ರಸ್ತೆ ತಡೆಯಲ್ಲಿ ಭಾಗವಹಿಸಿದ್ದ ತುಕಾರಾಂ ವಲವಿ "ಈ ಸರ್ಕಾರ ನಮ್ಮ ಮೇಲೆ ದಾಳಿ ಮಾಡುತ್ತಿದೆ, ಆದರೆ ಇಂದು ನಾವು ನಮ್ಮ ಹೆಜ್ಜೆಯನ್ನು ಹಿಂದಕ್ಕಿಡುವುದಿಲ್ಲ. ನಾವು 10 ಎಕರೆ ಭೂಮಿ ಬೇಕೆಂದು ಕೇಳಿದರೆ ಕೇವಲ 10 ಗುಂಟೆ ಮಾತ್ರ [ಕಾಲು ಎಕರೆ] ನೀಡುತ್ತಾರೆ. ಐದು ಎಕರೆ ಕೇಳಿದರೆ ಕೇವಲ ಮೂರು ಗುಂಟೆ ಕೊಡುತ್ತಾರೆ. ನಾವು ಭೂಮಿಯಿಲ್ಲದೆ ಬದುಕಲು ಆಹಾರಕ್ಕಾಗಿ ಬೆಳೆಯನ್ನು ಎಲ್ಲಿ ಬೆಳೆಯುವುದು? ಈಗ ನಮ್ಮ ಬಳಿ ಹಣವಿಲ್ಲ, ಕೆಲಸವಿಲ್ಲ ಮತ್ತು ಆಹಾರವೂ ಇಲ್ಲ"
ಪಾಲ್ಘಾರ್ ಜಿಲ್ಲೆಯ ವಾಡಾ ತಾಲ್ಲೂಕಿನ ಗಾರ್ಗಾಂವ್ ಗ್ರಾಮದ ಹಾಡಿಯೊಂದರ ನಿವಾಸಿಯಾದ ವರ್ಲಿ ಆದಿವಾಸಿ ಸಮುದಾಯದ 61 ವರ್ಷದ ವಲವಿ ವಿವಿಧ ಹಳ್ಳಿಗಳ 3,000 (ಅಂದಾಜು) ರೈತರು, ಕೃಷಿ ಕಾರ್ಮಿಕರು ಹಾಗೂ ವರ್ಲಿ ಸಮುದಾಯದ ಅನೇಕ ಮಂದಿಯೊಡನೆ ಪ್ರತಿಭಟನೆಯಲ್ಲಿ ಪಾಲಗೊಂಡಿದ್ದರು.
ಒಟ್ಟಾರೆ ನವೆಂಬರ್ 26ರಂದು ಅವರು ಸೆಪ್ಟಂಬರ್ 27ನೇ ತಾರಿಖಿನಂದು ಕೇಂದ್ರವು ಅಂಗೀಕರಿಸಿದ "ದೇಶದಲ್ಲಿ ಕೃಷಿಯ ಪರಿವರ್ತನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ" ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ವಾಡಾದ ಖಂಡೇಶ್ವರಿ ನಾಕಾದಲ್ಲಿ ರಸ್ತೆ ತಡೆ ನಡೆಸಿದರು. ಈ ಕಾನೂನುಗಳು ಕೃಷಿ ಕ್ಷೇತ್ರವನ್ನು ಖಾಸಗಿ ಹೂಡಿಕೆದಾರರಿಗೆ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ತೆರೆದಿಡುತ್ತವೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಈ ಕಾನೂನುಗಳ ಅಂಗೀಕಾರವಾದಂದಿನಿಂದಲೂ ದೇಶದದಾದ್ಯಂತ ಅದರಲ್ಲೂ ವಿಶೇಷವಾಗಿ ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ರೈತರ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಹರಿಯಾಣ ಮತ್ತು ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟದ ಕಡೆಯೇ ಎಲ್ಲರ ಗಮನವೂ ಇದ್ದಿದ್ದರಿಂದಾಗಿ ಅನೇಕ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ರೈತರು ಈ ರೈತರಿಗೆ ಬೆಂಬಲವಾಗಿ ಮತ್ತು ಕೆಲವು ಸ್ಥಳೀಯ ಬೇಡಿಕೆಗಳೊಂದಿಗೆ ಹೋರಾಟಕ್ಕಾಗಿ ರಸ್ತೆಗಿಳಿದಿರುವುದು ಅಷ್ಟಾಗಿ ಜನರ ಗಮನವನ್ನು ಸೆಳೆದಿಲ್ಲ. ಉದಾಹರಣೆಗೆ, ಮಹಾರಾಷ್ಟ್ರದಲ್ಲಿ, ನವೆಂಬರ್ 25-26ರಂದು ರಾಜ್ಯಾದ್ಯಂತ ನಡೆದ ಸರಣಿ ಪ್ರತಿಭಟನೆಗಳು. ಈ ಪ್ರತಿಭಟನೆಗಳಲ್ಲಿ ಒಟ್ಟಾರೆ ಕನಿಷ್ಟ 60,000 ಜನ ಪಾಲ್ಗೊಂಡಿದ್ದರು. ಈ ಪ್ರತಿಭಟನೆಗಳು ನಾಸಿಕ್‌ನಿಂದ ಪಾಲ್ಘಾರ್ ಮತ್ತು ರಾಯ್ಗಡ್ ತನಕ ಮತ್ತು ಈ ಜಿಲ್ಲೆಗಳ ತಾಲ್ಲೂಕುಗಳ ವಿವಿಧ ಕೇಂದ್ರಗಳಲ್ಲಿ ನಡೆದಿತ್ತು.
ಈ ವಾರ ವಾಡಾದಲ್ಲಿ, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ವಲವಿ ಅವರ ಮುಖ್ಯ ಬೇಡಿಕೆ ಭೂಮಿಯ ಹಕ್ಕು. ಈ ಬೇಡಿಕೆಯು ಕೆಲವು ವರ್ಷಗಳಿಂದ ಮಹಾರಾಷ್ಟ್ರದ ಆದಿವಾಸಿ ರೈತರು ನಡೆಸಿದ ಹಲವಾರು ಪ್ರತಿಭಟನೆಗಳಲ್ಲಿ ಮುನ್ನೆಲೆಯಲ್ಲಿತ್ತು. ವಲವಿ ತನ್ನ ಭೂಮಿಯ ಹಕ್ಕುಪತ್ರಕ್ಕಾಗಿ ಕಳೆದ 15 ವರ್ಷಗಳಿಂದ ನ್ಯಾಯಾಲಗಳ ಮೆಟ್ಟಿಲನ್ನು ಹತ್ತಿಳಿಯುತ್ತಿದ್ದಾರೆ. "[ನಮ್ಮ] ಹಳ್ಳಿಯಲ್ಲಿ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವವರು ಅರಣ್ಯ ಇಲಾಖೆಯಿಂದ ಅನ್ಯಾಯಕ್ಕೊಳಗಾಗಿದ್ದಾರೆ" ಎಂದು ಅವರು ಹೇಳುತ್ತಾರೆ. "ನಾವು ಈ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎದುರಿಸಬೇಕಿದೆ. ನಮ್ಮ ಜಾಮೀನಿಗಾಗಿ ಪಾವತಿಸಲು ಅಗತ್ಯವಿರುವಷ್ಟು ಹಣವೂ ನಮ್ಮ ಬಳಿಯಿಲ್ಲ. ನಾವು ಬಡ ಜನರು ಅಷ್ಟೊಂದು ಹಣವನ್ನು ಎಲ್ಲಿಂದ ತರುವುದು?"

ಮೇಲಿನ ಎಡ ಚಿತ್ರ: ತುಕಾರಂ ವಲವಿ: ʼಇಂದು ನಾವು ನಮ್ಮ ಹೆಜ್ಜೆ ಹಿಂದಕ್ಕಿಡುವುದಿಲ್ಲʼ. ಮೇಲಿನ ಬಲಚಿತ್ರ: ರಾಮ ತಾರ್ವಿ: 'ನಮ್ಮ ಭೂಮಿಯಲ್ಲಿ ಬೇಸಾಯ ಮಾಡಲು ಅರಣ್ಯ ಇಲಾಖೆ ಬಿಡುತ್ತಿಲ್ಲ'. ಕೆಳಗಿನ ಎಡ ಚಿತ್ರ: ಸುಗಂದ ಜಾಧವ್: ಈ ಸರಕಾರ ನಾವು ಬೀದಿಗಿಳಿದು ಹೋರಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ ಕೆಳಗಿನ ಬಲ ಚಿತ್ರ: ಸುನೀತಾ ಸಾವರೆ: ʼಕಾರ್ಡ್ ಆಫೀಸಿನಲ್ಲಿರುವ ಜನರು ಏನು ಹೇಳುತ್ತಾರೆಂದು ಅರ್ಥವಾಗುವುದಿಲ್ಲ.ʼ "ನನಗೆ ಓದು ಬರಹ ತಿಳಿದಿಲ್ಲ, ಅವರು ಅಲ್ಲಿ ಹೋಗು, ಇಲ್ಲಿ ಹೋಗು ಎನ್ನುತ್ತಾರೆ ಅಥವಾ ಆ ದಿನ ಬಾ ಈ ದಿನ ಬಾ ಎನ್ನುತ್ತಾರೆ. ನನಗೆ ಯಾವ ಫಾರ್ಮ್ ತುಂಬಿಸಬೇಕು ಎನ್ನುವುದು ಸಹ ತಿಳಿದಿಲ್ಲ. ಸಾಕಾಗಿ ಹೋಗಿದೆ ನನಗೆ." ಎಂದು ಆಧಾರ್ ಕಾರ್ಡ್ ಮಾಡಿಸಲು ಅಲೆದು ಬೇಸತ್ತಿರುವ ಅವರು ಹೇಳುತ್ತಾರೆ.
ನವೆಂಬರ್ 26ರ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು 21 ಬೇಡಿಕೆಗಳ ಆಗ್ರಹ ಪಟ್ಟಿಯನ್ನು ರೈತರು ವಾಡಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಿದರು. ಪ್ರತಿಭಟನೆಗೆ ಬಂದಿದ್ದ ಬಹುತೇಕ ಎಲ್ಲರೂ ಮಾಸ್ಕ್ ಧರಿಸಿದ್ದರು ಅಥವಾ ಸ್ಕಾರ್ಫ್/ಕರವಸ್ತ್ರದಿಂದ ಮುಖಗಳನ್ನು ಮುಚ್ಚಿಕೊಂಡಿದ್ದರು, ಮತ್ತು ಕೆಲವು ಎಐಕೆಎಸ್ ಸ್ವಯಂಸೇವಕರು ಪ್ರತಿಭಟನಾಕಾರರಿಗೆ ಮಾಸ್ಕ್ ಮತ್ತು ಸಾಬೂನುಗಳನ್ನು ವಿತರಿಸಿದರು.
21 ಬೇಡಿಕೆಗಳಲ್ಲಿ ಇತ್ತೀಚೆಗೆ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆನ್ನುವುದು ಸಹ ಸೇರಿದೆ. ಇತರ ಬೇಡಿಕೆಗಳೆಂದರೆ 2006ರ ಅರಣ್ಯ ಹಕ್ಕುಗಳ ಕಾಯ್ದೆ (ಎಫ್‌ಆರ್‌ಎ)ಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು, ಅಕಾಲಿಕ ಮಳೆಯಿಂದಾಗುವ ಬೆಳೆ ನಷ್ಟಕ್ಕೆ ಸಾಕಷ್ಟು ಪರಿಹಾರ ಮಂಜೂರು ಮಾಡುವುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು (ಕೋವಿಡ್ -19ರ ಹಿನ್ನೆಲೆಯಲ್ಲಿ), ಮತ್ತು ಆನ್‌ಲೈನ್ ತರಗತಿಗಳಿಗೆ ಅಂತ್ಯ ಹಾಡುವುದು.
ಬೇಡಿಕೆ ಪಟ್ಟಿಯಲ್ಲಿ ಈ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಆರು ತಿಂಗಳ ಕಾಲ ಪ್ರತಿ ಕುಟುಂಬಕ್ಕೆ 7,500 ರೂ., ಮತ್ತು ಪ್ರತಿ ಕುಟುಂಬದ ಸದಸ್ಯರಿಗೆ 10 ಕಿಲೋ ಪಡಿತರವನ್ನು ನೀಡಬೇಕೆನ್ನುವುದು ಸಹ ಸೇರಿದೆ. ಪ್ರತಿಭಟನೆಯಲ್ಲಿ ಸೇರಿದ ಸಾಕಷ್ಟು ರೈತರೂ ಈ ಬೇಡಿಕೆಯ ಕುರಿತಾಗಿ ಮಾತನಾಡಿದರು.
"ನಮ್ಮ ಪ್ರದೇಶದ ಕೆಲವು ಮಹಿಳೆಯರು ಒಂದಿಷ್ಟು ಆದಾಯ ಗಳಿಕೆಗಾಗಿ ಪ್ರತಿದಿನ ನಾಲ್ಕು ಗಂಟೆಗಳ ಕಾಲ ನಡೆಯಬೇಕಾಗಿದೆ" ಎಂದು ಎಐಕೆಎಸ್ ಕಾರ್ಯಕರ್ತ ಕಾಂಚಾದ್ ಗ್ರಾಮದ 54 ವರ್ಷದ ರಾಮ ತಾರ್ವಿ ಹೇಳಿದರು, ಅವರ ಕುಟುಂಬವು ಎರಡು ಎಕರೆ ಹೊಲದಲ್ಲಿ ಅಕ್ಕಿ, ಜೋಳ, ಸಜ್ಜೆ ಮತ್ತು ಗೋಧಿಯನ್ನು ಬೆಳೆಯುತ್ತದೆ. . "ಅವರು ತಮ್ಮ ಇಡೀ ದಿನದ ಶ್ರಮದ ಫಲವಾಗಿ 200 ರೂಪಾಯಿ ಗಳಿಸುತ್ತಾರೆ. ನಮಗೆ ಭೂಮಿಯಿದೆ ಆದರೆ ಆದರೆ ಅದರಲ್ಲಿ ಬೇಸಾಯ ಮಾಡಲು ಅರಣ್ಯ ಇಲಾಖೆ ಬಿಡುವುದಿಲ್ಲ. ಈ ಕೊವಿಡ್‌ನಿಂದಾಗಿ ಕೈಯಲ್ಲಿ ಕೆಲಸವೂ ಇಲ್ಲ..."
"[ ಎಫ್‌ಆರ್‌ಎ ] ಜಮೀನುಗಳು ನಮಗಿರುವ ಏಕೈಕ ಜೀವನೋಪಾಯ ಮಾರ್ಗವಾಗಿದೆ. ಆದರೂ ಅವರು ಈ ಕೊವಿಡ್ ಸಮಯದಲ್ಲಿ ನಮ್ಮ ಜೀವವನ್ನು ಪಣಕ್ಕಿಡುವಂತೆ ಮಾಡುತ್ತಿದ್ದಾರೆ ಮತ್ತು ನಾವು ಹಲವು ವರ್ಷಗಳಿಂದ ಬೇಸಾಯ ಮಾಡುತ್ತಿರುವ ಜಮೀನುಗಳಿಗಾಗಿ [ಭೂಮಿ ಹಕ್ಕಿಗಾಗಿ] ಒತ್ತಾಯಿಸಲು ಹೊರಟಿದ್ದೇವೆ." ಎಂದು ಸುಗಂದ ಜಾಧವ್ ಹೇಳಿದರು. ಅವರ ಕುಟುಂಬವು ಎರಡು ಎಕರೆ ಜಮೀನಿನಲ್ಲಿ ಅಕ್ಕಿ, ಸಜ್ಜೆ, ಉದ್ದು ಮತ್ತು ರಾಗಿಯನ್ನು ಬೆಳೆಯುತ್ತದೆ. “ನಾವು ಎಷ್ಟೋ ಬಾರಿ ಪ್ರತಿಭಟನೆ, ಪ್ರದರ್ಶನಗಳನ್ನು ನಡೆಸಿದ್ದೇವೆ ಆದರೆ ಸರಕಾರ ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಅದು ನಮ್ಮನ್ನು ಮತ್ತೆ ಮತ್ತೆ ಬೀದಿಗಿಳಿಯುವ ಅನಿವಾರ್ಯತೆಗೆ ದೂಡುತ್ತಿದೆ.”

ರಸ್ತೆ ತಡೆ ಪ್ರತಿಭಟನೆಗಾಗಿ ನವೆಂಬರ್ 26ರಂದು ವಾಡಾ ತಾಲ್ಲೂಕಿನ ಖಂಡೇಶ್ವರಿ ನಾಕಾ ಕಡೆಗೆ ನಡೆಯಲು ರೈತರು ತಯಾರಾಗುತ್ತಿರುವುದು.

ವಾಡಾ ತಾಲೂಕಿನ ಕಿರಾವಳಿ ನಾಕಾದಲ್ಲಿನ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಕಛೇರಿಯ ಹೊರಗೆ ಕಾಯುತ್ತಿರುವುದು

ರೇಣುಕಾ ಕಾಲುರಾಂ (ಬಲಬದಿ, ಹಸಿರು ಸೀರೆಯಲ್ಲಿರುವವರು.) ಇವರು ಪಾಲ್ಘಾರ್‌ನ ಕರಂಜೆ ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿದ್ದು ದಿನವೊಂದಕ್ಕೆ 150 ರೂಪಾಯಿ ಕೂಲಿಯಾಗಿ ಸಂಪಾದಿಸುತ್ತಾರೆ. ಅವರಿಗೆ ಸ್ಥಳೀಯ ಅಂಗನವಾಡಿಗೆ ಹೋಗುತ್ತಿರುವ ಮೂರು ಮಕ್ಕಳಿವೆ: ಸರಕಾರ ಈ ಆನ್ಲೈನ್ ತರಗತಿಗಳನ್ನು ಮೊದಲು ನಿಲ್ಲಿಸಬೇಕು. ನಮ್ಮ ಮಕ್ಕಳು ಈ ತರಗತಿಗಳಿಂದ ಏನನ್ನೂ ಕಲಿಯಲು ಸಾಧ್ಯವಾಗುತ್ತಿಲ್ಲ. ನಮ್ಮ ಬಳಿ ದೊಡ್ಡ ಫೋನ್‌ಗಳಿಲ್ಲ ಅಲ್ಲದೆ ಇಲ್ಲಿ ನಮ್ಮ ಹಳ್ಳಿಗಳಲ್ಲಿ ಮೊಬೈಲ್ ಸಿಗ್ನಲ್ ಕೂಡಾ ಇರುವುದಿಲ್ಲ.
![Left: Gulab Dongarkar, an agricultural labourer from Kanchad village: We have been sitting here since 10 a.m. It’s been very hard for us to get work during Covid. We want the government to give us at least 10 kilos of rations [instead of five, which too many did cannot access]'. Right: Janki Kangra and her 11-member family cultivate rice, jowar, bajra and millets on three acres, while battling, she said, the forest department's strictures](/media/images/06a-IMG_0792-SA.max-1400x1120.jpg)
![Left: Gulab Dongarkar, an agricultural labourer from Kanchad village: We have been sitting here since 10 a.m. It’s been very hard for us to get work during Covid. We want the government to give us at least 10 kilos of rations [instead of five, which too many did cannot access]'. Right: Janki Kangra and her 11-member family cultivate rice, jowar, bajra and millets on three acres, while battling, she said, the forest department's strictures](/media/images/06b-IMG_0800-SA.max-1400x1120.jpg)
ಎಡ: ಗುಲಾಬ್ ಡೊಂಗರ್ಕರ್, ಕಂಚಡ್ ಗ್ರಾಮದ ಓರ್ವ ಕೃಷಿ ಕಾರ್ಮಿಕ ಮಹಿಳೆ. ನಾವು ಬೆಳಿಗ್ಗೆ 10 ಗಂಟೆಯಿಂದ ಕುಳಿತಿದ್ದೇವೆ. ಈ ಕೊವಿಡ್ ಸಮಯದಲ್ಲಿ ಕೆಲಸ ಸಿಗುವುದು ಬಹಳ ಕಷ್ಟವಾಗಿದೆ. ಸರಕಾರ ನಮಗೆ ಕನಿಷ್ಟ 10 ಕಿಲೋ ರೇಷನ್ ಕೊಡಬೇಕು. (5 ಕೇಜಿ ಪಡಿತರದ ಬದಲು. ಅದನ್ನು ಕೂಡ ಹಲವರಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ) ಬಲ: ಜಾನಕಿ ಕಂಗ್ರಾ ಮತ್ತು ಅವರ ಹನ್ನೊಂದು ಜನರ ಕುಟುಂಬ ಅಕ್ಕಿ, ಜೋಳ, ಸಜ್ಜೆ, ಉದ್ದು ಮತ್ತು ರಾಗಿಯನ್ನು ಬೆಳೆಯುತ್ತಾರೆ. ಹೋರಾಟದ ಸಮಯದಲ್ಲಿ ಅವರು ಅರಣ್ಯ ಇಲಾಖೆಯ ಕಟ್ಟುಪಾಡುಗಳ ಕುರಿತು ಮಾತನಾಡಿದರು.

ವಾಡಾ ತಾಲೂಕಿನ ಕಿರಾವಳಿ ನಾಕಾದಲ್ಲಿನ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಕಛೇರಿಯ ಹೊರಗೆ ನಿಂತಿರುವ ಪೋಲಿಸರು

ಪ್ರತಿಭಟನೆಯಲ್ಲಿ ಭಾಗವಹಿಸಿದ ಆದಿವಾಸಿ ರೈತರಿಗೆ ಅಖಿಲ ಭಾರತ ಕಿಸಾನ್ ಸಭೆಯ ಸದಸ್ಯರು ಮಾಸ್ಕ್ ಮತ್ತು ಸಾಬೂನು ವಿತರಿಸುತ್ತಿರುವುದು


ಎಡ: ಸುಖಿ ವಾಘ್, ಕಟ್ಟಡ ಕಾರ್ಮಿಕರಾಗಿರುವ ಇವರು ರಸ್ತೆ ತಡೆ ಪ್ರತಿಭಟನೆಯಲ್ಲಿ ತನ್ನ 3 ವರ್ಷದ ಮೊಮ್ಮಗ ಸಾಯಿನಾಥನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡುಕೊಂಡು ಖಂಡೇಶ್ವರಿ ನಾಕಾದ ಕಡೆ ನಡೆಯುತ್ತಿರುವುದು. ʼನಮಗೆ ರೇಷನ್ ನೀಡಿ, ನಮ್ಮ ಕೈಯಲ್ಲಿ ಕೆಲಸವಿಲ್ಲʼ ಎಂದು ಆಕೆ ಹೇಳಿದರು. ಬಲ: ಪ್ರತಿಭಟನಾಕಾರರು ಖಂಡೇಶ್ವರಿ ನಾಕಾದ ಕಡೆ ನಡೆಯುತ್ತಿರುವುದು

ರಸ್ತೆ ತಡೆ ಪ್ರತಿಭಟನೆ ನಡೆಯುವ ಕಿರಾವಳಿ ನಾಕಾದಿಂದ ಖಂಡೇಶ್ವರಿ ನಾಕಾದ ಕಡೆ ಹೋಗುವ ಎರಡು ಕಿಲೋಮೀಟರ್ ರಸ್ತೆ.

ಅಖಿಲ ಭಾರತ ಕಿಸಾನ್ ಸಭೆಯ ಸದಸ್ಯ ಚಂದು ದಂಗ್ಡಾ ವಾಡಾ ತಾಲೂಕಿನ ಖಂಡೇಶ್ವರಿ ನಾಕಾದಲ್ಲಿ ಪ್ರತಿಭಟನಾಕಾರರನ್ನು ಮುನ್ನಡೆಸುತ್ತಿರುವುದು

ನವೆಂಬರ್ 26ರ ಪ್ರತಿಭಟನೆಯಲ್ಲಿ ಪ್ರತಿಭಟನೆಕಾರರು ತಮ್ಮೊಂದಿಗೆ 21 ಆಗ್ರಹಗಳ ಪಟ್ಟಿಯನ್ನು ತಂದಿತ್ತು, ನಂತರ ಅದನ್ನು ವಾಡಾ ತಾಲೂಕಿನ ತಹಸಿಲ್ದಾರ್ ಆಫೀಸಿನಲ್ಲಿ ನೀಡಲಾಯಿತು


ಎಡ: ಎರಡು ಎಕರೆ ಪ್ರದೇಶದಲ್ಲಿ ಭತ್ತ, ಸಜ್ಜೆ, ಜೋಳ ಮತ್ತು ರಾಗಿ ಬೆಳೆಯುವ ಆಶಾ ಗಾವಾರೆ, 'ಭಾರೀ ಮಳೆಯಿಂದಾಗಿ ಈ ವರ್ಷ ನಮ್ಮ ಬೆಳೆಗಳು ನಾಶವಾದವು. ನಾವು ಸುಮಾರು 10,000 ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದೇವೆ. ಇನ್ನು ಮುಂದೆ ನಮಗೆ ಸಾಲ ನೀಡಲು ಯಾರೂ ಸಿದ್ಧರಿಲ್ಲ. ಸರ್ಕಾರವು ನಮಗೆ ಪರಿಹಾರವನ್ನು ನೀಡಬೇಕೆಂದು ನಾವು ಬಯಸುತ್ತೇವೆ, ಇಲ್ಲವಾದಲ್ಲಿ ನಾವು ಈ ನಷ್ಟಗಳಿಂದ ಎಂದಿಗೂ ಚೇತರಿಸಿಕೊಳ್ಳಲು ಸಾಧ್ಯವಿಲ್ಲ'. ಬಲ: ಪಾಲ್ಘರ್‌ನ ಕಾಂಚಡ್ ಗ್ರಾಮದ ದೇವ್ ವಾಘ್ ಅವರು ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು: ʼಇತ್ತೀಚೆಗೆ ನಾವು ಹೊಲಗಳಲ್ಲಿ ಕೆಲಸವನ್ನೇ ಮಾಡಿಲ್ಲ ಆದರೂ ದೊಡ್ಡ ಮೊತ್ತದ ಬಿಲ್ಲುಗಳು ಬರುತ್ತಿವೆ. ಆರು ತಿಂಗಳ ನಮಗೆ ವಿದ್ಯುತ್ ಬಿಲ್ ಪಾವತಿಯಿಂದ ವಿನಾಯಿತಿ ನೀಡಬೇಕೆಂದು ಬಯಸುತ್ತೇವೆ.ʼ ಇಪ್ಪತ್ತೊಂದು ಬೇಡಿಕೆಗಳ ಪಟ್ಟಿಯಲ್ಲಿ 2020ರ ಹೊಸ ವಿದ್ಯುತ್ ಮಸೂದೆಯನ್ನು ನಿಷೇಧಿಸಬೇಕು ಎನ್ನುವ ಆಗ್ರಹವೂ ಸೇರಿತ್ತು. ಇದು ಗ್ರಾಮೀಣ ಭಾರತದ ಜನರಿಗೆ ಮತ್ತು ರೈತರ ಪಾಲಿಗೆ ವಿದ್ಯುತ್ತನ್ನು ದುಬಾರಿಯಾಗಿಸುತ್ತದೆ. ಈ ವರ್ಷದ ಎಪ್ರಿಲ್‌ನಿಂದ ಈ ವಿದ್ಯುತ್ ದರ ಹೆಚ್ಚಳದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ವಾಡಾ ತಾಲ್ಲೂಕಿನ ಖಂಡೇಶ್ವರಿ ನಾಕಾದಲ್ಲಿ ಕಂಡು ಬಂದ ಭರವಸೆ, ದೃಢ ನಿಶ್ಚಯ ಮತ್ತು ಒಗ್ಗಟ್ಟಿನ ಚಿತ್ರ
ಅನುವಾದ: ಶಂಕರ ಎನ್. ಕೆಂಚನೂರು