“ನಾವು [2018] ಲಾಂಗ್ ಮಾರ್ಚ್‌ನಲ್ಲಿ ಟಾರ್ಪಾ ನುಡಿಸಿದ್ದೇವೆ ಮತ್ತು ನಾವು ಇಂದು ಟಾರ್ಪಾವನ್ನು ನುಡಿಸುತ್ತಿದ್ದೇವೆ. ಎಲ್ಲಾ ಪ್ರಮುಖ ಸಂದರ್ಭಗಳಲ್ಲಿ ನಾವು ಅದನ್ನು ನುಡಿಸುತ್ತೇವೆ,” ಎಂದು ರೂಪೇಶ್ ರೋಜ್ ಅವರು ತನ್ನೊಂದಿಗೆ ತಂದಿದ್ದ ಗಾಳಿ ವಾದ್ಯವನ್ನು ತೋರಿಸಿ ಹೇಳುತ್ತಾರೆ. ಈ ವಾರ ಮಹಾರಾಷ್ಟ್ರದಿಂದ ವ್ಯಾನ್, ಟೆಂಪೊ, ಜೀಪ್ ಮತ್ತು ಕಾರುಗಳಲ್ಲಿ ದೆಹಲಿ ಕಡೆಗೆ ಹೋಗುತ್ತಿರುವ ರೈತರಲ್ಲಿ ರೂಪೇಶ್ ಅವರೂ ಸೇರಿದ್ದಾರೆ. ರಾಜಧಾನಿಯ ಗಡಿಯಲ್ಲಿ ಪಂಜಾಬ್-ಹರಿಯಾಣದ ಹೆಚ್ಚಿನ ಸಂಖ್ಯೆಯಲ್ಲಿರುವ ರೈತರ ಪ್ರತಿಭಟನೆಗೆ ಬೆಂಬಲ ನೀಡಲು ಇವರೆಲ್ಲರೂ ಹೋಗುತ್ತಿದ್ದಾರೆ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಹೊಸ ಕೃಷಿ ಕಾನೂನುಗಳು ಜಾರಿಗೆ ಬಂದ ನಂತರ, ಈ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೇಶಾದ್ಯಂತ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಡಿಸೆಂಬರ್ 21ರಂದು ಸುಮಾರು ಮಧ್ಯಾಹ್ನದ ಹೊತ್ತಿಗೆ ಮಹಾರಾಷ್ಟ್ರದ ಸುಮಾರು 20 ಜಿಲ್ಲೆಗಳ ಅಂದಾಜು 2 ಸಾವಿರ ರೈತರು - ಮುಖ್ಯವಾಗಿ ನಾಸಿಕ್ ಮೂಲದ ರೈತರು ನಾಂದೇಡ್ ಮತ್ತು ಪಾಲ್ಘರ್ ರೈತರೊಂದಿಗೆ ಸೇರಿ ಮಧ್ಯ ನಾಸಿಕ್‌ನ ಗಾಲ್ಫ್ ಕ್ಲಬ್ ಮೈದಾನದಲ್ಲಿ ಜಾಥಾ, ದೆಹಲಿಗೆ ವಾಹನ ಮೋರ್ಚಾಕ್ಕಾಗಿ ಜಮಾಯಿಸಿದ್ದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ)ದೊಂದಿಗೆ ಸಂಯೋಜಿತವಾಗಿರುವ ಅಖಿಲ ಭಾರತ ಕಿಸಾನ್ ಸಭೆ ಇವರನ್ನು ಸಂಘಟಿಸಿತ್ತು. ಈ ಪೈಕಿ ಸುಮಾರು 1,000 ಮಂದಿ ಮಧ್ಯಪ್ರದೇಶದ ಗಡಿಯನ್ನು ದಾಟಿ ದೇಶದ ರಾಜಧಾನಿ ಕಡೆಗೆ ಪ್ರಯಾಣ ಮುಂದುವರಿಸಿದ್ದಾರೆ.
ನಾಸಿಕ್‌ನಲ್ಲಿ ನೆರೆದಿದ್ದವರಲ್ಲಿ ವರ್ಲಿ ಸಮುದಾಯಕ್ಕೆ ಸೇರಿದ ಪಾಲ್ಘರ್‌ನ ವಡಾ ಪಟ್ಟಣದ 40 ವರ್ಷದ ರೂಪೇಶ್ ಕೂಡ ಇದ್ದರು. "ನಾವು ಆದಿವಾಸಿಗಳಿಗೆ ನಮ್ಮ ಟಾರ್ಪಾ ಬಗ್ಗೆ ಸಾಕಷ್ಟು ಶ್ರದ್ಧಾ [ಗೌರವ] ಇದೆ" ಎಂದು ಅವರು ಹೇಳುತ್ತಾರೆ. "ಈಗ ನಾವು ದೆಹಲಿಗೆ ಹೋಗುವ ದಾರಿಯುದ್ದಕ್ಕೂ ಇದನ್ನು ನುಡಿಸುತ್ತಾ ನೃತ್ಯ ಮಾಡುತ್ತೇವೆ."


“ನಾನು ಪ್ರತಿದಿನ ಎರಡು ಕಿಲೋಮೀಟರ್ ದೂರ ನೀರಿನ ಕೊಡಗಳನ್ನು ಹೊತ್ತು ದಣಿದಿದ್ದೇನೆ. ನಮ್ಮ ಮಕ್ಕಳಿಗೆ ಮತ್ತು ನಮ್ಮ ಭೂಮಿಗೆ ನೀರು ಬೇಕು” ಎಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಆದಿವಾಸಿ ಕಾರ್ಮಿಕರಾದ ಗೀತಾ ಗಂಗೋರ್ಡೆ ಹೇಳುತ್ತಾರೆ. ತನ್ನ 60ರ ಹರೆಯದಲ್ಲಿರುವ ಮೋಹನಬಾಯಿ ದೇಶಮುಖ್, “ನಾವು ಇಂದು ನೀರಿಗಾಗಿ ಇಲ್ಲಿದ್ದೇವೆ. ಸರ್ಕಾರ ನಮ್ಮ ಮಾತನ್ನು ಕೇಳುತ್ತದೆ ಮತ್ತು ನಮ್ಮ ಹಳ್ಳಿಗೆ ಈ ವಿಷಯದಲ್ಲಿ ಏನಾದರೂ ಸಹಾಯ ಮಾಡುತ್ತದೆ ಎಂದು ನಾನು ನಂಬಿದ್ದೇನೆ.” ಎಂದು ಹೇಳುತ್ತಾರೆ.

ರಾಧು ಗಾಯಕವಾಡ್ (ಎಡ ಭಾಗದ ಕೊನೆಯಲ್ಲಿ) ಕುಟುಂಬವು ಅಹ್ಮದ್‌ನಗರ ಜಿಲ್ಲೆಯ ಸಂಗಮ್ನರ್ ತಾಲ್ಲೂಕಿನ ಶಿಂಡೋಡಿ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಹೊಂದಿದ್ದು, ಅಲ್ಲಿ ಅವರು ಮುಖ್ಯವಾಗಿ ಕಿರುಧಾನ್ಯಗಳು ಮತ್ತು ಸೋಯಾಬೀನ್ ಬೆಳೆಯುತ್ತಾರೆ. “ನಮ್ಮ ಅಹ್ಮದ್‌ನಗರ ಬರ ಪೀಡಿತ ಪ್ರದೇಶ. ನಮಗೆ ಸಾಕಷ್ಟು ಭೂಮಿ ಇದೆ ಆದರೆ ನಾವು ಅದರಲ್ಲಿ ಬೇಸಾಯ ಮಾಡಲು ಸಾಧ್ಯವಿಲ್ಲ. ನಾವು [ನಮ್ಮ ಇಳುವರಿಯನ್ನು] ಮಾರಾಟ ಮಾಡಲು ಹೋದಾಗ ಮಂಡಿಯಲ್ಲಿ ಸರಿಯಾದ ಬೆಲೆಗಳು ಸಿಗುವುದಿಲ್ಲ. ನಮ್ಮ ಜಿಲ್ಲೆಯ ಎಲ್ಲ ದೊಡ್ಡ ನಾಯಕರು ನಮ್ಮ ಆದಿವಾಸಿಗಳಿಗೆ ಏನನ್ನೂ ನೀಡುವುದಿಲ್ಲ. ಅವರು ತಮ್ಮಂತಹ ಇತರ ಜನರಿಗೆ ಮಾತ್ರ ನೀಡುತ್ತಾರೆ.”

ಕೊಲ್ಹಾಪುರ ಜಿಲ್ಲೆಯ ಶಿರೋಲ್ ತಾಲ್ಲೂಕಿನ ಜಂಬಾಲಿ ಗ್ರಾಮದವರಾದ 72 ವರ್ಷದ ನಾರಾಯಣ್ ಗಾಯಕ್‌ವಾಡ್, “ಒಂದು ಕ್ರಾಂತಿ ನಡೆಯುವವರೆಗೂ ರೈತರು ಏಳಿಗೆ ಹೊಂದುವುದಿಲ್ಲ” ಎಂದು ಹೇಳುತ್ತಾರೆ. ಅವರು ಕಬ್ಬು ಬೆಳೆಯುವ ಮೂರು ಎಕರೆ ಭೂಮಿಯನ್ನು ಹೊಂದಿದ್ದಾರೆ. “ನಾವು ದೆಹಲಿಗೆ ಹೋಗುವುದು ನಮ್ಮ ಪಂಜಾಬ್ ರೈತರಿಗಾಗಿ ಮಾತ್ರವಲ್ಲ ಹೊಸ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಕೂಡಾ ಹೌದು, "ನಮ್ಮ ಹಳ್ಳಿಯಲ್ಲಿ ಕಬ್ಬಿನ ಗದ್ದೆಗಳಿಗೆ ನಮಗೆ ಸಾಕಷ್ಟು ನೀರು ಬೇಕು, ಆದರೆ ವಿದ್ಯುತ್ ಸರಬರಾಜು ಕೇವಲ ಎಂಟು ಗಂಟೆಗಳ ಕಾಲ ಮಾತ್ರ ನೀಡಲಾಗುತ್ತಿದೆ." ಹಳ್ಳಿಯಲ್ಲಿ ವಾರದ ನಾಲ್ಕು ದಿನ ಹಗಲಿನಲ್ಲಿ ಮತ್ತು ರಾತ್ರಿಯಲ್ಲಿ ಮೂರು ದಿನಗಳವರೆಗೆ ವಿದ್ಯುತ್ ಇರುತ್ತದೆ. “ಚಳಿಗಾಲದಲ್ಲಿ ಕಬ್ಬಿನ ಗದ್ದೆಗಳಿಗೆ ರಾತ್ರಿಯಲ್ಲಿ ನೀರುಣಿಸುವುದು ತುಂಬಾ ಕಷ್ಟವಾಗುತ್ತದೆ ಮತ್ತು ನಮಗೆ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ಗಾಯಕ್‌ವಾಡ್ ಹೇಳುತ್ತಾರೆ.

"ಈಸ್ಟ್ ಇಂಡಿಯಾ ಕಂಪನಿ ನಮ್ಮನ್ನು ಗುಲಾಮರನ್ನಾಗಿಸಿಕೊಂಡಂತೆಯೇ, ಮೋದಿ ಸರ್ಕಾರ್ ಕೂಡ ತನ್ನದೇ ರೈತರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ. ಅದಾನಿ ಮತ್ತು ಅಂಬಾನಿ ಮಾತ್ರ ಲಾಭ ಗಳಿಸಬೇಕೆಂದು ಅವರು ಬಯಸುತ್ತಾರೆ. ನಮ್ಮ ಆದಿವಾಸಿಗಳ ಸ್ಥಿತಿಯನ್ನು ನೋಡಿ. ಈ ದೇಶದಲ್ಲಿ ರೈತರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಇಂದು ನನ್ನೊಂದಿಗೆ ನನ್ನ ಮಕ್ಕಳನ್ನು ಕರೆತಂದಿದ್ದೇನೆ. ಇಲ್ಲಿಗೆ ಬಂದಿದ್ದು ಅವರಿಗೆ ಒಂದು ಪ್ರಮುಖ ಪಾಠವಾಗಲಿದೆ” ಎಂದು ಭಿಲ್ ಸಮುದಾಯಕ್ಕೆ ಸೇರಿದವರಾದ 60 ವರ್ಷದ ಶಮ್ಸಿಂಗ್ ಪಡ್ವಿ ಹೇಳುತ್ತಾರೆ. ನಂದೂರ್‌ಬಾರ್ ಜಿಲ್ಲೆಯ ಧನಪುರ ಗ್ರಾಮದಿಂದ ವಾಹನ ಜಾಥಾದಲ್ಲಿ ಸೇರಿಕೊಂಡ 27 ಜನರಲ್ಲಿ ಅವರ ಪುತ್ರರಾದ ಶಂಕರ್ (16) ಮತ್ತು ಭಗತ್ (11) ಕೂಡ ಸೇರಿದ್ದಾರೆ.

ಸಂಸ್ಕಾರ್ ಪಗರಿಯಾ ಅವರು 10 ವರ್ಷದವರಾಗಿದ್ದಾಗ ನಾಸಿಕ್ ಜಿಲ್ಲೆಯ ಸುರ್ಗಾನಾ ತಾಲ್ಲೂಕಿನಲ್ಲಿರುವ ತಮ್ಮ ಗ್ರಾಮದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಮೊದಲ ಬಾರಿ ಪಾಲ್ಗೊಂಡರು. ಅಂದಿನಿಂದ, ಅವರು ಮಾರ್ಚ್ 2018ರಲ್ಲಿ ನಾಸಿಕ್‌ನಿಂದ ಮುಂಬೈಗೆ ನಡೆದ ಲಾಂಗ್ ಮಾರ್ಚ್ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಹಲವಾರು ಪ್ರತಿಭಟನೆಗಳ ಭಾಗವಾಗಿದ್ದಾರೆ. 19 ಜನರ ಸಂಸ್ಕಾರ್ ಅವರ ಅವಿಭಕ್ತ ಕುಟುಂಬವು ಸುಮಾರು 13-14 ಎಕರೆ ಭೂಮಿ ಹೊಂದಿದೆ, ಅದನ್ನು ಅವರು ಗೇಣಿ ಕೃಷಿಕರಿಗೆ ನೀಡುತ್ತಾರೆ. “ರೈತರು ಪ್ರತಿಭಟಿಸಿದಲ್ಲೆಲ್ಲಾ ಅವರೊಂದಿಗೆ ನಾನು ನಿಲ್ಲುತ್ತೇನೆ.ಇದಕ್ಕಾಗಿ ನನ್ನನ್ನು ಜೈಲಿಗೆ ಹಾಕಿದರೂ ನಾನು ಜೈಲಿಗೆ ಹೋಗುತ್ತೇನೆ ”ಎಂದು 19 ವರ್ಷದ ಯುವಕ ಹೇಳುತ್ತಾರೆ. ಸಾಂಕ್ರಾಮಿಕ ಪಿಡುಗು ಮತ್ತು ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟ ತನ್ನ 12ನೇ ತರಗತಿ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಸಂಸ್ಕಾರ್ ಕಾಯುತ್ತಿದ್ದಾರೆ.

ಡಿಸೆಂಬರ್ 21ರಂದು ನಾಂದೇಡ್ ಜಿಲ್ಲೆಯ ಸುಮಾರು 100 ರೈತರು ನಾಸಿಕ್‌ನಿಂದ ದೆಹಲಿಯವರೆಗಿನ ರೈತರ ಪ್ರತಿಭಟನಾ ಮೆರವಣಿಗೆಯನ್ನು ಸೇರಿಕೊಂಡರು. ಅವರಲ್ಲಿ ಜಿಲ್ಲೆಯ ಭಿಲ್ಗಾಂವ್ ಗ್ರಾಮದ ಗೊಂಡ್ ಆದಿವಾಸಿ ನಾಮದೇವ್ ಶೆಡ್ಮಕೆ ಕೂಡ ಇದ್ದರು. ಅವರು ಐದು ಎಕರೆ ಭೂಮಿಯನ್ನು ಹೊಂದಿದ್ದು ಅದರಲ್ಲಿ ಹತ್ತಿ ಮತ್ತು ಸೋಯಾಬೀನ್ ಬೆಳೆಯುತ್ತಾರೆ. 49 ವರ್ಷದ ರೈತ ಹೀಗೆನ್ನುತ್ತಾರೆ (ಮಧ್ಯದಲ್ಲಿರುವವರು, ನೀಲಿ ಅಂಗಿ), “ಈ ರೈತ ವಿರೋಧಿ ಸರ್ಕಾರದ ವಿರುದ್ಧ ನಡೆಯುತ್ತಿರುವ ನಮ್ಮ ಹೋರಾಟವನ್ನು ಗೆಲ್ಲಲು ನಾವು ದೆಹಲಿಗೆ ಹೋಗುತ್ತಿದ್ದೇವೆ. ನಮ್ಮ ಗ್ರಾಮವು ಬೆಟ್ಟದ ಪಕ್ಕದಲ್ಲಿದ್ದು ನಮ್ಮ ಹೊಲಗಳಿಗೆ ನೀರಿನ ಕೊರತೆಯಿದೆ. ನಾವು ಅನೇಕ ವರ್ಷಗಳಿಂದ ಬೋರ್‌ವೆಲ್‌ಗಳ ನಿರ್ಮಾಣಕ್ಕಾಗಿ ಆಗ್ರಹಿಸುತ್ತಿದ್ದೇವೆ. ನೀರಿಲ್ಲದೆ ನಾವು ಕೃಷಿ ಮಾಡಲು ಸಾಧ್ಯವಿಲ್ಲ ಜೊತೆಗೆ ನಾವು ಆದಿವಾಸಿಗಳು ಈಗಾಗಲೇ ಸಾಲದಲ್ಲಿದ್ದೇವೆ.”

"ಇಲ್ಲಿ ಆಸ್ಪತ್ರೆಗಳ ಪರಿಸ್ಥಿತಿ ಬಹಳ ಕೆಟ್ಟದಾಗಿದೆ, ಒಮ್ಮೆ ಮಹಿಳೆಯೊಬ್ಬರಿಗೆ ಆಟೋರಿಕ್ಷಾದಲ್ಲಿ ಹೆರಿಗೆಯಾಗಿತ್ತು. ತುರ್ತು ಸಂದರ್ಭಗಳಲ್ಲಿ ನಾವು 40-50 ಕಿಲೋಮೀಟರ್ ಪ್ರಯಾಣಿಸಬೇಕು. ನೀವು ನಮ್ಮ ಹಳ್ಳಿಗಳ ಸಮೀಪವಿರುವ ಯಾವುದೇ ಪಿಎಚ್‌ಸಿಗೆ ಹೋದರೆ ಒಳಗೆ ಯಾವುದೇ ವೈದ್ಯರನ್ನು ಕಾಣಲು ಸಾಧ್ಯವಿಲ್ಲ. ವೈದ್ಯರ ಕೊರತೆಯಿಂದಾಗಿ ಇಲ್ಲಿ ಅನೇಕ ಮಕ್ಕಳು ತಮ್ಮ ತಾಯಿಯ ಗರ್ಭದಲ್ಲಿಯೇ ಸಾಯುತ್ತಿವೆ”ಎಂದು ಪಾಲ್ಘರ್‌ನ ದಾದಡೆ ಗ್ರಾಮದ 47 ವರ್ಷದ ಕಿರಣ್ ಗಹಾಲಾ ಹೇಳುತ್ತಾರೆ. ಅವರು ಐದು ಎಕರೆ ಭೂಮಿಯನ್ನು ಹೊಂದಿದ್ದು ಮುಖ್ಯವಾಗಿ ಭತ್ತ, ಭಜ್ರಾ, ಗೋಧಿ ಮತ್ತು ಕಿರುಧಾನ್ಯಗಳನ್ನು ಬೆಳೆಯುತ್ತಾರೆ. ಪಾಲ್ಘರ್ ಜಿಲ್ಲೆಯ ಸುಮಾರು 500 ಆದಿವಾಸಿ ರೈತರು ನಾಸಿಕ್‌ನಿಂದ ದೆಹಲಿಯವರೆಗಿನ ವಾಹನ ಮೆರವಣಿಗೆಯಲ್ಲಿ ಸೇರಿದ್ದಾರೆ.

63 ವರ್ಷದ ವಿಷ್ಣು ಚವಾಣ್ ಅವರು ಪರಭಾನಿ ಜಿಲ್ಲೆಯ ಖವ್ನೆ ಪಿಂಪ್ರಿ ಗ್ರಾಮದಲ್ಲಿ 3.5 ಎಕರೆ ಭೂಮಿಯನ್ನು ಹೊಂದಿದ್ದಾರೆ. ಅವರು 65 ವರ್ಷದ ಕಾಶಿನಾಥ್ ಚೌಹಾನ್ (ಬಲ) ಅವರೊಂದಿಗೆ ಇಲ್ಲಿದ್ದಾರೆ. "ನಾವು 2018ರಲ್ಲಿ ಒಟ್ಟಿಗೆ ಲಾಂಗ್ ಮಾರ್ಚ್‌ಗೆ ಹೋಗಿದ್ದೆವು ಮತ್ತು ಈಗ ನಾವು ಈ ಪ್ರತಿಭಟನೆಗೆ ಮತ್ತೆ ಇಲ್ಲಿಗೆ ಬಂದಿದ್ದೇವೆ" ಎಂದು ಮುಖ್ಯವಾಗಿ ಹತ್ತಿ ಮತ್ತು ಸೋಯಾಬೀನ್ ಬೆಳೆಯುವ ವಿಷ್ಣು ಹೇಳುತ್ತಾರೆ. "ನಮ್ಮ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸುವುದು ಯಾವಾಗ? ನಮ್ಮ ಹಳ್ಳಿಯ ಜನರು ಪ್ರತಿದಿನ ಕೇವಲ ಕುಡಿಯುವ ನೀರಿಗಾಗಿ ಐದು ಕಿಲೋಮೀಟರ್ ನಡೆಯಬೇಕು. ನಮ್ಮ ಜಮೀನುಗಳಲ್ಲಿ ನಾವು ಏನೇ ಬೆಳೆದರೂ, ಕಾಡು ಪ್ರಾಣಿಗಳು ರಾತ್ರಿಯಲ್ಲಿ ಅದನ್ನು ನಾಶಮಾಡುತ್ತವೆ. ಇದುವರೆಗೂ ನಮಗಾಗಿ ಯಾರೂ ಕೆಲಸ ಮಾಡಿಲ್ಲ. ನಮ್ಮ ಮಾತುಗಳನ್ನು ಸರಕಾರ ಕೇಳಿಸಿಕೊಳ್ಳಬೇಕೆಂದು ಬಯಸುತ್ತೇವೆ."

"ಸರ್ಕಾರವು ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಎಂಬುದು ನಮ್ಮ ಬೇಡಿಕೆ. ನಾವು ಅಲ್ಲಿ ಅನಿರ್ದಿಷ್ಟ ಕಾಲದವರೆಗೆ ಧರಣಿ ಕುಳಿತುಕೊಳ್ಳುತ್ತೇವೆ. ನಮ್ಮ ತಾಲ್ಲೂಕಿನಲ್ಲಿ ಅನೇಕ ಸಣ್ಣ ರೈತರು ಇದ್ದಾರೆ. ಅವರು ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ದಿನಗೂಲಿಯಲ್ಲಿ ಬದುಕು ನಡೆಸುತ್ತಾರೆ. ಅವರಲ್ಲಿ ಹೆಚ್ಚಿನವರು ಕೇವಲ 1-2 ಎಕರೆ ಭೂಮಿಯನ್ನು ಹೊಂದಿದ್ದಾರೆ. ಅವರಲ್ಲಿ ಹಲವರು ಪ್ರತಿಭಟನೆಯಲ್ಲಿ ಸೇರಲು ಬಯಸಿದ್ದರು ಆದರೆ ಇದು ಕೊಯ್ಲಿನ ಕಾಲ, ಹೀಗಾಗಿ ಅವರು ಊರಲ್ಲೇ ಉಳಿದರು” ಎಂದು ಸಾಂಗ್ಲಿ ಜಿಲ್ಲೆಯ ಶಿರ್ಧಾನ್ ಗ್ರಾಮದ 38 ವರ್ಷದ ದಿಗಂಬರ್ ಕಾಂಬ್ಳೆ (ಕೆಂಪು ಟೀ ಶರ್ಟ್‌ನಲ್ಲಿ) ಹೇಳುತ್ತಾರೆ.

ದೆಹಲಿ ಕಡೆಗೆ ಹೊರಟಿರುವ ವಾಹನ ಜಾಥಾದಲ್ಲಿರುವ ಹಿರಿಯ ರೈತರಲ್ಲಿ 70 ವರ್ಷದ ತುಕಾರಂ ಶೇತ್ಸಂಡಿ ಒಬ್ಬರು. ಸೋಲಾಪುರದ ಕಂಡಲ್ಗಾಂವ್ ಗ್ರಾಮದಲ್ಲಿ ಅವರ ನಾಲ್ಕು ಎಕರೆ ಭೂಮಿ ಬಂಜರಾಗಿದೆ. ಕಳೆದ 10 ವರ್ಷಗಳಲ್ಲಿ ಕಬ್ಬು ಬೆಳೆಯಲು ಹಲವಾರು ದೊಡ್ಡ ರೈತರಿಂದ ಪಡೆದ ಸಾಲ ಅವರ ಸಾಲದ ಮೊತ್ತ ರೂ. 7 ಲಕ್ಷ ರೂಪಾಯಿಗಳಷ್ಟು ಬೆಳೆದಿದೆ, "ಕೆಟ್ಟ ಫಸಲಿನ ಕಾರಣ ಒಂದರ ಮೇಲೊಂದು ಸಾಲವಾಗತೊಡಗಿದ್ದರಿಂದಾಗಿ ನಾನು ಅವುಗಳನ್ನು ತೀರಿಸುವುದರಲ್ಲೇ ಮುಳುಗಿಹೋದೆ. ನಾನು ಶೇಕಡಾ 24ರಷ್ಟು ಬಡ್ಡಿದರದಲ್ಲಿ ಸಾಲ ಪಾವತಿಸುತ್ತಿದ್ದೇನೆ. ಇದು ನ್ಯಾಯವೆಂದು ನಿಮಗನ್ನಿಸುತ್ತದೆಯೇ?
ಅನುವಾದ: ಶಂಕರ ಎನ್. ಕೆಂಚನೂರು