ವಸೀಮ್ ಅಕ್ರಮ್ ಬಜರ್ಡಿಹಾದ ಕಿರಿದಾದ ಬೀದಿಗಳಲ್ಲಿ ಪವರ್ ಲೂಮ್‌ಗಳ ಸದ್ದಿನ ನಡುವೆ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಬನಾರಸಿ ಸೀರೆಗಳನ್ನು ನೇಯುವ ಪರಂಪರೆಗೆ ಸೇರಿದ ಅವರ ಕುಟುಂಬದ ಹಲವು ತಲೆಮಾರುಗಳಿಗೆ ಸಾಕ್ಷಿಯಾಗಿರುವ ಅದೇ ಎರಡು ಅಂತಸ್ತಿನ ಇಟ್ಟಿಗೆ-ಸಿಮೆಂಟ್ ಮನೆಯಲ್ಲಿ ತನ್ನ 14ನೇ ವಯಸ್ಸಿನಿಂದಲೂ ಈ ನೇಯ್ಗೆ ಕೆಲಸವನ್ನು ಮಾಡುತ್ತಿದ್ದಾರೆ.

ಅವರ ಅಜ್ಜ-ಮುತ್ತಜ್ಜರು ಕೈಮಗ್ಗದಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಅವರ ಪೀಳಿಗೆಯ ಹೆಚ್ಚಿನವರು ಪವರ್‌ ಲೂಮ್‌ ಮೂಲಕ ನೇಯ್ಗೆ ಕಲಿತರು. 2000ನೇ ಇಸವಿಯ ವೇಳೆಗೆ ಇಲ್ಲಿ ಪವರ್‌ಲೂಮ್‌ಗಳು ಬಂದಿದ್ದವು ಎಂದು 32 ವರ್ಷದ ವಾಸಿಂ ಹೇಳುತ್ತಾರೆ. "ನಾನು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ನೇರವಾಗಿ ಮಗ್ಗದ ಕೆಲಸವನ್ನೇ ಕಲಿತೆ"

ವಾರಣಾಸಿಯ ಬಜಾರ್ಡಿಹಾ ಪ್ರದೇಶದಲ್ಲಿ, 1,000ಕ್ಕೂ ಹೆಚ್ಚು ಕುಟುಂಬಗಳು (ಸ್ಥಳೀಯ ನೇಕಾರರ ಅಂದಾಜಿನ ಪ್ರಕಾರ) ನೇಕಾರ ಸಮುದಾಯಕ್ಕೆ ಸೇರಿವೆ ಮತ್ತು ನೇಯ್ಗೆ ಕೆಲಸ ಮಾಡುತ್ತಾರೆ. ಅವರು ಸಗಟು ವ್ಯಾಪಾರಿಗಳಿಂದ ಆರ್ಡರ್‌ಗಳು, ಸಾಲಗಳು ಮತ್ತು ಸಂಗ್ರಹಗಳನ್ನು ಸುರಕ್ಷಿತವಾಗಿರಿಸಲು ಪರಸ್ಪರ ಸಹಕಾರ ನೀಡುತ್ತಾರೆ ಮತ್ತು ಪ್ರತಿಯೊಬ್ಬರಿಗೂ ಕೆಲಸ ಸಿಗುವಂತೆ ನೋಡಿಕೊಳ್ಳುತ್ತಾರೆ.

ಆದರೆ ಮಾರ್ಚ್ 2020ರಲ್ಲಿ ಜಾರಿಯಾದ ಲಾಕ್‌ಡೌನ್‌ನಿಂದಾಗಿ, ಮಗ್ಗಗಳು ತಮ್ಮ ಸದ್ದು ನಿಲ್ಲಿಸಿ ಮೌನವಾಗಿದ್ದವು. ಇಲ್ಲಿನ ಬುನಕಾರರು (ಮಗ್ಗದ ಮಾಲೀಕರು ಮತ್ತು ನೇಯ್ಗೆ ವ್ಯಾಪಾರದಲ್ಲಿ ತೊಡಗಿರುವ ಇತರ ಜನರನ್ನು ಸ್ಥಳೀಯವಾಗಿ ಕರೆಯುವ ಹೆಸರು) ಯಾವುದೇ ಕೆಲಸವಿಲ್ಲದೆ ಕುಳಿತಿದ್ದರು. ಆ ಸಮಯದಲ್ಲಿ ಸೀರೆಯ ಆರ್ಡರ್‌ಗಳನ್ನು ರದ್ದುಗೊಳಿಸಲಾಗಿತ್ತು ಮತ್ತು ಮಗ್ಗದ ಮನೆಗಳನ್ನು ಮುಚ್ಚಲಾಗಿತ್ತು. ವಾಸಿಮ್ ಹೇಳುತ್ತಾರೆ, “ಲಾಕ್‌ಡೌನ್‌ನ ಮೊದಲ 2-4 ತಿಂಗಳುಗಳಲ್ಲಿ ನನ್ನ ಎಲ್ಲಾ ಉಳಿತಾಯವು ಖರ್ಚಾಯಿತು. ನಾನು [ರಾಜ್ಯ ನಡೆಸುತ್ತಿರುವ] ನೇಕಾರರ ಸೇವಾ ಕೇಂದ್ರಕ್ಕೆ ಹೋದೆ ಮತ್ತು ನಮಗೆ [ಆ ಅವಧಿಗೆ] ಯಾವುದಾದರೂ ಸರ್ಕಾರದ ಯೋಜನೆ ಇದೆಯೇ ಎಂದು ಕೇಳಿದೆ; ಆದರೆ ಅಲ್ಲಿ ಯಾವುದೇ ಯೋಜನೆ ಇರಲಿಲ್ಲ."

ವೀಡಿಯೊ ನೋಡಿ: 'ಸರ್ಕಾರ್ ಸಬ್ಸಿಡಿಯನ್ನು ಮೊದಲಿನಂತೆಯೇ ಮುಂದುವರೆಸಬೇಕೆಂದು ನಾವು ಬಯಸುತ್ತೇವೆ'

2020ರ ಲಾಕ್‌ಡೌನ್ ಸಡಿಲಗೊಂಡ ನಂತರ, ವಾಸಿಮ್ ವಾರಣಾಸಿಯ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಆ ಮೂಲಕ ದಿನಕ್ಕೆ 300-400 ರೂ. ಗಳಿಸುತ್ತಿದ್ದರು. ಬಜರ್ಡಿಹಾದ ಇತರ ಅನೇಕ ನೇಕಾರರು ಅದೇ ರೀತಿ ಮಾಡಿದರು, ಕೆಲವರು ಬಾಡಿಗೆ ರಿಕ್ಷಾಗಳನ್ನು ಓಡಿಸಲು ಪ್ರಾರಂಭಿಸಿದರು. 2021ರ ಲಾಕ್‌ಡೌನ್ ಸಮಯದಲ್ಲಿ ಸಹ, ಅವರ ಸ್ಥಿತಿಯು ಅದೇ ರೀತಿಯಲ್ಲಿತ್ತು. ಅಕ್ರಂ ಕೆಲವು ತಿಂಗಳ ಹಿಂದೆ ನನಗೆ ಹೇಳಿದಂತೆ, “ನಾವು ಪ್ರಸ್ತುತ ಕೂಲಿ ಕಾರ್ಮಿಕರು ಮತ್ತು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದೇವೆ. ಇದು ಎಷ್ಟು ದಿನ ಮುಂದುವರಿಯುತ್ತದೆ ಎಂದು ನನಗೆ ಗೊತ್ತಿಲ್ಲ.”

ಅಕ್ರಮ್ ಅವರ ಸಣ್ಣ ಮಗ್ಗದ ಮನೆಯ ನೆಲ ಮಹಡಿಯಲ್ಲಿ ಎರಡು ಕೊಠಡಿಗಳಲ್ಲಿ ಮೂರು ಪವರ್ ಲೂಮ್ ಗಳಿವೆ. ಅವರ 15 ಸದಸ್ಯರ ಅವಿಭಕ್ತ ಕುಟುಂಬ ಮೊದಲ ಮಹಡಿಯಲ್ಲಿ ವಾಸಿಸುತ್ತಿದೆ. "ಮೊದಲು ನಾವು ಲಾಕ್‌ಡೌನ್‌ನಿಂದ ಕೆಲಸವನ್ನು ನಿಲ್ಲಿಸಿದೆವು, ನಂತರ ಮೂರು ತಿಂಗಳು [ಜುಲೈನಿಂದ] ನಮ್ಮ ಮಗ್ಗಗಳು ಒಂದು ಅಡಿ ನೀರಿನಲ್ಲಿ ಮುಳುಗಿದ್ದವು," ಎಂದು ಅವರು ಹೇಳುತ್ತಾರೆ.

ಪ್ರತಿ ವರ್ಷ ಅಕ್ಟೋಬರ್ ವೇಳೆಗೆ ಮಳೆ‌ ನೀರು ಕೊಳಚೆ ನೀರಿನೊಂದಿಗೆ ಬೆರೆತು ಬಜರ್ಡಿಹಾದ ಮನೆಗಳು ಮತ್ತು ಮಗ್ಗದ ಮನೆಗಳ ನೆಲ ಮಹಡಿಯಲ್ಲಿ ಸಂಗ್ರಹವಾಗುತ್ತದೆ. ಸಾಮಾನ್ಯವಾಗಿ ನೆಲಮಟ್ಟದಿಂದ ಒಂದಿಷ್ಟು ಕೆಳಗೆ ಇರಿಸಲಾಗುವ ಪವರ್‌ ಲೂಮ್‌ನ ಕಾಲುಗಳು ಆ ಸಮಯದಲ್ಲಿ ನಿಂತ ನೀರಿನಲ್ಲಿ ಮುಳುಗಿರುತ್ತವೆ. "ಆ ಪರಿಸ್ಥಿತಿಯಲ್ಲಿ ನಾವು ಮಗ್ಗ ಓಡಿಸಿದರೆ ಸಾಯುವುದು ಗ್ಯಾರಂಟಿ, ಇದನ್ನು ಸರಿಪಡಿಸುವಂತೆ ಹಲವು ಜನರನ್ನು ಕೇಳಿದೆವಾದರೂ ಪ್ರಯೋಜನ ಶೂನ್ಯ," ಎನ್ನುತ್ತಾರೆ ಅಕ್ರಮ್.

"ನೀರು ಕಡಿಮೆಯಾಗುವುದನ್ನೇ ಕಾಯುತ್ತಾ ಕೂರುತ್ತೇವೆ," ಇದು ಅಲ್ಲಿಂದ ಕೆಲವು ಮನೆಗಳ ದೂರದಲ್ಲಿ ವಾಸಿಸುವ ಆರು ಪವರ್‌ಲೂಮ್‌ಗಳನ್ನು ಹೊಂದಿರುವ 35 ವರ್ಷದ ಗುಲ್ಜಾರ್ ಅಹ್ಮದ್ ಎನ್ನುವವರ ಮಾತು. "ಇದು ಹಲವು ವರ್ಷಗಳಿಂದ ಹೀಗೇ ಇದೆ. ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಪ್ರತಿ ವರ್ಷ ಈ ಸಮಸ್ಯೆಯೊಡನೆ ಬದುಕುವುದು ನಮಗೆ ಅನಿವಾರ್ಯವಾಗಿದೆ"

Weavers and powerloom owners (l to r) Guljar Ahmad, Wasim Akram, Riyajudin Ansari: 'Because of Covid we will take some time to recover. But if the subsidy is removed there is no way we can survive'
PHOTO • Samiksha
Weavers and powerloom owners (l to r) Guljar Ahmad, Wasim Akram, Riyajudin Ansari: 'Because of Covid we will take some time to recover. But if the subsidy is removed there is no way we can survive'
PHOTO • Samiksha
Weavers and powerloom owners (l to r) Guljar Ahmad, Wasim Akram, Riyajudin Ansari: 'Because of Covid we will take some time to recover. But if the subsidy is removed there is no way we can survive'
PHOTO • Samiksha

ನೇಕಾರರು ಮತ್ತು ಪವರ್ ಲೂಮ್ ಮಾಲೀಕರು (ಎಡದಿಂದ ಬಲಕ್ಕೆ) ಗುಲ್ಜಾರ್ ಅಹ್ಮದ್, ವಸೀಮ್ ಅಕ್ರಮ್, ರಿಯಾಜುದಿನ್ ಅನ್ಸಾರಿ: 'ಕೋವಿಡ್‌ ನಷ್ಟದಿಂದ ಹೇಗೋ ಸುಧಾರಿಸಿಕೊಳ್ಳುತ್ತೇವೆ ಸ್ವಲ್ಪ ಸಮಯದಲ್ಲಿ, ಆದರೆ ವಿದ್ಯುತ್‌ ಸಬ್ಸಿಡಿ ತೆಗೆದರೆ ನಮಗೆ ಬದುಕುವ ದಾರಿಯೇ ಇಲ್ಲದಂತಾಗುತ್ತದೆʼ

ಬಜಾರ್ಡಿಹಾದ ನೇಕಾರರ ಮಗ್ಗ ಮಾಲೀಕರಿಗೆ, ಕಳೆದ ವರ್ಷ ಲಾಕ್ ಡೌನ್‌ಗೂ ಮೊದಲೇ ಮತ್ತೊಂದು ಹಿನ್ನಡೆ ಉಂಟಾಗಿತ್ತು, ಉತ್ತರ ಪ್ರದೇಶ ಸರ್ಕಾರ ನೇಕಾರರಿಗೆ ಸಬ್ಸಿಡಿ ವಿದ್ಯುತ್ ದರವನ್ನು ರದ್ದುಗೊಳಿಸಿ ಹೊಸ ವಾಣಿಜ್ಯ ದರವನ್ನು ಪರಿಚಯಿಸಿತು.

"ಹೊಸ ಶುಲ್ಕದ ಬಗ್ಗೆ ಅಧಿಕೃತ ನೋಟಿಸನ್ನು ಜನವರಿ 1, 2020ರಂದು ಹೊರಡಿಸಲಾಯಿತು" ಎಂದು ವ್ಯಾಪಾರಿಗಳು ಮತ್ತು ನೇಕಾರರ ಸಂಘವಾದ ಬುನಕಾರ್ ಉದ್ಯೋಗ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಜುಬೈರ್ ಆದಿಲ್ ಹೇಳುತ್ತಾರೆ. "ಅದರ ನಂತರ ಉತ್ತರ ಪ್ರದೇಶದ ಗೋರಖ್ ಪುರ, ವಾರಣಾಸಿ, ಕಾನ್ಪುರ, ಲಕ್ನೋ ಮತ್ತು ಇತರ ಸ್ಥಳಗಳ ನಮ್ಮ ಪ್ರತಿನಿಧಿಗಳು ಹೊಸ ಶುಲ್ಕವನ್ನು ವಿರೋಧಿಸಲು ಒಗ್ಗೂಡಿದವು. ನಾವು ಹೋರಾಟದಲ್ಲಿದ್ದಾಗ, ಲಾಕ್ ಡೌನ್ ಘೋಷಿಸಲಾಯಿತು. ಜೂನ್ [2020]ರಲ್ಲಿ, ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿದಾಗ, ನಾವು ಮತ್ತೆ ಪ್ರತಿಭಟನೆಗಳನ್ನು ಸಂಘಟಿಸಿದೆವು ಮತ್ತು ಆಗಸ್ಟ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ಮುಷ್ಕರ ಕುಳಿತೆವು. ಲಖನೌದ ಅಧಿಕಾರಿಗಳು ಆದೇಶವನ್ನು ಹಿಂಪಡೆಯುವುದಾಗಿ ನಮಗೆ ಭರವಸೆ ನೀಡಿದರು. ಆದರೆ ಏನೂ ಆಗಲಿಲ್ಲ. ಹೀಗಾಗಿ ನಾವು ಸೆಪ್ಟೆಂಬರ್ 1 [2020]ರಂದು ಮತ್ತೊಂದು ಮುಷ್ಕರದಲ್ಲಿ ಕುಳಿತು ಲಿಖಿತ ಭರವಸೆಗಾಗಿ ಒತ್ತಾಯಿಸಿದೆವು. ಆದರೆ ಅಧಿಕಾರಿಗಳು ಆದೇಶವನ್ನು ಹಿಂಪಡೆಯುವ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೀಡಿ ಸುಮ್ಮನಾದರು. ಆದಾಗ್ಯೂ, ನಾವು ಇನ್ನೂ ಯಾವುದೇ ಲಿಖಿತ ದಾಖಲೆಯನ್ನು ಸ್ವೀಕರಿಸದ ಕಾರಣ, ಅನೇಕ ಬಾರಿ ವಿದ್ಯುತ್ ಮಂಡಳಿಗಳು ನೇಕಾರರಿಗೆ ಹೊಸ ಶುಲ್ಕಗಳನ್ನು ವಿಧಿಸುತ್ತವೆ, ಅಥವಾ ಅವರ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಇದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತದೆ."

ಸಬ್ಸಿಡಿ ದರವು ಪ್ರತಿ ಮಗ್ಗಕ್ಕೆ ತಿಂಗಳಿಗೆ 71ರಿಂದ ಪ್ರಾರಂಭವಾಗುತ್ತದೆ ಮತ್ತು ಗುಲ್ಜಾರ್ ಅವರಿಗೆ ಮಾಸಿಕ ಬಿಲ್ 700-800 ರೂ. ಬರುತ್ತಿತ್ತು. ಫೆಬ್ರವರಿ 2020ರಿಂದ ಹೊಸ ಪ್ರತಿ ಯೂನಿಟ್ ದರವನ್ನು ಜಾರಿಗೆ ತಂದ ನಂತರ, ಅವರ ಬಿಲ್ 14,000-15,000 ರೂ.ಗೆ ಹೆಚ್ಚಾಗಲು ಪ್ರಾರಂಭಿಸಿತು ಎಂದು ಅವರು ಹೇಳುತ್ತಾರೆ. ಇತರರು ಸಹ ಇದೇ ರೀತಿಯ ಭಾರಿ ಬಿಲ್‌ಗಳನ್ನು ಪಡೆದರು, ಅನೇಕ ಜನರು ಪಾವತಿಸಲು ನಿರಾಕರಿಸಿದರು. ಕೆಲವರು ಯಂತ್ರ ಆರಂಭಿಸಲು ಅರ್ಧದಷ್ಟು ಮೊತ್ತವನ್ನು ತುಂಬಿದರೆ, ಕೆಲವರು ವಿರೋಧ ವ್ಯಕ್ತಪಡಿಸಿದರು. ಶೀಘ್ರದಲ್ಲೇ, ಮಾರ್ಚ್ 2020ರಲ್ಲಿ ಲಾಕ್‌ಡೌನ್  ಘೋಷಿಸಲಾಯಿತು ಮತ್ತು ಮಗ್ಗಗಳು ಬಹುತೇಕ ಸ್ಥಗಿತಗೊಂಡವು, ಆದರೆ ಸರ್ಕಾರದೊಂದಿಗೆ ಮಾತುಕತೆ ಮುಂದುವರೆಯಿತು. ಗುಲ್ಜಾರ್ ಹೇಳುತ್ತಾರೆ, "ನಾನು ವಿದ್ಯುತ್ ಮಂಡಳಿಗೆ ಹಲವಾರು ಬಾರಿ ಹೋಗಿ ಬರಬೇಕಾಯಿತು" ಜೂನ್ 2021ರ ವೇಳೆಗೆ, ಅವರು ಮತ್ತು ಇತರ ನೇಕಾರರು ಮತ್ತು ಬಜಾರ್ಡಿಹಾದ ಮಗ್ಗಗಳ ಮಾಲೀಕರು ತಮ್ಮ ಬಿಲ್‌ಗಳನ್ನು ಸಬ್ಸಿಡಿ ದರದಲ್ಲಿ ಮರಳಿ ಪಡೆಯಲು ಸಫಲರಾಗಿದ್ದಾರೆ.

“ಒಂದೆಡೆ ಹೆಚ್ಚಿರುವ ಶುಲ್ಕವನ್ನು ಪಾವತಿಸಬೇಕಿದೆ, ಇನ್ನೊಂದೆಡೆ ಕೆಲಸವಿಲ್ಲ. ಹೀಗಾದರೆ ನಾವು ವ್ಯವಹಾರ ನಡೆಸುವುದು ಹೇಗೆ?” ಎಂದು ಕೇಳುತ್ತಾರೆ 44 ವರ್ಷದ ರಿಯಾಜುದ್ದೀನ್‌ ಅನ್ಸಾರಿ. ಇವರು ಅಕ್ರಮ್‌ ಅವರ ಮನೆಯಿಂದ ಮೂರು ಮನೆಗಳ ದೂರದಲ್ಲಿ ವಾಸಿಸುತ್ತಿದ್ದು ತಮ್ಮ ಮಗ್ಗದ ಮನೆಯಲ್ಲಿ ಏಳು ವಿದ್ಯುತ್‌ ಮಗ್ಗಗಳನ್ನು ಹೊಂದಿದ್ದಾರೆ,

In the Bazardiha locality of Varanasi, over 1,000 families live and work as a community of weavers (the photo is of Mohd Ramjan at work), creating the famous Banarasi sarees that are sold by shops (the one on the right is in the city's Sonarpura locality), showrooms and other outlets
PHOTO • Samiksha
In the Bazardiha locality of Varanasi, over 1,000 families live and work as a community of weavers (the photo is of Mohd Ramjan at work), creating the famous Banarasi sarees that are sold by shops (the one on the right is in the city's Sonarpura locality), showrooms and other outlets
PHOTO • Samiksha

ವಾರಣಾಸಿಯ ಬಜಾರ್ಡಿಹಾ ಪ್ರದೇಶದಲ್ಲಿ, 1,000ಕ್ಕೂ ಹೆಚ್ಚು ಕುಟುಂಬಗಳು ನೇಕಾರ ಸಮುದಾಯಕ್ಕೆ ಸೇರಿದ್ದಾರೆ ಮತ್ತು ಅವರು ನೇಯ್ಗೆ ಕೆಲಸ ಮಾಡುತ್ತಾರೆ (ಮೊಹಮ್ಮದ್ ರಂಜಾನ್ ಕೆಲಸ ಮಾಡುತ್ತಿರುವ ಫೋಟೋ); ಇಲ್ಲಿನ ಅಂಗಡಿಗಳು (ಬಲಭಾಗದಲ್ಲಿ, ನಗರದ ಸೋನಾರ್‌ಪುರ ಪ್ರದೇಶದಲ್ಲಿನ ಅಂಗಡಿಯ ಫೋಟೋ), ಶೋರೂಮ್‌ಗಳು ಮತ್ತು ಇತರ ಮಳಿಗೆಗಳಲ್ಲಿ ಮಾರಾಟವಾಗುವ ಪ್ರಸಿದ್ಧ ಬನಾರಸಿ ಸೀರೆಗಳನ್ನು ತಯಾರಿಸುತ್ತಾರೆ

ಜೂನ್ 2020ರಲ್ಲಿ ಲಾಕ್‌ಡೌನ್ ಸಡಿಲಿಸಿದಾಗ, ನೇಕಾರರಿಗೆ ಹೆಚ್ಚಿನ ಆರ್ಡರ್‌ ಸಿಗಲಿಲ್ಲ; ಅಕ್ಟೋಬರ್‌ನಲ್ಲಿ ಮಾತ್ರ ಆರ್ಡರ್‌ಗಳು ಹೆಚ್ಚಾದವು. ಕಳೆದ ವರ್ಷದ ಅತಿ ಹೆಚ್ಚು ಮಾರಾಟವಾದ ತಿಂಗಳುಗಳ ಕುರಿತು ಮಾತನಾಡಿದ ರಿಯಾಜುದ್ದೀನ್, “ಬನಾರಸಿ ಸೀರೆಗಳನ್ನು ಬನಾರಸ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುವುದಿಲ್ಲ, ದಸರಾ, ದೀಪಾವಳಿ ಮತ್ತು ಮದುವೆಯ ಸಮಯದಲ್ಲಿ ಇತರ ರಾಜ್ಯಗಳಿಗೆ ರವಾನೆಯಾಗುತ್ತದೆ. ಯಾರೂ ಸಂಭ್ರಮಿಸದೇ ಇರುವಾಗ ನಮ್ಮ ವ್ಯಾಪಾರ ಹೇಗೆ ನಡೆಯುತ್ತದೆ?

ಆರ್ಡರ್‌ಗಳು ಹೆಚ್ಚಾಗುತ್ತಿದ್ದಂತೆ, ಏಪ್ರಿಲ್ 2021ರಲ್ಲಿ ಎರಡನೇ ಲಾಕ್‌ಡೌನ್ ಘೋಷಿಸಲಾಯಿತು. ಅನ್ಸಾರಿ ಹೇಳುತ್ತಾರೆ, "ಕೋವಿಡ್ ಅಲೆ ಎರಡು ಬಾರಿ ಬಂದಿತು, ಆದರೆ ಎರಡನೇ ಲಾಕ್‌ಡೌನ್ ಸಮಯದಲ್ಲಿ, ಹಸಿವಿನ ಪರಿಸ್ಥಿತಿ ಹೆಚ್ಚಿತ್ತು." ಅವರ ಸ್ಥಳದಲ್ಲಿನ ಅನೇಕ ಕುಟುಂಬಗಳು ತಮ್ಮ ಆಭರಣಗಳನ್ನು ಮಾರಿ, ಸಾಲವನ್ನು ಪಡೆದರು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಎನ್‌ಜಿಒಗಳ ಸಹಾಯದ ಅಡಿಯಲ್ಲಿ ಒದಗಿಸಲಾದ ಪಡಿತರವನ್ನು ಅವಲಂಬಿಸಿ ಬದುಕು ನಡೆಸಿದರು ಎಂದು ಅವರು ಹೇಳುತ್ತಾರೆ.

ಆಗಸ್ಟ್ 2021ರಿಂದ, ಸೀರೆಗಳ ಆರ್ಡರ್‌ಗಳು ಮತ್ತೆ ನಿಯಮಿತವಾಗಿ ಬರಲಾರಂಭಿಸಿವೆ. ಆದರೆ ಬೆಲೆಗಳು ಇಳಿದಿವೆ. ಗುಲ್ಜಾರ್ ಹೇಳುತ್ತಾರೆ, “[ಕೊವಿಡ್ ಬರುವ ಮೊದಲು] ಒಂದು ಸೀರೆಯನ್ನು 1,200 ರೂ.ಗೆ ಮಾರಾಟ ಮಾಡಲಾ‌ಗುತ್ತಿತ್ತು. ಈಗ 500-600 ರೂ.ಗೆ ಮಾರಾಟವಾಗುತ್ತಿದೆ. ನೇಕಾರರಿಗೆ ಅವರ ಪಾಲನ್ನು ನೀಡಿದ ನಂತರ, ನಮಗೆ 200-300 ರೂ ಉಳಿಯುತ್ತದೆ." ಅವರಿಗೆ ರಿಯಾಜುದ್ದೀನ್ ಅವರಂತೆಯೇ ಮಾರ್ಚ್ 2020ರವರೆಗೆ 30-40 ಸೀರೆಗಳಿಗೆ (ಅಂಗಡಿಗಳು, ಶೋರೂಮ್‌ಗಳು, ಕಂಪನಿಗಳು ಮತ್ತು ಇತರ ಮಳಿಗೆಗಳ ಏಜೆಂಟ್‌ಗಳಿಂದ) ಆರ್ಡರ್‌ ಸಿಗುತ್ತಿತ್ತು. ಬೆಲೆ ಕಡಿಮೆಯಿದ್ದರೂ 10 ಸೀರೆಗಳ ಆರ್ಡರ್‌ ಸಿಗುವುದು ಕಷ್ಟವಾಗುತ್ತಿದೆ.

ಗುಲ್ಜಾರ್ ಹೇಳುತ್ತಾರೆ, “ಹೊಸ ದರವನ್ನು ಹಿಂಪಡೆಯಲು ಸರ್ಕಾರವು ಯಾವುದೇ ಅಧಿಕೃತ ಲಿಖಿತ ಆದೇಶವನ್ನು ನೀಡಿಲ್ಲ. ಅವರು [ಉತ್ತರಪ್ರದೇಶದ ವಿಧಾನಸಭೆ] ಚುನಾವಣೆಯ ನಂತರ ಹೊಸ ದರಗಳನ್ನು ತಂದರೆ, ನಾವು ಮುಂದೆ ಈ ವ್ಯವಹಾರವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಕೋವಿಡ್‌ನಿಂದಾಗಿ ನಾವು ಸಹಜ ಸ್ಥಿತಿಗೆ ಮರಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಸಬ್ಸಿಡಿ ತೆಗೆದರೆ ನಾವು ಸಂಪೂರ್ಣ ನಾಶವಾಗುತ್ತೇವೆ.

ಕವರ್ ಫೋಟೋ: ವಾರಾಣಸಿಯ ಸಾರನಾಥ್ ಪ್ರದೇಶದಲ್ಲಿ ಪವರ್ ಲೂಮ್‌ನಲ್ಲಿ ಕೆಲಸ ಮಾಡುತ್ತಿರುವ ನೇಕಾರ (ಫೋಟೋ: ಸಮೀಕ್ಷಾ)

ಅನುವಾದ: ಶಂಕರ. ಎನ್. ಕೆಂಚನೂರು

Samiksha

Samiksha is a Varanasi-based freelance multimedia journalist. She is a 2021 recipient of the Mobile Journalism Fellowship of non-profit media organisations Internews and In Old News.

Other stories by Samiksha
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru