಿಕಾರಿಯ ವರದಿ (ಸೆಪ್ಟೆಂಬರ್ 2022ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ) ಈ ಬ್ಲಾಕ್‌ನಲ್ಲಿ 11 ವೈದ್ಯಾಧಿಕಾರಿಗಳು, 3 ದಂತ ಶಸ್ತ್ರಚಿಕಿತ್ಸಕರು, ಒಬ್ಬ ವೈದ್ಯರು, ಮಕ್ಕಳ ತಜ್ಞರು ಮತ್ತು ಪ್ರಸೂತಿ-ಸ್ತ್ರೀರೋಗ ತಜ್ಞರು ಸೇರಿದಂತೆ 3 ತಜ್ಞರ ಹುದ್ದೆಗಳು ಖಾಲಿ ಇವೆ ಎಂದು ಹೇಳುತ್ತದೆ. ಇದು ನೀತಿ ಆಯೋಗ ಆರೋಗ್ಯ ಸೂಚ್ಯಂಕದ ವರದಿಗೆ ವಿರುದ್ಧವಾಗಿದೆ, ಅದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸುಧಾರಣೆಯ ಬಗ್ಗೆ ಮಾತನಾಡುತ್ತದೆ.
ಶಮೀನಾರ ಮನೆಯಿಂದ ಕೇವಲ 5-6 ಮನೆಗಳ ದೂರದಲ್ಲಿ ವಾಸಿಸುವ 48 ವರ್ಷದ ಅಫ್ರೀನ್ ತನ್ನದೇ ಆದ ಕಥೆಯನ್ನು ಹೊಂದಿದ್ದಾರೆ. "ಮೇ 2016ರಲ್ಲಿ ನಾನು ಹೆರಿಗೆಗಾಗಿ ಗುರೆಜ್‌ನ ಸಿಎಚ್‌ಸಿಗೆ ಹೋಗಬೇಕಾದಾಗ, ನನ್ನ ಪತಿ ನನ್ನನ್ನು ತಮ್ಮ ಬೆನ್ನಿನ ಮೇಲೆ ನಮ್ಮ ವಾಹನಕ್ಕೆ ಕರೆದೊಯ್ದರು. ನಾನು ಸ್ಪಷ್ಟವಾಗಿ ವಿರುದ್ಧ ದಿಕ್ಕಿಗೆ ಮುಖಮಾಡಿ ಕುಳಿತಿದ್ದೆ. ಬಾಡಿಗೆ ಸುಮೋ ಕಾಯುತ್ತಿದ್ದ 300 ಮೀಟರ್ ದೂರದಲ್ಲಿರುವ ಸ್ಥಳವನ್ನು ತಲುಪಲು ಬೇರೆ ದಾರಿಯೇ ಇರಲಿಲ್ಲ," ಎಂದು ಅವರು ಕಾಶ್ಮೀರಿ ಭಾಷೆಯಲ್ಲಿ ಮಾತನಾಡುತ್ತಾ ಹೇಳುತ್ತಾರೆ. "ಅದು ಐದು ವರ್ಷಗಳ ಹಿಂದೆ, ಆದರೆ ಪರಿಸ್ಥಿತಿ ಇನ್ನೂ ಹಾಗೆಯೇ ಇದೆ. ಈಗ ನಮ್ಮ ಸೂಲಗಿತ್ತಿಗೆ ಕೂಡ ವಯಸ್ಸಾಗುತ್ತಿದೆ ಮತ್ತು ಕೆಲವೊಮ್ಮೆ ಅನಾರೋಗ್ಯಕ್ಕೆ ಒಳಗಾಗುತ್ತಾಳೆ."
ಅಫ್ರೀನ್ ಉಲ್ಲೇಖಿಸುತ್ತಿರುವ ಸೂಲಗಿತ್ತಿ ಶಮೀನಾರ ತಾಯಿ. "ನನ್ನ ಮೊದಲ ಹೆರಿಗೆಯ ನಂತರ ಇನ್ನು ಮುಂದೆ ನಾನು ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡುತ್ತೇನೆ ಎಂದು ನಾನು ನಿರ್ಧರಿಸಿದ್ದೆ," ಎಂದು ಶಮೀನಾ ಹೇಳುತ್ತಾರೆ, "ಮತ್ತು ಅಂದು ನನ್ನ ತಾಯಿ ಇಲ್ಲದೆ ಹೋಗಿದ್ದರೆ, ನನ್ನ ಎರಡನೇ ಗರ್ಭಧಾರಣೆಯ ಸಮಯದಲ್ಲಿ ನನ್ನ ನೀರು ಒಡೆದ ನಂತರ ನಾನು ಬದುಕುಳಿಯುತ್ತಿರಲಿಲ್ಲ. ಅವಳು ಸೂಲಗಿತ್ತಿ ಮತ್ತು ಹಳ್ಳಿಯ ಅನೇಕ ಮಹಿಳೆಯರಿಗೆ ಸಹಾಯ ಮಾಡಿದ್ದಾಳೆ." ನಾವು ಇರುವ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ತನ್ನ ಮಡಿಲಿನಲ್ಲಿದ್ದ ಅಂಬೆಗಾಲಿಡುವ ಮಗುವಿಗೆ ಹಾಡುಗಳನ್ನು ಹಾಡುತ್ತಿದ್ದ ಹಿರಿಯ ಮಹಿಳೆಯ ಕಡೆಗೆ ಶಮೀನಾ ಬೆರಳು ತೋರಿಸುತ್ತಾರೆ.
ಶಮೀನಾ ಅವರ ತಾಯಿ, 71 ವರ್ಷದ ಜಾನಿ ಬೇಗಂ ಕಂದು ಬಣ್ಣದ ಫೆರಾನ್ ಧರಿಸಿದ್ದು, ಅವರು ತಮ್ಮ ಮನೆಯ ಹೊರಗೆ ಕುಳಿತಿದ್ದಾರೆ, ಹಳ್ಳಿಯ ಇತರ ಎಲ್ಲಾ ಮಹಿಳೆಯರಂತೆ, ಅವರ ತಲೆಯೂ ಸಹ ಸ್ಕಾರ್ಫ್‌ನಿಂದ ಮುಚ್ಚಲ್ಪಟ್ಟಿದೆ. ಅವರ ಮುಖದ ಮೇಲೆ ಮೂಡಿರುವ ಸುಕ್ಕುಗಳು ಅವರ ಬದುಕಿನ ದೀರ್ಘ ಅನುಭವದ ಕತೆಯನ್ನು ಹೇಳುತ್ತವೆ. "ನಾನು ಕಳೆದ 35 ವರ್ಷಗಳಿಂದ ಇದನ್ನು ಮಾಡುತ್ತಿದ್ದೇನೆ. ವರ್ಷಗಳ ಹಿಂದೆ, ನನ್ನ ತಾಯಿ ಹೆರಿಗೆಗೆ ಹೋದಾಗ ಅವಳಿಗೆ ಸಹಾಯ ಮಾಡಲು ನನಗೆ ಅವಕಾಶ ನೀಡುತ್ತಿದ್ದರು. ಆದ್ದರಿಂದ, ನಾನು ಗಮನಿಸಿದೆ, ಅಭ್ಯಾಸ ಮಾಡಿದೆ ಮತ್ತು ಕಲಿತೆ. ಸಹಾಯ ಮಾಡಲು ಸಾಧ್ಯವಾಗುವುದು ಒಂದು ಆಶೀರ್ವಾದ," ಎಂದು ಅವರು ಹೇಳುತ್ತಾರೆ.
ಜಾನಿ ಇಲ್ಲಿ ತನ್ನ ಜೀವಿತಾವಧಿಯಲ್ಲಿ ನಿಧಾನಗತಿಯ ಬದಲಾವಣೆಯನ್ನು ಗಮನಿಸಿದ್ದಾರೆ, ಆದರೆ ಅದು ಸಾಕಷ್ಟು ಗಣನೀಯವಾಗಿಲ್ಲ. "ಈ ದಿನಗಳಲ್ಲಿ ಹೆರಿಗೆಗಳಲ್ಲಿ ಅಷ್ಟು ಅಪಾಯಗಳಿರುವುದಿಲ್ಲ, ಏಕೆಂದರೆ ಮಹಿಳೆಯರು ಈಗ ಕಬ್ಬಿಣದ ಮಾತ್ರೆಗಳು ಮತ್ತು ಇತರ ಎಲ್ಲಾ ಉಪಯುಕ್ತ ಪೂರಕಗಳನ್ನು ಪಡೆಯುತ್ತಾರೆ, ಅದು ಆಗ ಇರಲಿಲ್ಲ," ಎಂದು ಅವರು ಹೇಳುತ್ತಾರೆ. "ಹೌದು, ಒಂದು ಬದಲಾವಣೆಯಾಗಿದೆ, ಆದರೆ ಅದು ಇನ್ನೂ ಇತರ ಹಳ್ಳಿಗಳಂತಿಲ್ಲ. ನಮ್ಮ ಹುಡುಗಿಯರು ಈಗ ಓದುತ್ತಿದ್ದಾರೆ ಆದರೆ ಉತ್ತಮ ಆರೋಗ್ಯ ರಕ್ಷಣಾ ಸೌಲಭ್ಯಗಳ ವಿಷಯಕ್ಕೆ ಬಂದಾಗ ಇಂದಿಗೂ ಸಹ ಸೀಮಿತ ಪ್ರವೇಶವನ್ನು ಹೊಂದಿದ್ದಾರೆ. ನಾವು ಆಸ್ಪತ್ರೆಗಳನ್ನು ಹೊಂದಿದ್ದೇವೆ ಆದರೆ ತುರ್ತು ಪರಿಸ್ಥಿತಿಯಲ್ಲಿ ಅಲ್ಲಿಗೆ ತ್ವರಿತವಾಗಿ ತಲುಪಲು ಯಾವುದೇ ರಸ್ತೆ ಇಲ್ಲ," ಎಂದು ಅವರು ಹೇಳಿದರು.
ಗುರೇಜ್ ಸಿಎಚ್‌ಸಿ ಇಲ್ಲಿಂದ ದೂರವಿದೆ ಮತ್ತು ಅಲ್ಲಿಗೆ ಹೋಗುವುದಕ್ಕೆ ಕನಿಷ್ಟ 5 ಕಿಮೀ ನಡೆಯಬೇಕು ಎಂದು ಜಾನಿ ಹೇಳುತ್ತಾರೆ. 5 ಕಿಮೀ ನಡೆದ ನಂತರ ಅಲ್ಲಿಂದ ಮತ್ತೆ ಸಾರ್ವಜನಿಕ ಸಾರಿಗೆ ಸಿಗುವ ಸಾಧ್ಯತೆಯಿದೆ. ಕೇವಲ ಅರ್ಧ ಕಿಮೀ ನಡೆದರೆ ಖಾಸಗಿ ವಾಹನಗಳು ಸಿಗುತ್ತವೆ ಆದರೆ ಅವು ಬಹಳ ದುಬಾರಿ.
“ಶಮೀನಾ ಎರಡನೇ ಸಲ ಬಸುರಿಯಾಗಿದ್ದಾಹ ಮೂರನೇ ತ್ರೈಮಾಸಿಕದಲ್ಲಿ ಬಹಳ ದುರ್ಬಲಳಾಗಿದ್ದಳು," ಎಂದು ಜಾನಿ ಹೇಳುತ್ತಾರೆ. "ನಮ್ಮ ಅಂಗನವಾಡಿ ಕಾರ್ಯಕರ್ತೆಯ ಸಲಹೆಯ ಮೇರೆಗೆ ನಾವು ಆಸ್ಪತ್ರೆಗೆ ಹೋಗಲು ಯೋಚಿಸಿದೆವು, ಆದರೆ ನನ್ನ ಅಳಿಯ ಕೆಲಸ ಹುಡುಕಿಕೊಂಡು ಊರಿನಿಂದ ಹೊರಗಿದ್ದರು. ಇಲ್ಲಿ ವಾಹನವನ್ನು ಪಡೆಯುವುದು ಸುಲಭವಲ್ಲ. ಒಂದು ವೇಳೆ ಸಿಕ್ಕರೂ ಸಹ, ಜನರು ಗರ್ಭಿಣಿ ಮಹಿಳೆಯನ್ನು ವಾಹನಕ್ಕೆ ಕರೆದೊಯ್ಯಬೇಕು," ಎಂದು ಅವರು ಹೇಳುತ್ತಾರೆ.
"ಅವಳು ಹೋದ ಮೇಲೆ ನಮ್ಮ ಹಳ್ಳಿಯ ಹೆಂಗಸರ ಗತಿ ಏನಾಗಬಹುದು? ನಾವು ಯಾರನ್ನು ಅವಲಂಬಿಸುವುದು?" ಅಫ್ರೀನ್ ಜಾನಿಯವರನ್ನು ಉಲ್ಲೇಖಿಸುತ್ತಾ ಗಟ್ಟಿ ದನಿಯಲ್ಲಿ ಕೇಳುತ್ತಾರೆ. ಆಗ ಸಂಜೆಯಾಗಿತ್ತು. ರಾತ್ರಿಯ ಅಡುಗೆಗಾಗಿ ಶಮೀನಾ ತನ್ನ ಮನೆಯ ಹೊರಗಿನ ಪೊದೆಗಳಲ್ಲಿ ಮೊಟ್ಟೆಗಳನ್ನು ಹುಡುಕುತ್ತಿದ್ದರು. "ಕೋಳಿಗಳು ತಮ್ಮ ಮೊಟ್ಟೆಗಳನ್ನು ಬಚ್ಚಿಡುತ್ತವೆ. ಮೊಟ್ಟೆ ಸಾರನ್ನು ಮಾಡಲು ಅವುಗಳನ್ನು ಹುಡುಕಬೇಕು, ಇಲ್ಲದಿದ್ದರೆ ಇಂದು ರಾತ್ರಿ ಮತ್ತೆ ರಾಜ್ಮಾ ಮತ್ತು ಅನ್ನವಷ್ಟೇ ಗತಿಯಾಗುತ್ತದೆ. ಇಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ. ದೂರದಿಂದ ಕಾಡಿನ ಮಧ್ಯದಲ್ಲಿ ಮನೆಗಳೊಂದಿಗೆ ಈ ಗ್ರಾಮವು ಸುಂದರವಾಗಿ ಕಾಣುತ್ತದೆ. ಆದರೆ ನೀವು ಹತ್ತಿರ ಬಂದಾಗ ಮಾತ್ರ, ನಮ್ಮ ಬದುಕು ನಿಜವಾಗಿಯೂ ಹೇಗಿದೆ ಎಂದು ನಿಮಗೆ ತಿಳಿಯುತ್ತದೆ" ಎಂದು ಅವರು ಹೇಳುತ್ತಾರೆ.
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಹಾಗಿದ್ದಲ್ಲಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳುಹಿಸಿ
ಅನುವಾದ: ಶಂಕರ. ಎನ್. ಕೆಂಚನೂರು