ಮಂಗಳವಾರದ ಮಳೆಯಿಂದಾಗಿ ಮುಂಬೈನ ಶಿವಾಜಿ ಉದ್ಯಾನವನವು ಕೆಸರಿನಿಂದ ಆವೃತವಾಗಿತ್ತು, ಕಾಲಿಟ್ಟಲ್ಲೆಲ್ಲ ಜಾರುತ್ತಿತ್ತು, ಒಂದು ಹೆಜ್ಜೆ ಕೂಡ ಇಡುವಂತಿರಲಿಲ್ಲ. ಸಖುಬಾಯಿ ಜಾರಿ ಬಿದ್ದು ಅವರ ಕಾಲಿಗೆ ಗಾಯವಾಯಿತು. ಆದರೂ, ಸಖುಬಾಯಿ ನಗುತ್ತಲೇ, "ಇಲ್ಲಿಗೆ ನಾನು ನನ್ನ ದೇವರ ಪಾದಗಳನ್ನು ಮುಟ್ಟಲು ಬಂದಿದ್ದೇನೆ. ನನ್ನ ಕೈ ಮತ್ತು ಕಾಲುಗಳು ಕೆಲಸ ಮಾಡುವವರೆಗೂ, ನನ್ನ ಕಣ್ಣುಗಳಲ್ಲಿ ಬೆಳಕಿರುವವರೆಗೂ ನಾನು ಇಲ್ಲಿಗೆ ಬರುತ್ತೇನೆ, ನಾನು ಬರುತ್ತಲೇ ಇರುತ್ತೇನೆ. "

ಅವರು, ಮತ್ತು ಇಲ್ಲಿ ಸೇರಿರುವ ಬಹುತೇಕ ಎಲ್ಲರಿಗೂ ದೇವರೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್. ಸಖುಬಾಯಿ ನವ ಬೌದ್ಧ ಸಮುದಾಯದ ದಲಿತ ಮಹಿಳೆ, ಅವರಿಗೀಗ ಸುಮಾರು 70 ವರ್ಷ. ಡಿಸೆಂಬರ್ 6ರ ಬುಧವಾರ ಇಲ್ಲಿ ಮಹಾಪರಿನಿರ್ವಾಣ ದಿನದಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಜಲ್ಗಾಂವ್ ಜಿಲ್ಲೆಯ ಭೂಸಾವಲ್‌ನಿಂದ ಇಲ್ಲಿಗೆ ಬಂದಿದ್ದಾರೆ.

ಪ್ರತಿವರ್ಷ ದಲಿತ ಸಮುದಾಯದ ಸಾವಿರಾರು, ಲಕ್ಷಾಂತರ ಜನರು ಶಿವಾಜಿ ಪಾರ್ಕ್ ಮತ್ತು ದಾದರ್‌ನಲ್ಲಿರುವ ಚೈತ್ಯಭೂಮಿಗಳಲ್ಲಿ ಸೇರುವ ದಿನವಿದು. ಭಾರತೀಯ ಸಂವಿಧಾನದ ಮುಖ್ಯ ಲೇಖಕ ಡಾ.ಅಂಬೇಡ್ಕರ್ ಅವರನ್ನು 1956ರಲ್ಲಿ ಅಂತ್ಯಸಂಸ್ಕಾರ ಮಾಡಿದ ಸ್ಥಳವೇ ಚೈತ್ಯಭೂಮಿ. ದೀನ ದಲಿತರ ಹಕ್ಕುಗಳಿಗಾಗಿ ಹೋರಾಡಿದ 20ನೇ ಶತಮಾನದ ಶ್ರೇಷ್ಠ ನಾಯಕ ಮತ್ತು ಸಮಾಜ ಸುಧಾರಕ ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಈ ಜನರು ಇಲ್ಲಿಗೆ ಬರುತ್ತಾರೆ. ಈ ಜನರು ಈ ದಿನ ಬಸ್ಸುಗಳು, ರೈಲು ಮತ್ತು ಕೆಲವೊಮ್ಮೆ ದೂರದದಿಂದ ನಡೆದು ಕೂಡ ಇಲ್ಲಿಗೆ ತಲುಪುತ್ತಾರೆ. ಅವರು ಬಹಳ ಗೌರವ, ಕೃತಜ್ಞತೆ ಮತ್ತು ಪ್ರೀತಿಯ ಭಾವನೆಯೊಂದಿಗೆ ಮುಂಬೈ, ಮಹಾರಾಷ್ಟ್ರ ಮತ್ತು ಇತರ ಹಲವು ರಾಜ್ಯಗಳ ವಿವಿಧ ಹಳ್ಳಿಗಳು ಮತ್ತು ನಗರಗಳಿಂದ ಇಲ್ಲಿಗೆ ಬರುತ್ತಾರೆ. ಅನೇಕರು ಇಲ್ಲಿಗೆ ತಲುಪುವ ಮೊದಲು ಹಲವು ದಿನಗಳ ಕಾಲ ಪ್ರಯಾಣಿಸಬೇಕಾಗುತ್ತದೆ.
Portrait of an old woman
PHOTO • Sharmila Joshi
A group of women
PHOTO • Sharmila Joshi

ಸಖುಬಾಯಿ ಖೋರ್ (ಎಡ), ಭೂಸವಲ್ನಿಂ‌ದ ಒಬ್ಬರೇ ಬಂದಿದ್ದಾರೆ; ಲೀಲಾಬಾಯಿ ಸೈನ್ (ಬಲ, ಗುಲಾಬಿ ಬಣ್ಣದ ಸೀರೆಯಲ್ಲಿ) ಮತ್ತು ಅವರ ತಂಡವು ಜಬಲ್ಪುರದಿಂದ ಮೂರು ದಿನಗಳ ಕಾಲ ಪ್ರಯಾಣಿಸಿ ಇಲ್ಲಿಗೆ ತಲುಪಿದೆ

ಮಧ್ಯಪ್ರದೇಶದ ಜಬಲ್‌ಪುರದಿಂದ ಸುಮಾರು 1,100 ಕಿ.ಮೀ ಪ್ರಯಾಣಿಸಿ ಮುಂಬೈ ತಲುಪಿರುವ ಲೀಲಾಬಾಯಿ ಸೈನ್ ಕಳೆದ 42 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಅಲ್ಲಿ ಅವರು ಮಸಾಜ್‌ ಮಾಡುವ ಕೆಲಸ ಮಾಡುತ್ತಾರೆ. ಅವರ ಪತಿ ಕ್ಷೌರಿಕರಾಗಿದ್ದರು. ಈ ಸಲ ಬಹಳ ನಿಧಾನವಾಗಿ ಚಲಿಸುವ ಹಾಲ್ಟಿಂಗ್‌ ರೈಲೊಂದನ್ನು ಹಿಡಿದು ಅವರ ಊರಿನ 60 ಇತರ ಮಹಿಳೆಯರೊಂದಿಗೆ ಬಂದಿದ್ದಾರೆ. ಆ ರೈಲು ಮುಂಬೈ ತಲುಪಲು ಮೂರು ದಿನಗಳನ್ನು ತೆಗೆದುಕೊಂಡಿತು. “ನಾವು ಮುಂಜಾನೆ 2 ಗಂಟೆಗೆ ಇಲ್ಲಿಗೆ ಬಂದು ದಾದರ್ ನಿಲ್ದಾಣದಲ್ಲಿ ಮಲಗಿದೆವು. ಇಂದು ರಾತ್ರಿ ನಾವು ಇಲ್ಲಿ (ಶಿವಾಜಿ ಪಾರ್ಕ್ ಹೊರಗೆ) ಕಾಲುದಾರಿಯಲ್ಲಿ ಮಲಗುತ್ತೇವೆ, ” ಎಂದು ಅವರು ಸಂತೋಷದಿಂದ ಹೇಳುತ್ತಾರೆ. “ಬಾಬಾ ಸಾಹೇಬರೊಂದಿಗಿನ ನಮ್ಮ ಬಾಂಧವ್ಯದಿಂದಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಅವರು ದೇಶಕ್ಕಾಗಿ ದುಡಿದರು ಯಾರಿಂದಲೂ ಸಾಧ್ಯವಿಲ್ಲದ್ದನ್ನು ತಾನು ಸಾಧಿಸಿ ತೋರಿಸಿದರು.”

ಲೀಲಾಬಾಯಿಯವರ ತಂಡವು ತಮ್ಮ ಚೀಲಗಳೊಂದಿಗೆ ಪಾದಚಾರಿ ಮಾರ್ಗದಲ್ಲಿ ತಂಗಿತ್ತು. ಅಲ್ಲಿನ ವಾತಾವರಣದಲ್ಲಿ ಹರಟೆ, ನಗು ತುಂಬಿತ್ತು. ಅದು ಡಾ. ಅಂಬೇಡ್ಕರ್ ಅವರ ಪುಣ್ಯತಿಥಿಯ ಗಂಭೀರ ಸಂದರ್ಭವಾಗಿದ್ದರೂ, ಅಲ್ಲೊಂದು ತಮ್ಮ ಹಕ್ಕುಗಳಿಗಾಗಿ ಹೋರಾಡಿದ ನಾಯಕನನ್ನು ಆಚರಿಸುವ ಸಂಭ್ರಮದ ಕ್ಷಣವಿತ್ತು. ಚೈತ್ಯ ಭೂಮಿಗೆ ಹೋಗುವ ದಾರಿಯುದ್ದಕ್ಕೂ ದಲಿತ ಕಾರ್ಯಕರ್ತರ ಗುಂಪುಗಳು ಹಾಡುಗಳನ್ನು ಹಾಡುತ್ತಿದ್ದವು, ಕೆಲವರು ಕ್ರಾಂತಿ ಗೀತೆಗಳನ್ನು ಹಾಡುತ್ತಿದ್ದರೆ ಇನ್ನೂ ಕೆಲವರು ಭಾಷಣಗಳನ್ನು ಮಾಡುತ್ತಿದ್ದರು. ಉಳಿದವರು ಬೀದಿ ಬದಿಯಲ್ಲಿ ಪ್ರದರ್ಶಿಸಲಾಗಿರುವ ಪ್ರತಿಮೆಗಳು ಬುದ್ಧ ಮತ್ತು ಬಾಬಾಸಾಹೇಬ್, ಜೈ ಭೀಮ್ ಕ್ಯಾಲೆಂಡರ್‌ಗಳು, ಟ್ರಿಂಕೆಟ್‌ಗಳು, ವರ್ಣಚಿತ್ರಗಳು ಮತ್ತು ಇನ್ನಷ್ಟು ವಸ್ತುಗಳನ್ನು ನೋಡುವುದರಲ್ಲಿ, ಕೊಳ್ಳುವುದರಲ್ಲಿ ನಿರತರಾಗಿದ್ದರು. ನೀಲಿ ಬಹುಜನ ಧ್ವಜಗಳು, ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳು ಎಲ್ಲೆಡೆ ಹಾರಾಡುತ್ತಿದ್ದವು. ಕಾವಲು ಕಾಯುವುದು, ಪ್ರಶ್ನೆಗಳಿಗೆ ಉತ್ತರಿಸುವುದು ಅಥವಾ ದಿನದ ದೀರ್ಘ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಪೋಲೀಸರನ್ನೂ ಎಲ್ಲೆಡೆ ಕಾಣಬಹುದಿತ್ತು.
Baby Suretal (woman in green saree) waiting in line for biscuits along with some other women
PHOTO • Sharmila Joshi
A group of women standing with bare feet on a muddy ground
PHOTO • Sharmila Joshi

ಶಿವಾಜಿ ಪಾರ್ಕ್‌ನಲ್ಲಿ ಆಹಾರಕ್ಕಾಗಿ ಸ್ಟಾಲ್‌ ಒಂದರ ಹೊರಗೆ ಕಾಯುತ್ತಿರುವ ಜನರು; ಹಸಿರು ಬಣ್ಣದ ಪ್ರಿಂಟೆಡ್ ಸೀರೆಯಲ್ಲಿ‌ ಬೇಬಿ ಸುರೇತಾಲ್ (ಎಡ). ಹಲವರು ಬರಿಗಾಲಿನಲ್ಲಿದ್ದರು, ಅವರ ಪಾದಗಳು ಮಳೆಯಿಂದ ಕೆಸರಾಗಿತ್ತು

ಶಿವಾಜಿ ಪಾರ್ಕಿನ ಒಳಗೂ ಹಲವು ಸ್ಟಾಲ್‌ಗಳಿರುವ ಡೇರೆಗಳಿದ್ದವು. ಆದರೆ ಅಲ್ಲಿ ಯಾವುದೇ ವ್ಯಾಪಾರ ನಡೆಯುತ್ತಿರಲಿಲ್ಲ ಬದಲಿಗೆ ವಿವಿಧ ಬಗೆಯ ಸೇವೆಗಳನ್ನು ನೀಡಲಾಗುತ್ತಿತ್ತು. ಉಚಿತ ಊಟ, ನೀರು ಹಾಗೂ ಇನ್ಸೂರೆನ್ಸ್‌ ಫಾರ್ಮ್‌ಗಳನ್ನು ಸಹ ನೀಡಲಾಗುತ್ತಿತ್ತು. ಅನೇಕ ಸ್ಟಾಲ್‌ಗಳನ್ನು ಕಾರ್ಮಿಕರ ಸಂಘಗಳು, ದಲಿತ ರಾಜಕೀಯ ಸಂಸ್ಥೆಗಳು ಮತ್ತು ಯುವ ಕಾರ್ಯಕರ್ತ ಗುಂಪುಗಳು ನಿರ್ವಹಿಸುತ್ತಿದ್ದವು. ಅಲ್ಲಿದ್ದ ಸ್ಟಾಲ್‌ಗಳಲ್ಲಿ ಹೆಚ್ಚು ಜನಸಂದಣಿಯಿದ್ದಿದ್ದು ಆಹಾರ ಪದಾರ್ಥಗಳನ್ನು ನೀಡುವಂತಹವುಗಳಲ್ಲಿ. ಅಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳ ಉದ್ದನೆಯ ಸರತಿ ಸಾಲುಗಳಿದ್ದವು. ಅವರಲ್ಲಿ ಹಲವರು ಬರಿಗಾಲಿನಲ್ಲಿದ್ದರು. ಅವರ ಅ ಕಾಲುಗಳಿಗೆ ಕೆಸರು ಮೆತ್ತಿಕೊಂಡಿತ್ತು. ಅವರಲ್ಲಿ ಕ್ರ್ಯಾಕ್‌ಜಾಕ್‌ ಬಿಸ್ಕತ್ತಿಗಾಗಿ ಕ್ಯೂ ನಿಂತಿದ್ದ ಬೇಬಿ ಸುರೆತಾಲ್ ಅವರೂ ಒಬ್ಬರು. ಅವರು ಹಿಂಗೋಲಿ ಜಿಲ್ಲೆಯ ಔಂದಾ ನಾಗ್ನಾಥ್ ತಾಲ್ಲೂಕಿನ ಶಿರಾದ್ ಶಹಾಪುರ ಗ್ರಾಮದಿಂದ ಬಂದಿದ್ದಾರೆ. "ನಾನು ಈ ಜಾತ್ರಾ (ಜಾತ್ರೆ) ನೋಡಲು ಬಂದಿದ್ದೇನೆ," ಎಂದು ಹೇಳುತ್ತಾ ಸುತ್ತಲಿನ ಜನಸಂದಣಿಯನ್ನು ತೋರಿಸುತ್ತಾ "ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಯೋಚಿಸಿದರೆ ಮನಸ್ಸಿಗೆ ಸಂತೋಷವಾಗುತ್ತದೆ" ಎಂದು ಹೇಳಿದರು.

ಸಖುಬಾಯಿ ಕೂಡ 'ಕ್ರ್ಯಾಕ್-ಜ್ಯಾಕ್ ಟೆಂಟ್' ಬಳಿ ಕಾಯುತ್ತಿದ್ದಾರೆ. ಅವರ ಕೈಯಲ್ಲಿ ಕೆಂಪು ಪ್ಲಾಸ್ಟಿಕ್ ಚೀಲವಿತ್ತು, ಅದರೊಳಗೆ ಸೀರೆ ಮತ್ತು ಒಂದು ಜೋಡಿ ರಬ್ಬರ್ ಚಪ್ಪಲಿಯಿದೆ. ಸ್ವಯಂಸೇವಕರು ಅವರಿಗೆ ಒಂದು ಸ್ಟಾಲ್‌ನಲ್ಲಿ ನೀಡಿದ ಎರಡು ಬಾಳೆಹಣ್ಣುಗಳನ್ನು ಸಹ ಈ ಚೀಲದಲ್ಲಿ ಇರಿಸಿಕೊಂಡಿದ್ದಾರೆ. ಅವರ ಬಳಿ ಹಣವಿಲ್ಲ. ಮನೆಯಲ್ಲಿ, ಸಖುಬಾಯಿಗೆ ಒಬ್ಬ ಮಗನಿದ್ದಾರೆ, ಅವರು ಕೃಷಿ ಕಾರ್ಮಿಕ. ಕೃಷಿ ಕಾರ್ಮಿಕರಾಗಿದ್ದ ಅವರ ಪತಿ ನಾಲ್ಕು ತಿಂಗಳ ಹಿಂದೆ ನಿಧನರಾದರು. "ನಾನು ಒಬ್ಬಂಟಿಯಾಗಿ ಬಂದಿದ್ದೇನೆ" ಎಂದು ಅವರು ಹೇಳುತ್ತಾರೆ. “ನಾನು ಅನೇಕ ವರ್ಷಗಳಿಂದ ಪ್ರತಿ ವರ್ಷ ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿಗೆ ಬರುವುದೆಂದರೆ ಬಹಳ ಇಷ್ಟ."
Shantabai Kamble sitting with her husband (old man in the background) and other people eating food
PHOTO • Sharmila Joshi
Manohar Kamble
PHOTO • Sharmila Joshi

ಬಹಳ ಹಸಿದಿದ್ದ ಶಾಂತಬಾಯಿ ಕಾಂಬ್ಳೆ ಮತ್ತು ಅವರ ಕುಟುಂಬ ಮಧ್ಯಾಹ್ನ ಸ್ಟಾಲ್‌ನಲ್ಲಿ ದಾಲ್ ಮತ್ತು ರೊಟ್ಟಿ ತಿನ್ನುತ್ತಿರುವುದು. ಅವರ ಪತಿ ಮನೋಹರ್ ಮುಂದಿನ ಎರಡು ಊಟಕ್ಕಾಗಿ ರೊಟ್ಟಿಗಳನ್ನು ಕಟ್ಟಿಕೊಂಡಿದ್ದಾರೆ

ಅವರಂತೆಯೇ ಡಿಸೆಂಬರ್ 6ರಂದು ದಾದರ್-ಶಿವಾಜಿ ಉದ್ಯಾನವನದಲ್ಲಿ ಸೇರಿರುವ ಅತ್ಯಂತ ಬಡ ಸಮುದಾಯಗಳಿಂದ ಬಂದವರಲ್ಲಿ ಸಾಕಷ್ಟು ಜನರ ಬಳಿ ಹಣವೇ ಇಲ್ಲ ಅಥವಾ ಇದ್ದರೂ ಬಹಳ ಕಡಿಮೆ. ಈ ಸಂದರ್ಭದಲ್ಲಿ ರೈಲು ಪ್ರಯಾಣ ಉಚಿತವಾಗಿರುತ್ತದೆ. ಆಹಾರಕ್ಕಾಗಿ ಅಲ್ಲಿ ಹಾಕಲಾಗಿರುವ ಸ್ಟಾಲ್‌ಗಳನ್ನು ಅವಲಂಬಿಸುತ್ತಾರೆಂದು  ಶಾಂತಾ ಬಾಯಿ ಕಾಂಬ್ಳೆ ಹೇಳಿದರು. ಅವರು ಬರಿ ನೆಲದ ಮೇಲೆ ಕುಳಿತು ತನ್ನ ಕುಟುಂಬದೊಂದಿಗೆ ಒಣ ಎಲೆಯ ಬಟ್ಟಲು ಮತ್ತು ಸಿಲ್ವರ್‌ ಫಾಯಿಲ್‌ ಪೇಪರ್‌ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಅವರ ಪತಿ ಮಿತಭಾಷಿಯಾದ ಹಿರಿಯ ವ್ಯಕ್ತಿ ಮನೋಹರ್‌ ಹಲವು ರೊಟ್ಟಿಗಳನ್ನು ಬಟ್ಟೆಯಲ್ಲಿ ನಾಳೆಗೆಂದು ಕಟ್ಟಿ ಇಟ್ಟುಕೊಂಡಿದ್ದರು. ಅವರದು ಕೃಷಿ ಕಾರ್ಮಿಕರ ಕುಟುಂಬವಾಗಿದ್ದು ಯವತ್ಮಾಲ್ ಜಿಲ್ಲೆಯ ಪುಸಾದ್ ತಾಲ್ಲೂಕಿನ ಶಂಬಲ್ ಪಿಂಪ್ರಿ ಗ್ರಾಮದವರು, ಸಾಮಾನ್ಯವಾಗಿ ಅವರು ಶಿವಾಜಿ ಪಾರ್ಕ್‌ ಒಳಗಿನ ಡೇರೆಯಲ್ಲಿ ಮಲಗುತ್ತಿದ್ದರು ಆದರೆ ಈ ವರ್ಷದ ಮಳೆ ಅದಕ್ಕೆ ಆಸ್ಪದ ನೀಡದ ಕಾರಣ ರಸ್ತೆ ಪಕ್ಕದಲ್ಲಿ ಮಲಗಿದ್ದರು.

ಆನಂದ ವಾಘ್ಮರೆ ಕೂಡ ಕೃಷಿ ಕಾರ್ಮಿಕರಾಗಿದ್ದು; ಅವರು ನಂದಿಗ್ರಾಮ್ ಎಕ್ಸ್‌ಪ್ರೆಸ್ ಮೂಲಕ ಬಂದಿದ್ದಾರೆ, ನಾಂದೇಡ್ ಜಿಲ್ಲೆಯ ಅಂಬುಲ್ಗಾ ಗ್ರಾಮದಿಂದ ತಮ್ಮ 12 ವರ್ಷದ ಮಗಳು ನೇಹಾಳೊಡನೆ ಇಲ್ಲಿಗೆ ಬಂದಿದ್ದಾರೆ. ಆನಂದ ಬಿಎ ಪದವಿ ಪಡೆದಿದ್ದಾರೆ, ಆದರೆ ಅವರಿಗೆ ಬೇರೆ ಯಾವುದೇ ಕೆಲಸ ಸಿಗುತ್ತಿಲ್ಲ. “ನಮ್ಮ ಬಳಿ ಯಾವುದೇ ಭೂಮಿಯಿಲ್ಲ. ಹಾಗಾಗಿ ಹೊಲಗಳಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತೇನೆ, ರೂ. ದಿನಕ್ಕೆ 100-150 ರೂ. ಸಂಪಾದಿಸುತ್ತೇನೆ“ ಎನ್ನುತ್ತಾರೆ. "ನಾನು ಬಾಬಾಸಾಹೇಬರ ದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಅವರ ಕಾರಣದಿಂದಾಗಿ ನಾವು [ಅವರು ನವ ಬೌದ್ಧ, ಹಿಂದೆ ಮಹರ್ ಸಮುದಾಯದವರು] ಅನೇಕ ಸೌಲಭ್ಯಗಳನ್ನು ಪಡೆದುಕೊಂಡಿದ್ದೇವೆ. ಅವರು ಜನರ ಮಹಾತ್ಮರಾಗಿದ್ದರು.”
Ananda Waghmare with daughter Neha
PHOTO • Sharmila Joshi
People buying things related to Ambedkar
PHOTO • Sharmila Joshi

ಆನಂದ ವಾಘ್ಮರೆ ಮತ್ತು ಅವರ ಮಗಳು ನೇಹಾ ನಾಂದೇಡ್‌ನಿಂದ ಬಂದಿದ್ದಾರೆ. ಬಲ: ಜೈ ಭೀಮ್ ಕಲಾಕೃತಿಗಳು ಮತ್ತು ಟ್ರಿಂಕೆಟ್ಸ್‌ಗಳು ಉದ್ಯಾನವನದ ಹೊರಗಿನ ಪಾದಚಾರಿ ದಾರಿಗಳ ಮೇಲೆ ಪ್ರದರ್ಶನ ಮತ್ತು ಮಾರಾಟಕ್ಕಿವೆ

ಉದ್ಯಾನದೊಳಗೆ ಸರಕುಗಳನ್ನು ಮಾರಾಟ ಮಾಡಲು ತಯಾರಿಸಲಾದ ಸ್ಟಾಲ್‌ಗಳ ಸುತ್ತ ಕೆಸರಾದ ಕಾರಣ ಉತ್ತಮ ವ್ಯಾಪಾರ ಮಾಡಲು ಸಾಧ್ಯವಾಗಲಿಲ್ಲ. ಎಂ.ಎಂ.ಶೇಖ್ ಅವರು ಎರಡು ಉದ್ದದ ಟೇಬಲ್ಲುಗಳಲ್ಲಿ ಪುಸ್ತಕಗಳನ್ನು ಜೋಡಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಸಾಮಾಜಿಕ ಮತ್ತು ಜಾತಿ ವಿಷಯಗಳಿಗೆ ಸಂಬಂಧಿಸಿದವು. ಅವರು ಮರಾಠವಾಡದ ಬೀಡ್‌ನಿಂದ ಇಲ್ಲಿಗೆ ಬಂದಿದ್ದಾರೆ, ಅವರು ತಮ್ಮ ಊರಿನಲ್ಲಿಯೂ ಇದೇ ಕೆಲಸವನ್ನು ಮಾಡುತ್ತಾರೆ. "ನಾನು ಪ್ರತಿ ವರ್ಷ ಬರುತ್ತೇನೆ" ಎಂದು ಅವರು ವಿವರಿಸುತ್ತಾರೆ, "ಆದರೆ ಇಂದು ಯಾವುದೇ ಪುಸ್ತಕವನ್ನು ಮಾರಾಟ ಮಾಡಿಲ್ಲ. ನಾನು ಶೀಘ್ರದಲ್ಲೇ ನನ್ನ ಚೀಲಗಳನ್ನು ಕಟ್ಟಿಟ್ಟು ಇಂದು ರಾತ್ರಿ ಹಿಂದಿರುಗುತ್ತೇನೆ. "

ಅವರ ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಒಂದು ಟೆಂಟ್ ಇದೆ, ಇದರಲ್ಲಿ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ನೇತೃತ್ವವನ್ನು ಡಾ. ಉಲ್ಹಾಸ್ ವಾಘ್ ವಹಿಸಿಕೊಂಡಿದ್ದಾರೆ, ಅವರು ಪ್ರತಿವರ್ಷ 12-15 ವೈದ್ಯರ ತಂಡದೊಂದಿಗೆ ಇಲ್ಲಿಗೆ ಬರುತ್ತಾರೆ ಮತ್ತು ದಿನಕ್ಕೆ ಸುಮಾರು 4,000 ಜನರ ತಲೆನೋವು, ಚರ್ಮದ ಮೇಲಿನ ಕಲೆಗಳು, ಹೊಟ್ಟೆ ನೋವು ಇತ್ಯಾದಿ ದೂರುಗಳನ್ನು ಪರಿಹರಿಸುತ್ತಾರೆ. "ಇಲ್ಲಿಗೆ ಬರುವ ಜನರು ಬಹಳ ದುರ್ಬಲ ವರ್ಗದವರು, ಇವರು ಹಳ್ಳಿಗಳು ಮತ್ತು ಕೊಳೆಗೇರಿಗಳಲ್ಲಿ ವಾಸಿಸುವ ಜನರು, ಅಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆಯಿದೆ" ಎಂದು ಅವರು ವಿವರಿಸುತ್ತಾರೆ. ಈ ಟೆಂಟ್‌ಗೆ ಬರುವ ಹೆಚ್ಚಿನ ಜನರು ಪ್ರಯಾಣ ಮತ್ತು ಹಸಿವಿನಿಂದಾಗಿ ಸುಸ್ತು, ದೌರ್ಬಲ್ಯ ಕಾಡುವ ದೂರನ್ನು ಹೇಳುತ್ತಾರೆ.

ಪರಭಾನಿ ಜಿಲ್ಲೆಯ ಜಿಂತೂರ್ ತಾಲ್ಲೂಕಿನ ಕನ್ಹಾ ಗ್ರಾಮದ ಇಬ್ಬರು ಯುವ ರೈತರು ಹಾದು ಹೋಗುತ್ತಿದ್ದಾರೆ, ಇಬ್ಬರೂ ಕುತೂಹಲದಿಂದ ನೋಡುತ್ತಿದ್ದಾರೆ. ಇಬ್ಬರಲ್ಲಿ ಒಬ್ಬರು 28 ವರ್ಷದ ನಿತಿನ್ ಮತ್ತು ಇನ್ನೊಬ್ಬರ ಹೆಸರು 25 ವರ್ಷ ವಯಸ್ಸಿನ ರಾಹುಲ್ ದವಾಂಡೆ. ಇವರಿಬ್ಬರು ಸಹೋದರರು ಮತ್ತು ನವ ಬೌದ್ಧರು, ಅವರು ತಮ್ಮ ಊರಿನಲ್ಲಿ ಮೂರು ಎಕರೆ ಭೂಮಿಯಲ್ಲಿ ಹತ್ತಿ, ಸೋಯಾಬೀನ್, ತೊಗರಿ ಮತ್ತು ಉದ್ದನ್ನು ಬೆಳೆಯುತ್ತಾರೆ. ಕೆಲವು ಸ್ವಯಂಸೇವಕರ ಸಹಾಯದಿಂದ ಕಾಲೇಜಿನಲ್ಲಿ ರಾತ್ರಿ ತಂಗಲು ಅವರಿಗೆ ಸೌಲಭ್ಯ ಸಿಕ್ಕಿದೆ. "ನಾವು ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ" ಎಂದು ನಿತಿನ್ ಹೇಳುತ್ತಾರೆ. "ನಾವು ಇಲ್ಲಿಗೆ ಬರುತ್ತಿದ್ದರೆ, ಒಂದು ದಿನ ನಮ್ಮ ಮಕ್ಕಳು ಸಹ ಬರುತ್ತಾರೆ ಮತ್ತು ಹೀಗೆ ಈ ಸಂಪ್ರದಾಯವು ಮುಂದುವರಿಯುತ್ತದೆ ಎಂದು ನಾವು ನಂಬುತ್ತೇವೆ."
Brothers Nitin and Rahul Dawande at Shivaji Park in Mumbai
PHOTO • Sharmila Joshi
Sandeepan Kamble
PHOTO • Sharmila Joshi

ಸಂಪ್ರದಾಯವನ್ನು ಜೀವಂತವಾಗಿಡುವ ಸಲುವಾಗಿ ರೈತರಾದ ನಿತಿನ್ ಮತ್ತು ರಾಹುಲ್ ದವಾಂಡೆ ಇಬ್ಬರೂ ಇಲ್ಲಿಗೆ ಬಂದಿದ್ದಾರೆ. ಬಲ: ಕೃಷಿ ಕಾರ್ಮಿಕರಾದ ಸಂದೀಪನ್ ಕಾಂಬ್ಳೆ ಇಲ್ಲಿಗೆ ಮೊದಲ ಬಾರಿ ಬಂದಿದ್ದಾರೆ

ದಿನ ಕಳೆದಂತೆ, ಚೈತ್ಯಭೂಮಿ ಕಡೆಗೆ ಹೋಗುವ ಜನರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗತೊಡಗಿತು. ಜನರ ನಡುವೆ ಹೋಗುವುದು ಬಹಳ ಕಷ್ಟವಾಗಿತ್ತು. ಆ ಸಂದಣಿಯಲ್ಲಿ ಹೋಗಲು ಸಾಧ್ಯವಾಗದ ಕಾರಣ, ಲಾತೂರ್ ಜಿಲ್ಲೆಯ ಆವುಸ ತಾಲೂಕಿನ ಉತಿ ಗ್ರಾಮದ ಸಂದೀಪನ್ ಕಾಂಬ್ಳೆ ಜನಸಂದಣಿ ಕಡಿಮೆಯಾಗುವ ತನಕ ಕಾಯಲು ನಿರ್ಧರಿಸಿದರು. ಅವರು ಅಲ್ಲೇ ಇದ್ದ ಮರದ ಕೆಳಗೆ ಕಿರು ನಿದ್ದೆಗಾಗಿ ಮಲಗಿದರು. "ನಾನು ಮೊದಲ ಬಾರಿಗೆ ಇಲ್ಲಿ ಬರುತ್ತಿರುವುದು" ಎಂದು ಕೃಷಿ ಕಾರ್ಮಿಕ ಸಂದೀಪನ್ ಹೇಳುತ್ತಾರೆ. "ನನ್ನೊಂದಿಗೆ ನನ್ನ ಹೆಂಡತಿ ಮಕ್ಕಳು ಬಂದಿದ್ದಾರೆ. ಈ ವರ್ಷ ಡಿಸೆಂಬರ್ 6ರಂದು ಅವರಿಗೆ ಈ ಸ್ಥಳವನ್ನು ತೋರಿಸಲೆಂದು ಕರೆದುಕೊಂಡು ಬಂದಿದ್ದೇನೆ.”

ಉದ್ಯಾನವನದಲ್ಲಿ, ಶೇಖ್ ಅವರ ಪುಸ್ತಕದಂಗಡಿಯ ಬಳಿ, ಒಂದು ಪುಟ್ಟ ಹುಡುಗಿ ಕಳೆದುಹೋಗಿ ಹಿಂದಕ್ಕೆ, ಮುಂದಕ್ಕೆ ಓಡುತ್ತಾ, ತಾಯಿಗಾಗಿ ಜೋರಾಗಿ ಅಳುತ್ತಿದ್ದಳು. ಜನರ ಗುಂಪೊಂದು ಅವಳ ಸುತ್ತಲೂ ಒಟ್ಟುಗೂಡಿ ಅವಳನ್ನು ನಿಧಾನವಾಗಿ ಮಾತನಾಡಿಸುತ್ತದೆ; ಅವಳು ಕನ್ನಡವನ್ನು ಮಾತ್ರ ಮಾತನಾಡುತ್ತಿದ್ದಳು, ಆದರೆ ಮೊಬೈಲ್ ಸಂಖ್ಯೆಯನ್ನು ಹೇಳಿದಳು. ಕೊನೆಗೆ ಒಬ್ಬ ಯುವ ಪೊಲೀಸ್ ಮುಂದೆ ಬಂದು ಜವಬ್ದಾರಿ ವಹಿಸಿಕೊಳ್ಳುತ್ತಾರೆ. ಅವಳ ಆತಂಕವನ್ನು ನಿಭಾಯಿಸುವ ಕಾಳಜಿ ಎಲ್ಲೆಡೆ ಸ್ಪಷ್ಟವಾಗಿತ್ತು - ಈ ಬೃಹತ್ ಕೂಟದಲ್ಲಿ ಒಮ್ಮೆಯೂ ಗೊಂದಲದ ಭಾವನೆ, ಮಹಿಳೆಯರಿಗೆ ಯಾವುದೇ ಬಗೆಯ ಕಿರುಕುಳ, ಯಾವುದೇ ಕಹಿ ಘಟನೆಗಳಾಗಲಿ ನಡೆಯಲಿಲ್ಲ. ಮತ್ತು ಪುಸ್ತಕದಂಗಡಿಯಿಂದ ಅಷ್ಟು ದೂರದಲ್ಲಿ, ಇನ್ನೊಬ್ಬ ಪುಟ್ಟ ಹುಡುಗಿ ಟೆಂಟ್‌ಗೆ ಓಡಿ ಹೂಮಾಲೆ ಹಾಕಲಾಗಿದ್ದ ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಮುಂದೆ ತಲೆ ಬಾಗಿಸಿ, ಕೈಗಳನ್ನು ಮಡಚಿ ದೀರ್ಘಕಾಲ ನಿಂತು ನಮಸ್ಕರಿಸುತ್ತಿದ್ದಳು.
On the streets leading to Chaitya Bhoomi
PHOTO • Sharmila Joshi
Shaikh at his book stall
PHOTO • Sharmila Joshi
Crowds inside Shivaji Park
PHOTO • Sharmila Joshi

ಈ ಜನಸಂದಣಿ ದಾದರ್‌ನ ಚೈತ್ಯ ಭೂಮಿಗೆ ಹೋಗುವ ಬೀದಿಗಳಲ್ಲಿ ಬೆಳೆಯುತ್ತಿತ್ತು (ಎಡ), ಶಿವಾಜಿ ಪಾರ್ಕ್‌ನ ಒಳಗೆ, ಸ್ಟಾಲ್‌ಗಳು ಡಾ. ಅಂಬೇಡ್ಕರ್‌ ಅವರಿಗೆ ಮಸ್ಕಾರಗಳನ್ನು ಅರ್ಪಿಸುತ್ತವೆ ಹಾಗೂ ಸೇವೆ ನೀಡುತ್ತವೆ, ಮತ್ತು ಅವುಗಳಲ್ಲಿ ಕೆಲವು (ಎಂ.ಎಂ.ಶೇಖ್ ಅವರ ಪುಸ್ತಕದಂಗಡಿ, ನಡುವೆ), ಮಾರಾಟದ ವಸ್ತುಗಳನ್ನು ಹೊಂದಿವೆ

ಅನುವಾದ: ಶಂಕರ ಎನ್. ಕೆಂಚನೂರು

Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru